Advertisement
ಅನೇಕ ನಗರಗಳಲ್ಲಿ ಚಳವಳಿಕಾರರ ಕೂಗಿಗೆ ಸ್ಪಂದನೆ ಸಿಗಲಾರಂಭಿಸಿದೆ. ಬುಡಾಪೆಸ್ಟ್‌ನಲ್ಲಿ ಅತಿಹೆಚ್ಚು ಸಂಚಾರದಟ್ಟಣೆಯ ರಸ್ತೆಗಳಲ್ಲಿ 12 ಮೈಲುಗಳ ತಾತ್ಕಾಲಿಕ ಬೈಕ್ ಲೇನ್‌ಗಳನ್ನು ಆರಂಭಿಸಲಾಗಿದ್ದು ಇದನ್ನು ಖಾಯಂಗೊಳಿಸುವ ನಿರೀಕ್ಷೆಯಿದೆ. ಅಥೆನ್ಸ್‌ನ ಮೇಯರ್ ತಾನು ಕಾರುಗಳಿಗೆ ಇರುವ ಸಾರ್ವಜನಿಕ ಸ್ಥಳಾವಕಾಶವನ್ನು ತೆರವುಗೊಳಿಸುವುದಾಗಿ ಹೇಳಿದ್ದಾರೆ.
Related Articles
Advertisement
ಗ್ರೀಕ್ ರಾಜಧಾನಿಯಲ್ಲಿ ಅತ್ಯಂತ ಮಹತ್ವದ ಯೋಜನೆಯೊಂದು ಸಿದ್ಧಗೊಳ್ಳುತ್ತಿದ್ದು ಕೋವಿಡ್‌ನಿಂದಾಗಿ ಅದರ ಅನುಷ್ಠಾನಕ್ಕೆ ವೇಗ ಬಂದಿದೆ. ಸಾರ್ವಜನಿಕ ಸ್ಥಳಾವಕಾಶದಲ್ಲಿ 50,000 ಚದರ ಮೀಟರ್‌ಗಳನ್ನು ಸೈಕಲ್ ಸವಾರರಿಗೆ ಹಾಗೂ ಪಾದಚಾರಿಗಳಿಗೆ ಬಿಟ್ಟುಕೊಡುವ ಯೋಜನೆಯನ್ನು ಅಲ್ಲಿನ ಮೇಯರ್ ಕೋಸ್ಟಾಸ್ ಮಾಕೊಯಾನಿಸ್ ಅವರು ಪ್ರಕಟಿಸಿದ್ದಾರೆ. ಈ ಯೋಜನೆಯ ಹೃದಯಭಾಗದಲ್ಲಿ ನಗರದ ಪುರಾತತ್ವ ಮಹತ್ವದ ತಾಣಗಳನ್ನು ಬೆಸೆಯುವ ನಾಲ್ಕು ಮೈಲುಗಳ “ಭವ್ಯ ಪಾದಚಾರಿ ಮಾರ್ಗ’ ಇರುವುದು.
ಪ್ಯಾರಿಸ್‌ನಲ್ಲಿ ಕಾರು ಲಾಬಿಗಳಿಂದ ವಿರೋಧ ವ್ಯಕ್ತವಾದರೂ ಸುಮಾರು 20 ಮೈಲು ತಾತ್ಕಾಲಿಕ ಬೈಕ್ ಲೇನ್‌ಗಳನ್ನು ಸ್ಥಾಪಿಸಲಾಗಿದೆ.ನಗರದ ಕೆಲ ಪ್ರಮುಖ ರಸ್ತೆಗಳನ್ನು ಕ್ರಮೇಣ ಖಾಸಗಿ ವಾಹನಗಳಿಗೆ ಮುಚ್ಚಲಾಗುತ್ತಿದೆ ಮತ್ತು ನಗರದಲ್ಲಿ ಇನ್ನೂ 30 ಮೈಲುಗಳಷ್ಟು ಬೈಕ್ ಲೇನ್‌ಗಳನ್ನು ನಿರ್ಮಿಸುವ ಪ್ರಸ್ತಾವ ಹೊಂದಲಾಗಿದೆ. ನಗರದ ಮೇಯರ್ ಆ್ಯನಿ ಹಿಡಾಲ್ಗೊ ಅವರು ಖಾಸಗಿ ಕಾರುಗಳನ್ನು ತೊರೆದು ಬೈಕ್‌ಗಳನ್ನು ಬಳಸುವಂತೆ ಜನತೆಗೆ ಕರೆಯಿತ್ತಿದ್ದಾರೆ.
ಯೂರೋಪ್‌ನ ಅತಿಹೆಚ್ಚು ಮಾಲಿನ್ಯಪೀಡಿತ ನಗರಗಳಲ್ಲಿ ಒಂದಾಗಿರುವ ಮಿಲಾನ್‌ನಲ್ಲಿ ಕಾರುಗಳಿಂದ ಸೈಕ್ಲಿಂಗ್ ಹಾಗೂ ನಡಿಗೆಗೆ ಸ್ಥಳಾವಕಾಶವನ್ನು ಮರುವಿಂಗಡಿಸುವುದಕ್ಕಾಗಿ ಈ ಬೇಸಗೆಯಲ್ಲಿ 22 ಮೈಲು ರಸ್ತೆಗಳನ್ನು ರೂಪಾಂತರಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜನರು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವಂತಾಗಲು ರೋಮ್ ನಗರಾಡಳಿತೆ 93 ಮೈಲು ತಾತ್ಕಾಲಿಕ ಹಾಗೂ ಖಾಯಂ ಸೈಕಲ್ ರಸ್ತೆಗಳ ನಿರ್ಮಾಣಕ್ಕೆ ಒಪ್ಪಿಗೆ ನೀಡಿದೆ. ಅಲ್ಲದೆ ದ್ವಿಚಕ್ರವಾಹನ ಸವಾರಿಯನ್ನು ಉತ್ತೇಜಿಸುವುದಕ್ಕಾಗಿ ಹೊಸ ದ್ವಿಚಕ್ರ ವಾಹನ ಕೊಳ್ಳುವವರಿಗೆ ಸಬ್ಸಿಡಿ ಬೆಂಬಲ ನೀಡುತ್ತಿದೆ.
ಬೊಗೋಟದಲ್ಲಿ ರವಿವಾರಗಳಂದು ಹೆದ್ದಾರಿಗಳಲ್ಲಿ ಕಾರುಗಳ ಸಂಚಾರವನ್ನು ನಿರ್ಬಂಧಿಸಿ ನೂರಾರು ಮೈಲುಗಳನ್ನು ಸೈಕಲ್‌ಸವಾರರ ಮುಕ್ತ ಸಂಚಾರಕ್ಕಾಗಿ ಬಿಟ್ಟುಕೊಡಲಾಗುತ್ತಿದೆ. ಅಲ್ಲಿನ ಮೇಯರ್ ಅವರು ಈಗಾಗಲೇ ಇರುವ 300 ಮೈಲುಗಳ ಬೈಕ್ ಲೇನ್‌ಗಳಿಗೆ ಹೆಚ್ಚುವರಿಯಾಗಿ 50 ಮೈಲುಗಳ ಹೊಸ ಬೈಕ್ ಲೇನ್ ನಿರ್ಮಿಸಲಾಗುವುದೆಂದು ಕಳೆದ ವಾರ ಪ್ರಕಟಿಸಿದ್ದರು.ಕೋವಿಡ್ ಹಾವಳಿ ಮಧ್ಯೆ ಬಸೆಲ್ಸ್ ಮತ್ತು ಸಿಡ್ನಿಯಲ್ಲೂ ಇಂಥದ್ದೇ ಬೆಳವಣಿಗೆಗಳು ಕಂಡುಬಂದಿವೆ.ಅಮೆರಿಕದ ಅನೇಕ ನಗರಗಳಲ್ಲಿ ಸೈಕಲ್ ಸವಾರಿ ಸ್ಫೋಟಿಸಿರುವುದಾಗಿ ಸಾರಿಗೆ ಅಧಿಕಾರಿಗಳು ಹೇಳುತ್ತಾರೆ. ಬರ್ಲಿನ್‌ನಲ್ಲಿ ಹೊಸ ಬೈಕ್ ಲೇನ್ ನಿರ್ಮಿಸಲು ಒಂದು ದಶಕದ ಅವಧಿಯೇ ಬೇಕಾಗಬಹುದಾದರೂ ಕೋವಿಡ್ ಬಿಕ್ಕಟ್ಟಿನ ಮಧ್ಯೆ ಕೇವಲ 3ರಿಂದ 10 ದಿನಗಳ ಒಳಗಾಗಿ 14 ಮೈಲುಗಳಷ್ಟು ಬೈಕ್ ಲೇನ್‌ಗಳು ಧುತ್ತೆಂದು ಉದ್ಭವವಾಗಿವೆ. ಆದರೆ ಜರ್ಮನಿಯ ಆಟೋಮೊಬೈಲ್ ಎಸೋಸಿಯೇಶನ್ ಎಡಿಎಸಿ ದೇಶದ ಹಲವಾರು ನಗರಗಳಲ್ಲಿ ಈಗ ನಡೆಯುತ್ತಿರುವ “ತುರ್ತು ಸ್ಥಿತಿಯ ದುರುಪಯೋಗ’ವನ್ನು ಕಟುವಾಗಿ ಟೀಕಿಸಿದೆ. ಕಾರು ಸಂಚಾರದಲ್ಲಿನ ತಾತ್ಕಾಲಿಕ ಇಳಿಕೆ ಮತ್ತು ಬೈಕ್ ಬಳಕೆಯಲ್ಲಿನ ಹೆಚ್ಚಳವನ್ನು ಸಂಚಾರ ಅವಕಾಶಗಳ ಖಾಯಂ ಮರುಹೊಂದಾಣಿಕೆಯೆಂದು ಹೇರುವುದಕ್ಕೆ ಬಳಸಲಾಗದು ಎಂದು ಹೇಳಿದೆ. ಬೈಕ್ ಹಾಗೂ ಸೈಕಲ್‌ಗಳನ್ನು ಉತ್ತೇಜಿಸುವುದಕ್ಕೆ ನಿರ್ದಿಷ್ಟ ಕ್ರಮಗಳನ್ನು ಆರಂಭಿಸದಿದ್ದ ನಗರಗಳಲ್ಲಿ ಕೂಡ ಸೈಕಲ್ ಸವಾರರ ಸಂಖ್ಯೆ ಹೆಚ್ಚು ಕಾಣಿಸತೊಡಗಿದೆ. ಜೋರ್ಡಾನ್ ರಾಜಧಾನಿ ಅಮ್ಮಾನ್‌ನಲ್ಲಿ ಕಾರುಗಳ ಸಂಚಾರವನ್ನು ಆರು ವಾರಗಳಿಂದ ನಿಷೇಧಿಸಲಾದ ಕಾರಣ ಸೈಕಲ್ ಸವಾರರು ಖಾಲಿ ರಸ್ತೆಗಳಲ್ಲಿ ಸವಾರಿ ನಡೆಸುವ ಆನಂದದ ಕುರಿತು ಮಾತನಾಡುತ್ತಿದ್ದಾರೆ.