ಜೈಪುರ : ಚಿತ್ರ ನಿರ್ದೇಶಕ ಸಂಜಯ್ ಲೀಲಾ ಭನ್ಸಾಲಿ ಅವರ ವಿವಾದಿತ ಐತಿಹಾಸಿಕ ಕಥಾ ಚಿತ್ರ “ಪದ್ಮಾವತಿ’ಗೆ ಕೇಂದ್ರ ಸೆನ್ಸಾರ್ ಮಂಡಳಿ ಯು/ಎ ಸರ್ಟಿಫಿಕೇಟ್ ಕೊಟ್ಟಿರುವುದನ್ನು ಮೇವಾರ್ ಮಾಜಿ ರಾಜ ಕುಟುಂಬದ ಹಿರಿಯ ವ್ಯಕ್ತಿ ಮಹೇಂದ್ರ ಸಿಂಗ್ ಅವರು ಪ್ರಶ್ನಿಸಿದ್ದಾರೆ.
ಪದ್ಮಾವತಿ ಚಿತ್ರದಲ್ಲಿ ಗೌರವಾನ್ವಿತ ಇತಿಹಾಸ ಪ್ರಸಿದ್ಧ ವ್ಯಕ್ತಿಗಳನ್ನು ತಪ್ಪಾಗಿ ತೋರಿಸಲಾಗಿದ್ದು ಈ ಚಿತ್ರಕ್ಕೆ ಸೆನ್ಸಾರ್ ಅನುಮತಿ ಸಿಕ್ಕಿರುವುದು ಸಾಮಾಜಿಕ ಅಶಾಂತಿಗೆ ಕಾರಣವಾಗಲಿದೆ ಎಂದವರು ಸರಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಮಹೇಂದ್ರ ಸಿಂಗ್ ಅವರು ಈ ಬಗ್ಗೆ ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವೆ ಸ್ಮತಿ ಇರಾನಿ ಮತ್ತು ಸಹಾಯಕ ಸಚಿವ ರಾಜವರ್ಧನ ಸಿಂಗ್ ರಾಠೊಡ್ ಅವರಿಗೆ ಪತ್ರ ಬರೆದಿದ್ದಾರೆ. ಸಿಬಿಎಫ್ಸಿ ಅಧ್ಯಕ್ಷ ಪ್ರಸೂನ್ ಜೋಷಿ ಅವರು ಪದ್ಮಾವತಿ ಚಿತ್ರಕ್ಕೆ ಸರ್ಟಿಫಿಕೇಟ್ ನೀಡುವಲ್ಲಿ ಎಲ್ಲ ಅಂಶಗಳನ್ನು ಪರಿಗಣಿಸಿಲ್ಲ ಮತ್ತು ಈ ಸಾರ್ವಜನಿಕ ವಂಚನೆಯು ಅದಕ್ಷತೆ ಮತ್ತು ಹಗುರತನವನ್ನು ತೋರಿಸುತ್ತದೆ ಎಂದು ಪತ್ರದಲ್ಲಿ ದೂರಿದ್ದಾರೆ. ಇದರಿಂದ ಸಿಬಿಎಫ್ಸಿ ಗೆ ಕೆಟ್ಟ ಹೆಸರು ಬಂದೀತು ಎಂದವರು ಎಚ್ಚರಿಸಿದ್ದಾರೆ.
ಪ್ರಸೂನ್ ಜೋಷಿ ಅಧ್ಯಕ್ಷತೆಯ ಸಿಬಿಎಫ್ಸಿ ವಿವಾದಿತ ಪದ್ಮಾವತಿ ಚಿತ್ರದ ಹೆಸರನ್ನು “ಪದ್ಮಾವತ್’ ಎಂದು ಬದಲಾಯಿಸಲು ಮತ್ತು ಐದು ಮಾರ್ಪಾಡುಗಳನ್ನು ಮಾಡಲು ಚಿತ್ರ ನಿರ್ಮಾಪಕರಿಗೆ ಸೂಚಿಸಿತ್ತು. ಆದರೆ ಸೆನ್ಸಾರ್ ಸರ್ಟಿಫಿಕೇಟ್ ನೀಡುವ ಮುನ್ನ ಈ ಚಿತ್ರವನ್ನು ವೀಕ್ಷಿಸಿದ ಪರಿಣತರ ಅಭಿಪ್ರಾಯ, ಆಕ್ಷೇಪ, ಮಾರ್ಪಾಟುಗಳ ಸೂಚನೆ ಮುಂತಾಗಿ ಯಾವುದೇ ವಿಷಯದ ಬಗ್ಗೆ ಜನರಿಗೆ ಮಾಹಿತಿಯನ್ನು ಬಹಿರಂಗಪಡಿಸಿರಲಿಲ್ಲ ಎಂದು ಮಹೇಂದ್ರ ಸಿಂಗ್ ಹೇಳಿದ್ದಾರೆ.