ಮಂಗಳೂರು : ನಾಲ್ಕು ವರ್ಷಗಳಿಂದ ಯಾವುದೇ ಪ್ರೋತ್ಸಾಹ ಧನವಿಲ್ಲದೆ ಕಂಗೆಟ್ಟಿರುವ ಹಾಲು ಉತ್ಪಾದಕರ ನೆರವಿಗೆ ದ.ಕ. ಜಿಲ್ಲಾ ಹಾಲು ಉತ್ಪಾದಕರ ಸಹಕಾರಿ ಒಕ್ಕೂಟ ಮುಂದಾಗಿದೆ. ಇದೇ ಅ.11ರಿಂದ ಅನ್ವಯವಾಗುವಂತೆ ಹಾಲಿಗೆ ಕನಿಷ್ಠ 2.05 ರೂ. ಪ್ರೋತ್ಸಾಹಧನ ನೀಡಲು ಸರ್ವಸದಸ್ಯರ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ಒಕ್ಕೂಟದ ಅಧ್ಯಕ್ಷ ಸುಚರಿತ ಶೆಟ್ಟಿ ಪ್ರಕಟಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ವಿವರ ನೀಡಿದ ಅವರು ಯಾವುದೇ ಕಾರಣಕ್ಕೂ ಗ್ರಾಹಕರಿಗೆ ಪೂರೈಸುವ ಹಾಲಿನ ದರದಲ್ಲಿ ಏರಿಕೆ ಮಾಡುವುದಿಲ್ಲ ಎಂದು ತಿಳಿಸಿದರು.
ಸದ್ಯ ಹಾಲಿಗೆ ಕನಿಷ್ಠ ಖರೀದಿ ದರ ಲೀಟರ್‌ಗೆ 29.95 ರೂ ಇದೆ. ಇನ್ನು ಮುಂದೆ ಕನಿಷ್ಠ 32 ರೂ. ದರ ನೀಡಲಾಗುವುದು. ಹೈನುಗಾರರ ನೆರವಿಗಾಗಿ ರಾಜ್ಯ ಸರಕಾರದಿಂದ ಪ್ರತಿ ಲೀಟರ್‌ಗೆ 3 ರೂ. ನೆರವು ಕೋರಲಾಗಿದೆ. ಅಲ್ಲಿಯತನಕ ಒಕ್ಕೂಟವೇ ಇದರ ಹೊರೆಯನ್ನು ಹೊತ್ತುಕೊಳ್ಳಲಿದೆ. ಅ.11ರ ಒಕ್ಕೂಟದ ವಿಶೇಷ ಸಭೆಯಲ್ಲಿ 2.05 ಪ್ರೋತ್ಸಾಹ ಧನವನ್ನು ಘೋಷಿಸಲಿದ್ದೇವೆ ಎಂದರು.
19 ಬಗೆಯ ಹಾಲಿನ ಉತ್ಪನ್ನ ಉತ್ಪಾದನೆಗೆ 5.30 ಲಕ್ಷ ಲೀಟರ್ ಹಾಲು ಬೇಕಾಗುತ್ತದೆ. ಆದರೆ ಪ್ರಸ್ತುತ 4.65 ಲಕ್ಷ ಲೀಟರ್ ಹಾಲು ಸಂಗ್ರಹವಾಗುತ್ತದೆ. ಈ ಕಾರಣಕ್ಕೆ ಹೈನುಗಾರರನ್ನು ಪ್ರೋತ್ಸಾಹಿಸಲು ಪ್ರೋತ್ಸಾಹಧನ ನೀಡಲಾಗುತ್ತದೆ. ಇದರಿಂದ ಒಕ್ಕೂಟಕ್ಕೆ ದಿನಕ್ಕೆ 10 ಲಕ್ಷ ರೂ.ನಂತೆ ಮಾಸಿಕ 3 ಕೋಟಿ ರೂ. ನಷ್ಟ ಉಂಟಾಗಲಿದೆ ಎಂದರು.
ನಿರ್ದೇಶಕ ಕಾಪು ದಿವಾಕರ ಶೆಟ್ಟಿ, ವ್ಯವಸ್ಥಾಪಕ ನಿರ್ದೇಶಕ ಅಶೋಕ್ ಡಿ., ಮಾರುಕಟ್ಟೆ ವ್ಯವಸ್ಥಾಪಕ ರವಿರಾಜ್ ಉಡುಪ ಹಾಜರಿದ್ದರು.
ಹೈನುಗಾರ ಮಕ್ಕಳಿಗೆ ಉಚಿತ ಹಾಸ್ಟೆಲ್
ಹೈನುಗಾರರ ಮಕ್ಕಳಿಗೆ ಉನ್ನತ ವಿದ್ಯಾಭ್ಯಾಸಕ್ಕೆ ನೆರವಾಗಲು ಹಾಲು ಒಕ್ಕೂಟದಿಂದಲೇ ಉಚಿತ ಹಾಸ್ಟೆಲ್ ಸೌಲಭ್ಯ ಕಲ್ಪಿಸಲು ನಿರ್ಧರಿಸಲಾಗಿದೆ. ಈ ಹಾಸ್ಟೆಲ್ ಸೌಲಭ್ಯ ಉಚಿತವಾಗಿದ್ದು, ರಿಯಾಯಿತಿ ದರದಲ್ಲಿ ಆಹಾರ ವ್ಯವಸ್ಥೆಗೆ ಚಿಂತಿಸಲಾಗಿದೆ. ಈಗಾಗಲೇ ಬೆಂಗಳೂರಿನ ಶೆಟ್ಟಿಹಳ್ಳಿಯಲ್ಲಿ ಹಾಲು ಒಕ್ಕೂಟದ ಹಾಸ್ಟೆಲ್ ಇದ್ದು, ಅಲ್ಲಿ ಸೇರ್ಪಡೆ ಬಯಸುವ ಹೈನುಗಾರ ಮಕ್ಕಳಿಗೆ ಇಲ್ಲಿಂದ ಶಿಫಾರಸು ಪತ್ರ ನೀಡಲಾಗುವುದು ಎಂದು ಅಧ್ಯಕ್ಷ ಸುಚರಿತ ಶೆಟ್ಟಿ ತಿಳಿಸಿದರು.
ನಂದಿನಿ ಐಸ್‌ಕ್ರೀಂ ಮತ್ತು ಬೆಣ್ಣೆಯನ್ನು ಮಂಗಳೂರು ಹಾಲು ಒಕ್ಕೂಟದಲ್ಲೇ ಉತ್ಪಾದಿಸಲು ಉದ್ದೇಶಿಸಲಾಗಿದೆ. ಈಗ ನಂದಿನಿ ಬೆಣ್ಣೆಯ ಕೊರತೆ ತಲೆದೋರಿದೆ. ಇದು ತಾತ್ಕಾಲಿಕ ಮಾತ್ರ ಎಂದರು.