Advertisement

ಮಹಾನಗರಗಳ ಮಾಸ್ಕ್ ಕಾರ್ಡ್‌

02:21 AM Jan 24, 2022 | Team Udayavani |

ಕೊರೊನಾದ 3ನೇ ಅಲೆಯ ದವಡೆಯಲ್ಲಿ ಇಡೀ ಜಗತ್ತು ಸಿಲುಕಿದೆ. ಕರುನಾಡಿನಲ್ಲೂ ಸೋಂಕಿನ ಪ್ರಕರಣಗಳು ಹೆಚ್ಚುತ್ತಲೇ ಇವೆ. ಆದರೆ 1-2ನೇ ಅಲೆಯಲ್ಲಿ ವಹಿಸಿದ್ದ ಮುಂಜಾಗ್ರತೆಗಳಿಗೆ ಹೋಲಿಸಿದಲ್ಲಿ ಈ ಬಾರಿ ನಾವು ಸಾಕಷ್ಟು ಮೈಮರೆತಿದ್ದೇವೆ. ನಾಡಿನ 12 ಮಹಾನಗರಗಳಲ್ಲಿ ಆಯ್ದ ಕಾಲೇಜುಗಳ ಪತ್ರಿಕೋದ್ಯಮ ವಿದ್ಯಾರ್ಥಿಗಳ ತಂಡದ ಸಹಯೋಗದೊಂದಿಗೆ “ಉದಯವಾಣಿ’ ನಡೆಸಿದ ಸರ್ವೇಯಲ್ಲೂ ಇದು ಸ್ಪಷ್ಟವಾಗಿದೆ.
ಮಾಸ್ಕ್ ಧಾರಣೆ, ಸಾಮಾಜಿಕ ಅಂತರ ಪಾಲನೆ ಇತ್ಯಾದಿ ಅಂಶಗಳನ್ನು ಪರಿಗಣಿಸಿ ಸರ್ವೇ ರೂಪಿಸಿದ ಫ‌ಲಿತಾಂಶಗಳ ಆ “ಮಾಸ್ಕ್’ಕಾರ್ಡ್‌ ಹೀಗಿದೆ..

Advertisement

ಶಿವಮೊಗ್ಗ
ಮಾಸ್ಕ್ ಗೆ ಮಲೆನಾಡಿಗರ ಗೌರವ
ಮಲೆನಾಡಿನ ಮಡಿಲು ಶಿವಮೊಗ್ಗ ಮಾಸ್ಕ್ ಧಾರಣೆಗೆ ಹೆಚ್ಚು ಗೌರವ ನೀಡಿದ ಸಂಗತಿ ಸಮೀಕ್ಷೆಯಿಂದ ವ್ಯಕ್ತವಾಗಿ ದೆ. ಇಲ್ಲಿ ಶೇ.48.57ರಷ್ಟು ಮಂದಿಯ ಮುಖದಲ್ಲಿ ಮಾಸ್ಕ್ ನ ಹಾಜರಿ ಇತ್ತು. ಆದರೆ ಸುಮಾರು ಶೇ.29.57ರಷ್ಟು ಮಂದಿ ಮಾಸ್ಕನ್ನೇ ಧರಿ ಸಿರಲಿಲ್ಲ. ಕಣ್ಣೆದುರೇ ಜನ ಹೀಗೆಲ್ಲ ಕೊರೊನಾ ನಿಯಮಗಳನ್ನು ಗಾಳಿಗೆ ತೂರುತ್ತಿದ್ದರೂ ಅಲ್ಲೇ ಇದ್ದ ಪೊಲೀಸರು, ಪಾಲಿಕೆ ಸಿಬಂದಿ ಹೆಚ್ಚು ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ಸಮಾಧಾನದ ಸಂಗತಿ ಯೆಂದರೆ, ನಗರದ ಹಲವೆಡೆ ಸಾಮಾಜಿಕ ಅಂತರ ಪಾಲನೆ ಕಡ್ಡಾಯದ ದೃಶ್ಯ ಆಗಿತ್ತು. ಹೊಟೇಲ್‌ಗ‌ಳಲ್ಲಿ ಮಾತ್ರ “ಅಂತರ’ ವಿಚಾರ ವಕೌìಟ್‌ ಆಗಿರಲಿಲ್ಲ. ಮಾರುಕಟ್ಟೆಗಳಲ್ಲಿ ವ್ಯಾಪಾರಿಗಳು ಕಡ್ಡಾಯ ಮಾಸ್ಕ್ ಧರಿಸಿ ಮಾದರಿ ಮೆರೆದಿದ್ದರು. ಆದರೆ ರೈಲ್ವೇ ನಿಲ್ದಾಣದಲ್ಲಿ, ಕೊರೊನಾವೇ ಇಲ್ಲ ವೇನೋ ಎಂಬಂತೆ ಪ್ರಯಾಣಿಕರು, ರೈಲ್ವೇ ಸಿಬಂದಿ ಮೈಮರೆತಿದ್ದರು. ಕಾಲೇಜಿನ ಯುವಕ- ಯುವತಿಯರೂ ಇಂಥ ದಿವ್ಯನಿರ್ಲಕ್ಷ್ಯಕ್ಕೆ ಜೋತುಬಿದ್ದಿ ದ್ದರು. ಪಾರ್ಕ್‌ಗಳಲ್ಲಿ ಜಾಗಿಂಗ್‌ ಮಾಡುವವರಲ್ಲಿ ಹಲವರು ಮಾಸ್ಕನ್ನು ಗಲ್ಲದ ಬುಡದವರೆಗೆ ಇಳಿಬಿಟ್ಟು, ಹೊಸ ಫ್ಯಾಶನ್‌ ಶೋಧಿಸಿದ್ದರು.
ಸಮೀಕ್ಷೆ ತಂಡ: ಸಹ್ಯಾದ್ರಿ ಕಲಾ ಕಾಲೇಜಿನ ಪತ್ರಿಕೋದ್ಯಮ ವಿದ್ಯಾರ್ಥಿಗಳು

ಕಲಬುರಗಿ
ಮಾಸ್ಕ್ ಇರುವುದು ಜೇಬಿಗಾಗಿ!
ಕೊರೊನಾ ವಿಚಾರದಲ್ಲಿ ಹೆಚ್ಚು ನಲುಗಿದ ಜಿಲ್ಲೆಗಳಲ್ಲಿ ಕಲಬುರಗಿ ಕೂಡ ಒಂದು. ಪ್ರಸ್ತುತ 3ನೇ ಅಲೆಯ ಈ ವೇಳೆ ಇಲ್ಲಿನ ಜನ ಕೊರೊನಾಕ್ಕೆ ಕ್ಯಾರೇ ಎನ್ನುತ್ತಿಲ್ಲ. ಸಂಪೂರ್ಣ ಮಾಸ್ಕ್ ಧಾರಣೆ,ವಿಚಾರದಲ್ಲಿ ಕಲಬುರಗಿ ನಗರ ಜಸ್ಟ್‌ ಪಾಸ್‌. ಅರೆಬರೆ ಮಾಸ್ಕ್ ಧರಿಸಿ ಓಡಾಡುವವರು ಶೇ.28ಕ್ಕೂ ಅಧಿಕ. ಇನ್ನು ಮಾಸ್ಕನ್ನೇ ಜೇಬಲ್ಲಿ ಇಟ್ಕೊಂಡು ಓಡಾಡುವವರು ಶೇ.34. ಇವಿಷ್ಟೇ ಆಘಾತಕಾರಿ ಸಂಗತಿ ಅಂದ್ಕೊಂಡ್ರಾ? ಇಲ್ಲಿನ ಬಹುತೇಕರು ಸಾಮಾಜಿಕ ಅಂತರವನ್ನು ಜಪ್ಪಯ್ಯಾ ಅಂದರೂ ಪಾಲಿಸುತ್ತಿಲ್ಲ. ಆಸ್ಪತ್ರೆ ಒಳಗೇನೋ ಒಂದಿಷ್ಟು ಜನ ಮಾಸ್ಕ್ ಧರಿಸಿದವರು ಕಾಣಿಸುತ್ತಾರೆ ಬಿಟ್ಟರೆ, ಹೊರಗೆ ಬಂದಾಗ ಮತ್ತದೇ ಅರೆಬರೆ ಮಾಸ್ಕ್ ಧರಿಸಿದ ಮುಖಗಳ ದರ್ಶನ. ಪೊಲೀಸರಿಗೂ ಮಾಸ್ಕ್ ದೂರ. ಕಾಲೇಜುಗಳಲ್ಲಿ ಮಾತ್ರ ಬಹುತೇಕ ವಿದ್ಯಾರ್ಥಿಗಳು ಮಾಸ್ಕ್ ಧರಿಸಿದ್ದರು. ಉಳಿದಂತೆ ಬಸ್‌ ನಿಲ್ದಾಣ, ರೈಲ್ವೇ ನಿಲ್ದಾಣಗಳಲ್ಲಿ ಮಾಸ್ಕ್ ಧರಿಸಿದ್ದ ಮುಖಗಳನ್ನು ಟಾರ್ಚ್‌ ಹಿಡಿದು ಹುಡುಕುವ ಸ್ಥಿತಿಯಿತ್ತು.
ಸಮೀಕ್ಷೆ ತಂಡ: ಗುಲಬರ್ಗಾ ವಿವಿಯ ಪತ್ರಿಕೋದ್ಯಮ ವಿದ್ಯಾರ್ಥಿಗಳ ತಂಡ

ಬಳ್ಳಾರಿ
ಮಾಸ್ಕ್ ಧಾರಿಗಳು ಇಲ್ಲಿ ಅಪರೂಪ
ಗಣಿನಾಡು ಬಳ್ಳಾರಿಯಲ್ಲಿ ಕೊರೊನಾ ಜಾಗೃತಿ ಬಗ್ಗೆ ಎಷ್ಟೇ ಗಿಣಿಪಾಠ ಮಾಡಿದರೂ ಪ್ರಯೋಜನವಾಗುತ್ತಿಲ್ಲ. ಇಲ್ಲಿ ಸಂಪೂರ್ಣ ಮಾಸ್ಕ್ ಧರಿಸುವವರ ಪ್ರಮಾಣ ತೀರಾ ಕನಿಷ್ಠ. ಸೋಂಕನ್ನು ನಿಯಂತ್ರಿ ಸಲು ರಾಜ್ಯ ಸರಕಾರ‌, ಜಿಲ್ಲಾಡಳಿತ ಏನೆಲ್ಲ ಕಟ್ಟು ನಿಟ್ಟಿನ ಕ್ರಮ ಕೈಗೊಂಡರೂ ಸಾರ್ವ ಜನಿಕ ಸ್ಥಳಗಳಲ್ಲಿ ಸಮರ್ಪಕವಾಗಿ ಅನುಷ್ಠಾನ ಗೊಳಿಸುವಲ್ಲಿ ಸಂಬಂಧಪಟ್ಟ ಇಲಾಖೆಗಳು ವಿಫಲವಾಗುತ್ತಿವೆ. 1, 2ನೇ ಅಲೆಯಂತೆ ಎಲ್ಲೆಂ ದರಲ್ಲಿ ದೇಹದ ತಾಪಮಾನ ಪರೀಕ್ಷಿಸುವ, ಕೈಗೆ ಸ್ಯಾನಿಟೈಸರ್‌ ಹಾಕುವ ಸಿಬಂದಿ ಎಲ್ಲೂ ಕಾಣ ಸಿಗುತ್ತಿಲ್ಲ. ಮಾರುಕಟ್ಟೆ ಯಂಥ ಜನಜಂಗುಳಿ ಪ್ರದೇಶಗಳಲ್ಲಿ ಸಾಮಾಜಿಕ ಅಂತರ ಮಂಗ ಮಾಯ. ಮಾಸ್ಕ್ ಧರಿಸುವ ಬಗ್ಗೆ ಕಟ್ಟುನಿಟ್ಟಾಗಿ ಸೂಚಿಸುವ ಯಾವ ಸಿಬಂದಿಯೂ ಇಂಥ ಸ್ಥಳಗಳತ್ತ ಸುಳಿಯುತ್ತಿಲ್ಲ. ಹೊರಗಿನ ಪ್ರದೇಶಗಳ ಜನರು ಹೆಚ್ಚು ಬರುವ ರೈಲ್ವೇ ನಿಲ್ದಾಣಗಳಲ್ಲೂ ಇದೇ ಕಥೆ-ವ್ಯಥೆ.
ಸಮೀಕ್ಷೆ ತಂಡ: ಸರಳಾದೇವಿ ಸರಕಾರಿ ಪ್ರಥಮದರ್ಜೆ ಕಾಲೇಜು, ಬಳ್ಳಾರಿ

ಧಾರವಾಡ
ನಿಯಮಗಳಿಗೆ ಕಿಮ್ಮತ್ತಿಲ್ಲ
ವಿದ್ಯಾನಗರಿ ಧಾರವಾಡದಲ್ಲೂ ಕೊರೊನಾ ಜಾಗೃತಿ ಬಗ್ಗೆ ಜನ ದಿವ್ಯ ನಿರ್ಲಕ್ಷ್ಯ ತಾಳಿದ್ದಾರೆ. ಮೂಗಿನಿಂದ ಕೆಳಕ್ಕೆ, ಗಲ್ಲಕ್ಕೆ ಮಾಸ್ಕ್ ಧರಿಸಿ, “ಕೊರೊನಾದಿಂದ ನಾವು ಸೇಫ್’ ಎಂಬ ಭಾವನೆಯಲ್ಲಿ ಅನೇಕರಿದ್ದ ಸಂಗತಿ ಸರ್ವೇಯಿಂದ ವ್ಯಕ್ತವಾಯಿತು. ಅವಳಿ ನಗರದ ಮಧ್ಯೆ ನಿತ್ಯ ಅಂದಾಜು 4 ಲಕ್ಷ ಜನರು ಓಡಾಟ ನಡೆಸುತ್ತಾರೆ. ಇಷ್ಟಿದ್ದರೂ ಇಲ್ಲಿನ ಬಸ್‌ ನಿಲ್ದಾಣಗಳಲ್ಲಿ ಸಾಮಾಜಿಕ ಅಂತರ ಪಾಲನೆ ಆಗುತ್ತಿಲ್ಲ. ರೈಲ್ವೇ ನಿಲ್ದಾಣ, ಹೊಟೇಲ್‌ಗ‌ಳಲ್ಲಂತೂ ಕೋವಿಡ್‌ ನಿಯಮಾವಳಿಗಳಿಗೆ ಕಿಮ್ಮತ್ತೇ ಇಲ್ಲ. ಯುವಜನರೇ ತುಂಬಿಕೊಂಡಿರುವ ಕಾಲೇಜು ಕ್ಯಾಂಪಸ್‌ಗಳಲ್ಲೂ ಕೊರೊನಾ ಭೀತಿಗೆ ಯಾರೂ ಕ್ಯಾರೇ ಎನ್ನುತ್ತಿರಲಿಲ್ಲ.
ಸಮೀಕ್ಷೆ ತಂಡ: ಕರ್ನಾಟಕ ವಿವಿ ವಿದ್ಯಾರ್ಥಿಗಳ ತಂಡ

Advertisement

ಬೆಳಗಾವಿ
ಮಾಸ್ಕ್ ಆಟಕ್ಕುಂಟು ಲೆಕ್ಕಕ್ಕಿಲ್ಲ
ಗಡಿ ಜಿಲ್ಲಾ ಕೇಂದ್ರ ಬೆಳಗಾವಿಯಲ್ಲೂ ಮಾಸ್ಕ್ ಆಟಕ್ಕುಂಟು ಲೆಕ್ಕಕ್ಕಿಲ್ಲ. ಬಹುತೇಕರು ಪ್ಯಾಂಟ್‌ನ ಜೇಬಿನಲ್ಲಿ ಮಾಸ್ಕ್ ಇಟ್ಟುಕೊಳ್ಳುತ್ತಿದ್ದರೇ ವಿನಾ ಅದನ್ನು ಮೂಗಿಗೆ ಧರಿಸುವ ಗೋಜಿಗೇ ಹೋಗುತ್ತಿರಲಿಲ್ಲ. ಇಲ್ಲಿನ ಬಹುತೇಕ ಸಾರ್ವಜನಿಕ ಪ್ರದೇಶಗಳಲ್ಲಿ ಕೋವಿಡ್‌ ನಿಯಮಗಳೇ ಪಾಲನೆ ಆಗುತ್ತಿಲ್ಲ. ಅರೆಬರೆ ಮಾಸ್ಕ್ ಇಲ್ಲೂ ಫ್ಯಾಶನ್‌ ಆಗಿತ್ತು. ಮಾರುಕಟ್ಟೆಗಳಲ್ಲಿ ವ್ಯಾಪಾರಸ್ಥರು ಮಾಸ್ಕ್ ಧರಿಸುವ ದೊಡ್ಡ ಮನಸ್ಸು ಮಾಡುತ್ತಿರಲಿಲ್ಲ. ಇವರಿಗೆ ಬುದ್ಧಿ ಹೇಳಬೇಕಿದ್ದ ಪಾಲಿಕೆ ಅಧಿಕಾರಿಗಳೂ ಮೌನ ವಹಿಸಿರುವುದು ಆತಂಕದ ಸಂಗತಿಯಾಗಿದೆ. ಆಸ್ಪತ್ರೆ ಆವರಣದಲ್ಲಿ ಮಾತ್ರವೇ ಸ್ವಲ್ಪಮಟ್ಟಿಗೆ ಜನ ಜಾಗೃತರಾಗಿದ್ದಂತೆ ಕಂಡುಬಂತು. ಅದರಲ್ಲೂ ಖಾಸಗಿ ಆಸ್ಪತ್ರೆಗಳಲ್ಲಿ ಹೆಚ್ಚಿನ ಜನ ಮಾಸ್ಕ್ ಧರಿಸಿ, ಆರೋಗ್ಯದ ಬಗ್ಗೆ ಮುತುವರ್ಜಿ ತಾಳಿದ್ದರು. ಸಾಮಾಜಿಕ ಅಂತರವನ್ನೂ ಪಾಲಿಸುತ್ತಿದ್ದರು. ಹೊಟೇಲ್‌ಗ‌ಳಲ್ಲೂ ಕೋವಿಡ್‌ ನಿಯಮಗಳು ಪಾಲನೆ ಆಗುತ್ತಿರಲಿಲ್ಲ. ಸೆಕ್ಯೂರಿಟಿ ಗಾರ್ಡ್‌ ಇದ್ದರೂ ಗ್ರಾಹಕರಿಗೆ ನಿಯಮ ಪಾಲಿಸಲು ಸೂಚಿಸುತ್ತಿರಲಿಲ್ಲ.
ಸಮೀಕ್ಷೆ ತಂಡ: ರಾಣಿ ಚನ್ನಮ್ಮ ವಿವಿ, ಲಿಂಗ ರಾಜು ಕಾಲೇಜು,ಸಂಗೊಳ್ಳಿ ರಾಯಣ್ಣ ಕಾಲೇಜು ವಿದ್ಯಾರ್ಥಿಗಳ ತಂಡ

ಬೆಂಗಳೂರು
ಕೊರೊನಾಕ್ಕೆ ಕ್ಯಾರೇ ಎನ್ನದ ಕ್ಯಾಪಿಟಲ್‌
1 ಮತ್ತು 2ನೇ ಅಲೆಯಲ್ಲಿ ಕೊರೊನಾದಿಂದ ಗರಿಷ್ಠ ಏಟು ತಿಂದ ಬೆಂಗಳೂರಿಗೆ 3ನೇ ಅಲೆಯಲ್ಲೂ ಬುದ್ಧಿ ಬಂದಂತಿಲ್ಲ. ಮಾಸ್ಕ್ ಧಾರಣೆಯಲ್ಲಿ ರಾಜ್ಯದಲ್ಲೇ ಅತೀ ಕನಿಷ್ಠ ಅಂಕ ಪಡೆದಿರುವುದು ರಾಜಧಾನಿಯ “ಮಹತ್ಸಾಧನೆ’. ಮಾಲ್‌, ಹೊಟೇಲ್‌, ಮಾರ್ಕೆಟ್‌, ಬಸ್‌ ನಿಲ್ದಾಣ.. ಎಲ್ಲೆಡೆ ನಿಯಮ ಉಲ್ಲಂಘನೆ ಎಗ್ಗಿಲ್ಲದೆ ಸಾಗಿರುವುದು ಸರ್ವೆಯಲ್ಲಿ ಕಂಡುಬಂತು. ಇಷ್ಟಾದರೂ ಬಿಬಿಎಂಪಿ ನಿಯೋಜಿಸಿರುವ ಮಾರ್ಷಲ್‌ಗ‌ಳು, ಪೊಲೀಸರು ಕಣ್ಣಿಗೆ ಕಂಡ ಎಲ್ಲೋ ಕೆಲವರಿಗೆ ಮಾತ್ರವೇ “ದಂಡ’ದ ಬಿಸಿ ಮುಟ್ಟಿಸುತ್ತಿದ್ದರು. ಪಾರ್ಕ್‌ ಗಳಲ್ಲಿ ಬಹುತೇಕ ಮಂದಿ ಮಾಸ್ಕ್ ಇಲ್ಲದೆ ವಿಹರಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಎಲ್ಲರಿಗೂ ಅರಿವು ಮೂಡಿಸಬೇಕಿದ್ದ ಆಸ್ಪತ್ರೆಗಳಲ್ಲಿಯೇ ಮಾರ್ಗಸೂಚಿ ಉಲ್ಲಂಘನೆ ಅಧಿಕವಾಗಿತ್ತು. ಮೆಟ್ರೋದಲ್ಲಿ ಮಾತ್ರವೇ ಬಹುಪಾಲು ಮಂದಿ ಮಾಸ್ಕ್ ಧರಿಸಿ, ಮಾದರಿ ಆಗಿದ್ದರು.
ಸಮೀಕ್ಷೆ ತಂಡ: ಸುರಾನ ಕಾಲೇಜಿನ ವಿದ್ಯಾರ್ಥಿಗಳು

ಹುಬ್ಬಳ್ಳಿ
ದಂಡನಾಯಕರ ನಾಡು
“ಗಂಡು ಮೆಟ್ಟಿದ ನಾಡು’ ಹುಬ್ಬಳ್ಳಿಯಲ್ಲಿ ಜನ ನಿತ್ಯ ಮಾಸ್ಕ್ ಮುಟ್ಟುತ್ತಾರೆನ್ನು ವುದೇ ಅನುಮಾನ. ಇಲ್ಲಿ ಮಾಸ್ಕ್ ಧರಿಸದವರೇ ಬಹುಸಂಖ್ಯಾಕ‌ರು. ಇನ್ನು ಅರೆಬರೆ ಅಂದರೆ ಗಲ್ಲದವರೆಗೆ ಮಾಸ್ಕ್ ಧರಿಸುವ ಟ್ರೆಂಡ್‌ ಇಲ್ಲಿ ಬಲುಜೋರು. ಮೂಗು ಮತ್ತು ಬಾಯಿಗೆ ಮಾಸ್ಕ್ ಹಾಕಿಕೊಳ್ಳುವ ಶಿಸ್ತಿನ ಜನರು ಅಲ್ಲೋ ಇಲ್ಲೋ ಕಂಡರೆ ಪುಣ್ಯ. ವಿಸ್ಮಯವೆಂದರೆ, ಇಲ್ಲಿ ಮಾಸ್ಕ್ ಧರಿಸದವರಿಂದ ನಿತ್ಯ ಸರಾಸರಿ 50 ಸಾವಿರ ರೂ. ದಂಡ ಸಂಗ್ರಹಿ ಸಲಾಗುತ್ತಿದೆ. ಜನ ನೂರಾರು ರೂ. ದಂಡ ಕಟ್ಟಿ, ಸರಕಾರ‌ದ ಬೊಕ್ಕಸ ತುಂಬಿಸಲು ಸಿದ್ಧರಿದ್ದಾರೆಯೇ ವಿನಾ 20 ರೂಪಾಯಿಯ ಮಾಸ್ಕ್ ಧರಿಸಲು ಬಹುತೇಕರು ತಯಾರಿಲ್ಲ. ರೆಸ್ಟೋರೆಂಟ್‌ಗಳಲ್ಲಂತೂ ಮಾಸ್ಕ್ ಧರಿಸುವ ಪರಿಪಾಠ ತೀರಾ ಕನಿಷ್ಠ ಮಟ್ಟ ತಲುಪಿದೆ. ವಿಷಾದದ ಸಂಗತಿಯೆಂದರೆ ಯುವಜನ ರಿರುವ ಕಾಲೇಜಿನಂಥ ಪರಿಸರದಲ್ಲೂ ಮಾಸ್ಕ್ ಧರಿಸುವವರ ಪ್ರಮಾಣ “ಶೇಕಡಾ ಪಾಸ್‌’ ಅಂಕವನ್ನೂ ತಲುಪಿಲ್ಲ.
ಸಮೀಕ್ಷೆ ತಂಡ: ಕನಕದಾಸ ಕಾಲೇಜಿನ ಪತ್ರಿಕೋದ್ಯಮ ವಿದ್ಯಾರ್ಥಿಗಳು

ತುಮಕೂರು
ಕೊರೊನಾಕ್ಕೆ ಡೋಂಟ್‌ ಕೇರ್‌
ಅತೀ ಹೆಚ್ಚು ಸೋಂಕಿರುವ ಬೆಂಗಳೂರಿಗೆ ಅಂಟಿಕೊಂಡಂತಿರುವ ತುಮಕೂರು ಕೊರೊನಾ ಬಗ್ಗೆ ದಿವ್ಯ ನಿರ್ಲಕ್ಷ್ಯ ತೋರಿದೆ. ನಗರದ ಬಹುಪಾಲು ಮಂದಿ ಮಾಸ್ಕ್ ಇಲ್ಲದೇ ಸಂಚರಿಸುತ್ತಿದ್ದುದು ಎಲ್ಲೆಡೆ ಸಾಮಾನ್ಯವಾಗಿತ್ತು. ಸಂಪೂರ್ಣ ಮಾಸ್ಕ್ ಧರಿಸಿದವರು ಇಲ್ಲಿ ಕೇವಲ ಶೇ.38ರಷ್ಟು ಮಾತ್ರ. ಬಸ್‌ ನಿಲ್ದಾಣದಲ್ಲಿ ಪೊಲೀಸರ ಕಣ್ಮುಂದೆಯೇ ಜನ ಮಾಸ್ಕ್ ಇಲ್ಲದೆ ಬೇಜವಾಬ್ದಾರಿತನದಿಂದ ಓಡಾಡುತ್ತಿದ್ದರು. ಹೊಟೇಲ್‌ಗ‌ಳಲ್ಲಿ, ಮಾರ್ಕೆಟ್‌ಗಳಲ್ಲಿನ ಸ್ಥಿತಿಯಂತೂ ಆ ದೇವರಿಗೆ ಪ್ರೀತಿ. ಆರೋಗ್ಯ ಕುರಿತು ಜಾಗೃತಿ ಇದ್ದ ಆಸ್ಪತ್ರೆ, ಸೋಂಕಿನ ಬಗ್ಗೆ ಅರಿವಿದ್ದ ಕೆಲವು ಕಾಲೇಜುಗಳಲ್ಲಷ್ಟೇ ಮಾರ್ಗಸೂಚಿ ಪಾಲನೆ ಆಗುತ್ತಿದ್ದುದು ಕಂಡುಬಂತು. ಸಾಮಾಜಿಕ ಅಂತರಕ್ಕೆ ಇಲ್ಲಿ ಕಿಮ್ಮತ್ತೇ ಇರಲಿಲ್ಲ. ಇನ್ನು ಎಲ್ಲೆಂದರಲ್ಲಿ ಉಗುಳುವ ಹಲವರ ಪ್ರವೃತ್ತಿಯೂ ಸೋಂಕು ಪ್ರಸರಣಕ್ಕೆ ಎಡೆಮಾಡಿಕೊಟ್ಟಂತಿತ್ತು.
ಸಮೀಕ್ಷೆ ತಂಡ: ತುಮಕೂರಿನ ಸಿದ್ದಾರ್ಥ ಮಾಧ್ಯಮ ಕೇಂದ್ರದ ವಿದ್ಯಾರ್ಥಿಗಳು

ಮೈಸೂರು
ಮಾಸ್ಕ್ ಧಾರಣೆ ಇಲ್ಲಿ ನಪಾಸು
“ವೈಚಾರಿಕ ನೆಲ’ ಮೈಸೂರು ಮಾಸ್ಕ್ ಧರಿಸುವ ವಿಚಾರಹೀನವಾಗಿ ನಡೆದು ಕೊಂಡಿದೆ. ಮಾಸ್ಕ್ ಧಾರಣೆಯ ಶೇಕಡಾ ಅಂಕ ಇಲ್ಲಿ “ನಪಾಸು’. ಮಾಸ್ಕ್ ಧರಿಸಿದವರಿಗಿಂತ ಧರಿಸದವರ ಸಂಖ್ಯೆಯೇ ಶೇ.10 ಅಧಿಕ! ಹಾಗೆ ನೋಡಿದರೆ, ಪ್ರವಾಸಿಗರಿಂದ ಸದಾ ತುಂಬಿ ತುಳುಕುವ ಮಹಾನಗರಿಯಲ್ಲಿ ಪಾಲಿಕೆ ಆಡಳಿತ ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೊಳಿಸಬೇಕಿತ್ತು. ಅಂಥ ನಿಯಮಗಳು ಕಾಗದ- ಫ‌ಲಕಗಳಲ್ಲಿ ಇವೆಯಾದರೂ ಎಲ್ಲೂ ಪಾಲನೆ ಆಗುತ್ತಿಲ್ಲ ಎನ್ನುವುದೇ ವಿಷಾದದ ಸಂಗತಿ. ಮಾಸ್ಕ್ ಧರಿಸದೆ ಇದ್ದವರಿಗೆ ದಂಡ ವಿಧಿಸುವ ಕನಿಷ್ಠ ಕ್ರಮವೂ ಇಲ್ಲಿ ಕಟ್ಟುನಿಟ್ಟಾಗಿ ಜಾರಿಗೊಂಡಿಲ್ಲ. ಪರಊರುಗಳಿಂದ ಬರುವ ಪ್ರವಾಸಿಗರು ಸಾಮಾಜಿಕ ಅಂತರ ಕಾಪಾಡಿಕೊಳ್ಳದೆ ಅಶಿಸ್ತು ತೋರುತ್ತಿದ್ದರು. ಬಹುತೇಕ ಸರಕಾರಿ ಸಿಬಂದಿ, ಪೊಲೀಸರು ಕೂಡ ಕೊರೊನಾ ಮಾರ್ಗಸೂಚಿ ಪಾಲನೆಗೆ ಮನಸ್ಸು ಮಾಡುತ್ತಿಲ್ಲ.
ಸಮೀಕ್ಷೆ ತಂಡ: ಮಹಾರಾಜ ಕಾಲೇಜಿನ ಪತ್ರಿಕೋದ್ಯಮ ವಿದ್ಯಾರ್ಥಿಗಳು

ವಿಜಯಪುರ
ಕೊರೊನಾ ಜಾಗೃತಿ ಜಸ್ಟ್‌ಪಾಸ್‌
ಐತಿಹಾಸಿಕ ಸ್ಮಾರಕಗಳ ನಗರ ವಿಜಯಪುರ ಕೊರೊನಾವನ್ನೂ ಗತಕಾಲದಲ್ಲೇ ನಡೆದುಹೋದ ಸಂಗತಿ ಎಂಬಂತೆ ಮೈಮರೆತಿದೆ. ಇಲ್ಲಿ ಸಂಪೂರ್ಣ ಮಾಸ್ಕ್ ಧರಿಸುವಿಕೆ ಪ್ರಮಾಣ ಜಸ್ಟ್‌ ಪಾಸ್‌. ಮೂಗು ಮುಚ್ಚುವಂತೆ ಮಾಸ್ಕ್ ಧರಿಸಬೇಕೆನ್ನುವ ಪರಿವೆ ಇಲ್ಲದೆ ಹಲವರು ರಾಜಾರೋಷವಾಗಿ ಓಡಾಡುತ್ತಿದ್ದುದ್ದು ಗಮನಕ್ಕೆ ಬಂತು. ಕೋವಿಡ್‌ ನಿಯಮ ಉಲ್ಲಂಘಿಸಿದವರಿಗೆ ದಂಡ ವಿಧಿಸುವ ಪದ್ಧತಿ ಎಲ್ಲೂ ಗೋಚರವಾಗಲಿಲ್ಲ. ಪೊಲೀಸರು, ಸ್ಥಳೀಯ ಸಂಸ್ಥೆ ಸಿಬಂದಿ ಕೋವಿಡ್‌ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಸಾರ್ವಜನಿಕರಿಗೆ ಸೂಚಿಸುತ್ತಲೂ ಇರಲಿಲ್ಲ. ಆಘಾತಕಾರಿ ಸಂಗತಿಯೆಂದರೆ, ಹೀಗೆ ಸೂಚನೆ ನೀಡಬೇಕಿದ್ದ ಸರಕಾರಿ ಸಿಬಂದಿಯೇ ಅರೆಬರೆ ಮಾಸ್ಕ್ ಧರಿಸಿದ್ದು ಕಂಡುಬಂತು. ಕಾಲೇಜುಗಳಲ್ಲಿ ಮಾತ್ರವೇ ಕೋವಿಡ್‌ ಮಾರ್ಗಸೂಚಿ ಅಲ್ಪಸ್ವಲ್ಪ ಪಾಲನೆ ಆದಂತಿತ್ತು. ಪ್ರವಾಸಿ ತಾಣಗಳಲ್ಲಿ ಸಾಮಾಜಿಕ ಅಂತರ ಪಾಲನೆ ದೂರದ ಮಾತಾಗಿತ್ತು.
ಸಮೀಕ್ಷೆ ತಂಡ: ಎಸ್‌ಬಿ ಕಲಾ, ಕೆಸಿಪಿ ವಿಜ್ಞಾನ ಕಾಲೇಜಿನ ಪದವಿ ವಿದ್ಯಾರ್ಥಿಗಳು

ಮಂಗಳೂರು
ನಿಯಮ ಉಲ್ಲಂಘನೆ ರಾಜಾರೋಷ
ಮಂಗಳೂರು ಮಹಾನಗರದ ಅರ್ಧಕ್ಕಿಂತಲೂ ಹೆಚ್ಚು ಜನ ಮಾಸ್ಕ್ಧಾರಣೆ ಬಗ್ಗೆ ಅಸಡ್ಡೆ ತೋರಿದ ಸಂಗತಿ ಸಮೀಕ್ಷೆಯಲ್ಲಿ ಬಹಿರಂಗವಾಗಿದೆ. ಸೋಂಕಿಗೆ ಹೆಚ್ಚು ಆಸ್ಪದವಿರುವ ಜಾಗಗಳಾದ ಮಾರುಕಟ್ಟೆ, ರೈಲ್ವೇ ನಿಲ್ದಾಣ, ಬಸ್‌ ನಿಲ್ದಾಣಗಳಲ್ಲಿ ಕೋವಿಡ್‌ ನಿಯಮಗಳು ರಾಜಾರೋಷವಾಗಿ ಉಲ್ಲಂಘನೆ ಆಗುತ್ತಿದ್ದವು. ಸಾಮಾಜಿಕ ಅಂತರವನ್ನು ಎಲ್ಲರೂ ಮರೆತಂತೆ ಇದ್ದರು. ಸ್ಥಳೀಯ ಸಂಸ್ಥೆಗಳ ಸಿಬಂದಿಯ ಕಣ್ಮುಂದೆಯೇ ಮಾಸ್ಕ್ ಧರಿಸದವರು ನಿರ್ಭೀತಿಯಿಂದ ಓಡಾಡುತ್ತಿದ್ದುದು ಸಾಮಾನ್ಯವಾಗಿತ್ತು. ಆರೋಗ್ಯದ ಬಗ್ಗೆ ಕಳಕಳಿ ಇದ್ದ ಆಸ್ಪತ್ರೆ ಆವರಣಗಳಲ್ಲಿ ಶೇ.86ರಷ್ಟು ಮಂದಿ ಮಾಸ್ಕ್ ಧರಿಸಿ, ಮಾದರಿ ಆಗಿದ್ದರು. ಮಾಸ್ಕ್ ಧರಿಸದವರಿಗೆ ದಂಡ ವಿಧಿಸುವ ಪದ್ಧತಿ ಎಲ್ಲೂ ಕಣ್ಣಿಗೆ ಬಿದ್ದಿಲ್ಲ.
ಸಮೀಕ್ಷೆ ತಂಡ:ಹಂಪನಕಟ್ಟೆ ವಿವಿ ಕಾಲೇಜಿನ ವಿದ್ಯಾರ್ಥಿಗಳು.

ಉಡುಪಿ
ಮಾಸ್ಕ್ ಗೆ ಅಲ್ಪಸ್ವಲ್ಪ ಮರ್ಯಾದೆ ಇತ್ತು!
“ಬುದ್ಧಿವಂತರ ಜಿಲ್ಲೆ’ ಎನ್ನಿಸಿಕೊಂಡ ಉಡುಪಿಯಲ್ಲಿ ಮಾಸ್ಕ್ ಗೆ ಅಲ್ಪಸ್ವಲ್ಪ ಮರ್ಯಾದೆ ಸಿಕ್ಕಿದ್ದು ಸಮೀಕ್ಷೆಯಿಂದ ಗೋಚರವಾಗಿದೆ. ಆದರೆ ಸಾಮಾಜಿಕ ಅಂತರಕ್ಕೆ ಇಲ್ಲಿ ಬೆಲೆಯೇ ಇರಲಿಲ್ಲ. ಪ್ರವಾಸಿಗರು, ಜನರು ಹೆಚ್ಚು ಸಂಧಿಸುವ ರೈಲ್ವೇ ನಿಲ್ದಾಣ, ಬಸ್‌ ನಿಲ್ದಾಣಗಳಲ್ಲಿ ಬಹುತೇಕ ಜನ ಮಾಸ್ಕ್ ಧರಿಸಿ ಜವಾಬ್ದಾರಿ ಮೆರೆದಿದ್ದರು. ಆದರೆ ಅರೆಬರೆ ಮಾಸ್ಕ್ ಧರಿಸಿದವರೂ ಇಲ್ಲಿ ಪೈಪೋಟಿಗಿಳಿದಿದ್ದರು. ಆಸ್ಪತ್ರೆಗಳಲ್ಲಿ ಶೇ.75 ಜನ ಮಾಸ್ಕ್ ಧರಿಸಿ ಶಿಸ್ತು ಪಾಲಿಸಿದ್ದರು. ಮಾರುಕಟ್ಟೆ ತಾಣಗಳಲ್ಲಿ ಶೇ.30 ಅರೆಬರೆ, ಶೇ.30 ಮಾಸ್ಕ್ ಇಲ್ಲದೆ ಜನ ಕಂಡುಬಂದರೂ ಅಂಥವರಿಗೆ ದಂಡ ವಿಧಿಸುವ ಗೋಜಿಗೆ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಹೋಗದೇ ಇದ್ದುದು ಆಡಳಿತದ ನಿರ್ಲಕ್ಷ್ಯತನವನ್ನು ಎತ್ತಿ ತೋರಿಸುತ್ತಿತ್ತು. ಹಿರಿಯರೇ ಅಧಿಕವಿದ್ದ ವಿಹಾರದ ತಾಣವಾದ ಪಾರ್ಕ್‌ನಲ್ಲಿ ಶೇ.18ರಷ್ಟು ಮಾತ್ರವೇ ಜನ ಪರಿಪೂರ್ಣ ಮಾಸ್ಕ್ ಧರಿಸಿದ್ದರು.
ಸಮೀಕ್ಷೆ ತಂಡ: ಉಡುಪಿಯ ಎಂಜಿಎಂ ಕಾಲೇಜಿನ ವಿದ್ಯಾರ್ಥಿಗಳು.

Advertisement

Udayavani is now on Telegram. Click here to join our channel and stay updated with the latest news.

Next