ಬೆಂಗಳೂರು: “ನಮ್ಮ ಮೆಟ್ರೋ’ ಉತ್ತರ-ದಕ್ಷಿಣ ಕಾರಿಡಾರ್‌ನ ಸಂಪಿಗೆರಸ್ತೆ- ಕೆಂಪೇಗೌಡ ನಿಲ್ದಾಣ (ಮೆಜೆಸ್ಟಿಕ್) ಮಾರ್ಗದಲ್ಲಿ ವೇಗದ ರೈಲು ಪರಿಕ್ಷಾರ್ಥ ಸಂಚಾರ ಪೂರ್ಣಗೊಳ್ಳಲಿದ್ದು, ಎರಡು-ಮೂರು ದಿನಗಳಲ್ಲಿ ರೈಲು ಸುರಕ್ಷತಾ ಆಯುಕ್ತರನ್ನು ಅಧಿಕೃತವಾಗಿ ಆಹ್ವಾನಿಸಲಾಗುವುದು ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿ)ದ ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್‌ಸಿಂಗ್ ಖರೋಲ ತಿಳಿಸಿದರು.
ಮಂಗಳವಾರ ರಾತ್ರಿಯಿಡೀ ಈ ಮಾರ್ಗದಲ್ಲಿ ಸೇವಾ ಪರೀಕ್ಷಾರ್ಥ ಸಂಚಾರ (ಸರ್ವಿಸ್ ಟ್ರಯಲ್ ರನ್) ನಡೆಯಲಿದೆ. ಒಂದೆರಡು ದಿನಗಳಲ್ಲಿ ಪರೀಕ್ಷಾರ್ಥ ಸಂಚಾರದ ದತ್ತಾಂಶಗಳನ್ನು ವಿಶ್ಲೇಷಿಸಲಾಗುವುದು. ನಂತರ ರೈಲು ಸುರಕ್ಷತಾ ಆಯುಕ್ತರಿಗೆ ಆಹ್ವಾನ ನೀಡಲಾಗುವುದು ಎಂದು ಹೇಳಿದರು.
ಸರ್ವಿಸ್ ಟ್ರಯಲ್: “ಸೇವಾ ಪರೀಕ್ಷಾರ್ಥ ಸಂಚಾರ’ ಕಳೆದೆರಡು ದಿನಗಳಿಂದ ನಡೆಯುತ್ತಿದೆ. ಇದಕ್ಕೂ ಮುನ್ನ ವೇಗದ ಪರೀಕ್ಷೆ ನಡೆಯಿತು. ಹಳಿಯ ಮೇಲೆ ಗಂಟೆಗೆ 80 ಕಿ.ಮೀ. ವೇಗದಲ್ಲಿ ರೈಲು ಓಡಿಸುವ ಮೂಲಕ ಪರೀಕ್ಷಿಸಲಾಯಿತು. ಇದಾದ ನಂತರ ಜೋಡಿ ಮಾರ್ಗಗಳಲ್ಲಿ ತಲಾ ಐದು ಮೆಟ್ರೋ ರೈಲುಗಳನ್ನು ಓಡಿಸಲಾಗುತ್ತಿದೆ. ಇದಾದ ನಂತರ ಹಳಿಗಳ ಮೇಲೆ ತಲಾ ಹತ್ತು ರೈಲುಗಳ ಪರೀಕ್ಷಾರ್ಥ ಸಂಚಾರ ನಡೆಸಲಾಗುವುದು.
ಇದಾದ ಮೇಲೆ ರೈಲು ಸುರಕ್ಷತಾ ಆಯುಕ್ತರು ಪರಿಶೀಲನೆ ನಡೆಸಲಿದ್ದಾರೆ ಎಂದು ಬಿಎಂಆರ್‌ಸಿ ಮೂಲಗಳು ತಿಳಿಸಿವೆ. ಸುಮಾರು ದಶಕದಿಂದ ಮೊದಲ ಹಂತದ ಮೆಟ್ರೋ ಕಾಮಗಾರಿ ನಡೆಯುತ್ತಿದೆ. ಎಲ್ಲರೂ ಎದುರುನೋಡುತ್ತಿರುವ ಯೋಜನೆ ಈಗ ಪೂರ್ಣಗೊಳ್ಳುತ್ತಿರುವುದು ಖುಷಿ ವಿಚಾರ. ಆದ್ದ ರಿಂದ ಸಡಗರದಿಂದ ಆಚರಿಸಲಾಗುತ್ತಿದ್ದು, ಇದ ಕ್ಕಾಗಿ ಪೂರ್ವಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ.
ರೈಲು ಓಡುವ ಮೊದಲೇ ಲಡ್ಡು!
ಈ ಮಧ್ಯೆ ದಿನಾಂಕ ನಿಗದಿಗೂ ಮುನ್ನವೇ ಬಿಎಂಆರ್‌ಸಿ ಉದ್ಘಾಟನೆಗೆ ಭರದ ಸಿದ್ಧತೆ ನಡೆಸಿದೆ. ಉತ್ತರ-ದಕ್ಷಿಣ ಕಾರಿಡಾರ್ ಪೂರ್ಣಗೊಳ್ಳುವ ಮೂಲಕ 42.3 ಕಿ.ಮೀ. ಉದ್ದದ ಮೆಟ್ರೋ ಮೊದಲ ಹಂತ ಪೂರ್ಣಗೊಳ್ಳಲಿದೆ. ಆದ್ದರಿಂದ ಅದ್ದೂರಿ ಆಚರಣೆಗೆ ನಿರ್ಧರಿಸಿದ್ದು, ಈಗಾಗಲೇ ಹತ್ತು ಸಾವಿರ ಲಡ್ಡು, ಮೂರು ಸಾವಿರ ಪಾನೀಯ ಹಾಗೂ ಗಣ್ಯರಿಗೆ ಹಣ್ಣು, ಹೂಗುತ್ಛಕ್ಕೆ ಟೆಂಡರ್ ಆಹ್ವಾನಿಸಿದೆ. ಉದ್ಘಾಟನಾ ಕಾರ್ಯಕ್ರಮಕ್ಕೆ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರನ್ನು ಆಹ್ವಾನಿಸುತ್ತಿದೆ. ಆದರೆ, ಇನ್ನೂ ದಿನಾಂಕ ನಿರ್ಧಾರ ಆಗಿಲ್ಲ.