Advertisement

World Cup 2023; ವಿರಾಟ್ ಸ್ವಾರ್ಥಿ ಎಂದ ಹಫೀಜ್ ಗೆ ಸರಿಯಾಗಿ ತಿರುಗೇಟು ನೀಡಿದ ಮೈಕಲ್ ವಾನ್

01:32 PM Nov 09, 2023 | Team Udayavani |

ಮುಂಬೈ: ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ 2023ರಲ್ಲಿ ವಿರಾಟ್ ಕೊಹ್ಲಿ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ಆಡಿದ ಎಂಟು ಪಂದ್ಯಗಳಲ್ಲಿ ವಿರಾಟ್ ನಾಲ್ಕು ಅರ್ಧಶತಕ ಮತ್ತು ಎರಡು ಶತಕ ಹೊಡೆದಿದ್ದಾರೆ. ಅಲ್ಲದೆ ದಕ್ಷಿಣ ಆಫ್ರಿಕಾ ವಿರುದ್ಧದ ಕಳೆದ ಪಂದ್ಯದಲ್ಲಿ ಶತಕ ಬಾರಿಸಿದ ವಿರಾಟ್, ಸಚಿನ್ ತೆಂಡೂಲ್ಕರ್ ಅವರ 49 ಏಕದಿನ ಶತಕದ ದಾಖಲೆ ಸರಿಗಟ್ಟಿದ್ದಾರೆ. ಆದರೆ ವಿರಾಟ್ ಕೊಹ್ಲಿ ಅವರ ಈ ಇನ್ನಿಂಗ್ಸನ್ನು ಪಾಕಿಸ್ತಾನದ ಮಾಜಿ ಆಟಗಾರ ಮೊಹಮ್ಮದ್ ಹಫೀಜ್ ಟೀಕೆ ಮಾಡಿದ್ದರು.

Advertisement

“ನಾನು ವಿರಾಟ್ ಕೊಹ್ಲಿ ಅವರ ಬ್ಯಾಟಿಂಗ್‌ ನಲ್ಲಿ ಸ್ವಾರ್ಥದ ಭಾವನೆಯನ್ನು ಕಂಡೆ. ಈ ವಿಶ್ವಕಪ್‌ನಲ್ಲಿ ಇದು ಮೂರನೇ ಬಾರಿಗೆ ನಡೆದಿದೆ. 49 ನೇ ಓವರ್‌ನಲ್ಲಿ, ಅವರು ತಮ್ಮ ಶತಕವನ್ನು ತಲುಪಲು ಸಿಂಗಲ್ ತೆಗೆದುಕೊಳ್ಳಲು ನೋಡುತ್ತಿದ್ದರು. ಅವರು ತಂಡದ ಹಿತಕ್ಕೆ ಪ್ರಾಶಸ್ತ್ಯ ನೀಡಲಿಲ್ಲ” ಎಂದು ಹಫೀಜ್ ಹೇಳಿದ್ದರು.

ಹಫೀಜ್ ಅವರ ಈ ‘ಸ್ವಾರ್ಥ’ ಹೇಳಿಕೆಗೆ ಭಾರೀ ಟೀಕೆಗಳು ಎದುರಾಗಿತ್ತು. ಭಾರತದ ಮಾಜಿ ಆಟಗಾರ ವೆಂಕಟೇಶ್ ಪ್ರಸಾದ್ ಮತ್ತು ಇಂಗ್ಲೆಂಡ್ ಮಾಜಿ ನಾಯಕ ಮೈಕಲ್ ವಾನ್ ಅವರು ಹಫೀಜ್ ಗೆ ಕಿಡಿಕಾರಿದ್ದಾರೆ.

ಪುಣೆಯಲ್ಲಿ ಬುಧವಾರ ನಡೆದ ಇಂಗ್ಲೆಂಡ್ ಮತ್ತು ನೆದರ್ಲ್ಯಾಂಡ್ ನಡುವಿನ ಪಂದ್ಯದಲ್ಲಿ ಆಂಗ್ಲರ ತಂಡದ ಬೆನ್ ಸ್ಟೋಕ್ಸ್ ಶತಕ ಬಾರಿಸಿದ್ದರು. ಸ್ಟೋಕ್ಸ್ 84 ಎಸೆತಗಳಲ್ಲಿ 108 ರನ್ ಗಳಿಸಿದ್ದರು. ಈ ಇನ್ನಿಂಗ್ಸನ್ನು ಹೊಗಳುವ ಭರದಲ್ಲಿ ಹಫೀಜ್ ಮತ್ತೆ ಕೊಹ್ಲಿ ವಿರುದ್ಧ ಟೀಕೆ ಮಾಡಿದ್ದರು.

“ಬೆನ್‌ ಸ್ಟೋಕ್ಸ್ ಒತ್ತಡದಲ್ಲಿ ತಂಡವು ಗೆಲ್ಲಲು ಗರಿಷ್ಠ ರನ್ ಗಳಿಸಲು ಆಕ್ರಮಣಕಾರಿ ಉದ್ದೇಶದಿಂದ ಅಗತ್ಯವಿರುವಲ್ಲಿ ಇನ್ನಿಂಗ್ಸ್‌ ಆ್ಯಂಕರ್ ಮಾಡುತ್ತಾನೆ. ಸ್ವಾರ್ಥ ಮತ್ತು ನಿಸ್ವಾರ್ಥ ವಿಧಾನವನ್ನು ಪ್ರತ್ಯೇಕಿಸಲು ಸಂಪೂರ್ಣ ಉದಾಹರಣೆ.” ಎಂದು ಟ್ವೀಟ್ ಮಾಡಿದ್ದರು.

Advertisement

ಇದಕ್ಕೆ ಮರು ಟ್ವೀಟ್ ಮಾಡಿದ್ದ ವಾನ್, ಸ್ಟೋಕ್ಸ್ ರದ್ದು ಉತ್ತಮ ಇನ್ನಿಂಗ್ಸ್. ವಿರಾಟ್ ರದ್ದು ಕೂಡಾ ಹಾಗೆಯೇ. ಯಾಕೆಂದರೆ ಅವರದ್ದು ಕೋಲ್ಕತ್ತಾದ ಕಠಿಣ ಪಿಚ್ ಮತ್ತು ಕಠಿಣ ಬೌಲಿಂಗ್ ದಾಳಿಯ ಎದುರಾಗಿ ಬಂದಿತ್ತು ಎಂದು ಬರೆದಿದ್ದಾರೆ.

ಅಷ್ಟೇ ಅಲ್ಲದೆ, ಈ ಹಿಂದೆ ಮೊಹಮ್ಮದ್ ಹಫೀಜ್ ಅವರು ವಿರಾಟ್ ಕೊಹ್ಲಿಯ ಬೌಲಿಂಗ್ ನಲ್ಲಿ ಔಟಾದ ಫೋಟೊವೊಂದನ್ನು ಹಂಚಿಕೊಂಡ ವಾನ್, ‘ನೀವು ವಿರಾಟ್ ಬೌಲಿಂಗ್ ನಿಂದ ಬೌಲ್ಡ್ ಆಗಿದ್ದೀರಿ, ಬಹುಶಃ ಈ ಕಾರಣಕ್ಕೆ ನಿವು ಯಾವಾಗಲೂ ಅವನ ಬಗ್ಗೆ ಹೇಳುತ್ತೀರಿ’ ಎಂದು ಕಿಚಾಯಿಸಿದ್ದಾರೆ. ವಿಶೇಷವೆಂದರೆ ಕೊಹ್ಲಿಯ ನಿಧಾನಗತಿ ಬ್ಯಾಟಿಂಗ್ ಎಂದು ಟೀಕೆ ಮಾಡುವ ಹಫೀಜ್ ಆ ಟಿ20 ವಿಶ್ವಕಪ್ ಇನ್ನಿಂಗ್ಸ್ ನಲ್ಲಿ 28 ಎಸೆತಗಳಲ್ಲಿ ಕೇವಲ 15 ರನ್ ಮಾಡಿ ಔಟಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next