Advertisement

ಸಾವಿರ ಬೆಡ್‌ ಆಸ್ಪತ್ರೆ ನಿರ್ಮಾಣ ನನ್ನ ಕನಸು

02:27 PM Nov 21, 2020 | Suhan S |

ಚನ್ನಪಟ್ಟಣ: ರಾಜೀವ್‌ಗಾಂಧಿ ಆರೋಗ್ಯ ವಿವಿ ಸ್ಥಾಪನೆ ವಿಚಾರದಲ್ಲಿ ಇರುವ ಎಲ್ಲ ಸಮಸ್ಯೆಗಳು ಬಗೆಹರಿಸಲಾಗಿದೆ. 1000 ಬೆಡ್‌ನ‌ ಆಸ್ಪತ್ರೆ, ಮೆಡಿಕಲ್‌ ಕಾಲೇಜು ನಿರ್ಮಾಣ ಮಾಡುವುದು ನನ್ನ ದೊಡ್ಡ ಕನಸು ಹೊಸ ವರ್ಷದಲ್ಲಿ ಕಟ್ಟಡದ ಕೆಲಸ, ಮೂಲಭೂತ ಸೌಲಭ್ಯ ಕಲ್ಪಿಸುವ ಕೆಲಸಗಳು ಆರಂಭವಾಗಲಿವೆ. ಈಗಾಗಲೇ ಸಚಿವರು, ಅಧಿಕಾರಿಗಳ ಜತೆ ಸಭೆಯನ್ನು ನಡೆಸಲಾಗಿದೆ, ಕಳೆದ ಹನ್ನೆರಡು ವರ್ಷಗಳ ಹಿಂದೆಯೇ ವಿವಿಗೆ ಸಂಬಂಧಪಟ್ಟ ಕಾರ್ಯಗಳಿಗೆ ಚಾಲನೆ ಕೊಟ್ಟಿದ್ದೇನೆ ಎಂದು ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು.

Advertisement

ತಾಲೂಕಿನ ಪೌಳಿದೊಡ್ಡಿ ಗ್ರಾಮದಲ್ಲಿ ಹಾಲು ಉತ್ಪಾದಕರ ಸಂಘದ ಕಟ್ಟಡ ಉದ್ಘಾಟಿಸಿ ಮಾತನಾಡಿ, ಪಟ್ಟಣದ ಸಾತನೂರು ರಸ್ತೆಯ ಮಹದೇಶ್ವರ ದೇವಾಲಯದ ನಿರ್ಮಾಣ ವಿಚಾರದಲ್ಲಿ ರಾಜಕೀಯ ನಡೆಯುತ್ತಿದೆ. ವ್ಯಕ್ತಿಯೊಬ್ಬರು ಮಹದೇಶ್ವರ ದೇವಾಲಯ ಕಟ್ಟುತ್ತೇವೆಂದು ಪ್ರಚಾರ ಪಡೆಯಲು ಹೊರಟಿದ್ದಾರೆ, ಇದಕ್ಕೆ ತಾಲೂಕಿನ ಜನ ಸೊಪ್ಪು ಹಾಕುವುದು ಬೇಡ ಈಗಾಗಲೇ ದೇವಾಲಯದ ಅಭಿವೃದ್ಧಿಗೆ 2 ಕೋಟಿ ರೂ.ಬಿಡುಗಡೆಗೊಳಿಸಲಾಗಿದೆ. ತಾಲೂಕಿನಅಭಿವೃದ್ಧಿ ಮಾಡುವ ವಿಚಾರದಲ್ಲಿ ಯಾರಿಂದಲೂ ಉಪದೇಶ ಮಾಡಿಸಿಕೊಳ್ಳಬೇಕಾಗಿಲ್ಲ ಎಂದರು.

ರಾಜಕಾರಣ ಬೇಡ: ದೇವಾಲಯ ಕಟ್ಟಲು ಉಪವಾಸ ಮಾಡಿ ಆರೋಗ್ಯ ಹಾಳು ಮಾಡಿಕೊಳ್ಳುವುದು ಬೇಡ, ಈ ವಿಚಾರದಲ್ಲಿ ಸಣ್ಣತನದ ರಾಜಕಾರಣ ಮಾಡುವುದನ್ನು ದೇವಾಲಯ ಅಭಿವೃದ್ಧಿ ಸಮಿತಿ ಎಂದು ರಚಿಸಿಕೊಂಡಿರುವವರು ಬಿಡಬೇಕು ಎಂದರು. ಕೋಟಿ ರೂ. ಅನುದಾನ ಶೀಘ್ರ ಬಿಡುಗಡೆ: ಮಹದೇಶ್ವರ ದೇವಾಲಯದ ಸ್ಥಳದ ಸರ್ವೆ ಕಾರ್ಯ ನಡೆಸಿ ಒತ್ತುವರಿಯಾಗಿರುವ ಸ್ಥಳವನ್ನು ವಶಪಡಿಸಿಕೊಳ್ಳಲು ತಹಶೀಲ್ದಾರ್‌ ಅವರಿಗೆ ಸೂಚಿಸಲಾಗಿದೆ. ವಿದ್ಯಾರ್ಥಿನಿಲಯ ನಿರ್ಮಾಣಕ್ಕೆ ಒತ್ತುವರಿಯಾಗಿದ್ದರೆ ತೆರವುಗೊಳಿಸುವುದು ಬೇಡ, ಹಾಗೆಯೇ ಅಗತ್ಯವಿರುವ ಉಳಿಕೆ ಒಂದು ಕೋಟಿ ರೂ. ಅನುದಾನವನ್ನು ಶೀಘ್ರ ಬಿಡುಗಡೆಗೊಳಿಸಲು ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.

ಆತುರದ ನಿರ್ಧಾರ ಬೇಡ: ಕೋವಿಡ್‌ ಸಂದರ್ಭದಲ್ಲಿ ಶಾಲಾ-ಕಾಲೇಜುಗಳನ್ನು ಆರಂಭಿಸುವ ವಿಚಾರದಲ್ಲಿ ಸರ್ಕಾರ ಆತುರದ ನಿರ್ಧಾರ ಕೈಗೊಳ್ಳಬಾರದು. ಈಗಾಗಲೇ ಕಾಲೇಜು ಆರಂಭದ ಮೊದಲನೇ ದಿನವೇ 54 ವಿದ್ಯಾರ್ಥಿಗಳಿಗೆ ಸೋಂಕು ದೃಢಪಟ್ಟಿದೆ ಮುಂದಿನ ಎರಡೂ¾ರು ತಿಂಗಳು ಕೋವಿಡ್ ಹೆಚ್ಚಾಗಿ ವ್ಯಾಪಿಸುತ್ತಿದೆ ಎಂದು ತಜ್ಞರು ತಿಳಿಸಿದ್ದಾರೆ, ಹಾಗಾಗಿ ಜನರ ಜೀವನದ ಮೇಲೆ ಚೆಲ್ಲಾಟವಾಡಬಾರದು ಶಾಲೆ ಆರಂಭದ ಬಗ್ಗೆ ಆತುರದ ನಿರ್ಧಾರ ಬೇಡ ಎಂದರು. ಸರ್ಕಾರದ ಎಲ್ಲ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದೇವೆ ಎಂದು ಹೇಳಿದರೂ ಸೋಂಕು ಪತ್ತೆಯಾಗಿದ್ದು ಹೇಗೆ ಎಂದು ಪ್ರಶ್ನಿಸಿದ ಕುಮಾರಸ್ವಾಮಿ, ಸರ್ಕಾರ ಎಚ್ಚರಿಕೆ ವಹಿಸಬೇಕು ಎಂದು ಹೇಳಿದರು.

ಬಂದ್‌ ಅವಶ್ಯಕತೆಯಿಲ್ಲ: ಕೇವಲ ಎರಡು ಮೂರು ಜಿಲ್ಲೆಗಳಲ್ಲಿ ಮಹಾರಾಷ್ಟ್ರದವರ ಕ್ಯಾತೆಯಿಂದ ಅಲ್ಲಿ ವಾಸವಿರುವ ಮರಾಠಿಗರು ಕನ್ನಡದ ವಿರುದ್ಧವಿದ್ದಾರೆ, ಆದರೆ ಇಡೀ ರಾಜ್ಯದಲ್ಲಿ ಮರಾಠಿ ಭಾಷಿಕರು ವಿವಿಧ ಉದ್ಯೋಗಗಳಲ್ಲಿ ತೊಡಗಿಸಿಕೊಂಡು ತಮ್ಮ ಜೀವನ ರೂಪಿಸಿಕೊಂಡಿದ್ದಾರೆ. ಅವರು ನಮ್ಮಲ್ಲಿಯೇ ಬೆರೆತುಹೋಗಿದ್ದಾರೆ, ಕೇವಲ ಕೆಲವರು ಮಾತ್ರ ಕನ್ನಡ ವಿರೋಧಿಸುತ್ತಾರೆಂದರೆ ಎಲ್ಲರೂ ವಿರೋಧಿಗಳಲ್ಲ,ಇದನ್ನು ಅರ್ಥಮಾಡಿಕೊಳ್ಳಬೇಕು. ಜವಾಬ್ದಾರಿಯುತ ಸ್ಥಾನದಲ್ಲಿದ್ದುಕೊಂಡು ಯೋಚನೆ ಮಾಡಬೇಕು,ಸರ್ಕಾರ ಮತ ಪಡೆಯುವ ಸಲುವಾಗಿ ಯಾವುದೇ ಇಂಥಹ ಅನಾವಶ್ಯಕ ನಿರ್ಧಾರಗಳನ್ನು ತೆಗೆದುಕೊಳ್ಳಬಾರದು, ಭಾಷಿಕರ ಮಧ್ಯೆ ವಿಷ ಬೀಜ ಬಿತ್ತಬಾರದು ಎಂದು ಹೇಳಿದರು.

Advertisement

ಚುನಾವಣೆ ನಂತರ ಎಲ್ಲವನ್ನೂ ಮರೆಯಿರಿ: ಚುನಾವಣೆ ಸಂದರ್ಭದಲ್ಲಿ ಜನತೆ ಯಾವ ಪಕ್ಷಕ್ಕಾದರೂ ಮತ ಚಲಾಯಿಸಿ, ಆದರೆ ಚುನಾವಣೆ ನಂತರ ಎಲ್ಲವನ್ನೂ ಮರೆಯಿರಿ, ನಿಮ್ಮ ನಿರ್ಧಾರ ಆ ಸಮಯಕ್ಕೆ ಮಾತ್ರ ಸೀಮಿತವಾಗಿರಲಿ, ನಂತರ ಎಲ್ಲರೊಂದಿಗೆ ಸಾಮರಸ್ಯದಿಂದ ಬದುಕಿ, ಅಕ್ಕಪಕ್ಕದ ಕುಟುಂಬದವರ ಸಂಕಷ್ಟಕ್ಕೆ ಸ್ಪಂದನೆ ಮಾಡಿ, ಚುನಾವಣೆ ಯಾವಾಗಲೋ ಒಮ್ಮೆ ಬರುತ್ತದೆ ಹೋಗುತ್ತದೆ ಅದಕ್ಕೆ ತಲೆಕೆಡಿಸಿಕೊಳ್ಳುವುದು ಬೇಡ ಎಂದು ಕುಮಾರಸ್ವಾಮಿ ಮನವಿ ಮಾಡಿದರು.

ಮುಖಂಡರಾದ ಎಸ್‌.ಲಿಂಗೇಶ್‌ಕುಮಾರ್‌, ಹಾಪ್‌ಕಾಮ್ಸ್‌ ದೇವರಾಜು, ವಕೀಲ ಹನುಮಂತೇಗೌಡ, ತಾಲೂಕು ಅಧ್ಯಕ್ಷ ಜಯಮುತ್ತು, ನಗರ ಅಧ್ಯಕ್ಷ ರಾಂಪುರ ರಾಜಣ್ಣ, ಗ್ರಾಪಂ ಸದಸ್ಯೆ ವಿಮಲಾ, ತಮ್ಮಯ್ಯಣ್ಣ, ಮುದಗೆರೆ ಜಯಕುಮಾರ್‌, ಸಂತೋಷ್‌ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next