ಬೆಂಗಳೂರು: “ನಮ್ಮ ಮೆಟ್ರೋ’ ಸುರಂಗ ಮಾರ್ಗದುದ್ದಕ್ಕೂ ಇನ್ಮುಂದೆ ಯಾವುದೇ ಅಭಿವೃದ್ದಿ ಕಾಮಗಾರಿ ಕೈಗೆತ್ತಿಕೊಳ್ಳಲು ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್)ದಿಂದ ನಿರಾಕ್ಷೇಪಣಾ ಪತ್ರ ಪಡೆಯುವುದು ಕಡ್ಡಾಯ. ಯಾಕೆಂದರೆ, ಈ ಪ್ರದೇಶ ಈಗ ನಿಗಮದ “ಪ್ರಭಾವ ವಲಯ’ ಎಂದು ಘೋಷಿಸಲ್ಪಟ್ಟಿದೆ. ನಿಯಮ ಉಲ್ಲಂ ಸಿ ಯಾವುದಾದರೂ ಕಾಮ ಗಾರಿ ಕೈಗೆತ್ತಿಕೊಂಡರೆ ಶಿಸ್ತು ಕ್ರಮ ತೆಗೆದುಕೊಳ್ಳಲು ಅವಕಾಶ ಇದೆ.
ಸರ್ಕಾರ ಈಚೆಗೆ ಇದಕ್ಕೆ ಸಂಬಂಧಿಸಿದಂತೆ ಅಧಿಕೃತ ಅಧಿಸೂಚನೆ ಕೂಡ ಹೊರಡಿಸಿದೆ. ಅದರಂತೆ ಸುರಂಗ ಮಾರ್ಗ ಹಾಗೂ ನಿಲ್ದಾಣ ಮತ್ತು ರ್‍ಯಾಂಪ್‌ಗ್ಳ ಹೊರ ಅಂಚಿನಿಂದ ಎರಡೂ ಬದಿಗಳ 11 ಮೀ. ಅಗಲ ಪ್ರದೇಶದಲ್ಲಿ ಕಟ್ಟಡ ನಿರ್ಮಾಣ, ಕಟ್ಟಡ ನಕ್ಷೆ ಅಥವಾ ಕೊಳವೆಬಾವಿ ಕೊರೆಯಲು ಅನುಮತಿಗೆ ಬಿಬಿಎಂಪಿ ಮತ್ತು ಜಲಮಂಡಳಿ ಜತೆಗೆ ಬಿಎಂಆರ್‌ಸಿಎಲ್‌ನಿಂದ ನಿರಾಕ್ಷೇಪಣಾ ಪತ್ರ ಪಡೆಯುವುದು ಅತ್ಯವಶ್ಯಕ.
ಉದ್ದೇಶಿತ ಪ್ರದೇಶವನ್ನು “ಪ್ರಭಾವ ವಲಯ’ವಾಗಿ ಘೋಷಿಸುವಂತೆ ಬಿಎಂಆರ್ ಸಿಎಲ್‌ನ ಹಲವು ದಿನಗಳ ಬೇಡಿಕೆ ಆಗಿತ್ತು. ಸುರಕ್ಷತಾ ದೃಷ್ಟಿಯಿಂದ ಇದು ಅಗತ್ಯವೂ ಆಗಿತ್ತು. ಉದಾಹರಣೆಗೆ ನಿಲ್ದಾಣದ ಹತ್ತಿರದಲ್ಲಿ ಯಾರಾದರೂ ಕೊಳವೆಬಾವಿ ಕೊರೆದರೆ, ಅದು ಸುರಂಗ ಮಾರ್ಗಕ್ಕೆ ಧಕ್ಕೆ ಉಂಟುಮಾಡ ಬಹುದು ಎಂಬ ಆತಂಕ ಇತ್ತು. ಈ ಹಿನ್ನೆಲೆಯಲ್ಲಿ ಸುರಂಗ ಮಾರ್ಗ ಮತ್ತು ಅಲ್ಲಿ ಬರುವ ನಿಲ್ದಾಣ ಮತ್ತು ರ್‍ಯಾಂಪ್‌ಗ್ಳ ಹೊರ ಅಂಚಿನಿಂದ ಸುಮಾರು 25-30 ಮೀ. ಸುತ್ತಲಿನ ಪ್ರದೇಶವನ್ನು “ಪ್ರಭಾವ ವಲಯ’ವಾಗಿ ಘೋಷಿಸಲು ಮನವಿ ಮಾಡಿತ್ತು.
ಆದರೆ, ಅಧಿಕೃತವಾಗಿ ಘೋಷಣೆ ಆಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಮೊದಲ ಹಂತದಲ್ಲೂ ಇರುವ ಸುಮಾರು 8.8 ಕಿ.ಮೀ. ಉದ್ದದ ಸುರಂಗ ಮಾರ್ಗದಲ್ಲಿ ಯಾವುದೇ ಕಾಮಗಾರಿ ಕೈಗೆತ್ತಿಕೊಳ್ಳುವ ಮುನ್ನ ತಮ್ಮ ಗಮನಕ್ಕೆ ತಂದು ನಂತರ ನಿರಾಕ್ಷೇಪಣಾ ಪತ್ರ ನೀಡು ವಂತೆ ಬಿಎಂಆರ್‌ಸಿಎಲ್, ಬಿಬಿಎಂಪಿಗೆ ಮನವಿ ಮಾಡಿತ್ತು.
ಅಧಿಸೂಚನೆ ಅಗತ್ಯ ಏನು?: ಈ ಮೊದಲು ಮೌಖೀಕವಾಗಿ ಸುರಂಗ ಮಾರ್ಗದುದ್ದಕ್ಕೂ ಯಾವುದೇ ಚಟುವಟಿಕೆ ನಡೆಸದಂತೆ ಸೂಚಿಸಲಾಗುತ್ತಿತ್ತು. ಈಗ ಅದಕ್ಕೊಂದು ಕಾನೂನಿನ ಮಾನ್ಯತೆ ಸಿಕ್ಕಂತಾಗಿದೆ. ಹಾಗಾಗಿ, ಯಾರಿಗೂ ಸೂಚನೆಯನ್ನು ನಿರ್ಲಕ್ಷಿಸಲು ಅಥವಾ ಆಕ್ಷೇಪಿಸಲು ಅವಕಾಶ ಇರುವುದಿಲ್ಲ. ಸರ್ಕಾರಿ ಸಂಸ್ಥೆ ಅಥವಾ ಇಲಾಖೆಗಳು ಕೂಡ ಈ ಪ್ರಭಾವ ವಲಯದಲ್ಲಿ ಯಾವುದೇ ಚಟುವಟಿಕೆ ನಡೆಸುವ ಮುನ್ನ ಅನುಮತಿ ಪಡೆಯ ಬೇಕಾಗುತ್ತದೆ. ಬಿಬಿಎಂಪಿ, ಬಿಡಿಎ, ಜಲಮಂಡಳಿಗೂ ಇದು ಅನ್ವಯ ಆಗಲಿದೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.