ಹೊಸದಿಲ್ಲಿ : ವೊಡಾಫೋನ್ ಸೂಪರ್‌ನೆಟ್ 4ಜಿ ಸಂಪರ್ಕದೊಂದಿಗೆ ಕೇವಲ 999 ರೂ.ಗೆ ಭಾರತದ ಅತ್ಯಂತ ಅಗ್ಗದ 4ಜಿ ಸ್ಮಾರ್ಟ್ ಪೋನ್ ಬಿಡುಗಡೆ ಮಾಡಿರುವುದಾಗಿ ವೊಡಾಫೋನ್ ಮತ್ತು ಮೈಕ್ರೋಮ್ಯಾಕ್ಸ್ ಪ್ರಕಟಿಸಿವೆ.
ಭಾರತ್ 2 ಅಲ್‌ಟ್ರಾ ಎಂಬ ಹೆಸರಿನ ಈ ಸ್ಮಾಟ್ ಫೋನ್ ಮೈಕ್ರೋಮ್ಯಾಕ್ಸ್ ನ ಭಾರತ್ ಶ್ರೇಣಿಯ ನೂತನ 4ಜಿ ಸ್ಮಾರ್ಟ್ ಫೋನ್ ಆಗಿದೆ. ಅತ್ಯಂತ ಅಗ್ಗದ ಬೆಲೆಯಲ್ಲಿ ಲಭ್ಯವಿರುವ ಈ ವಿನೂತನ ಸ್ಮಾರ್ಟ್ ಫೋನ್‌ನ ಕ್ಯಾಮರಾ, ಬ್ಯಾಟರಿ ಮತ್ತು ಡಿಸ್‌ಪ್ಲೇ ಸೌಕರ್ಯಗಳು ಅತ್ಯುತ್ತಮವಾಗಿವೆ ಎಂದು ವೊಡಾಫೋನ್ – ಮೈಕ್ರೋಮ್ಯಾಕ್ಸ್ ಹೇಳಿಕೊಂಡಿವೆ.
ಈ ಪಾಲುದಾರಿಕೆಯಡಿ, ಹಾಲಿ ಮತ್ತು ಹೊಸ ವೊಡಾಫೋನ್ ಗ್ರಾಹಕರು 2,899 ರೂ.ಗೆ ಲಭ್ಯವಿರುವ ಮೈಕ್ರೋ ಮ್ಯಾಕ್ಸ್ ಭಾರತ್-2 ಅಲ್‌ಟ್ರಾ ಸ್ಮಾರ್ಟ್ ಫೋನ್ ಖರೀದಿಸಬೇಕಾಗುತ್ತದೆ. ಮತ್ತು ತಿಂಗಳಿಗೆ ಕನಿಷ್ಠ 150 ರೂ.ಗಳ ದರದಲ್ಲಿ 36 ತಿಂಗಳಿಗೆ ರೀಚಾರ್ಜ್ ಮಾಡಿಸಿಕೊಳ್ಳಬೇಕಾಗುತ್ತದೆ. ರೀಚಾರ್ಜ್‌ನ್ನು ಕನಿಷ್ಠ 150 ರೂ.ಗಳಿಂದ ತೊಡಗಿ ಯಾವುದೇ ಮೊತ್ತಕ್ಕೂ ಮಾಡಿಸಿಕೊಳ್ಳಬಹುದಾಗಿದೆ.
18 ತಿಂಗಳ ಕೊನೆಯಲ್ಲಿ ಬಳಕೆದಾರರಿಗೆ 900 ರೂ. ಕ್ಯಾಶ್ ಬ್ಯಾಕ್ ಸಿಗುತ್ತದೆ; ಇನ್ನೊಂದು 18 ತಿಂಗಳ ಬಳಿಕ 1,000 ರೂ. ಕ್ಯಾಶ್ ಬ್ಯಾಕ್ ಸಿಗುತ್ತದೆ. ಈ ಕ್ಯಾಶ್ ಬ್ಯಾಕ್ ಮೊತ್ತ ವೊಡಾಫೋನ್ ಎಂ-ಪೆಸಾ ವ್ಯಾಲೆಟ್‌ನಲ್ಲಿ ಜಮೆಯಾಗುತ್ತದೆ. ಇದು ಗ್ರಾಹಕರಿಗೆ ಡಿಜಿಟಲ್ ವ್ಯವಹಾರಕ್ಕೆ ಅಥವಾ ನಗದು ಹಿಂಪಡೆಯುವಿಕೆಗೆ, ಯಾವುದು ಅನುಕೂಲವೋ ಅದು, ಅವಕಾಶ ಕಲ್ಪಿಸುತ್ತದೆ ಎಂದು ವೊಡಾಫೋನ್ – ಮೈಕ್ರೋಮ್ಯಾಕ್ಸ್ ಪ್ರಕಟನೆ ತಿಳಿಸಿದೆ.