Advertisement
ಬೈಕಂಪಾಡಿಯ ಮೀನಕಳಿಯ ಬಳಿ ಸಮುದ್ರ ದಂಡೆ, ರೈಲ್ವೇ ಯಾರ್ಡ್ ಭಾಗಗಳಲ್ಲಿ ಒಂದು ಬಾರಿ ಸುತ್ತಾಡಿ ಬಂದರೆ ನಿಜ ಸ್ವರೂಪ ದರ್ಶನವಾಗುತ್ತದೆ. ರಾಜ್ಯದ ಉತ್ತರ ಕರ್ನಾಟಕದಿಂದ ಬಂದ ಕೂಲಿ ಕಾರ್ಮಿಕರಿಗೆ ತಮ್ಮ ಜಾಗದಲ್ಲಿ ಜೋಪಡಿ ನಿರ್ಮಿಸಲು ಅವಕಾಶ ಕೊಟ್ಟು 500ರಿಂದ 2,000 ರೂ.ಗಳ ವರೆಗೆ ಜಾಗದ ಮಾಲಕರು ಬಾಡಿಗೆ ವಸೂಲು ಮಾಡುತ್ತಾರೆ. ಆದರೆ ಅವರಿಗೆ ಸ್ನಾನ, ಶೌಚಾಲಯಕ್ಕೆ ಬೇಕಾದ ವ್ಯವಸ್ಥೆ ಮಾಡುವಲ್ಲಿ ಹಿಂದುಳಿದಿದ್ದಾರೆ. ನಿತ್ಯ ಕರ್ಮಕ್ಕಾಗಿ ರಸ್ತೆ ಬದಿ, ರೈಲ್ವೇ ಯಾರ್ಡ್ ಮತ್ತಿತರ ಪ್ರದೇಶ ಹುಡುಕಿಕೊಳ್ಳುತ್ತಾರೆ. ಇನ್ನು ಕೆಲವರಂತೂ ರಸ್ತೆ ಬದಿ ನಾಲ್ಕು ಪ್ಲಾಸ್ಟಿಕ್ ಹೊದಿಕೆ ಕಟ್ಟಿ ಸ್ನಾನಗೃಹ ನಿರ್ಮಿಸಿದ್ದಾರೆ. ಆದರೆ ರಸ್ತೆ ಮೇಲೆಯೇ ಈ ನೀರು ಹರಿದು ಪಾದಚಾರಿಗಳು ಸಂಕಷ್ಟ ಎದುರಿ ಸುವಂತಾಗಿದೆ. ಈ ಭಾಗದಲ್ಲಿ ಐವತ್ತಕ್ಕೂ ಮಿಕ್ಕಿ ಜೋಪಡಿಗಳಿದ್ದು ಇನ್ನೂರಕ್ಕೂ ಮಿಕ್ಕಿ ಕಾರ್ಮಿಕರು ನಿತ್ಯ ಜೀವನ ಸಾಗಿಸುತ್ತಿದ್ದಾರೆ.
ಮಂಗಳೂರು ಹೊರವಲಯದ ಪ್ರವಾಸಿ ಸಮುದ್ರ ತೀರ ಪ್ರದೇಶಗಳಲ್ಲಿ ಹಣ ಕೊಟ್ಟು ಬಳಸುವ ಶೌಚಾಲಯವಿಲ್ಲ. ಇದರ ಜತೆಗೆ ಈ ಭಾಗದಲ್ಲಿ ಕೆಲವೊಂದು ಬಾಡಿಗೆದಾರರು ಶೌಚಾಲಯ ನಿರ್ಮಿಸಿ ಕೊಟ್ಟಿದ್ದಾರೆ. ಇನ್ನುಳಿದವರು ಬಾಡಿಗೆ ಮಾತ್ರ ಪಡೆಯುತ್ತಾರೆ. ಮೂಲಸೌಕರ್ಯ ನೀಡಿಲ್ಲ. ಜೋಪಡಿಯಲ್ಲಿರುವ ಪುಟ್ಟ ಮಕ್ಕಳು ಕೂಡ ಈ ಬಯಲು ಶೌಚಾಲಯದ ದುಷ್ಪರಿಣಾಮ ಎದುರಿಸುತ್ತಿದ್ದಾರೆ. ಶುಚಿತ್ವದ ಕೊರತೆಯಿಂದ ನೆಗಡಿ, ಕೆಮ್ಮು, ಹೊಟ್ಟೆ ನೋವು ಮತ್ತಿತರ ಸಮಸ್ಯೆಗಳಿಂದ ಬಳಲುತ್ತಿರುವುದು ಕಂಡು ಬರುತ್ತಿದೆ. ಪಣಂಬೂರು, ಬೈಕಂಪಾಡಿ, ಮುಕ್ಕ ಸಹಿತ ಈ ಭಾಗದಲ್ಲಿ ಸಮುದ್ರ ತೀರದುದ್ದಕ್ಕೂ ವಲಸೆ ಕಾರ್ಮಿಕರು ಜೋಪಡಿ ನಿರ್ಮಿಸಿ ಕೊಂಡಿದ್ದಾರೆ. ಇನ್ನೊಂದೆಡೆ ಜಾಗವಿದ್ದ ಕಡೆಯಲ್ಲೆಲ್ಲ ತಗಡು ಶೀಟು ಹಾಕಿ ಕಾರ್ಮಿಕರಿಗೆ ಬಾಡಿಗೆ ನೀಡಲಾಗಿದೆ. ಎಚ್ಚರಿಕೆ ನೀಡಿದ್ದೇವೆ :
ಇಲ್ಲಿನ ಜಾಗ ಬಾಡಿಗೆ ನೀಡಿದ ಸ್ಥಳಕ್ಕೆ ಭೇಟಿ ನೀಡಿ ಮಾಲಕರಿಗೆ ಎಚ್ಚರಿಕೆ ನೀಡಿದ್ದೇವೆ. ಸೂಕ್ತ ಶೌಚಾಲಯ ಕಟ್ಟಿಕೊಡುವಂತೆ ಸೂಚಿಸಲಾಗಿದೆ. ಇಲ್ಲದಿದ್ದಲ್ಲಿ ಪಾಲಿಕೆಯ ಆರೋಗ್ಯ ಮತ್ತು ಪರಿಸರ ಇಲಾಖೆ ಸೂಕ್ತ ಕ್ರಮ ಕೈಗೊಳ್ಳುತ್ತದೆ ಎಂದು ಸುರತ್ಕಲ್ ವಲಯ ಆರೋಗ್ಯಾಧಿಕಾರಿ ಸುಶಾಂತ್, ಸುರತ್ಕಲ್ ವಲಯ ಪರಿಸರ ಅಧಿಕಾರಿ ದಯಾನಂದ್ ಅವರು ತಿಳಿಸಿದ್ದಾರೆ.
Related Articles
Advertisement
-ಲಕ್ಷ್ಮೀನಾರಾಯಣ ರಾವ್