ದಾವಣಗೆರೆ: ನಾಗರಿಕರ ಜೀವ, ವರ್ತಕರ ಜೀವನ ನಿರ್ವಹಣೆಗೆ ಸಂಕಷ್ಟ ತಂದೊಡ್ಡಿರುವ ಸ್ಮಾರ್ಟ್ ಸಿಟಿ ಯೋಜನೆ ಕಾಮಗಾರಿ ಸಮಸ್ಯೆಯಿಂದ ಕೂಡಲೇ ಮುಕ್ತಿ ನೀಡಬೇಕು ಎಂದು ಒತ್ತಾಯಿಸಿ ಶುಕ್ರವಾರ ಮಂಡಿಪೇಟೆ ನಿವಾಸಿಗಳು, ವ್ಯಾಪಾರಿಗಳ ಬಳಗದ ನೇತೃತ್ವದಲ್ಲಿ ಮಹಾತ್ಮಗಾಂಧಿ (ಎಂಜಿ) ರಸ್ತೆ ಸಾರ್ವಜನಿಕರು, ವ್ಯಾಪಾರಿಗಳು ಬೀದಿಗಿಳಿದಿದ್ದಾರೆ.
ದಾವಣಗೆರೆಯಲ್ಲಿ ಸ್ಮಾರ್ಟ್‌ಸಿಟಿ ಯೋಜನೆ ಘೋಷಣೆಯಾಗಿ ಮೂರು ವರ್ಷ ಕಳೆದಿವೆ. ಮಹಾತ್ಮ ಗಾಂಧಿ (ಎಂಜಿ) ರಸ್ತೆ ಅಗೆದು ಮೂರು ತಿಂಗಳೇ ಆಗಿವೆ. ಆದರೆ, ಈವೆರಗೆ ಶೇ. 30ರಷ್ಟು ಕೆಲಸ ಸಹ ಆಗಿಲ್ಲ.
ದಿನಕ್ಕೆ 200ಕ್ಕೂ ಹೆಚ್ಚು ಜನರು ಕೆಲಸ ಮಾಡುವ ಜಾಗದಲ್ಲಿ ಇಬ್ಬರು-ಮೂವರು ಕೆಲಸ ಮಾಡುತ್ತಾರೆ. ಅವರಿಗೆ ಕಾಮಗಾರಿ ಬಗ್ಗೆ ಮಾಹಿತಿ ಇಲ್ಲ. ಇನ್ನು ಅಧಿಕಾರಿಗಳನ್ನು ಕೇಳಿದರೆ ಮೇಲಿನ ಅಧಿಕಾರಿಗಳನ್ನು ಕೇಳಬೇಕು ಎನ್ನುತ್ತಾರೆ. ಆ ಅಧಿಕಾರಿಗಳು ಕೈಗೆ ಸಿಕ್ಕುವುದೇ ಇಲ್ಲ. ಕೇಳಿದರೂ ಸಮರ್ಪಕ ಉತ್ತರ ನೀಡುವುದಿಲ್ಲ. ಇಡೀ ಕಾಮಗಾರಿ ಯಾವಾಗ ಮುಗಿಯಬಹುದು ಎಂಬುದು ಯಾರಿಗೂ ಗೊತ್ತಿಲ್ಲ. ಅಂತಹವರು ಸ್ಮಾರ್ಟ್‌ಸಿಟಿ ಕಾಮಗಾರಿ ನೋಡಿಕೊಳ್ಳುತ್ತಿದ್ದಾರೆ ಎಂದು ಪ್ರತಿಭಟನಾಕಾರರು ದೂರಿದರು.
ಆಳವಾಗಿ ರಸ್ತೆ ಅಗೆಯಲಾಗಿದ್ದು, ಮಳೆ ಬಂದು ನೀರು ನಿಂತು, ಅನೇಕರು ಗುಂಡಿಯಲ್ಲಿ ಬಿದ್ದು ಕಾಲು-ಕೈ ಮುರಿದುಕೊಂಡಿದ್ದಾರೆ. ಕೇವಲ 10 ಅಡಿ ಆಕಡೆ- ಈ ಕಡೆ ಓಡಾಡುವುದಕ್ಕೂ ಆಗದಷ್ಟು ದುಸ್ಥಿತಿ ಇದೆ. ರಸ್ತೆ ಇಲ್ಲದ ಕಾರಣಕ್ಕೆ ವ್ಯಾಪಾರ- ವಹಿವಾಟು ಸ್ಥಗಿತಗೊಂಡಿದೆ. ಹಾಗಾಗಿ ಬಾಡಿಗೆ ಕಟ್ಟಲು, ಅಂಗಡಿಯಲ್ಲಿ ಕೆಲಸ ಮಾಡುವರಿಗೆ ಸಂಬಳ ನೀಡಲು ಆಗುತ್ತಿಲ್ಲ. ನಮ್ಮ ಗೋಳು ಯಾರೂ ಕೇಳುವವರೇ ಇಲ್ಲ ಎಂದು ವ್ಯಾಪಾಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ಎಂ.ಜಿ. ರಸ್ತೆ ಜೊತೆಗೆ ಮಂಡಿಪೇಟೆ, ಚಾಮರಾಜಪೇಟೆ ಭಾಗದಲ್ಲೂ ನಡೆಯುತ್ತಿರುವ ಸ್ಮಾರ್ಟ್‌ಸಿಟಿ ಕೆಲಸ ಆಮೆಗತಿಯಲ್ಲಿದೆ. ರಸ್ತೆ ಕೆಲಸ ನಡೆಯುತ್ತಿರುವ ಕಾರಣಕ್ಕೆ ಜನರು ಇತ್ತ ಕಡೆ ಸುಳಿಯುವುದೇ ಇಲ್ಲ. ಮಂಡಿಪೇಟೆ, ಎಂ.ಜಿ.ರಸ್ತೆ, ಚಾಮರಾಜಪೇಟೆ ರಸ್ತೆ ಒಳಗೊಂಡಂತೆ ಎಲ್ಲ ಕಡೆ ವ್ಯಾಪಾರ ಅಕ್ಷರಶಃ ನಿಂತೇ ಹೋಗಿದೆ.
ಇದೇ ಸ್ಥಿತಿ ಮುಂದುವರೆದರೆ ಶಾಶ್ವತವಾಗಿಯೇ ವ್ಯಾಪಾರ ಕಳೆದುಕೊಳ್ಳುವ ಆತಂಕ ಕಾಡುತ್ತಿದೆ. ಅನೇಕ ವರ್ಷದಿಂದ ವ್ಯಾಪಾರವನ್ನೇ ನಂಬಿಕೊಂಡು ಜೀವನ ನಡೆಸುತ್ತಿರುವ ಸಾವಿರಾರು ಜನರು ಏನು ಮಾಡಬೇಕು ಎಂಬುದೇ ಗೊತ್ತಾಗುತ್ತಿಲ್ಲ. ನಮ್ಮದಲ್ಲದ ತಪ್ಪಿಗೆ ಶಿಕ್ಷೆ ಅನುಭವಿಸುವಂತಾಗುತ್ತಿದೆ ಎಂದು ಪ್ರತಿಭಟನಾಕಾರರು ಬೇಸರ ವ್ಯಕ್ತಪಡಿಸಿದರು.
ರಸ್ತೆ ಕಾಮಗಾರಿ ಬೇಗ ಮುಗಿಸದೇ ಇರುವುದನ್ನು ಪ್ರತಿಭಟಿಸಿ ಈಗ ಅಗೆದಿರುವ ಎಂ.ಜಿ. ರಸ್ತೆಯಲ್ಲೇ ಗಣೇಶನನ್ನು ಪ್ರತಿಷ್ಠಾಪಿಸಿ, ಅಧಿಕಾರಿಗಳ ಕೈಗೆ ಆಗದೇ ಹೋದರೂ ದೇವರಾದರೂ ನಮ್ಮ ಸಮಸ್ಯೆ ಬಗೆಹರಿಸುವಂತೆ ಪ್ರಾರ್ಥಿಸಿ ಭಜನೆ ಮಾಡುತ್ತೇವೆ. ಆದಷ್ಟು ಬೇಗ ಕೆಲಸ ಮುಗಿಸಬೇಕು. ಕಡೆಯ ಪಕ್ಷ ಜನರು ಓಡಾಡಲಿಕ್ಕೆ ಸಾಧ್ಯವಾಗುವಂತಾದರೂ ಅನುಕೂಲ ಮಾಡಿಕೊಡಬೇಕು. ಇಲ್ಲದಿದ್ದಲ್ಲಿ, ಮುಂದಿನ ದಿನಗಳಲ್ಲಿ ಹೋರಾಟ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು.
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಸ್ಮಾರ್ಟ್‌ಸಿಟಿ ಯೋಜನೆ ಅಧಿಕಾರಿಗಳು, 2 ದಿನದಲ್ಲಿ ಜನರು ಓಡಾಡಲಿಕ್ಕೆ ಅನುಕೂಲ ಮಾಡಿಕೊಡಲಾಗುವುದು ಎಂದು ಭರವಸೆ ನೀಡಿದ ನಂತರ ಹೋರಾಟ ಹಿಂಪಡೆಯಲಾಯಿತು. ರಾಜು ಮೌರ್ಯ, ವಿಜಯ್‌ಕುಮಾರ್, ಸತ್ಯನಾರಾಯಣ ಶೆಟ್ಟಿ, ಬಿ.ಎಂ. ರಾಜು, ಜಯಣ್ಣ, ಬಿ. ಸುರೇಶ್, ಆತ್ಮಾರಾಮ್, ಮೋಹನ್‌ಲಾಲ್ ಗಣೇಶ್ ಇತರರು ಇದ್ದರು.