Advertisement

ಡೋಕ್ಲಾಂನಲ್ಲಿ ಮತ್ತೆ ಕುತಂತ್ರ: ಭೂತಾನ್‌ನ ಅಮೊಚು ನದಿ ಸಮೀಪ ಚೀನದಿಂದ ಸೇನಾನೆಲೆ!

12:05 AM Apr 12, 2023 | Team Udayavani |

ಹೊಸದಿಲ್ಲಿ/ಕಿಬಿಥೂ: ಸದಾ ಇನ್ನೊಂದು ದೇಶದ ನೆಲವನ್ನು ಕಬಳಿಸುತ್ತಲೇ ಇರಲು ಹೊಂಚುಹಾಕುವ ಚೀನ; ಸದ್ದಿಲ್ಲದೇ ಮತ್ತೆ ಭಾರತದ ಗಡಿಭಾಗದಲ್ಲಿ ಹೊಸಹೊಸ ನಿರ್ಮಾಣಗಳನ್ನು ಮಾಡುತ್ತಲೇ ಇದೆ.

Advertisement

2017ರಲ್ಲಿ ಭಾರತ, ಭೂತಾನ್‌, ಚೀನದ ಗಡಿಗಳಲ್ಲಿ ಬರುವ ಡೋಕ್ಲಾಮ್‌ನಲ್ಲಿ ರಸ್ತೆ ನಿರ್ಮಿಸಲು ಹೋಗಿದ್ದ ಚೀನಕ್ಕೆ ಭಾರತ ಸರಿಯಾಗಿ ತಪರಾಕಿ ಕೊಟ್ಟಿತ್ತು. ಇದೀಗ ಡೋಕ್ಲಾಂಗೆ ಸನಿಹದಲ್ಲೇ ಬರುವ ಭೂತಾನ್‌ನಲ್ಲಿರುವ ಅಮೊ ಚು ನದೀ ಭಾಗದಲ್ಲಿ 1000 ಸೈನಿಕರು ಇರುವಂತಹ ಸೇನಾನೆಲೆಯೊಂದನ್ನು ಚೀನ ಸದ್ದಿಲ್ಲದೇ ನಿರ್ಮಿಸುವ ಮೂಲಕ ಮತ್ತೆ ಉದ್ಧಟತನ ಪ್ರದರ್ಶಿಸಿದೆ. ಅಲ್ಲಿ ಶಾಶ್ವತ ವಸತಿ ಸೌಕರ್ಯಗಳಲ್ಲದೇ ತಾತ್ಕಾಲಿಕ ಶೆಡ್‌ಗಳನ್ನೂ ನಿರ್ಮಿಸಲಾಗಿದೆ. ಎರಡು ದೊಡ್ಡದೊಡ್ಡ ಸಂವಹನ ಟವರ್‌ಗಳೂ ತಲೆಎತ್ತಿವೆ. ಇದು ನೇರವಾಗಿ ಭಾರತಕ್ಕೆ ಸವಾಲು ಹಾಕುವಂತಿದೆ ಎಂದು “ಇಂಡಿಯಾ ಟುಡೇ’ ವರದಿ ಮಾಡಿದೆ.

ಕಾರಿಡಾರ್‌ ಮೇಲೆ ಕಣ್ಣು: ಡೋಕ್ಲಾಂನ ಮತ್ತೂಂದು ಗಡಿಯಲ್ಲಿ ಬರುವ ಸಿಕ್ಕಿಂನಲ್ಲಿ ಭಾರತ ಸಿಲಿಗುರಿ ಕಾರಿಡಾರ್‌ ನಿರ್ಮಿಸಿದೆ. ಅಮೊ ಚುನಲ್ಲಿ ಹೊಸ ನಿರ್ಮಾಣದಿಂದ ಸಿಲಿಗುರಿ ಕಾರಿಡಾರ್‌ ಮೇಲೆ ಚೀನ ಹದ್ದಿನ ಕಣ್ಣಿಡಲು ಸಾಧ್ಯವಾಗಲಿದೆ.

ಭೂತಾನ್‌ನ ಹಾ ಜಿಲ್ಲೆಯಲ್ಲಿರುವ ಡೋಕ್ಲಾಂ ಮೂರು ದೇಶಗಳ ಗಡಿ ಭಾಗದಲ್ಲಿದೆ. ಇಲ್ಲಿ ಭೂತಾನ್‌ ಮತ್ತು ಚೀನ ಸೇನೆ ಪಹರೆ ನಡೆಸುವುದು ತೀರಾ ಕಡಿಮೆ. ಈಗ ಡೋಕ್ಲಾಂಗೆ ಸನಿಹವಾಗಿ ಮತ್ತೂಂದು ದಾರಿಯನ್ನು ಚೀನ ಕಂಡುಕೊಂಡಿದೆ. ವಿಚಿತ್ರವೆಂದರೆ ಚೀನದೊಂದಿಗೆ ಗಡಿಯ ವಿಚಾರದಲ್ಲಿ ಸದಾ ಸಂಘರ್ಷ ನಡೆಸಿಕೊಂಡೇ ಬಂದಿದ್ದ ಭೂತಾನ್‌ ನಿಲುವು ತುಸು ಬದಲಾದಂತಿದೆ. ಅದರ ಪ್ರಧಾನಿ ಲೊಟೇ ತೆರಿಂಗ್‌ ಇತ್ತೀಚೆಗೆ ಡೋಕ್ಲಾಂ ಮೇಲೆ ಚೀನಕ್ಕೂ ಅಷ್ಟೇ ಹಕ್ಕಿದೆ ಎಂದು ಹೇಳಿದ್ದರು!

ಚೀನ ಆಕ್ಷೇಪಕ್ಕೆ ಭಾರತ ತಿರುಗೇಟು
ಅರುಣಾಚಲಪ್ರದೇಶಕ್ಕೆ ಸಚಿವ ಶಾ ಭೇಟಿಯನ್ನು ವಿರೋಧಿಸಿದ್ದ ಚೀನಗೆ ಭಾರತ ಮಂಗಳವಾರ ಪ್ರತ್ಯುತ್ತರ ನೀಡಿದೆ. “ಅರುಣಾಚಲವು ಹಿಂದೆ, ಇಂದು, ಮುಂದೆ ಎಂದೆಂದೂ ಭಾರತದ ಅವಿಭಾಜ್ಯ ಅಂಗವೇ ಆಗಿರಲಿದೆ. ಚೀನದ ವಿದೇಶಾಂಗ ವಕ್ತಾರ ನೀಡಿರುವ ಹೇಳಿಕೆಯನ್ನು ನಾವು ಖಂಡಿಸುತ್ತೇವೆ. ನೀವು ವಿರೋಧಿಸಿದ ತತ್‌ಕ್ಷಣ ವಾಸ್ತವವೇನೂ ಬದಲಾಗದು’ ಎಂದು ಭಾರತದ ವಿದೇಶಾಂಗ ಇಲಾಖೆ ವಕ್ತಾರ ಅರಿಂದಮ್‌ ಬಗಿc ಹೇಳಿದ್ದಾರೆ.

Advertisement

ಗಡಿ ಭದ್ರತೆಗೆ ಮೋದಿ ಸರಕಾರ ಬದ್ಧ: ಶಾ
ಅರುಣಾಚಲ ಪ್ರದೇಶದ ಪ್ರವಾಸದಲ್ಲಿರುವ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು, “ಗಡಿ ಪ್ರದೇಶಗಳ ಭದ್ರತೆ ಮತ್ತು ಅಭಿವೃದ್ಧಿಗೆ ಮೋದಿ ಸರಕಾರ ಬದ್ಧವಾಗಿದೆ’ ಎಂದು ಹೇಳಿದ್ದಾರೆ. ಚೀನದೊಂದಿಗೆ ಗಡಿ ಹಂಚಿಕೊಂಡಿರುವ ಕಿಬಿಥೂ ಗ್ರಾಮದಲ್ಲಿ ಸಿಎಂ ಪೆಮಾ ಖಂಡು, ಡಿಸಿಎಂ ಚೌನಾ ಮೈನ್‌ ಮತ್ತು ಇತರರೊಂದಿಗೆ ಮಂಗಳವಾರ ನಡೆಸಿದ ಸಭೆಯಲ್ಲಿ ಶಾ ಈ ಮಾತುಗಳನ್ನಾಡಿದ್ದಾರೆ. ಇದೇ ವೇಳೆ, ದಿಬ್ರುಗಢದಲ್ಲಿ ರ್ಯಾಲಿ ಉದ್ದೇಶಿಸಿ ಮಾತನಾಡಿದ ಶಾ, “ಮುಂದಿನ ವರ್ಷದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 300ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಜಯ ಸಾಧಿಸಿ ಮತ್ತೆ ಅಧಿಕಾರಕ್ಕೇರಲಿದೆ. ಈಶಾನ್ಯ ರಾಜ್ಯಗಳಲ್ಲಿ 14ರ ಪೈಕಿ 12 ಕ್ಷೇತ್ರಗಳಲ್ಲಿ ಗೆಲವು ದಾಖಲಿಸಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next