Advertisement

ಇವತ್ತೇ ಗೊತ್ತಾಗುತ್ತೆ ಇ-ಒತ್ತೆ; ವೈರಸ್ಸಿಗೆ ಎಟಿಎಂ ಸುಲಭ ತುತ್ತು

09:55 AM May 15, 2017 | Team Udayavani |

ಲಂಡನ್‌/ಹೊಸದಿಲ್ಲಿ: ಶುಕ್ರವಾರ ರಾತ್ರಿಯಿಂದ ಇಡೀ ಜಗತ್ತು ‘ವಾನಕ್ರೈ'(ನೀವು ಅಳಬೇಕೇ) ರಾನ್ಸಂವೇರ್‌ ಕಾಟದಿಂದ ನಡುಗಿ ಹೋಗಿದೆ. ಭಾರತ ಕೂಡ ಇದರ ಮುಷ್ಟಿಯಲ್ಲಿ ಸಿಕ್ಕಿದ್ದು, ಸೋಮವಾರ ಬೆಳಗ್ಗೆ ಈ ವೈರಸ್‌ನ ಅನಾಹುತದ ಪೂರ್ಣ ಚಿತ್ರಣ ಸಿಗಲಿದೆ. ಈ ಎಲ್ಲ ಬೆಳವಣಿಗೆಗಳ ನಡುವೆಯೇ ಭಾರತ ದಲ್ಲಿನ ಎಟಿಎಂಗಳು ಎಷ್ಟು ಸುರಕ್ಷಿತ ಎಂಬ ಪ್ರಶ್ನೆ ಉದ್ಭವವಾಗಿದೆ. ಸೈಬರ್‌ ತಜ್ಞರ ಪ್ರಕಾರ ಜಗತ್ತಿನ ಶೇ.70 ರಷ್ಟು ಎಟಿಎಂಗಳು ಕಾರ್ಯನಿರ್ವಹಿಸುತ್ತಿರುವುದು ವಿಂಡೋಸ್‌ ಎಕ್ಸ್‌ಪಿ, ವಿಂಡೋಸ್‌ ವಿಸ್ತಾ ಎಂಬ ಹಳೆಯ ಆಪರೇಟಿಂಗ್‌ ಸಿಸ್ಟಂನಿಂದ. ಭಾರತದಲ್ಲಿ ಹೆಚ್ಚು ಕಡಿಮೆ ಎಲ್ಲ ಎಟಿಎಂಗಳಲ್ಲೂ ಇದೇ ಆಪರೇಟಿಂಗ್‌ ಸಿಸ್ಟಂ ಇದೆ ಎಂದು ಅಂದಾಜಿಸಲಾಗಿದೆ. ಈ ಸಿಸ್ಟಂಗಳ ಮೇಲೆ ಹ್ಯಾಕ್‌ ಮಾಡುವುದು ಸುಲಭವಾದ್ದರಿಂದ ಬ್ಯಾಂಕ್‌ಗಳು ಮತ್ತು ಎಟಿಎಂಗಳ ಗತಿ ಏನು ಎಂಬುದು ಸೈಬರ್‌ ತಜ್ಞರ ಪ್ರಶ್ನೆ.

Advertisement

ಶುಕ್ರವಾರ ಕೆಲವು ಅನಾಮಿಕರು ಹಬ್ಬಿಸಿದ ವೈರಸ್‌ ದಾಳಿಗೆ 150 ದೇಶಗಳ 2 ಲಕ್ಷ ಕಂಪ್ಯೂಟರ್‌ಗಳು ತುತ್ತಾಗಿವೆ. ವೈರಸ್‌ ದಾಳಿ ಮಾಡುವ ಮೂಲಕ ಕಂಪ್ಯೂಟರ್‌ಗಳಲ್ಲಿರುವ ಮಹತ್ವದ ದಾಖಲೆಗಳನ್ನು ಇ -ಒತ್ತೆ ಇಟ್ಟುಕೊಂಡು ಹಣ ಸುಲಿಗೆ ಮಾಡುವುದು ಈ ದಂಧೆಯ ಮುಖ್ಯ ಉದ್ದೇಶ ಎನ್ನಲಾಗಿದೆ. ಭಾರತ ಸಹಿತ ಈ ಎಲ್ಲ ದೇಶಗಳ ಬ್ಯಾಂಕಿಂಗ್‌ ವ್ಯವಸ್ಥೆ, ಆಸ್ಪತ್ರೆಗಳು ಮತ್ತು ಸರಕಾರಿ ಸಂಸ್ಥೆಗಳು ಈ ಮಾಲ್‌ವೇರ್‌ ದಾಳಿಗೆ ತುತ್ತಾಗಿರಬಹುದು ಎಂದು ಸೈಬರ್‌ ತಜ್ಞರು ಹೇಳುತ್ತಾರೆ. ವಾರಾಂತ್ಯದ ಮೂರು ದಿನಗಳೇನೋ ಕಳೆದವು. ಆದರೆ ಸೋಮವಾರ ಬೆಳಗ್ಗೆ ಎಂಬುದು ಜಾಗತಿಕ ಮಟ್ಟದಲ್ಲಿ ದೊಡ್ಡ ತಲೆಬಿಸಿಯಾಗಿದೆ. ಶನಿವಾರ ಮತ್ತು ರವಿವಾರ ರಜೆಯಾದ್ದರಿಂದ ಬಹುತೇಕ ದೇಶಗಳಲ್ಲಿ ದೊಡ್ಡ ದೊಡ್ಡ ಕಂಪೆನಿಗಳಿಗೆ ರಜೆ. ಹೀಗಾಗಿ ಶುಕ್ರವಾರ ಸಂಜೆ ಸೈನ್‌ ಔಟ್‌ ಮಾಡಿ ಹೋಗಿದ್ದವರು ಮತ್ತೆ ಬರುವುದು ಸೋಮವಾರ ಬೆಳಗ್ಗೆಯೇ. ಒಂದು ವೇಳೆ ಈ ಎಲ್ಲ ಸಿಸ್ಟಂಗಳ ಮೇಲೆ ವಾನಕ್ರೈ ಮಾಲ್‌ವೇರ್‌ ಅಟ್ಯಾಕ್‌ ಮಾಡಿದ್ದರೆ ಕಥೆ ಮುಗಿದಂತೆಯೇ ಎಂದು ಐರೋಪ್ಯ ಒಕ್ಕೂಟದ ಪ್ರಮುಖ ಸೈಬರ್‌ ಭದ್ರತಾ ಸಂಸ್ಥೆ ಯುರೋಪೋಲ್‌ ಹೇಳಿದೆ.

ಇಂಗ್ಲೆಂಡ್‌ ಕೂಡ ಔಟ್‌ಡೇಟೆಡ್‌: ಕೇವಲ ಭಾರತ, ರಷ್ಯಾ ಮಾತ್ರವಲ್ಲ ಇಂಗ್ಲೆಂಡ್‌ನ‌ಲ್ಲಿಯೂ ವಿಂಡೋಸ್‌ ಎಕ್ಸ್‌ಪಿ ಆಪರೇಟಿಂಗ್‌ ಸಿಸ್ಟಂ ಬಳಕೆ ಹೆಚ್ಚಿದೆ. ಅಲ್ಲಿನ ಆಸ್ಪತ್ರೆಗಳಲ್ಲಿ ಬಳಕೆ ಮಾಡುವ ಪ್ರತಿ ಮೂರು ಕಂಪ್ಯೂಟರ್‌ಗಳಲ್ಲಿ ಒಂದರಲ್ಲಿ ವಿಂಡೋಸ್‌ ಎಕ್ಸ್‌ಪಿ ಒಎಸ್‌ ಇದೆಯಂತೆ. ಹೀಗಾಗಿಯೇ ವಾನಕ್ರೈ ರಾನ್ಸಂವೇರ್‌ ಬಲೆಗೆ ಅಲ್ಲಿನ ಆಸ್ಪತ್ರೆಗಳು ಸುಲಭವಾಗಿ ಬಿದ್ದವು ಎಂಬ ಮಾಹಿತಿ ಹೊರಬಿದ್ದಿದೆ. ಇದರ ಜತೆಗೆ ಇಡೀ ಜಗತ್ತಿನಲ್ಲೇ ಪೊಲೀಸ್‌ ಕೌಶಲಕ್ಕೆ ಹೆಸರುವಾಸಿಯಾಗಿರುವ ಸ್ಕಾಟ್‌ಲೆಂಡ್‌ ಯಾರ್ಡ್‌ ಪೊಲೀಸರ ಕಚೇರಿಗಳಲ್ಲೂ ವಿಂಡೋಸ್‌ ಎಕ್ಸ್‌ಪಿ ಆಪರೇಟಿಂಗ್‌ ಸಿಸ್ಟಂ ಕೆಲಸ ಮಾಡುತ್ತಿವೆ.

ವಿಂಡೋಸ್‌ ಎಕ್ಸ್‌ಪಿಗೆ ಪ್ಯಾಚಸ್‌: ಜಾಗತಿಕ ಮಟ್ಟದಲ್ಲಿ ಹ್ಯಾಕರ್ಸ್‌ಗಳಿಂದ ದಾಳಿಗೆ ಒಳಗಾಗಿರುವ ವಿಂಡೋಸ್‌ ಎಕ್ಸ್‌ಪಿ ಆಪರೇಟಿಂಗ್‌ ಸಿಸ್ಟಂಗೆ ಶನಿವಾರ ಮೈಕ್ರೋಸಾಫ್ಟ್ಕೆ ಲವು ಪ್ಯಾಚಸ್‌ಗಳನ್ನು ಬಿಡುಗಡೆ ಮಾಡಿದೆ. ಈ ಮೂಲಕ ಗ್ರಾಹಕರು ತಮ್ಮ ಸಿಸ್ಟಂ ಅನ್ನು ಅಪ್‌ಡೇಟ್‌ ಮಾಡಿಕೊಂಡರೆ ವಾನಕ್ರೈನಂಥ ಮಾಲ್‌ವೇರ್‌ನ ದಾಳಿ ತಪ್ಪಿಸಿಕೊಳ್ಳಬಹುದು. ಆದರೆ ಇದು ಹೆಚ್ಚು ದಿನ ಇರುವುದಿಲ್ಲವಾದ್ದರಿಂದ ಆಪರೇಟಿಂಗ್‌ ಸಿಸ್ಟಂ ಅನ್ನೇ ಅಪ್‌ಡೇಟ್‌ ಮಾಡಿಕೊಳ್ಳುವುದು ಉತ್ತಮ ಎಂದು ಸೈಬರ್‌ ತಜ್ಞರು ಹೇಳಿದ್ದಾರೆ.

ವೈರಸ್‌ನಿಂದ ಎಚ್ಚರಗೊಂಡ ಗುಜರಾತ್‌
ರಾನ್ಸಂವೇರ್‌ ಮಾಲ್‌ವೇರ್‌ನ ಅಬ್ಬರ ಮುಂದುವರಿದಿರುವಂತೆಯೇ ಗುಜರಾತ್‌ ಸರಕಾರ ಎಚ್ಚೆತ್ತುಕೊಂಡಿದೆ. ಸರಕಾರದ ವ್ಯಾಪ್ತಿಗೆ ಒಳಪಡುವ ಎಲ್ಲ ಕಂಪ್ಯೂಟರ್‌ಗಳಿಗೆ ಉತ್ತಮ ಆ್ಯಂಟಿವೈರಸ್‌, ಆಪರೇಟಿಂಗ್‌ ಸಿಸ್ಟಂ ಅನ್ನು ಅಪ್‌ಗ್ರೇಡ್‌ ಮಾಡಲು ನಿರ್ಧರಿಸಿದೆ. 

Advertisement

ಮಹಾರಾಷ್ಟ್ರದಲ್ಲಿ ವಾನಕ್ರೈ ಕಾಟ
ಮಹಾರಾಷ್ಟ್ರದ ಪೊಲೀಸ್‌ ಇಲಾಖೆ, ಕೆಲವು ಸಂಸ್ಥೆಗಳಲ್ಲಿ ರಾನ್ಸಂವೇರ್‌ ವೈರಸ್‌ ಕಾಟ ಕಾಣಿಸಿಕೊಂಡಿದೆ. ಈ ಬಗ್ಗೆ ಪೊಲೀಸ್‌ ಇಲಾಖೆಯೇ ಖಚಿತಪಡಿಸಿದೆ. ಎಲ್ಲ ಕಂಪ್ಯೂಟರ್‌ಗಳ ಮೇಲೆ ಈ ವೈರಸ್‌ ದಾಳಿ ಆಗಿಲ್ಲ. ಈಗಾಗಲೇ ಸೈಬರ್‌ ತಜ್ಞರು ಬಂದು ಕಂಪ್ಯೂಟರ್‌ಗಳನ್ನು ಪರಿಶೀಲಿಸುತ್ತಿದ್ದಾರೆ. ಆದರೂ ನಿಶ್ಚಿತವಾಗಿ ಏನಾಗಿದೆ ಎಂದು ತಿಳಿಯಲು ಸೋಮವಾರ ಬೆಳಗ್ಗೆವರೆಗೆ ಕಾಯಲೇಬೇಕು ಎಂದು ಪೊಲೀಸ್‌ ಅಧಿಕಾರಿಯೊಬ್ಬರು ಹೇಳಿದ್ದಾರೆ. ಇನ್ನು ಕೆಲವು ಸಂಸ್ಥೆಗಳಲ್ಲೂ ವೈರಸ್‌ನ ಪ್ರಭಾವ ಬೀರಿದೆ ಎಂದು ವರದಿಯಾಗಿದೆ. 

ಹುಷಾರಾಗಿರಿ
ಜಗತ್ತಿನ ಬಹುತೇಕ ಸೈಬರ್‌ ಭದ್ರತಾ ಏಜೆನ್ಸಿಗಳು ತಮ್ಮ ದೇಶಗಳ ಕಂಪೆನಿಗಳು ಜನರಿಗೆ ಎಚ್ಚರಿಕೆಯ ಸಂದೇಶ ನೀಡಿವೆ. ಬ್ಯಾಂಕಿಂಗ್‌, ಏರ್‌ಪೋರ್ಟ್‌, ಟೆಲಿಕಾಂ ನೆಟ್‌ವರ್ಕ್‌ ಮತ್ತು ಷೇರು ಮಾರುಕಟ್ಟೆಗಳಲ್ಲಿ ಎಚ್ಚರಿಕೆಯಿಂದ ಇರಬೇಕು ಎಂದು ಸೂಚನೆ ನೀಡಿವೆ. ಈ ಮಾಲ್‌ವೇರ್‌ಗಳನ್ನು ದೊಡ್ಡ ಮಟ್ಟದ ಕಂಪೆನಿಗಳ ಮೇಲೆಯೇ ಪ್ರಯೋಗಿಸಿ ಹಣ ಪಡೆಯಲು ಯತ್ನಿಸುತ್ತಾರೆ. ಹೀಗಾಗಿ ಎಲ್ಲ ಬಗೆಯ ಭದ್ರತಾ ವ್ಯವಸ್ಥೆಯನ್ನು ನಿಮ್ಮ ಪಿಸಿಗಳಲ್ಲಿ ಮಾಡಿಟ್ಟುಕೊಳ್ಳಬೇಕು ಎಂದು ಈ ಏಜೆನ್ಸಿಗಳು ಹೇಳಿವೆ. ಭಾರತದ ಸೈಬರ್‌ ಭದ್ರತಾ ಸಂಸ್ಥೆ ಸಿಇಆರ್‌ಟಿ ಕೂಡ ದೇಶದ ಎಲ್ಲ ದೊಡ್ಡ ದೊಡ್ಡ ಸಂಸ್ಥೆಗಳಿಗೆ ಸೂಚನೆ ಕಳುಹಿಸಿದೆ.

– ದೇಶದ ಶೇ.70 ಎಟಿಎಂಗಳ ಕಾರ್ಯ ನಿರ್ವಹಣೆ ವಿಂಡೋಸ್‌ ಎಕ್ಸ್‌ಪಿ ಮೂಲಕ

– ವಾನಕ್ರೈ ಮಾಲ್‌ವೇರ್‌ಗೆ ತುತ್ತಾಗಿರುವುದು ಈ ವಿಂಡೋಸ್‌ ಸಿಸ್ಟಂಗಳೇ

– ಭಾರತದಲ್ಲಷ್ಟೇ ಅಲ್ಲ, ಜಗತ್ತಿನ ಬಹುತೇಕ ಎಟಿಎಂಗಳಲ್ಲಿ ಈಗಲೂ ಇದೇ ಆಪರೇಟಿಂಗ್‌ ಸಿಸ್ಟಂ

Advertisement

Udayavani is now on Telegram. Click here to join our channel and stay updated with the latest news.

Next