ಬೆಂಗಳೂರು: ನಗರದಲ್ಲಿ “ನಮ್ಮ ಮೆಟ್ರೋ’ ರೈಲು ಸಂಚಾರ ಸೇವೆ ಅವಧಿಯನ್ನು ನಿತ್ಯ ರಾತ್ರಿ 10ರವರೆಗೆ ವಿಸ್ತರಿಸಿ ಬೆಂಗಳೂರು ಮೆಟ್ರೋ ರೈಲು ನಿಗಮ ಶುಕ್ರವಾರ ಆದೇಶ ಹೊರಡಿಸಿದೆ. ಶನಿವಾರದಿಂದಲೇ ಪರಿಷ್ಕೃತ ವೇಳಾಪಟ್ಟಿ ಅನ್ವಯ ಆಗಲಿದೆ.
ನಿಗಮದ ವೇಳಾಪಟ್ಟಿಯಂತೆ ಶನಿವಾರ (ಸೆ. 18)ದಿಂದ ಎಲ್ಲ ನಾಲ್ಕೂ ಟರ್ಮಿನಲ್‌ಗಳು ಅಂದರೆ ಬೈಯಪ್ಪನಹಳ್ಳಿ, ಕೆಂಗೇರಿ, ನಾಗಸಂದ್ರ ಮತ್ತು ರೇಷ್ಮೆ ಸಂಸ್ಥೆಯಿಂದ ಕೊನೆಯ ರೈಲು ರಾತ್ರಿ 9.30ಕ್ಕೆ ಹೊರಡಲಿದೆ. ಅದೇ ರೀತಿ, ಬೆಳಗಿನಜಾವ 6 ಗಂಟೆಯಿಂದಲೇ ಈ ಟರ್ಮಿನಲ್ ಸ್ಟೇಷನ್‌ಗಳಿಂದ ಮೊದಲ ರೈಲು ಹೊರಡಲಿದೆ. ಈ ಮೊದಲು 8 ಗಂಟೆಗೆ ಕೊನೆಯ ರೈಲು ಹೊರಡುತ್ತಿತ್ತು. ಇನ್ನು ಬೆಳಗ್ಗೆ 7ರಿಂದ ಸೇವೆ ಆರಂಭಗೊಳ್ಳುತ್ತಿತ್ತು.
ಎರಡೂ ಅವಧಿ (ಬೆಳಗ್ಗೆ ಮತ್ತು ರಾತ್ರಿ) ಸೇರಿ ಸುಮಾರು ಮೂರು ತಾಸು ಸೇವಾವಧಿ ವಿಸ್ತರಣೆ ಮಾಡಿದಂತಾಗಿದೆ. ಕೋವಿಡ್ ಹಿನ್ನೆಲೆಯಲ್ಲಿ ಮೆಟ್ರೋ ರೈಲು ಸಂಚಾರ ಸಮಯವನ್ನು ಕಡಿತಗೊಳಿಸಲಾಗಿತ್ತು. ಜನಜೀವನ ಸಹಜಸ್ಥಿತಿಗೆ ಬೆನ್ನಲ್ಲೇ ಬಿಎಂಟಿಸಿ ಸೇರಿದಂತೆ ವಿವಿಧ ಸಾರಿಗೆ ವ್ಯವಸ್ಥೆಗಳು ಸಹಜ ಸ್ಥಿತಿಗೆ ಮರಳಿರಲಿಲ್ಲ. ಈ ಬಗ್ಗೆ ಜನರಲ್ಲಿ ಬೇಸರ ಕೂಡ ಇತ್ತು.
ಕಡಿತಗೊಳಿಸಿರುವುದರಿಂದ ಸಾರ್ವಜನಿಕರಿಗೆ ತೊಂದರೆ ಆಗಿತ್ತು. ಈಗ ವಿಸ್ತರಣೆಯಿಂದ ತುಸು ಅನುಕೂಲ ಆಗಿದೆ.
ಇದನ್ನೂ ಓದಿ :ಶಾರ್ಟ್ಸ್ ಹಾಕಿಕೊಂಡು ಬಂದ ವಿದ್ಯಾರ್ಥಿನಿ! ಕರ್ಟನ್ ಸುತ್ತಿಕೊಂಡು ಪರೀಕ್ಷೆ ಬರೆದಳು