ಮೆಕ್ಸಿಕೊ ಸಿಟಿ: ಸಾರ್ವಜನಿಕ ಸ್ಥಳದಲ್ಲಿ ಮಾಸ್ಕ್ ಧರಿಸದ ಅಪರಾಧಕ್ಕಾಗಿ ಸೆರೆಯಾಗಿದ್ದ ವ್ಯಕ್ತಿಯೊಬ್ಬ ಪೊಲೀಸರ ವಶದಲ್ಲಿ ಸಾವನ್ನಪ್ಪಿದ ಘಟನೆ ಮೆಕ್ಸಿಕೊದ ಗ್ವಾಡಲಜರ ನಗರದಲ್ಲಿ ಸಂಭವಿಸಿದ್ದು, ದೇಶಾದ್ಯಂತ ಈ ಘಟನೆ ಪ್ರತಿಭಟನೆಯ ಕಿಡಿ ಹೊತ್ತಿಸಿದೆ.ಸರಕಾರಿ ವಾಹನಗಳಿಗೆ ಕಿಚ್ಚಿಕ್ಕಿದ, ಸರಕಾರಿ ಕಚೇರಿಗಳಿಗೆ ಕಲ್ಲು ತೂರಿದ ಘಟನೆಗಳು ನಡೆದಿವೆ.
ಅಮೆರಿಕದಲ್ಲಿ ಕೃಷ್ಣವರ್ಣೀಯನ ಲಾಕಪ್‌ಡೆತ್ ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆಯ ಕಾವು ತಣಿಯುವ ಮುನ್ನವೇ ಪಕ್ಕದ ದೇಶದಲ್ಲಿ ಇದೇ ಮಾದರಿಯ ಘಟನೆ ಸಂಭವಿಸಿದೆ.
ಕಟ್ಟಡ ನಿರ್ಮಾಣ ಕಾರ್ಮಿಕ ಗಿಯೊವನ್ನಿ ಲೋಪೆಜ್ (30) ಎಂಬಾತನನ್ನು ಪೊಲೀಸರು ಮೇ 4ರಂದು ಸಾರ್ವಜನಿಕ ಸ್ಥಳದಲ್ಲಿ ಮಾಸ್ಕ್ ಧರಿಸದ ಅಪರಾಧಕ್ಕಾಗಿ ಬಂಧಿಸಿದ್ದರು. ಒಂದು ತಿಂಗಳ ಕಸ್ಟಡಿಯಲ್ಲಿದ್ದ ಲೋಪೆಜ್‌ನನ್ನು ನೋಡಲೆಂದು ಮನೆಯವರು ಹೋದಾಗ ಆಸ್ಪತ್ರೆಗೆ ದಾಖಲಿಸಿದ್ದೇವೆ ಎಂದು ಪೊಲೀಸರು ಹೇಳಿದರು. ಆಸ್ಪತ್ರೆಗೆ ಹೋದಾಗ ಅವರಿಗೆ ಲೋಪೆಜ್‌ನ ಶವ ಕಾಣ ಸಿಕ್ಕಿತು. ಕಾಲಿನಲ್ಲಿ ಗುಂಡೇಟಾದ ಗಾಯವಿತ್ತು.
ಮರಣೋತ್ತರ ಪರೀಕ್ಷೆ ವರದಿ ತಲೆಗೆ ಬಲವಾದ ಹೊಡೆತ ಬಿದ್ದ ಕಾರಣ ಸಾವು ಸಂಭವಿಸಿದೆ ಎಂದು ಹೇಳಿದೆ. ಇದು ಪೊಲೀಸರು ಮಾಡಿದ ಹತ್ಯೆ ಎಂದು ಜನರು ಆರೋಪಿಸುತ್ತಿದ್ದಾರೆ. ಪೊಲೀಸರು ಲೋಪೆಜ್‌ನನ್ನು ಬಲವಂತವಾಗಿ ಪೊಲೀಸ್ ವ್ಯಾನ್‌ಗೆ ತುಂಬಿಸುತ್ತಿರುವ ವೀಡಿಯೊ ಚಿತ್ರಿಕೆಯೊಂದು ಈಗ ವೈರಲ್ ಆಗಿದೆ. ಜನರು ಹ್ಯಾಷ್‌ಟ್ಯಾಗ್ ಸೃಷ್ಟಿಸಿ ನ್ಯಾಯಕ್ಕಾಗಿ ಆಗ್ರಹಿಸುತ್ತಿದ್ದಾರೆ.
ಜಲಿಸ್ಕೊ ಸ್ಟೇಟ್‌ನಲ್ಲಿ ಲೋಪೆಜ್‌ನನ್ನು ಬಂಧಿಸಲಾಗಿತ್ತು. ಇಲ್ಲಿನ ಗವರ್ನರ್ ಎನ್ರಿಕ್ ಅಲ್ಫರೊ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಿ ಆದೇಶ ಹೊರಡಿಸಿದ್ದಾರೆ.
ಮಾಸ್ಕ್ ಧರಿಸದ ಅಪರಾಧಕ್ಕಾಗಿ ಅನೇಕ ಜನರನ್ನು ಪೊಲೀಸರು ಬಂಧಿಸಿದ್ದಾರೆ. ಭ್ರಷ್ಟ ಪೊಲೀಸರಿಗೆ ಲಂಚ ಹೊಡೆಯಲು ಈ ನಿಯಮ ಅತ್ಯುತ್ತಮ ಅವಕಾಶವನ್ನು ಸೃಷ್ಟಿಸಿಕೊಟ್ಟಿದೆ ಎಂದು ಜನರು ಆರೋಪಿ ಸುತ್ತಿದ್ದಾರೆ.