Advertisement
ವಿವಿಧ ರಾಜ್ಯಗಳಲ್ಲಿ ಸಿಲುಕಿದ್ದ ವಲಸೆ ಕಾರ್ಮಿಕರು ತಮ್ಮ ಊರುಗಳಿಗೆ ಮರಳಲು ಪಟ್ಟ, ಪಡುತ್ತಿರುವ ಪಡಿಪಾಟಲು ಅಷ್ಟಿಷ್ಟಲ್ಲ. ಸುಡುಬಿಸಿಲಲ್ಲಿ ನೂರಾರು ಕಿಲೋಮೀಟರ್ ನಡೆದವರೆಷ್ಟೋ, ಮಧ್ಯದಲ್ಲೇ ಹಸಿವು, ಅಪಘಾತ ಸೇರಿದಂತೆ ವಿವಿಧ ಕಾರಣಗಳಿಂದಾಗಿ ಅಸುನೀಗಿದವರೆಷ್ಟೋ.
Related Articles
Advertisement
ಈ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಕೂಡ ಸರಕಾರಕ್ಕೆ ನಿರ್ದೇಶನಗಳನ್ನು ನೀಡಿದ್ದು, ವಲಸೆ ಕಾರ್ಮಿಕರಿಗೆ ಪ್ರಯಾಣ ದರ ವಿಧಿಸದಂತೆ, ನೀರು,ಆಹಾರದ ಕೊರತೆಯಾಗದಂತೆ ನೋಡಿಕೊಳ್ಳಲು ಹೇಳಿದೆ.
ಅಲ್ಲದೇ, ಒಂದು ವೇಳೆ ಅನ್ಯ ರಾಜ್ಯಗಳಲ್ಲಿ ಸಿಲುಕಿರುವವರು ತಮ್ಮ ಊರುಗಳಿಗೆ ಹಿಂದಿರುಗಲು ಬಯಸಿದರೆ, ರಾಜ್ಯ ಸರಕಾರಗಳು ಅವರನ್ನು ತಡೆಯಬಾರದು ಎಂದೂ ನ್ಯಾಯಪೀಠ ಹೇಳಿರುವುದು ಸ್ವಾಗತಾರ್ಹ.
ಇದೇ ವೇಳೆಯಲ್ಲೇ, ಹಠಾತ್ತನೆ ಭಾರೀ ಪ್ರಮಾಣದಲ್ಲಿ ಹಿಂದಿರುಗುತ್ತಿರುವ ಜನರೊಂದಿಗೆ, ಕೊವಿಡ್ ಪ್ರಕರಣಗಳ ಸಂಖ್ಯೆಯೂ ದೇಶದಲ್ಲಿ ಹೆಚ್ಚಳವಾಗುತ್ತಿರುವುದು, ಇದುವರೆಗೂ ಹಸುರು ವಲಯಗಳಾಗಿ ಉಳಿದಿದ್ದ ಪ್ರದೇಶಗಳಲ್ಲಿ ಸೋಂಕುಗಳು ಪತ್ತೆಯಾಗುತ್ತಿರುವುದು ಕಳವಳಕಾರಿ ವಿಷಯ.
ಆದಾಗ್ಯೂ, ಇಂಥದ್ದೊಂದು ಸನ್ನಿವೇಶವನ್ನು ದೇಶ ನಿರೀಕ್ಷಿಸಿರಲಿಲ್ಲ ಎನ್ನುವುದು ತಪ್ಪಾದೀತು. ಲಾಕ್‌ಡೌನ್‌ನ ನಿರ್ಬಂಧಗಳನ್ನು ಸಡಿಲಗೊಳಿಸುತ್ತಿರುವಂತೆಯೇ, ಜನರ ಓಡಾಟ ಹೆಚ್ಚುವುದನ್ನು ನಿರೀಕ್ಷಿಸಿದ್ದ ಕೇಂದ್ರ-ರಾಜ್ಯ ಸರಕಾರಗಳು, ಆರೋಗ್ಯ ವಲಯಗಳು ಈ ರೀತಿಯ ಸವಾಲಿಗೆ ಸಾಕಷ್ಟು ಸಿದ್ಧತೆಯನ್ನೂ ನಡೆಸಿದ್ದವು.
ಈ ಸಿದ್ಧತೆಯ ಪರಿಣಾಮವನ್ನು ನಾವೀಗ ನೋಡುತ್ತಿದ್ದೇವೆ. ರಾಜ್ಯದಲ್ಲೂ ಮಹಾರಾಷ್ಟ್ರ, ದಿಲ್ಲಿ ಸೇರಿದಂತೆ ವಿವಿಧ ರಾಜ್ಯಗಳಿಂದ ಹಿಂದಿರುಗಿರುವವರನ್ನು ಪರೀಕ್ಷಿಸಿ ಅವರನ್ನು ಕ್ವಾರಂಟೈನ್‌ನಲ್ಲಿ ಇಡಲಾಗುತ್ತಿದೆ.
ಹೊಸದಾಗಿ ಪತ್ತೆಯಾದ ಸೋಂಕಿತರಲ್ಲಿ ಬಹುತೇಕರು ಮಹಾರಾಷ್ಟ್ರದಿಂದ ಬಂದವರು. ನಮ್ಮಲ್ಲಷ್ಟೇ ಅಲ್ಲ, ಹಠಾತ್ತನೆ ಸೋಂಕಿತರ ಸಂಖ್ಯೆಯಲ್ಲಿ ಹೆಚ್ಚಳವಾದ ರಾಜ್ಯಗಳಲ್ಲೂ ಇದೇ ಸ್ಥಿತಿ ಕಾಣಿಸುತ್ತಿದೆ.
ಹಾಗೆಂದು, ಇದಕ್ಕೆ ಸೋಂಕಿತರನ್ನು ತಪ್ಪಿತಸ್ಥರಂತೆ ನೋಡುವ ತಪ್ಪನ್ನು ಯಾರೂ ಮಾಡಬಾರದು. ವಲಸಿಗ ಕಾರ್ಮಿಕರು ತಿಂಗಳುಗಳಿಂದ ಪಟ್ಟ ಪಡಿಪಾಟಲು ಅಷ್ಟಿಷ್ಟಲ್ಲ. ದೇಶದ ಬಹುತೇಕ ಆರ್ಥಿಕ ಚಟುವಟಿಕೆಗಳು ನಿಂತಿದ್ದರಿಂದಾಗಿ, ದಿನಗೂಲಿಯ ಮೇಲೆ ಅವಲಂಬಿತರಾದ ಅವರ ಜೀವನ ಹಠಾತ್ತನೆ ಬೀದಿಗೆ ಬಂದು ಬಿದ್ದಿದೆ.
ಕೋವಿಡ್ ಗಿಂತಲೂ ಊಟವಿಲ್ಲದೇ ಎಲ್ಲಿ ಪ್ರಾಣ ಕಳೆದುಕೊಳ್ಳುತ್ತೇವೋ ಎಂಬ ಭಯ ಅನೇಕರನ್ನು ಕಾಡಿದ್ದುಂಟು. ಹೀಗಾಗಿ, ಆರ್ಥಿಕವಾಗಿ, ದೈಹಿಕವಾಗಿ ಮತ್ತು ಮಾನಸಿಕವಾಗಿ ಕುಗ್ಗಿ ಹೋಗಿರುವ ಅವರನ್ನೆಲ್ಲ ಸುರಕ್ಷಿತವಾಗಿ ಕರೆತರುವುದು, ಅವರ ಕಾಳಜಿ ಮಾಡುವುದು ರಾಜ್ಯಗಳ ಜವಾಬ್ದಾರಿ.
ಅಲ್ಲದೆ, ಹೀಗೆ ಹಿಂದಿರುಗಿರುವವರನ್ನು ಆಯಾ ಪ್ರದೇಶಗಳ ಜನರೂ ಕೂಡ ಸಹಾನುಭೂತಿಯ ದೃಷ್ಟಿಯಿಂದ ನೋಡಬೇಕೇ ಹೊರತು, ಯಾವುದೇ ಕಾರಣಕ್ಕೂ ಅವರನ್ನು ಕಳಂಕಿತರೆಂಬಂತೆ ನೋಡಲೇಬಾರದು.