Advertisement

ತವರಿಗೆ ತೆರಳಿದ ಉತ್ತರ ಪ್ರದೇಶದ ವಲಸೆ ಕಾರ್ಮಿಕರು

11:02 PM May 16, 2020 | Sriram |

ಪುತ್ತೂರು: ದ.ಕ. ಜಿಲ್ಲೆಯ ಪುತ್ತೂರು ಉಪ ವಿಭಾಗದಿಂದ ಶನಿವಾರ 1,520 ಮಂದಿ ಉತ್ತರ ಭಾರತ ಕಾರ್ಮಿಕರು ತಮ್ಮ ಸ್ವಂತ ಊರಿಗೆ ಶ್ರಮಿಕ ರೈಲಿನಲ್ಲಿ ತೆರಳಿದರು.

Advertisement

ಕಳೆದ ಮಾ. 12ರಂದು ಬಿಹಾರದ 1,428 ಮಂದಿ ತಮ್ಮೂರಿಗೆ ತೆರಳಿದ್ದರು. ಇದೀಗ ಪುತ್ತೂರು ಉಪ ವಿಭಾಗದಿಂದ ಒಟ್ಟು 2,948 ಮಂದಿ ಬಿಹಾರ ಹಾಗೂ ಉತ್ತರ ಪ್ರದೇಶದ ವಲಸೆ ಕಾರ್ಮಿಕರು ಜಿಲ್ಲೆಯಿಂದ ತವರಿಗೆ ತೆರಳಿದ್ದಾರೆ.

ಅಡಿಷನಲ್‌ ಎಸ್ಪಿ ವಿಕ್ರಂ ಅಮ್ಟೆ, ಪುತ್ತೂರು ಉಪ ವಿಭಾಗಾಧಿಕಾರಿ ಯತೀಶ್‌ ಉಳ್ಳಾಲ, ಡಿವೈಎಸ್ಪಿ ದಿನಕರ್‌ ಶೆಟ್ಟಿ, ಪುತ್ತೂರು ತಹಶೀಲ್ದಾರ್‌ ರಮೇಶ್‌ ಬಾಬು, ಬೆಳ್ತಂಗಡಿ ತಹಶೀಲ್ದಾರ್‌ ಗಣಪತಿ ಶಾಸ್ತ್ರೀ, ಕಡಬ ತಹಶೀಲ್ದಾರ್‌ ಜಾನ್‌ಪ್ರಕಾಶ್‌, ಅನಂತ ಶಂಕರ ಸುಳ್ಯ ಜತೆ ಕಂದಾಯ ಇಲಾಖೆ ಸಿಬಂದಿ, ಕೆಎಸ್ಸಾರ್ಟಿಸಿ ಅಧಿಕಾರಿಗಳು, ರೈಲ್ವೇ ಅಧಿಕಾರಿಗಳು, ಪೊಲೀಸ್‌ ಸಿಬಂದಿ ಸಹಕಾರದಲ್ಲಿ ಕಾರ್ಮಿಕರನ್ನು ಸ್ಕ್ರೀನಿಂಗ್‌ ಹಾಗೂ ವೈದ್ಯಕೀಯ ಪರಿಶೀಲನೆ ನಡೆಸಿ ಕಳುಹಿಸಿಕೊಡಲಾಯಿತು.

ಪುತ್ತೂರು ಉಪವಿಭಾಗದ ಬೆಳ್ತಂಗಡಿ, ಸುಳ್ಯ, ಸುಬ್ರಹ್ಮಣ್ಯ, ಕಡಬ, ಬಂಟ್ವಾಳ ಭಾಗಗಳಿಂದ 42 ಕೆಎಸ್ಸಾರ್ಟಿಸಿ ಬಸ್‌ಗಳಲ್ಲಿ ಬಂದ ಈ ವಲಸೆ ಕಾರ್ಮಿಕರನ್ನು ಪುತ್ತೂರು ಮಹಾಲಿಂಗೇಶ್ವರ ದೇಗುಲದ ದೇವರ ಮಾರುಗದ್ದೆಯಲ್ಲಿ ಒಟ್ಟು ಸೇರಿಸಿ ಅಲ್ಲಿಂದ ಅದೇ ಬಸ್‌ ಮೂಲಕ ರೈಲ್ವೇ ಸ್ಟೇಶನ್‌ಗೆ ಕರೆತರಲಾಯಿತು.

ಅನಂತರ ಮೂರು ಗಂಟೆಗೆ ಶ್ರಮಿಕ ರೈಲಿನಲ್ಲಿ ಅವರನ್ನು ಉತ್ತರ ಪ್ರದೇಶಕ್ಕೆ ಕಳುಹಿಸಿ ಕೊಡಲಾಯಿತು.

Advertisement

ವಲಸೆ ಕಾರ್ಮಿಕರಿಗೆ ಕುಕ್ಕೆ ಸುಬ್ರಹ್ಮಣ್ಯ ದೇಗುಲ ಮತ್ತು ಪುತ್ತೂರು ಮಹಾಲಿಂಗೇಶ್ವರ ದೇಗುಲದ ವತಿಯಿಂದ ಊಟ, ಕಿಟ್‌ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಯಿತು. ಪುತ್ತೂರು ಕಬಕ ರೈಲ್ವೇ ನಿಲ್ದಾಣದಿಂದ ಹೊರಟ ಶ್ರಮಿಕ ರೈಲು ಅರಸೀಕೆರೆ, ಗುಂಟಕಲ್‌, ನಾಗಪುರ, ಝಾನ್ಸಿ, ಲಕ್ನೋ ಮೂಲಕ ಸುಮಾರು 52 ಗಂಟೆಗಳಲ್ಲಿ ಉತ್ತರ ಪ್ರದೇಶ ಸೇರಲಿದೆ ಎಂದು ನೈಋತ್ಯ ರೈಲ್ವೇ ಮೈಸೂರು ವಿಭಾಗದ ಹಿರಿಯ ಟಿಕೇಟ್‌ ನಿರೀಕ್ಷಕ ವಿಟuಲ್‌ ನಾಯಕ್‌ ಮಾಹಿತಿ ನೀಡಿದ್ದಾರೆ.

ಕಾಸರಗೋಡು: 1,462 ಕಾರ್ಮಿಕರು ತವರಿಗೆ
ಕಾಸರಗೋಡು: ಜಿಲ್ಲೆಯಿಂದ 1,462 ಮಂದಿ ಉತ್ತರ ಭಾರತದ ವಲಸೆ ಕಾರ್ಮಿಕರನ್ನು ಕಾಂಞಂಗಾಡ್‌ ರೈಲು ನಿಲ್ದಾಣದಿಂದ ತವರಿಗೆ ಕಳುಹಿಸಿ ಕೊಡಲಾಯಿತು. ಪಂಚಾಯತ್‌ ಇಲಾಖೆಯ ಸಹಾಯಕ ನಿರ್ದೇಶಕ ಕೆ.ಕೆ.ರೆಜಿ ಕುಮಾರ್‌ ರೈಲು ಪ್ರಯಾಣಕ್ಕೆ ಹಸುರು ನಿಶಾನೆ ತೋರಿ ದರು. ಜಿಲ್ಲಾಧಿಕಾರಿ ಡಾ|ಡಿ.ಸಜಿತ್‌ ಬಾಬು,ಉಪ ಜಿಲ್ಲಾಧಿಕಾರಿ ಅರುಣ್‌ ಕೆ. ವಿಜಯನ್‌ ಉಪಸ್ಥಿತರಿದ್ದರು.

ಬಂಟ್ವಾಳದಿಂದ 327ಮಂದಿ
ಬಂಟ್ವಾಳ: ತಾಲೂಕಿನ ವಿವಿಧ ಭಾಗಗಳಿಗೆ ಕೂಲಿ ಕೆಲಸಕ್ಕಾಗಿ ಆಗಮಿಸಿದ ಉತ್ತರ ಪ್ರದೇಶದ ವಲಸೆ ಕಾರ್ಮಿಕರನ್ನು ಶನಿವಾರ ಊರಿಗೆ ಕಳುಹಿಸುವ ಉದ್ದೇಶ ದಿಂದ ಪುತ್ತೂರು ರೈಲ್ವೇ ನಿಲ್ದಾಣಕ್ಕೆ ಕಳುಹಿಸಿಕೊಡಲಾಯಿತು. ಮರಳು ತೆಗೆಯುವ ಕೆಲಸ ಸಹಿತ ಇತರ ಕೆಲಸ ನಿರ್ವಹಿಸುತ್ತಿದ್ದ ಒಟ್ಟು 327 ಕಾರ್ಮಿಕರನ್ನು 9 ಕೆಎಸ್ಸಾರ್ಟಿಸಿ ಬಸ್‌ಗಳ ಮೂಲಕ ಕಳುಹಿಸಿ ಕೊಡಲಾಯಿತು. ತಾಲೂಕಿನ ಬರಿಮಾರು, ಕರಿಯಂಗಳ ಪ್ರದೇಶದಲ್ಲಿ ಕಾರ್ಮಿಕರು ನೆಲೆಸಿದ್ದು, ಅಲ್ಲಿಗೆ ತೆರಳಿ ಆರೋಗ್ಯ ತಪಾಸಣೆಯ ಅನಂತರ ಕಳುಹಿಸಿಕೊಡಲಾಯಿತು.

ಬಂಟ್ವಾಳ ತಹಶೀಲ್ದಾರ್‌ ರಶ್ಮೀ ಎಸ್‌.ಆರ್‌., ತಾ.ಪಂ. ಕಾರ್ಯ ನಿರ್ವಹಣಾಧಿಕಾರಿ ರಾಜಣ್ಣ ಅವರ ನಿರ್ದೇಶನದಂತೆ ಸ್ಥಳೀಯ ಗ್ರಾ.ಪಂ.ಗಳು ಕಾರ್ಮಿಕರ ಮಾಹಿತಿ ಸಂಗ್ರಹಿಸಿದ್ದರು. ಕಾರ್ಮಿಕರನ್ನು ಊರಿಗೆ ಕಳುಹಿಸುವ ಸಂದರ್ಭದಲ್ಲಿ ಶಿರಸ್ತೇದಾರ್‌ ರಾಜೇಶ್‌ ನಾಯ್ಕ, ಗ್ರಾಮ ಲೆಕ್ಕಾಧಿಕಾರಿಗಳು, ಗ್ರಾಮ ಸಹಾಯಕರು, ಸ್ಥಳೀಯ ಗ್ರಾ.ಪಂ.ನವರು, ಪೊಲೀಸ್‌ ಇಲಾಖೆಯವರು ಉಪಸ್ಥಿತರಿದ್ದರು.

307 ಮಂದಿ ಪುತ್ತೂರಿಗೆ
ಬೆಳ್ತಂಗಡಿ: ತಾಲೂಕಿನಿಂದ 9 ಬಸ್‌ಗಳ ಮೂಲಕ 307 ಮಂದಿ ಯುಪಿಯ ವಲಸೆ ಕಾರ್ಮಿಕರನ್ನು ಪುತ್ತೂರಿಗೆ ಕಳುಹಿಸಿಕೊಡಲಾಯಿತು. ಪುತ್ತೂರಿನಿಂದ ಉತ್ತರ ಪ್ರದೇಶಕ್ಕೆ ಪ್ರಯಾಣ ಬೆಳೆಸಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next