Advertisement

ಬಿಜೆಪಿಯತ್ತ ರಾಜ್ಯ ನಾಯಕರ ವಲಸೆ?

06:10 AM Dec 18, 2017 | |

ಬೆಂಗಳೂರು: ದೇಶದಾದ್ಯಂತ ಕುತೂಹಲದಿಂದ ಕಾಯಲಾಗುತ್ತಿರುವ ಗುಜರಾತ್‌ ವಿದಾನಸಭೆ ಚುನಾವಣಾ ಫ‌ಲಿತಾಂಶ ಸೋಮವಾರ ಹೊರಬೀಳಲಿದ್ದು, ಫ‌ಲಿತಾಂಶವನ್ನಾಧರಿಸಿ ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿರುವ ರಾಜ್ಯದಲ್ಲಿ ಪಕ್ಷಾಂತರ ಪರ್ವಕ್ಕೆ ವೇದಿಕೆ ಸಜ್ಜಾಗಿದೆ.ಬಿಜೆಪಿ ಗೆದ್ದರೆ ಆ ಪಕ್ಷಕ್ಕೆ ಸೇರುವ,ಕಾಂಗ್ರೆಸ್‌ ಸೋತರೆ ಆ ಪಕ್ಷಕ್ಕೆ ಗುಡ್‌ಬೈ ಹೇಳಲು ಕೆಲವು ಸಚಿವರಾದಿಯಾಗಿ ಶಾಸಕರು,ಮಾಜಿ ಶಾಸಕರು ಕಾತರದಿಂದ ಫ‌ಲಿತಾಂಶದ ನಿರೀಕ್ಷೆಯಲ್ಲಿದ್ದಾರೆ.

Advertisement

ಚುನಾವಣೋತ್ತರ ಸಮೀಕ್ಷೆಗಳ ಪ್ರಕಾರ ಗುಜರಾತ್‌ನಲ್ಲಿ ಬಿಜೆಪಿ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ. ಹೀಗಾಗಿ ಪಕ್ಷಾಂತರ ಪರ್ವ ಬಹುತೇಕ ಬಿಜೆಪಿ ಸುತ್ತಲೇ ಸುತ್ತಾಡುತ್ತಿದ್ದು, ಅದಕ್ಕೆ ತಕ್ಕಂತೆ ರಾಜ್ಯ ಬಿಜೆಪಿಯಲ್ಲೂ ಸಂಚಲನ ಆರಂಭವಾಗಿದೆ. ಒಂದೊಮ್ಮೆ ಚುನಾವಣೋತ್ತರ ಸಮೀಕ್ಷೆಗಳು ಸುಳ್ಳಾಗಿ ಗುಜರಾತ್‌ನಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಆಗ ಪಕ್ಷಾಂತರ ಪರ್ವ ಕಾಂಗ್ರೆಸ್‌ನತ್ತ ಸ್ವಲ್ಪ ಮಟ್ಟಿಗೆ ವಾಲಬಹುದು. ಆದರೆ, ಅಂತಹ ಸಾಧ್ಯತೆ ಕಡಿಮೆ ಎಂದು ಹೇಳಲಾಗುತ್ತಿದೆ.

ಗುಜರಾತ್‌ನಲ್ಲಿ ಬಿಜೆಪಿ ಗೆಲ್ಲಲಿದೆ ಎಂಬ ಮತದಾನೋತ್ತರ ಸಮೀಕ್ಷೆ ಆರಂಭಿಸಿ ಈಗಾಗಲೇ ರಾಜ್ಯ ಬಿಜೆಪಿಯಲ್ಲಿ ಅನ್ಯ ಪಕ್ಷಗಳಿಂದ ಮುಖಂಡರನ್ನು, ಅದರಲ್ಲೂ ಮುಖ್ಯವಾಗಿ ಹಾಲಿ ಶಾಸಕರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ಪ್ರಯತ್ನ ಆರಂಭವಾಗಿದೆ. ಈಗಾಗಲೇ ಕಾಂಗ್ರೆಸ್‌ ಮತ್ತು ಜೆಡಿಎಸ್‌ನ ಕೆಲವು ಶಾಸಕರನ್ನು ಸಂಪರ್ಕಿಸಲಾಗಿದ್ದು, ಗುಜರಾತ್‌ ಫ‌ಲಿತಾಂಶದ ಬಳಿಕ ನಿರ್ಧಾರ ಕೈಗೊಳ್ಳುವುದಾಗಿ ಹೇಳಿದ್ದಾರೆ ಎಂದು ಪಕ್ಷದ ಹಿರಿಯ ನಾಯಕರೊಬ್ಬರು ತಿಳಿಸಿದ್ದಾರೆ.

ಇನ್ನೊಂದೆಡೆ ಕಾಂಗ್ರೆಸ್‌ ನಾಯಕರು ಗುಜರಾತ್‌ ಚುನಾವಣೆ ಫ‌ಲಿತಾಂಶ ರಾಜ್ಯದಲ್ಲಿ ಯಾವುದೇ ಪ್ರಭಾವ ಬೀರುವುದಿಲ್ಲ ಎಂದು ನಾಯಕರು ಬಹಿರಂಗವಾಗಿ ಹೇಳುತ್ತಿದ್ದಾರಾದರೂ ಆತಂಕ ಕಾಣಿಸಿಕೊಂಡಿರುವುದು ಸ್ಪಷ್ಟ. ಪ್ರತಿ ಚುನಾವಣೆಯಲ್ಲೂ ಆಡಳಿತ ವಿರೋಧಿ ಅಲೆ ಕೆಲಸ ಮಾಡುತ್ತದೆ. ಇದರ ಜತೆಗೆ ಗುಜರಾತ್‌ ಫ‌ಲಿತಾಂಶ ಬಿಜೆಪಿ ಪರ ಬಂದರೆ ಅದು ರಾಜ್ಯ ರಾಜಕಾರಣದ ಮೇಲೂ ಪರಿಣಾಮ ಬೀರಲಿದ್ದು, ಆಡಳಿತ ವಿರೋಧಿ ಅಲೆ ಜತೆಗೆ ಬಿಜೆಪಿ ಪರ ಅಲೆ ಸೃಷ್ಟಿಯಾದರೆ ಅದಕ್ಕೆ ತಿರುಗೇಟು ನೀಡುವುದು ಹೇಗೆ ಎಂಬ ಬಗ್ಗೆ ಚರ್ಚೆ ಶುರುವಾಗಿದೆ.

ಜೆಡಿಎಸ್‌ನಲ್ಲಿ ಅಂತಹ ಯಾವುದೇ ಚಡಪಡಿಕೆ ಇಲ್ಲವಾದರೂ ಹಳೇ ಮೈಸೂರು ಭಾಗದಲ್ಲಿ ಪಕ್ಷದ ಕೆಲವು ಶಾಸಕರು ಬಿಜೆಪಿ ಸೇರಲಿದ್ದಾರೆ ಎಂಬ ಊಹಾಪೋಹಗಳ ಹಿನ್ನೆಲೆಯಲ್ಲಿ ಸ್ವಲ್ಪ ಮಟ್ಟಿನ ಆತಂಕ ಕಾಣಿಸಿಕೊಂಡಿದೆ. ಆದರೆ, ಇದು ಫ‌ಲಿತಾಂಶ ಆಧರಿಸಿ ನಡೆಯುವ ಬೆಳವಣಿಗೆಯಾದ್ದರಿಂದ ಕಾದು ನೋಡಲು ಪಕ್ಷದ ನಾಯಕರು ತೀರ್ಮಾನಿಸಿದ್ದಾರೆ ಎನ್ನಲಾಗಿದೆ.

Advertisement

ಪಕ್ಷಾಂತರ ಪರ್ವಕ್ಕೆ ವೇದಿಕೆ ಸಿದ್ಧ:
ಇತ್ತ ಬಿಜೆಪಿಯಲ್ಲಿ ಪಕ್ಷಾಂತರ ಪರ್ವಕ್ಕೆ ಈಗಾಗಲೇ ವೇದಿಕೆ ಸಿದ್ಧವಾಗಿದೆ. ಉತ್ತರ ಕರ್ನಾಟಕ ಮತ್ತು ಕರಾವಳಿ ಕರ್ನಾಟಕದಲ್ಲಿ ಕಾಂಗ್ರೆಸ್‌ನ ಹಾಲಿ ಶಾಸಕರು ಬಿಜೆಪಿ ಸೇರಲಿದ್ದಾರೆ ಎಂದು ಹೇಳಲಾಗುತ್ತಿದೆ. ಇನ್ನೊಂದೆಡೆ, ಹಳೇ ಮೈಸೂರು ಭಾಗದಲ್ಲೂ ಕಾಂಗ್ರೆಸ್‌ ಮತ್ತು ಜೆಡಿಎಸ್‌ನ ಒಂದಿಬ್ಬರು ಶಾಸಕರು ಹಾಗೂ ಮುಖಂಡರನ್ನು ಬಿಜೆಪಿಗೆ ಸೇರಿಸಿಕೊಳ್ಳಲು ಇತ್ತೀಚೆಗೆ ಬಿಜೆಪಿ ಸೇರಿರುವ ಕಾಂಗ್ರೆಸ್‌ ಶಾಸಕ ಸಿ.ಪಿ.ಯೋಗೇಶ್ವರ್‌ ಅವರ ನೇತೃತ್ವದಲ್ಲಿ ಪ್ರಯತ್ನಗಳು ನಡೆಯುತ್ತಿವೆ.

ಗುಜರಾತ್‌ ಫ‌ಲಿತಾಂಶ ಹೊರಬಿದ್ದ ತಕ್ಷಣ ಈ ಪ್ರಕ್ರಿಯೆಗಳು ಚುರುಕುಗೊಳ್ಳಲಿದೆ. ಇದುವರೆಗೆ ಬಿಜೆಪಿ ಗೆಲ್ಲದ ಕ್ಷೇತ್ರಗಳಲ್ಲಿ ಅನ್ಯ ಪಕ್ಷದವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲು ಆದ್ಯತೆ ನೀಡುವಂತೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಮತ್ತು ರಾಜ್ಯ ಚುನಾವಣಾ ಉಸ್ತುವಾರಿ ಪ್ರಕಾಶ್‌ ಜಾವಡೇಕರ್‌ ಅವರು ಸೂಚಿಸಿದ್ದು, ಅದರಂತೆ ಕಾಂಗ್ರೆಸ್‌ ಮತ್ತು ಜೆಡಿಎಸ್‌ನ ಕೆಲವು ಶಾಸಕರನ್ನು ಸಂಪರ್ಕಿಸಲಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಕಾಂಗ್ರೆಸ್‌ ಮತ್ತು ಜೆಡಿಎಸ್‌ ನಾಯಕರು ಕೂಡ ಬೇರೆ ಪಕ್ಷಗಳಿಂದ ಶಾಸಕರು ಸೇರಿದಂತೆ ಅನೇಕ ಮುಖಂಡರು ಸೇರಲಿದ್ದಾರೆ ಎಂದು ಹೇಳುತ್ತಿದ್ದಾರಾದರೂ ಸದ್ಯಕ್ಕೆ ಅಂತಹ ಲಕ್ಷಣ ಗೋಚರಿಸುತ್ತಿಲ್ಲ. ಈ ವಿಚಾರದಲ್ಲಿ ಬಿಜೆಪಿಯೇ ಮೇಲುಗೈ ಹೊಂದಿದೆ.

ಮತದಾನೋತ್ತರ ಸಮೀಕ್ಷೆಯಂತೆ ಗುಜರಾತ್‌ನಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದ್ದು, ಈ ಫ‌ಲಿತಾಂಶ ರಾಜ್ಯ ರಾಜಕೀಯದಲ್ಲಿ ಬದಲಾವಣೆಯ ದಿಕ್ಸೂಚಿಯಾಗಲಿದೆ. ಅನ್ಯ ಪಕ್ಷಗಳಿಂದ ಬಹಳಷ್ಟು ಮಂದಿ ಬಿಜೆಪಿ ಸೇರಲಿದ್ದು, ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ನೇತೃತ್ವದಲ್ಲಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ಯಡಿಯೂರಪ್ಪ ಮುಖ್ಯಮಂತ್ರಿಯಾಗಲು ವೇದಿಕೆ ಸಿದ್ಧವಾಗಲಿದೆ.
– ಆರ್‌.ಅಶೋಕ್‌, ಮಾಜಿ ಉಪಮುಖ್ಯಮಂತ್ರಿ

ಗುಜರಾತ್‌ ಚುನಾವಣೆಯಲ್ಲಿ ಕಾಂಗ್ರೆಸ್‌-ಬಿಜೆಪಿ ನಡುವೆ ಪ್ರಬಲ ಪೈಪೋಟಿ ಇದ್ದು, ಫ‌ಲಿತಾಂಶ ಏನಾಗುತ್ತದೋ ನೋಡೋಣ. ಆದರೆ, ಬಿಜೆಪಿ ಮಾತ್ರ ಭಯಗೊಂಡಿದೆ. ರಾಜ್ಯ ರಾಜಕಾರಕ್ಕೂ, ಗುಜರಾತ್‌ ರಾಜಕಾರಣಕ್ಕೂ ವ್ಯತ್ಯಾಸ ಇದೆ. ನಮ್ಮ ಸರ್ಕಾರದ ಬಗ್ಗೆ ಯಾವುದೇ ನಕಾರಾತ್ಮಕ ಅಭಿಪ್ರಾಯ ಇಲ್ಲದ ಕಾರಣ ಗುಜರಾತ್‌ ಫ‌ಲಿತಾಂಶ ರಾಜ್ಯದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಹೀಗಾಗಿ ಫ‌ಲಿತಾಂಶದ ಬಗ್ಗೆ ಆತಂಕವಿಲ್ಲ.
– ದಿನೇಶ್‌ ಗುಂಡೂರಾವ್‌, ಕೆಪಿಸಿಸಿ ಕಾರ್ಯಾಧ್ಯಕ್ಷ

– ಪ್ರದೀಪಕುಮಾರ್‌

Advertisement

Udayavani is now on Telegram. Click here to join our channel and stay updated with the latest news.

Next