Advertisement

ಪೀಣ್ಯ ಡಿಪೋ ಬಳಿ ಮೆಟ್ರೋ ನಿಲ್ದಾಣ?

08:40 AM Aug 01, 2020 | Suhan S |

ಬೆಂಗಳೂರು: ಬಸವೇಶ್ವರ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣಕ್ಕೆ ಬಂದಿಳಿಯುವ ಪ್ರಯಾಣಿಕರ ಅನುಕೂಲಕ್ಕಾಗಿ “ನಮ್ಮ ಮೆಟ್ರೋ’ ಪೀಣ್ಯ ಡಿಪೋ ಬಳಿ ಮೆಟ್ರೋ ನಿಲ್ದಾಣ ನಿರ್ಮಾಣಕ್ಕೆ ಸದ್ದಿಲ್ಲದೆ ಸಿದ್ಧತೆ ನಡೆದಿದೆ.

Advertisement

ಉದ್ದೇಶಿತ ಡಿಪೋಗೆ ಹೊಂದಿಕೊಂಡಂತೆ ಬಿಎಂಆರ್‌ಸಿಎಲ್‌ನ ಜಾಗ ಇದೆ. ಅಲ್ಲಿ ಒಂದೇ ಪ್ಲಾಟ್‌ ಫಾರಂ ಇರುವ ಮೆಟ್ರೋ ನಿಲ್ದಾಣ ನಿರ್ಮಿಸಲು ಚಿಂತನೆ ನಡೆದಿದ್ದು, ಈ ಸಂಬಂಧ ಸಾಧಕ-ಬಾಧಕಗಳ ವರದಿ ಸಿದ್ಧಗೊಳ್ಳುತ್ತಿದೆ. ಇಲ್ಲಿಂದ ಪಕ್ಕದಲ್ಲೇ ಇರುವ ಬಸವೇಶ್ವರ ಬಸ್‌ ನಿಲ್ದಾಣಕ್ಕೆ ಇಂಟರ್‌ ಮಾಡಲ್‌ ಟ್ರಾನ್ಸಿಟ್‌ ಹಬ್‌ ಮೂಲಕ ಸಂಪರ್ಕ ಕಲ್ಪಿಸುವ ಆಲೋಚನೆಯೂ ನಡೆದಿದೆ. ಶೀಘ್ರ ಕಾರ್ಯರೂಪಕ್ಕೆ ಬರುವ ಸಾಧ್ಯತೆ ಇದೆ.

ಪೀಣ್ಯ ಬಸವೇಶ್ವರ ಬಸ್‌ ನಿಲ್ದಾಣ ಮುಖ್ಯರಸ್ತೆಯಿಂದ 800 ಮೀ. ದೂರವಿದ್ದು, ಪ್ರಯಾಣಿಕರು ಇಲ್ಲಿಗೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಬಿಎಂಟಿಸಿ ಬಸ್‌ ಸಂಪರ್ಕ, ಎಲ್ಲ ಕೆಎಸ್‌ಆರ್‌ಟಿಸಿ ಬಸ್‌ಗಳೂ ನಿಲ್ದಾಣಕ್ಕೆ ಭೇಟಿ ಸೇರಿದಂತೆ ಹಲವು ಪ್ರಯೋಗಗಳು ಪ್ರಯೋಜನವಾಗಲಿಲ್ಲ. ಈ ಮಧ್ಯೆ ಪೀಣ್ಯ ಕೈಗಾರಿಕಾ ಪ್ರದೇಶ ಮೆಟ್ರೋ ನಿಲ್ದಾಣಕ್ಕೆ ಖಾಸಗಿ ಸಹಭಾಗಿತ್ವದಲ್ಲಿ ಟ್ರಾವೆಲೇಟರ್‌ ಪರಿಚಯಿಸಲಿಕ್ಕೂ ಹಿಂದಿನ ಸರ್ಕಾರಗಳು ಚಿಂತಿಸಿದ್ದವು. ಈಗ ಮೆಟ್ರೋ ನಿಲ್ದಾಣ ಯೋಚನೆ ಮುನ್ನೆಲೆಗೆ ಬಂದಿದ್ದು, ಈ ಉತ್ಸಾಹದ ರಾಜಕೀಯ ನಾಯಕರ ಪ್ರಭಾವವೂ ಇದೆ ಎನ್ನಲಾಗಿದೆ.

ನಿಲ್ದಾಣ ನಿರ್ಮಾಣ; ಎಂಡಿ: “ಸಂಪರ್ಕ ಸೇವೆಗಳ ಕೊರತೆಯಿಂದ ಪ್ರಯಾಣಿಕರಿಗೆ ಸಮಸ್ಯೆ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ಡಿಪೋ ಪಕ್ಕದಲ್ಲೇ ನಿಗಮದ ಜಾಗ ಇದೆ. ಅಲ್ಲಿ ಮೆಟ್ರೋ ನಿಲ್ದಾಣ ನಿರ್ಮಿಸುವ ಉದ್ದೇಶ ಇದೆ. ಈ ಕುರಿತ ಸಾಧಕ-ಬಾಧಕಗಳ ಚರ್ಚೆಯೂ ನಡೆದಿದೆ. ಇದರಿಂದ ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿ ಪ್ರಯಾಣಿಕರಿಗೂ ಅನುಕೂಲವಾಗಲಿದೆ. ನಿಲ್ದಾಣಗಳ ನಡುವಿನ ಸಂಪರ್ಕ ಸೇತುವೆ ಸಾರಿಗೆ ನಿಗಮಗಳಿಗೆ ಬಿಟ್ಟಿದ್ದು’ ಎಂದು ಬಿಎಂಆರ್‌ಸಿಎಲ್‌ ವ್ಯವಸ್ಥಾಪಕ ನಿರ್ದೇಶಕ ಅಜಯ್‌ ಸೇಠ್ “ಉದಯವಾಣಿ’ಗೆ ಸ್ಪಷ್ಟಪಡಿಸಿದರು.

ಉತ್ತರ ಕರ್ನಾಟಕದ ಹೆಬ್ಟಾಗಿಲು ಪೀಣ್ಯ ಬಸವೇಶ್ವರ ಬಸ್‌ ನಿಲ್ದಾಣದ ಮೂಲಕ 17 ಜಿಲ್ಲೆಗಳ ಬಸ್‌ಗಳು ಹಾದುಹೋಗುತ್ತವೆ. ಆದರೆ, ಸೂಕ್ತ ಸಾರಿಗೆ ಸಂಪರ್ಕ ಸೇವೆಗಳ ಕೊರತೆ ಖಾಸಗಿ ಬಸ್‌ಗಳಿಗೆ ಅನುಕೂಲವಾಗಿ ಪರಿಣಮಿಸಿದೆ ಎಂದು ಅಸಮಾಧಾನವೂ ಇದೆ.

Advertisement

ಈ ಹಿಂದೆ ಅಂದರೆ 2017ರಲ್ಲಿ ಎಚ್‌.ಎಂ. ರೇವಣ್ಣ ಸಾರಿಗೆ ಸಚಿವರಾಗಿದ್ದಾಗಲೂ ಸಾರಿಗೆ ಸಂಪರ್ಕ ಸೌಲಭ್ಯ ಕಲ್ಪಿಸುವ ಸಂಬಂಧ ಬಿಎಂಟಿಸಿ, ಕೆಎಸ್‌ಆರ್‌ಟಿಸಿ, ಬಿಎಂಆರ್‌ಸಿಎಲ್‌, ಬಿಬಿಎಂಪಿ ಅಧಿಕಾರಿಗಳೊಂದಿಗೆ ಖುದ್ದು ಭೇಟಿ ನೀಡಿ, ಹಲವು ಸಾಧ್ಯತೆಗಳ ಕುರಿತು ಚರ್ಚೆ ನಡೆಸಿದ್ದನ್ನು ಇಲ್ಲಿ ಸ್ಮರಿಸಬಹುದು.

ಸುತ್ತಲಿನ ಭೂಮಿಗೆ ಬೇಡಿಕೆ :  ಮೆಟ್ರೋ ನಿಲ್ದಾಣ ನಿರ್ಮಿಸುವುದರಿಂದ ಸಹಜವಾಗಿ ಡಿಪೋ ಸುತ್ತಲಿನ ಭೂಮಿ ಹಾಗೂ ಅಪಾರ್ಟ್‌ಮೆಂಟ್‌ಗಳು, ಮನೆಗಳಿಗೂ ಬೇಡಿಕೆ ಹೆಚ್ಚಲಿದೆ. ಖಾಸಗಿ ಡೆವೆಲಪರ್‌ಗಳು ಪ್ರಾಪರ್ಟಿ ಡೆವೆಲಪ್‌ಮೆಂಟ್‌ಗೆ ಇಲ್ಲಿ ಆಸಕ್ತಿ ತೋರಿಸುವ ಸಾಧ್ಯತೆ ಇದೆ.

ಶ್ರಮ-ಸಮಯ ಎರಡೂ ಉಳಿತಾಯ :  ಬಸವೇಶ್ವರ ಬಸ್‌ ನಿಲ್ದಾಣಕ್ಕೆ ಬಂದಿಳಿಯುವ ಪ್ರಯಾಣಿಕರು, ಲಗೇಜು ಹೊತ್ತು ಆಟೋ ಅಥವಾ ಬಿಎಂಟಿಸಿ ಬಸ್‌ ಏರಿ ಹತ್ತಿರದ ಮೆಟ್ರೋ ನಿಲ್ದಾಣಕ್ಕೆ ತೆರಳಬೇಕು. ಇದರಿಂದ ಮಹಿಳೆಯರು, ವೃದ್ಧರು, ಗರ್ಭಿಣಿಯರಿಗೆ ಸಮಸ್ಯೆ ಆಗುತ್ತಿದೆ. ಇದೇ ಕಾರಣಕ್ಕೆ ಇಲ್ಲಿಂದ ಪ್ರಯಾಣಿಕರು ವಿಮುಖರಾಗಿದ್ದಾರೆ. ನಿಲ್ದಾಣ ನಿರ್ಮಾಣಗೊಂಡರೆ, ಬಸ್‌ ಇಳಿದವರು ನೇರವಾಗಿ ಮೆಟ್ರೋ ಏರಿ, ಪ್ರಯಾಣ ಬೆಳೆಸಬಹುದು ಎನ್ನುವ ಲೆಕ್ಕಾಚಾರ. ಈ ಕುರಿತು ಅಗತ್ಯ ಸೌಲಭ್ಯಗಳ ಬಗ್ಗೆಯೂ ಅಧ್ಯಯನ ನಡೆದಿದೆ.

 

 ವಿಜಯಕುಮಾರ್‌ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next