ಮಿಚಿಗನ್: ಅಮೆರಿಕಾದ ಮಿಚಿಗನ್ ನಲ್ಲಿರುವ ಮಕ್ಕಳ ವಾಟರ್ ಪಾರ್ಕ್ ನಲ್ಲಿ ಶನಿವಾರ ಸಂಜೆ ಬಂದೂಕುಧಾರಿಯೊಬ್ಬ ಗುಂಡು ಹಾರಿಸಿದ ನಂತರ ಎಂಟು ವರ್ಷದ ಮಗು ಸೇರಿದಂತೆ ಅನೇಕ ಜನರು ಗಾಯಗೊಂಡಿದ್ದಾರೆ.
ಹತ್ತಿರದ ಮನೆಯೊಳಗೆ ಅಡಗಿಕೊಂಡಿದ್ದ ಶೂಟರ್ ನನ್ನು ಪೊಲೀಸರು ಸುತ್ತುವರಿದಿದ್ದಾರೆ ಎಂದು ಓಕ್ಲ್ಯಾಂಡ್ ಕೌಂಟಿ ಶೆರಿಫ್ ಮೈಕೆಲ್ ಬೌಚರ್ಡ್ ಹೇಳಿದ್ದಾರೆ.
ರೋಚೆಸ್ಟರ್ ಹಿಲ್ಸ್‌ನ ಬ್ರೂಕ್‌ಲ್ಯಾಂಡ್ಸ್ ಪ್ಲಾಜಾ ಸ್ಪ್ಲಾಷ್ ಪ್ಯಾಡ್‌ನಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಕನಿಷ್ಠ 9 ಮಂದಿ ಗಾಯಗೊಂಡಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಗುಂಡಿನ ದಾಳಿಯ ಹಿಂದಿನ ಕಾರಣ ಇನ್ನೂ ಖಚಿತವಾಗಿಲ್ಲ. ಆದರೆ ಬಂದೂಕುಧಾರಿಯು ವಿನಾಕಾರಣ ಗುಂಡಿನ ಮಳೆಗರೆದಿದ್ದಾನೆ ಎಂದು ಪೊಲೀಸರು ಅಂದಾಜಿಸಿದ್ದಾರೆ.
ಪೊಲೀಸರು ಘಟನೆ ನಡೆದ ಸ್ಥಳವನ್ನು ಸುತ್ತುವರಿದು ಸುರಕ್ಷಿತವಾಗಿರಿಸಿದ್ದಾರೆ ಎಂದು ರೋಚೆಸ್ಟರ್ ಹಿಲ್ಸ್ ಮೇಯರ್ ಬ್ರಯಾನ್ ಕೆ ಬಾರ್ನೆಟ್ ಹೇಳಿದ್ದಾರೆ.
2024ರಲ್ಲಿ ಇದುವರೆಗೆ ಅಮೆರಿಕದಲ್ಲಿ ಇಂತಹ 215 ಸಾಮೂಹಿಕ ಗುಂಡಿನ ದಾಳಿಗಳು ನಡೆದಿದೆ.