ನ್ಯೂಯಾರ್ಕ್ : ಈ ವರ್ಷ, 2017ರ ಜೂನ್ ಒಳಗೆ ತನ್ನ 2,850 ಉದ್ಯೋಗಿಗಳನ್ನು ಕೈಬಿಡುವುದಾಗಿ ಈ ಹಿಂದೆಯೇ ಮಾಡಿದ್ದ ಘೋಷಣೆಯ ಭಾಗವಾಗಿ ಮೈಕ್ರೋಸಾಫ್ಟ್ ಈ ಜನವರಿ 26ರಂದು ತನ್ನ ಆದಾಯ ಫಲಿತಾಂಶವನ್ನು ಪ್ರಕಟಿಸುವ ಸಂದರ್ಭದಲ್ಲಿ 700 ಉದ್ಯೋಗಿಗಳನ್ನು ಮನೆಗೆ ಕಳುಹಿಸಲಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.
ಮೈಕ್ರೋಸಾಫ್ಟ್ ಕೈಬಿಡುವುದಾಗಿ ಹೇಳಿರುವ 2,850 ಉದ್ಯೋಗಿಗಳಲ್ಲಿ ಹೆಚ್ಚಿನವರನ್ನು ಈಗಾಗಲೇ ಬಹುತೇಕ ಕೆಲಸದಿಂದ ತೆಗೆದುಹಾಕಲಾಗಿದೆ ಎಂದು ಬ್ಯುಸಿನೆಸ್ ಇನ್‌ಸೈಡರ್ ವರದಿ ಮಾಡಿದೆ.
ಮೈಕ್ರೋಸಾಫ್ಟ್ 2,850 ಉದ್ಯೋಗಿಗಳನ್ನು ಕೈಬಿಡುವ ಮುಖ್ಯ ಉದ್ದೇಶ ತನ್ನ ವಿವಿಧ ಘಟಕಗಳಲ್ಲಿನ ಕೌಶಲಗಳನ್ನು ಮೇಲ್ಮಟ್ಟಕ್ಕೇರಿಸುವುದೇ ಆಗಿದೆ ಎಂದು ವರದಿ ತಿಳಿಸಿದೆ.
ಮೈಕ್ರೋಸಾಫ್ಟ್ ಕಂಪೆನಿಯಲ್ಲಿ 1,13,000 ಉದ್ಯೋಗಿಗಳು ಇದ್ದಾರೆ. ಹಾಗಿದ್ದರೂ ಲಿಂಕ್‌ಡ್ ಇನ್ ನಲ್ಲಿ ಲಭ್ಯವಿರುವ 1,600 ಉದ್ಯೋಗಾವಕಾಶಗಳಿಗೆ ಅದು ಈಗಲೂ ನೇಮಕಾತಿಯನ್ನುನಡೆಸುತ್ತಿದೆ.
ಮೈಕ್ರೋಸಾಫ್ಟ್ ಕಂಪೆನಿಯ ಸಿಇಓ ಆಗಿರುವ ಭಾರತೀಯ ಸಂಜಾತ ಸತ್ಯ ನಾದೆಳ್ಲ ಅವರ ಪ್ರಕಾರ ಕಂಪೆನಿಯು ಈಗಾಗಲೇ ಹಲವು ಸುತ್ತುಗಳ ಲೇಆಫ್ ಕಂಡಿದೆ; ಇದರಲ್ಲಿ ಈ ವರ್ಷದ 7,400 ಉದ್ಯೋಗ ಕಡಿತವೂ ಸೇರಿದೆ; ಮುಖ್ಯವಾಗಿ ಈ ಉದ್ಯೋಗ ಕಡಿತವು ಕಂಪೆನಿಯ ಸ್ಮಾರ್ಟ್ ಫೋನ್ ಉದ್ಯಮಕ್ಕೆ ಸಂಬಂಧಿಸಿದ್ದಾಗಿದೆ ಎಂದು ವರದಿ ತಿಳಿಸಿದೆ.
2014ರಲ್ಲಿ 18,000 ಉದ್ಯೋಗಗಳನ್ನು ಕಡಿತ ಮಾಡಿದ್ದುದು ಮೈಕ್ರೋಸಾಫ್ಟ್ ಕಂಪೆನಿಯ ಇತಿಹಾಸದಲ್ಲೇ ಅತೀ ದೊಡ್ಡ ಲೇಆಫ್ ಆಗಿದೆ. ಇದರಲ್ಲಿ ಮೈಕ್ರೋಸಾಫ್ಟ್ ಕಂಪೆನಿಯು ವಶಕ್ಕೆ ತೆಗೆದುಕೊಂಡಿದ್ದ ನೋಕಿಯಾ ಹ್ಯಾಂಡ್‌ಸೆಟ್ ಮತ್ತು ಇತರ ಉದ್ಯಮಗಳಿಗೆ ಸಂಬಂಧಿಸಿದ 12,500 ಉದ್ಯೋಗಗಳು ಸೇರಿವೆ.