ಬೆಂಗಳೂರು: “ನಮ್ಮ ಮೆಟ್ರೋ’ ಯೋಜನೆಯ ಉತ್ತರ-ದಕ್ಷಿಣ ಕಾರಿಡಾರ್‌ಗೆ ಬುಧವಾರದಿಂದ ರೈಲ್ವೆ ಸುರಕ್ಷತಾ ಆಯುಕ್ತರ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಲಿದೆ. ಸುಮಾರು ಒಂದು ವಾರ ಕಾಲ ಸಂಪಿಗೆರಸ್ತೆಯಿಂದ ಯಲಚೇನಹಳ್ಳಿವರೆಗಿನ ಎತ್ತರಿಸಿದ ಮತ್ತು ಸುರಂಗ ಮಾರ್ಗಗಳ ಪರಿಶೀಲನೆ ನಡೆಸಲಿರುವ ತಂಡ, ಮೇ 24ರಿಂದ 26ರವರೆಗೆ ನ್ಯಾಷನಲ್ ಕಾಲೇಜಿನಿಂದ ಯಲಚೇನಹಳ್ಳಿ ನಡುವೆ ಹಾಗೂ 28ರಿಂದ 30ರವರೆಗೆ ಸಂಪಿಗೆ ರಸ್ತೆಯಿಂದ ಮೆಜೆಸ್ಟಿಕ್ ಮಾರ್ಗದಲ್ಲಿ ರೈಲ್ವೆ ಸುರಕ್ಷತೆ ಬಗ್ಗೆ ತಪಾಸಣೆ ನಡೆಸಲಿದ್ದಾರೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿ) ಮೂಲಗಳು ತಿಳಿಸಿವೆ.
ಈಗಾಗಲೇ ಉತ್ತರ-ದಕ್ಷಿಣ ಕಾರಿಡಾರ್‌ನಲ್ಲಿ ಪರೀಕ್ಷಾರ್ಥ ಸಂಚಾರ ಪೂರ್ಣಗೊಂಡಿದ್ದು, ಅಗ್ನಿ ಸುರಕ್ಷತೆ ಬಗ್ಗೆ ಕೂಡ ಪರೀಕ್ಷೆ ಮುಗಿದಿದೆ. ನಿಲ್ದಾಣಗಳ ಬಹುತೇಕ ಕಾಮಗಾರಿ ಕೂಡ ಅಂತಿಮಗೊಂಡಿದ್ದು, ಚಿಕ್ಕಪೇಟೆ, ಕೆ.ಆರ್. ಮಾರುಕಟ್ಟೆ ನಿಲ್ದಾಣಗಳಲ್ಲಿ ತಲಾ ಒಂದು ಪ್ರವೇಶ ದ್ವಾರಗಳ ಕಾಮಗಾರಿ ಕೊಂಚ ಬಾಕಿ ಇದೆ. ಇದೆಲ್ಲವನ್ನೂ ರೈಲ್ವೆ ಸುರಕ್ಷತಾ ಆಯುಕ್ತರು ಕೂಲಂಕಷವಾಗಿ ಪರಿಶೀಲಿಸಿ, ನಂತರ ಸಲಹೆ-ಸೂಚನೆಗಳನ್ನು ನೀಡುತ್ತಾರೆ. ಅಂತಿಮವಾಗಿ ರೈಲು ಸಂಚಾರಕ್ಕೆ ಅನುಮತಿ ನೀಡಲಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಉದ್ಘಾಟನೆ ದಿನ ನಿಗದಿ ಆಗಿಲ್ಲ; ಎಂಡಿ: “24ಕ್ಕೆ ರೈಲ್ವೆ ಸುರಕ್ಷತಾ ಆಯುಕ್ತರ ತಂಡ ನಮ್ಮ ಮೆಟ್ರೋ ಯೋಜನೆಯ ಉತ್ತರ-ದಕ್ಷಿಣ ಕಾರಿಡಾರ್‌ಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದೆ. ಎಷ್ಟು ದಿನಗಳ ಕಾಲ ಪರಿಶೀಲನೆ ನಡೆಯಲಿದೆ ಎಂಬುದನ್ನು ಈಗಲೇ ಹೇಳಲಾಗದು. ಪರಿಶೀಲನೆ ನಂತರ ಅನುಮತಿ ದೊರೆಯಲಿದೆ. ಆಮೇಲೆ ಉದ್ಘಾಟನೆ ದಿನಾಂಕ ಪ್ರಕಟಿಸಲಾಗುವುದು’ ಎಂದು ನಿಗಮದ ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್‌ಸಿಂಗ್ ಖರೋಲ “ಉದಯವಾಣಿ’ಗೆ ತಿಳಿಸಿದರು.
ಒಟ್ಟಾರೆ 24.4 ಕಿ.ಮೀ ಉದ್ದದ ಉತ್ತರ-ದಕ್ಷಿಣ ಕಾರಿಡಾರ್‌ನಲ್ಲಿ ಈಗಾಗಲೇ 12.4 ಕಿ.ಮೀ. ಮಾರ್ಗದಲ್ಲಿ ಸಾರ್ವಜನಿಕರಿಗೆ ಮೆಟ್ರೋ ರೈಲು ಸೇವೆ ಲಭ್ಯವಾಗಿದ್ದು, ನಿತ್ಯ ಈ ಮಾರ್ಗದಲ್ಲಿ ಸರಾಸರಿ 35 ಸಾವಿರ ಪ್ರಯಾಣಿಕರು ಸಂಚರಿಸುತ್ತಿದ್ದಾರೆ. ಉಳಿದ 12 ಕಿ.ಮೀ. ಸಂಚಾರಕ್ಕೆ ಮುಕ್ತಗೊಳ್ಳುವುದು ಬಾಕಿ ಇದೆ.