ಬೆಂಗಳೂರು: ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಮದ್ಯ ಮಾರಾಟ ನಿಷೇಧಿಸಿ ಸುಪ್ರೀಂ ಕೋರ್ಟ್ ಆದೇಶ ಹೊರಡಿಸಿದ ಹಿನ್ನೆಲೆಯಲ್ಲಿ ರಾಜಧಾನಿ ಬೆಂಗಳೂರಿನ ಎಂ.ಜಿ.ರಸ್ತೆ ಸುತ್ತಮುತ್ತಲಿನ ಬಾರ್, ಪಬ್ ಮಾಲೀಕರು ಆತಂಕಕ್ಕೆ ಒಳಗಾಗಿದ್ದಾರೆ.
ಕಂದಾಯ ಇಲಾಖೆ ದಾಖಲೆಗಳಲ್ಲಿ ಎಂ.ಜಿ.ರಸ್ತೆಯನ್ನು ಇಂದಿಗೂ ರಾಷ್ಟ್ರೀಯ ಹೆದ್ದಾರಿ (ಹಳೆ ಮದ್ರಾಸ್ ರಸ್ತೆ) ಎಂದು ದಾಖಲಿಸಲಾಗಿದೆ. ಆ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಆದೇಶದಂತೆ ನಗರ ಭಾಗದಲ್ಲಿ ರಾಷ್ಟ್ರೀಯ ಹೆದ್ದಾರಿಯಿಂದ 500 ಮೀಟರ್ ವ್ಯಾಪ್ತಿಯಲ್ಲಿ ಮದ್ಯ ಮಾರಾಟ ನಿಷಿದ್ಧ. ಆ ಹಿನ್ನೆಲೆಯಲ್ಲಿ ತಾಂತ್ರಿಕವಾಗಿ ಎಂ.ಜಿ.ರಸ್ತೆಯ ರೆಸ್ಟೋರೆಂಟ್ ಮತ್ತು ಪಬ್‌ಗಳಲ್ಲಿ ಮದ್ಯ ಪೂರೈಕೆ ಮಾಡುವಂತಿಲ್ಲ. ಈ ಹಿನ್ನೆಲೆಯಲ್ಲಿ ಬಾರ್ ಮಾಲೀಕರು ಆತಂಕಕ್ಕೆ ಒಳಗಾಗಿದ್ದಾರೆ.
ಈಗಾಗಲೇ ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆ ಸೇರಿದಂತೆ ಹಳೆ ಮದ್ರಾಸ್ ರಸ್ತೆಯ ಬದಿಯಲ್ಲಿರುವ ಬಾರ್ ಮತ್ತು ಪಬ್‌ಗಳಿಗೆ ಅಬಕಾರಿ ಇಲಾಖೆಯ ಅಧಿಕಾರಿಗಳು ನೋಟಿಸ್ ಜಾರಿಗೊಳಿಸಿದ್ದಾರೆ. ಜತೆಗೆ ಜೂನ್ 30ರ ನಂತರ ಮದ್ಯ ಮಾರಾಟ ಮಾಡದಂತೆ ಸೂಚನೆ ನೀಡಲಾಗಿದೆ. ಇದರೊಂದಿಗೆ ಬಾರ್‌ಗಳ ಪರವಾನಗಿಯನ್ನು ನವೀಕರಿಸಲು ಬಾರ್ ಮಾಲೀಕರು ಸಲ್ಲಿಕೆ ಮಾಡಿದ್ದ ಅರ್ಜಿಗಳನ್ನು ವಾಪಸ್ ಕಳುಹಿಸಲಾಗಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಬ್ಲೂ ಫೋಕ್ಸ್ ಪಬ್‌ನ ಮಾಲೀಕ ಶ್ರೀಶೈಲ, ಹಲವಾರು ವರ್ಷಗಳಿಂದ ಈ ಭಾಗದಲ್ಲಿ ಪಬ್ ನಡೆಸಿಕೊಂಡು ಬರುತ್ತಿದ್ದೇವೆ. ಆದರೆ, ಇಲ್ಲಿ ರಾಷ್ಟ್ರೀಯ ಹೆದ್ದಾರಿ ಇದೆ ಎಂಬ ವಿಷಯವೇ ತಿಳಿದಿರಲಿಲ್ಲ. ಈ ಭಾಗದಲ್ಲಿ ಮದ್ಯ ಮಾರಾಟ ನಿಷೇಧಿಸುವುದರಿಂದ ವ್ಯಾಪಾರದ ಮೇಲೆ ಭಾರಿ ಹೊಡೆತ ಬೀಳಲಿದ್ದು, ವ್ಯಾಪಾರಿಗಳು ನಷ್ಟ ಅನುಭವಿಸಲಿದ್ದಾರೆ ಎಂದು ತಿಳಿಸಿದರು.
ಬಾರ್ ಹಾಗೂ ಪಬ್‌ಗಳಲ್ಲಿ ಮದ್ಯ ನಿಷೇಧಿಸುವುದರಿಂದ ಇಲ್ಲಿ ಕೆಲಸ ಮಾಡುತ್ತಿರುವ ನೂರಾರು ಸಿಬ್ಬಂದಿ ಕೆಲಸ ಕಳೆದುಕೊಳ್ಳುವ ಆತಂಕಕ್ಕೆ ಒಳಗಾಗಿದ್ದಾರೆ. ಅದರ ಹಿನ್ನೆಲೆಯಲ್ಲಿ ಈಗಾಗಲೇ ರಸ್ತೆಯನ್ನು ಡಿನೋಟಿಫೈ ಮಾಡುವಂತೆ ಸಂಘದ ಪದಾಧಿಕಾರಿಗಳು ಸ್ಥಳೀಯಾಡಳಿತಕ್ಕೆ ಮನವಿ ಸಲ್ಲಿಕೆ ಮಾಡಿದ್ದು, ಇನ್ನು ಆರು ದಿನಗಳ ಅವಧಿ ಇರುವುದರಿಂದ ಸಂಘದೊಂದಿಗೆ ಚರ್ಚಿಸಿ ಮುಂದಿನ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದರು.
ಡಬುÉವೈಟಿ ಪಬ್‌ನ ಪ್ರಧಾನ ವ್ಯವಸ್ಥಾಪಕ ಶ್ರೀನಿವಾಸ್ ತ್ಯಾಗರಾಜ್, ಈ ಭಾಗದ ನೂರಾರು ಬಾರ್, ಪಬ್ ಮತ್ತು ರೆಸ್ಟೋರೆಂಟ್‌ಗಳಲ್ಲಿ ಸಾವಿರಾರು ಜನರು ಕೆಲಸ ಮಾಡುತ್ತಿದ್ದು, ಮದ್ಯ ಮಾರಾಟ ಸ್ಥಗಿತಗೊಳಿಸುವುದರಿಂದ ಅವರೆಲ್ಲ ಕೆಲಸ ಕಳೆದುಕೊಳ್ಳಲಿದ್ದಾರೆ. ಮದ್ಯ ಇಲ್ಲದೆ ಬಾರ್, ಪಬ್ ಮತ್ತು ರೆಸ್ಟೋರೆಂಟ್‌ಗಳನ್ನು ನಡೆಸುವುದು ಅಸಾಧ್ಯ. ವಾರದೊಳಗೆ ಸರ್ಕಾರ ಯಾವ ರೀತಿಯ ನಿರ್ಧಾರಗಳನ್ನು ಕೈಗೊಳ್ಳಲಿದೆ ಎಂಬುದರ ಆಧಾರದ ಮೇಲೆ ಮುಂದಿನ ಕ್ರಮಕ್ಕೆ ಮುಂದಾಗುತ್ತೇವೆ ಎಂದು ಹೇಳಿದರು.