ಮುಂಬೈ: “ಇಂಥದ್ದೆಲ್ಲ ಟಿ-20 ಮಾದರಿಯಲ್ಲಿ ಸಂಭವಿಸುತ್ತಲೇ ಇರುತ್ತದೆ. ಅದರಲ್ಲೂ ಧೋನಿಯಂಥ ಬ್ಯಾಟ್ಸ್‌ಮನ್ ಡೆತ್ ಓವರ್‌ಗಳ ವೇಳೆ ಕ್ರೀಸಿನಲ್ಲಿದ್ದರೆ ಎದುರಾಳಿಗಳ ಪಾಲಿಗೆ ಅದು ಕಂಟಕವಾಗಿ ಪರಿಣಮಿಸುವ ಸಾಧ್ಯತೆ ಹೆಚ್ಚು. ನಮಗೆ ಇಂಥದೇ ಅನುಭವವಾಯಿತು…’ ಎಂಬುದಾಗಿ ಮುಂಬೈ ಇಂಡಿಯನ್ಸ್ ತಂಡದ ಕೀಪರ್ ಕಂ ಓಪನರ್ ಪಾರ್ಥಿವ್ ಪಟೇಲ್ ಅಭಿಪ್ರಾಯಪಟ್ಟಿದ್ದಾರೆ.
“ಧೋನಿ ಅಷ್ಟೊಂದು ಪರಿಪೂರ್ಣವಾಗಿ ಫಿನಿಶರ್ ಪಾತ್ರವನ್ನು ನಿಭಾಯಿಸುತ್ತಾರೆ. ಈ ಪಂದ್ಯದ 18ನೇ ಓವರ್ ತನಕ ನಾವು ಅಮೋಘ ನಿಯಂತ್ರಣ ಸಾಧಿಸಿದ್ದೆವು. ಆದರೆ ಕೊನೆಯ 2 ಓವರ್‌ಗಳಲ್ಲಿ ಧಾರಾಳ ರನ್ ಸೋರಿ ಹೋಯಿತು…’ ಎಂದು ಪಾರ್ಥಿವ್ ವಿಷಾದಿಸಿದರು.
18ನೇ ಓವರ್ ತನಕ ಪುಣೆ ಸ್ಕೋರ್‌ಬೋರ್ಡ್‌ನಲ್ಲಿ ತೀವ್ರ ರನ್ ಬರಗಾಲ ಗೋಚರಿಸುತ್ತಿತ್ತು. ಆಗ ಸ್ಮಿತ್ ಬಳಗ 7 ವಿಕೆಟ್‌ಗಳನ್ನು ಕೈಲಿರಿಸಿಕೊಂಡೂ 121ರಲ್ಲಿ ಕುಂಟುತ್ತಿತ್ತು. ಇದೇ ರೀತಿ ಸಾಗಿದರೆ ತಂಡದ ಮೊತ್ತ 140ರ ಗಡಿ ಮುಟ್ಟತ್ತಿತ್ತೋ ಏನೋ. ಆದರೆ ಧೋನಿ ಮತ್ತು ತಿವಾರಿ ಸೇರಿಕೊಂಡು ಈ ಮೊತ್ತವನ್ನು 162ರ ತನಕ ಏರಿಸಿದರು. ಅರ್ಥಾತ್, ಕೊನೆಯ 2 ಓವರ್‌ಗಳಲ್ಲಿ ಪುಣೆ 41 ರನ್ ಬಾಚಿತು!
ಮೆಕ್ಲೆನಗನ್ ಎಸೆದ 19ನೇ ಓವರಿನಲ್ಲಿ ಹರಿದು ಬಂದದ್ದು ಬರೋಬ್ಬರಿ 26 ರನ್! ಬುಮ್ರಾ ಅವರ ಅಂತಿಮ ಓವರಿನಲ್ಲಿ 15 ರನ್ ಬಂತು. ಈ 2 ಓವರ್‌ಗಳಲ್ಲಿ ಧೋನಿ-ತಿವಾರಿ ಸೇರಿಕೊಂಡು 5 ಸಿಕ್ಸರ್ ಸಿಡಿಸಿದರು. ಪುಣೆ ಮೇಲುಗೈಗೆ ಈ 2 ಓವರ್‌ಗಳೇ ಕಾರಣವಾದದ್ದು ಸುಳ್ಳಲ್ಲ.
ಅಂತಿಮ ಎಸೆತದಲ್ಲಿ ರನೌಟಾದ ತಿವಾರಿ 48 ಎಸೆತಗಳಿಂದ 58 ರನ್ ಬಾರಿಸಿದರೆ (4 ಬೌಂಡರಿ, 2 ಸಿಕ್ಸರ್), ಧೋನಿ 26 ಎಸೆತಗಳಿಂದ 40 ರನ್ ಬಾರಿಸಿ ಅಜೇಯರಾಗಿ ಉಳಿದರು. ಇದರಲ್ಲಿ 5 ಸಿಕ್ಸರ್ ಒಳಗೊಂಡಿತ್ತು.