ಬೆಂಗಳೂರು: ನಮ್ಮ ಮೆಟ್ರೋ ಕಾಮಗಾರಿಯ ಹಿನ್ನೆಲೆಯಲ್ಲಿ ಬನ್ನೇರುಘಟ್ಟ ಮುಖ್ಯ ರಸ್ತೆಯ ಉತ್ತರ ದಿಕ್ಕಿನಲ್ಲಿರುವ ಮೈಕೋ ಸಿಗ್ನಲಿಂಗ್‌ನಿಂದ ಆನೆಪಾಳ್ಯ ಜಂಕ್ಷನ್‌ನವರೆಗೆ ಏಪ್ರಿಲ್ 1ರಿಂದ ಮುಂದಿನ ವರ್ಷದ ಏಪ್ರಿಲ್ ಒಂದರವರೆಗೆ ವಾಹನ ಸಂಚಾರವನ್ನು ನಿರ್ಬಂಧಿಸಲಾಗುತ್ತಿದೆ ಎಂದು ಬೆಂಗಳೂರು ಮೆಟ್ರೋ ನಿಗಮ ಹೇಳಿದೆ.
ಕಾಳೇನ ಅಗ್ರಹಾರ-ನಾಗವಾರ ಮಧ್ಯೆ ಸಾಗುತ್ತಿರುವ ನಮ್ಮ ಮೆಟ್ರೋದ ಎರಡನೇ ಹಂತದ ರೀಚ್-6ರ ಕಾಮಗಾರಿ ಭರದಿಂದ ಸಾಗುತ್ತಿದ್ದು ಸಂಚಾರ ದಟ್ಟಣೆಯ ಬನ್ನೇರುಘಟ್ಟ ರಸ್ತೆಯ ಮೂಲಕ ಕಾಮಗಾರಿ ವೇಗವಾಗಿ ಸಾಗುತ್ತಿದೆ.
ಈ ಯೋಜನೆಯ ಲಕ್ಕಸಂದ್ರ ಸುರಂಗ ಮೆಟ್ರೋ ನಿಲ್ದಾಣದ ಕಾಮಗಾರಿ ಹಿನ್ನೆಲೆಯಲ್ಲಿ ರಸ್ತೆ ಸಂಚಾರವನ್ನು ನಿರ್ಬಂಧಿಸುವ ಅನಿವಾರ್ಯತೆ ಸೃಷ್ಟಿಯಾಗಿದೆ. ಈ ಹಿನ್ನೆಲೆಯಲ್ಲಿ ಬನ್ನೇರುಘಟ್ಟ ಮುಖ್ಯರಸ್ತೆಯ ಉತ್ತರ ದಿಕ್ಕಿನ ಮಾರ್ಗವನ್ನು ಮತ್ತು ಮೈಕೋ ಸಿಗ್ನಲ್‌ನಿಂದ ಆನೆಪಾಳ್ಯ ಜಂಕ್ಷನ್‌ವರೆಗೆ ಸಂಚಾರವನ್ನು ಒಂದು ವರ್ಷ ಬಂದ್ ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ವಾಹನ ಸವಾರರ ಅನುಕೂಲಕ್ಕಾಗಿ ಪರ್ಯಾಯ ಮಾರ್ಗಗಳನ್ನು ಮೆಟ್ರೋ ನಿಗಮ ಸೂಚಿಸಿದೆ.
ಬನ್ನೇರುಘಟ್ಟ ಮುಖ್ಯರಸ್ತೆಯಲ್ಲಿ ಡೈರಿ ಸರ್ಕಲ್ ಕಡೆಯಿಂದ ಚಲಿಸುವ ವಾಹನಗಳು, ಆನೆಪಾಳ್ಯ ಜಂಕ್ಷನ್ ಕಡೆಗೆ ಚಲಿಸಬೇಕಾದ ವಾಹನಗಳು ಮೈಕೋ ಸಿಗ್ನಲ್‌ನಲ್ಲಿ ಬಲಕ್ಕೆ ತಿರುಗಿ ಬಾಷ್ ಲಿಂಕ್ ರಸ್ತೆಯ ಮೂಲಕ ಆಡುಗೋಡಿ ಸಿಗ್ನಲ್ ತಲುಪಿ ಎಡಕ್ಕೆ ತಿರುಗಿ ಚಲಿಸಬೇಕು. ಡೈರಿ ಸರ್ಕಲ್‌ನಿಂದ ಶಾಂತಿನಗರ ಕಡೆಗೆ ಚಲಿಸುವ ವಾಹನಗಳು ವಿಲ್ಸನ್ ಗಾರ್ಡನ್ 7ನೇ ಮುಖ್ಯ ರಸ್ತೆಯಲ್ಲಿ ಎಡಕ್ಕೆ ತಿರುವು ತೆಗೆದುಕೊಳ್ಳಬೇಕು. ಆನೆಪಾಳ್ಯ ಜಂಕ್ಷನ್‌ನಿಂದ ಡೈರಿ ಸರ್ಕಲ್ ಕಡೆಗೆ ಚಲಿಸುವ ವಾಹನ ಸಂಚಾರದಲ್ಲಿ ಯಾವುದೆ ವ್ಯತ್ಯಯವಿರುವುದಿಲ್ಲ ಎಂದು ಸೂಚನೆ ನೀಡಲಾಗಿದೆ.
ಮುಂದಿನ ವರ್ಷಕ್ಕೆ ಸಂಚಾರ ಮುಕ್ತವಾಗಲಿದೆ. ಕಾಳೇನ ಅಗ್ರಹಾರ-ನಾಗವಾರ ಮಾರ್ಗ ಸುಮಾರು 22 ಕಿ.ಮೀ. ಉದ್ದದ ಕಾಳೇನ ಅಗ್ರಹಾರ – ನಾಗವಾರ ಮಾರ್ಗದಲ್ಲಿ 6 ಎಲಿವೇಟೆಡ್ ಮತ್ತು ಹನ್ನೆರಡು ಭೂಗತ ನಿಲ್ದಾಣಗಳು ಬರುತ್ತವೆ. 2025ರಲ್ಲಿ ಈ ಮಾರ್ಗವನ್ನು ವಾಣಿಜ್ಯ ಸಂಚಾರಕ್ಕೆ ಮುಕ್ತಗೊಳಿಸಬೇಕು ಎಂಬುದು ರಾಜ್ಯ ಸರ್ಕಾರದ ಇರಾದೆ.
ಈ ಮಾರ್ಗದಲ್ಲಿ ಸುರಂಗ ಮಾರ್ಗವೇ ಅತಿ ಹೆಚ್ಚಿದ್ದು 13.76 ಕಿ.ಮೀ. ಮಾರ್ಗ ಭೂಗತವಾಗಿ ರಲಿದೆ. ಈ ಪೈಕಿ ಸುರಂಗ ಕೊರೆಯುವ ಕಾಮಗಾರಿ ಬಹುತೇಕ ಪೂರ್ಣಗೊಳ್ಳುತ್ತ ಬಂದಿದೆ. ಡೇರಿ ಸರ್ಕಲ್‌ನಿಂದ ರಾಷ್ಟ್ರೀಯ ಮಿಲಿಟರಿ ಸ್ಕೂಲ್‌ನವರೆಗಿನ ಸಿವಿಲ್ ಕಾಮಗಾರಿ ಶೇ.87.43, ರಾಷ್ಟ್ರೀಯ ಮಿಲಿಟರಿ ಶಾಲೆಯಿಂದ ಶಿವಾಜಿ ನಗರ ಶೇ.90.36, ಶಿವಾಜಿ ನಗರದಿಂದ ಟ್ಯಾನರಿ ರೋಡ್ ಶೇ.88.15, ಟ್ಯಾನರಿ ರಸ್ತೆಯಿಂದ ನಾಗವಾರ ಶೇ.70.12 ಕಾಮಗಾರಿ ಪೂರ್ಣಗೊಂಡಿದೆ. ಉಳಿದಂತೆ ಹಳಿ ಹಾಕುವ ಕಾಮಗಾರಿ ಶೇ.75 ಪೂರ್ಣಗೊಂಡಿದೆ.