ಬೆಂಗಳೂರು: ನಗರದಲ್ಲಿ ಅಕ್ಟೋಬರ್ ಅಂತ್ಯದಲ್ಲಿ 385.7 ಮಿ.ಮೀ ದಾಖಲೆ ಮಳೆಯಾಗುವ ಮೂಲಕ ನಗರದಲ್ಲಿ ಸತತ ಮೂರು (ಆಗಸ್ಟ್, ಸೆಪ್ಟೆಂಬರ್ ಮತ್ತು ಅಕ್ಟೋಬರ್) ತಿಂಗಳು ದಾಖಲೆ ಮಳೆಯಾಗಿದೆ.
ಆಗಸ್ಟ್‌ನಲ್ಲಿ 351.8 ಮಿ.ಮೀ, ಸೆಪ್ಟೆಂಬರ್‌ನಲ್ಲಿ 513.8 ಹಾಗೂ ಅಕ್ಟೋಬರ್‌ನಲ್ಲಿ 385.7 ಮಿ.ಮೀ ಸೇರಿ ಕೇವಲ 90 ದಿನಗಳಲ್ಲಿ 1,251 ಮಿ.ಮೀ. ಮಳೆಯಾಗಿದೆ. ಇದು ಕಳೆದ ಹಲವು ದಶಕಗಳ ದಾಖಲೆ ಸರಿಗಟ್ಟಿದೆ.
ಮುಂಗಾರಿನ ಮೊದಲ ಮೂರು ತಿಂಗಳಲ್ಲಿ ಸುರಿಯುವ ಮಳೆಯನ್ನು ಬೆಂಗಳೂರು ಕೇವಲ ಆಗಸ್ಟ್ ಒಂದೇ ತಿಂಗಳಲ್ಲಿ ಕಂಡಿದೆ. ಈ ಮೂಲಕ ಎರಡು ದಶಕಗಳ ದಾಖಲೆಯನ್ನು ಸರಿಗಟ್ಟಿತು. 1998ರ ಆಗಸ್ಟ್ ತಿಂಗಳಲ್ಲಿ 387.1 ಮಿ.ಮೀ. ಮಳೆಯಾಗಿದ್ದು, ಇದು ಆ ತಿಂಗಳಲ್ಲಿನ ಸಾರ್ವಕಾಲಿಕ ದಾಖಲೆ ಮಳೆಯಾಗಿದೆ.
ಅದೇ ರೀತಿ ಸೆಪ್ಟೆಂಬರ್ ಅಂತ್ಯಕ್ಕೆ ನಗರದಲ್ಲಿ 513.8 ಮಿ.ಮೀ ಮಳೆಯಾಗಿದ್ದು, ಇದು ಮೂರು ದಶಕಗಳಲ್ಲೇ ಬಿದ್ದ ಅತ್ಯಧಿಕ ಮಳೆ ದಾಖಲಾಗಿದೆ. 1986ರಲ್ಲಿ ಸೆಪ್ಟೆಂಬರ್‌ನಲ್ಲಿ ಬಿದ್ದ 516.6 ಮಿ.ಮೀ. ಮಳೆ ಇದುವರೆಗಿನ ಸಾರ್ವಕಾಲಿಕ ದಾಖಲೆ. ಇನ್ನು ಅಕ್ಟೋಬರ್ 17ರವರೆಗೆ ನಗರದಲ್ಲಿ 385.7 ಮಿ.ಮೀ ಮಳೆಯಾಗಿದೆ. ಇದು ಕಳೆದ ಒಂದು ದಶಕದಲ್ಲಿ ಸುರಿದ ಅತ್ಯಧಿಕ ಮಳೆಯಾಗಿದೆ.
2005ರ ಅಕ್ಟೋಬರ್‌ನಲ್ಲಿ 605.6 ಮಿ.ಮೀ ಮಳೆಯಾಗಿದ್ದು, ಇದು ಈವರೆಗಿನ ಸಾರ್ವಕಾಲಿಕ ದಾಖಲೆಯಾಗಿದೆ ಎಂದು ಹವಾಮಾನ ಇಲಾಖೆ ಬೆಂಗಳೂರು ಪ್ರಾದೇಶಿಕ ಕಚೇರಿ ತಿಳಿಸಿದೆ. ಈ ಮಧ್ಯೆ ಜೂನ್ 1ರಿಂದ ಈವರೆಗೆ ನಗರದಲ್ಲಿ 1,335.4 ಮಿ.ಮೀ ಮಳೆಯಾಗಿದೆ. ಈ ಪೈಕಿ ಆಗಸ್ಟ್-ಅಕ್ಟೋಬರ್ ಮಧ್ಯೆಯೇ 1,251.3 ಮಿ.ಮೀ ಮಳೆಯಾಗಿದೆ. ನಗರದ ವಾರ್ಷಿಕ ಮಳೆಯೇ 980 ಮಿ.ಮೀ. ಅಂದರೆ, 365 ದಿನಗಳ ಮಳೆ ಕೇವಲ 90 ದಿನಗಳಲ್ಲಿ ಬಿದ್ದಿದೆ!
ತಿಂಗಳು ವಾಡಿಕೆ ಮಳೆ ಬಿದ್ದ ಮಳೆ
-ಆಗಸ್ಟ್ 141.6 351.8
-ಸೆಪ್ಟೆಂಬರ್ 211.5 513.8
-ಅಕ್ಟೋಬರ್ 102 385.7
ಜೂನ್-ಅಕ್ಟೋಬರ್ ವಾಡಿಕೆ ಮಳೆ 654
-ಬಿದ್ದ ಮಳೆ 1,335.4 ಮಿ.ಮೀ.
ಆಗಸ್ಟ್-ಅಕ್ಟೋಬರ್ ವಾಡಿಕೆ ಮಳೆ 455.1
-ಬಿದ್ದ ಮಳೆ 1,251.3 ಮಿ.ಮೀ