ನವದೆಹಲಿ: ಮೈಕ್ರೋಸಾಫ್ಟ್ ಸೇವೆಗಳಾದ ಔಟ್ ಲುಕ್, ಮೈಕ್ರೋಸಾಫ್ಟ್ ಟೀಮ್ಸ್, ಅಜೂರೆ ಮತ್ತು ಮೈಕ್ರೋಸಾಫ್ಟ್ 365ನ ಸರ್ವರ್ ಡೌನ್ ಆದ ಪರಿಣಾಮ ಬುಧವಾರ (ಜನವರಿ 25) ಭಾರತದಲ್ಲಿ ಬಳಕೆದಾರರು ತೊಂದರೆ ಅನುಭವಿಸುವಂತಾಗಿತ್ತು.
ಇದನ್ನೂ ಓದಿ:ಭೂತದ ಬಾಯಲ್ಲಿ ಭಗವದ್ಗೀತೆ ; ಡಿಕೆಶಿಗೆ ತಿರುಗೇಟು ನೀಡಿದ ಸಚಿವ ಡಾ.ಅಶ್ವಥ್ ನಾರಾಯಣ್
ದೇಶದ ಬಹುತೇಕ ಕಚೇರಿಗಳಲ್ಲಿ ಮೈಕ್ರೋಸಾಫ್ಟ್ ಸರ್ವರ್ ಡೌನ್ ನಿಂದಾಗಿ ಸಮಸ್ಯೆ ಎದುರಿಸುವಂತಾಗಿತ್ತು. ಏತನ್ಮಧ್ಯೆ ಔಟ್ ಲುಕ್ ವೆಬ್ ವರ್ಷನ್ ಮತ್ತು ಮೊಬೈಲ್ ಆ್ಯಪ್ ರಿಫ್ರೆಶಿಂಗ್ ಆಗುತ್ತಿರಲಿಲ್ಲವಾಗಿತ್ತು. ಇದರಿಂದಾಗಿ ಮೈಕ್ರೋಸಾಫ್ಟ್ ಔಟ್ ಲುಕ್ ನಿಂದ ಇ-ಮೇಲ್ ಕಳುಹಿಸಲು ಮತ್ತು ಸ್ವೀಕರಿಸಲು ಸಮಸ್ಯೆ ಎದುರಿಸುವಂತಾಗಿತ್ತು ಎಂದು ವರದಿ ತಿಳಿಸಿದೆ.
ಈ ಬಗ್ಗೆ ನಮ್ಮ ಐಟಿ ತಂಡ ತಾಂತ್ರಿಕ ದೋಷವನ್ನು ಸರಿಪಡಿಸಲು ಕಾರ್ಯಪ್ರವೃತ್ತವಾಗಿದೆ ಎಂದು ಮೈಕ್ರೋಸಾಫ್ಟ್ ಸಮಸ್ಯೆ ಬಗ್ಗೆ ಗಮನಕ್ಕೆ ಬಂದ ನಂತರ ಪ್ರಕಟಣೆಯಲ್ಲಿ ತಿಳಿಸಿತ್ತು. ಮೈಕ್ರೋಸಾಫ್ಟ್ ಸರ್ವರ್ ಡೌನ್ ಭಾರತದಲ್ಲಿಯೇ ಅತೀ ಹೆಚ್ಚು ಪರಿಣಾಮ ಬೀರಿರುವುದಾಗಿ ವರದಿ ವಿವರಿಸಿದೆ.
ಸುಮಾರು 3,000ಕ್ಕೂ ಅಧಿಕ ಹೆಚ್ಚು ಬಳಕೆದಾರರು ಮೈಕ್ರೋಸಾಫ್ಟ್ ಸಮಸ್ಯೆ ಬಗ್ಗೆ ಗಮನ ಸೆಳೆದಿದ್ದರು. ಮೈಕ್ರೋಸಾಫ್ಟ್ ಸರ್ವರ್ ಡೌನ್ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಹಾಸ್ಯದ ಮೀಮ್ಸ್ ಗಳು ಹರಿದಾಡಿದ್ದವು.
ಮೈಕ್ರೋಸಾಫ್ಟ್ ಸಿಇಒ ಸತ್ಯ ನಾದೆಲ್ಲಾ ಅವರು ಜಾಗತಿಕವಾಗಿ ಸುಮಾರು 10,000 ಉದ್ಯೋಗಿಗಳನ್ನು ವಜಾಗೊಳಿಸಿದ್ದ ನಂತರ ಈ ಸಮಸ್ಯೆ ಕಾಣಿಸಿಕೊಂಡಿರುವುದಾಗಿ ವರದಿ ತಿಳಿಸಿದೆ.
“ಮೈಕ್ರೋಸಾಫ್ಟ್ ನಲ್ಲಿನ ತಾಂತ್ರಿಕ ದೋಷವನ್ನು ಸರಿಪಡಿಸಲಾಗಿದೆ. ಇದೀಗ ಔಟ್ ಲುಕ್ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಮೈಕ್ರೋಸಾಫ್ಟ್ ಪ್ರಕಟಣೆಯಲ್ಲಿ ತಿಳಿಸಿದೆ. ಸಂಪರ್ಕಜಾಲದ ಕಾನ್ಫಿಗರೇಶನ್ ತೊಂದರೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮೈಕ್ರೋಸಾಫ್ಟ್ ಸೇವೆಯಲ್ಲಿ ವ್ಯತ್ಯಯವಾಗಿರುವುದಾಗಿ” ತಿಳಿಸಿದೆ.