Advertisement

ಮೆಟ್ರೋ ನೈಟ್‌ಲೈಫ್ !

04:56 PM Oct 14, 2017 | |

“ನಮ್ಮ ಮೆಟ್ರೋ’ಈಗ ಬೆಂಗಳೂರಿನ ಸಂಚಾರ ನಾಡಿ.ಮಹಾನಗರ ನಿದ್ದೆಯಿಂದ ಏಳುವ ಮೊದಲೇ “ನಮ್ಮ ಮೆಟ್ರೋ’ ನಗರದ ಸೇವೆಗೆ ಸಜ್ಜಾಗಿರುತ್ತದೆ. ಅದರ ದಿನಚರಿ ಮುಗಿಯುವುದು ಬೆಂಗಳೂರು ನಿದ್ರೆಗೆ ಜಾರಿದ ನಂತರವೇ. ಹಬ್ಬ-ಹರಿದಿನ, ವಾರಾಂತ್ಯದ ರಜಾ-ಮಜಾ, ಸಾರ್ವತ್ರಿಕ ರಜೆ…ಇದಾವುದೂ “ನಮ್ಮ ಮೆಟ್ರೋ’ಗೆ ಗೊತ್ತೇ ಇಲ್ಲ. ಬೆಳಗ್ಗೆಯಿಂದ ರಾತ್ರಿವರೆಗೆ ಓಡುವುದಷ್ಟೇ ಅದರ ಕೆಲಸ. ಇದು ಎಲ್ಲರಿಗೂ ಗೊತ್ತಿರುವ ವಿಷಯ.  

Advertisement

ಆದರೆ, ಬಹುತೇಕ ಬೆಂಗಳೂರಿಗರಿಗೆ ಗೊತ್ತಿಲ್ಲದ ಮೆಟ್ರೋ ಕಹಾನಿ ಒಂದಿದೆ. ಅದು ಇಡೀ ನಗರ ಮಲಗಿದ ನಂತರ ವೂ ಎಚ್ಚರವಾಗಿರುತ್ತೆ. ಅದುವೇ ಮೆಟ್ರೋ ನೈಟ್‌ಲೆçಫ್! ಹೌದು, ಬೆಳಗಾದರೆ ನಗರದ ತುಂಬಾ ರೊಂಯ್ಯನೆ ಸಾಗಿಬಿಡುವ ಮೆಟ್ರೋ ರೈಲಿನ ಸಂಚಾರ ನಾವೆಲ್ಲರೂ ಅಂದುಕೊಂಡಷ್ಟು ಸುಲಭವಾಗಿಲ್ಲ. ಅದೊಂದು ನಿತ್ಯ ಗಜಪ್ರಸವ. ಮಧ್ಯರಾತ್ರಿ 12ರಿಂದ ಬೆಳಗಿನಜಾವ 5.30ರವರೆಗೆ ಆ ಕೆಲಸ ನಡೆಯುತ್ತದೆ. ಹಾಗಾಗಿ, ಅದು “ನಮ್ಮ ಮೆಟ್ರೋ’ ಪರೀಕ್ಷಾ ಸಮಯ. ಈ ಅವಧಿಯಲ್ಲಿ ರೈಲುಗಳು, ನಿಲ್ದಾಣಗಳು, ಹಳಿಗಳು, ವಿದ್ಯುತ್‌ ಲೈನ್‌ಗಳು ಸೇರಿದಂತೆ ಪ್ರತಿಯೊಂದರ ಪರೀಕ್ಷೆ ನಡೆಯುತ್ತದೆ. ಅದರಲ್ಲಿ ಒಂದು ಕೈಕೊಟ್ಟರೂ ರೈಲು ಮುಂದೆ ಹೋಗುವುದಿಲ್ಲ. ಅಷ್ಟೇ ಅಲ್ಲ, ಭದ್ರತೆ ದೃಷ್ಟಿಯಿಂದ ಇದು ಅಷ್ಟೇ ಗೌಪ್ಯವಾಗಿ ನಡೆಯುತ್ತದೆ. ಆ ನೈಟ್‌ಲೆçಫ್ನ ಒಂದು ಚಿತ್ರಣ ಇಲ್ಲಿದೆ. 

ಹಳಿಗಳ ಮೇಲೆ ಬ್ಯಾಟರಿ ಹಿಡಿದು ಗಸ್ತು!
ನಿತ್ಯ ಮೆಟ್ರೋ ರೈಲುಗಳು ಗೂಡು ಸೇರುತ್ತಿದ್ದಂತೆ, ಮೆಟ್ರೋ ಮಾರ್ಗದ ವಿದ್ಯುತ್‌ ಲೈನ್‌ ಆಫ್ ಮಾಡಲಾಗುತ್ತದೆ. ಅತ್ತ ನೇರಳೆ ಮತ್ತು ಹಸಿರು ಮಾರ್ಗಗಳಿಂದ ತಂಡಗಳು ಬ್ಯಾಟರಿ ಹಿಡಿದು ಹಳಿಗೆ ಇಳಿಯುತ್ತವೆ. 42 ಕಿ.ಮೀ. ದೂರವನ್ನು ಆ ತಂಡಗಳು ಕಾಲ್ನಡಿಗೆಯಲ್ಲೇ ಕ್ರಮಿಸುತ್ತವೆ. ಮಾರ್ಗದುದ್ದಕ್ಕೂ ಹಳಿಗಳ ನಟ್ಟುಬೋಲ್ಟಾ ಸರಿಯಾಗಿದೆಯೇ? ಹಳಿಯಲ್ಲಿ ಏನಾದರೂ ಬಿದ್ದಿದೆಯೇ? ಜೋಡಣೆಯಲ್ಲಿ ವ್ಯತ್ಯಾಸವಾಗಿದೆಯೇ ಎಂದು ಗಸ್ತು ತಿರುಗುವ ತಂಡ ತಪಾಸಣೆ ಮಾಡುತ್ತದೆ. ಸುಮಾರು ಒಂದು ತಾಸು ಈ ತಪಾಸಣೆ ನಡೆಯುತ್ತದೆ.  

ಪ್ರತಿ 7ರಿಂದ 8 ಕಿ.ಮೀ.ಗೆ ಇಬ್ಬರು ಸದಸ್ಯರಿರುವ ಒಂದು ತಂಡವನ್ನು ನಿಯೋಜಿಸಲಾಗಿರುತ್ತದೆ. ಆ ತಂಡದವರು ಮೇಲಧಿಕಾರಿಗಳಿಗೆ ವರದಿ ನೀಡುತ್ತಾರೆ. ಎತ್ತರಿಸಿದ ಮಾರ್ಗದ ಹಳಿಯಲ್ಲಿ ಕೆಲವೊಮ್ಮೆ ಮರದ ರೆಂಬೆಗಳು ತುಂಡಾಗಿ ಬಿದ್ದಿರುತ್ತವೆ. ಹಕ್ಕಿಗಳು ತಿಂದು ಎಸೆದ ಮೂಳೆ ಮತ್ತಿತರ ವಸ್ತುಗಳೂ ಹಳಿಯ ಮೇಲೆ ಬಿದ್ದಿರುವ ಸಾಧ್ಯತೆ ಇರುತ್ತದೆ. ಒಂದು ಸಲ ಎತ್ತರಿಸಿದ ಮಾರ್ಗದಲ್ಲಿ ನಾಯಿ ನುಗ್ಗಿತ್ತು ಎಂದು ನಿರ್ವಹಣಾ ವಿಭಾಗದ ಎಂಜಿನಿಯರೊಬ್ಬರು ಮಾಹಿತಿ ನೀಡಿದರು. ಬೈಯಪ್ಪನಹಳ್ಳಿ ಮತ್ತು ಪೀಣ್ಯದಲ್ಲಿ ಡಿಪೋಗಳಿವೆ. ಅಲ್ಲಿ ಬೆಕ್ಕು ಅಥವಾ ನಾಯಿ ನುಗ್ಗುವ ಸಾಧ್ಯತೆಗಳಿರುತ್ತವೆ.  

ವಿದ್ಯು ತ್‌ ಲೈನ್‌ ಕತೆ…
ಇನ್ನು ವಿದ್ಯುತ್‌ ಲೈನ್‌ಗಳ ವಿಚಾರಕ್ಕೆ ಬಂದರೆ, ಇಲ್ಲಿ ಪವರ್‌ ಬ್ಲಾಕ್‌ಗಳನ್ನು ಮಾಡಲಾಗಿರುತ್ತದೆ. ಇದನ್ನು ಟ್ರ್ಯಾಕ್ಷನ್‌ (ಎಲೆಕ್ಟ್ರಿಕ್‌ ವಿಭಾಗ) ವಿಭಾಗವು ಮೂರು ದಿನಕ್ಕೊಮ್ಮೆ ಇಂತಿಷ್ಟು ಕಿ.ಮೀ. ಎಂಬ ಲೆಕ್ಕದಲ್ಲಿ ವಿದ್ಯುತ್‌ ನಿರ್ವಹಣಾ ಕಾರ್ಯ ಕೈಗೊಳ್ಳುತ್ತದೆ. ಅಥವಾ ಇನ್ನಾವುದೋ ತಾಂತ್ರಿಕ ದೋಷ ಕಂಡುಬಂದರೆ ಮೇಲಧಿಕಾರಿಗಳ ಅನುಮತಿ ಪಡೆದು, ನಿರ್ವಹಣೆ ಕೈಗೆತ್ತಿಕೊಳ್ಳುತ್ತದೆ. 

Advertisement

ರೈಲಿನ ಹಳಿಗಳಿಗೆ ಹೊಂದಿಕೊಂಡಂತೆಯೇ ವಿದ್ಯುತ್‌ ಲೈನ್‌ ಇರುವುದರಿಂದ ಇದಕ್ಕೆ “ಥರ್ಡ್‌ ರೈಲ್‌’ ಎನ್ನುತ್ತಾರೆ. ಲೈನ್‌ಮನ್‌ಗಳಂತೆ ಟ್ರ್ಯಾಕ್ಷನ್‌ ವಿಭಾಗದ ಸಿಬ್ಬಂದಿ ಇದರ ಪರೀಕ್ಷೆ ನಡೆಸುತ್ತಾರೆ. ಲೈನ್‌ನಲ್ಲಿ ಕರೆಂಟ್‌ ಸರಿಯಾಗಿ ಪಾಸ್‌ ಆಗುತ್ತಿದೆಯೇ? ಲೈನ್‌ ತುಂಡಾಗಿರುವುದು, ಟ್ರಾನ್ಸ್‌ಫಾರ್ಮರ್‌ಗಳ ಮೂಲಕ ಹೋಗುವ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಾಸ ಇದೆಯೇ? ಇದೆಲ್ಲವನ್ನೂ ಈ ತಂಡ ಪರಿಶೀಲಿಸುತ್ತದೆ. 

ಮೆಟ್ರೋ  ವೀಕ್‌ ಪಾಯಿಂಟ್‌ಗಳು
– ಮೆಟ್ರೋ ಮಾರ್ಗದಲ್ಲಿ ಕೆಲವು “ವೀಕ್‌ ಪಾಯಿಂಟ್‌’ಗಳನ್ನು ಗುರುತಿಸಲಾಗಿದೆ. ಇಲ್ಲಿ ತಾಂತ್ರಿಕ ಸಿಬ್ಬಂದಿ ವಿಶೇಷ ಗಮನಹರಿಸಿ ತಪಾಸಣೆ ನಡೆಸುತ್ತಾರೆ.
– ಆ ಪೈಕಿ ಸ್ವಿಚ್‌ ಎಕ್ಸ್‌ಪ್ಯಾನÒನ್‌ ಜಾಯಿಂಟ್‌ ಕೂಡ ಒಂದಾಗಿದೆ. ಹಿಂದಿನ ಕಾಲದಲ್ಲಿ ರೇಲ್ವೆ ಹಳಿಗಳಲ್ಲಿ 13 ಮೀಟರ್‌ಗೆ ಒಂದು ಜಾಯಿಂಟ್‌ ಇರುತ್ತಿತ್ತು. ಇದೇ ಕಾರಣಕ್ಕೆ ರೈಲು ಸಂಚರಿಸುವಾಗ ಪ್ರಯಾಣಿಕರೆಲ್ಲರಿಗೂ ಒಂದು ರೀತಿಯ ಧ್ವನಿ ಕೇಳಿಸುತ್ತದೆ. ಅದೇ ರೀತಿ, ಮೆಟ್ರೋದಲ್ಲಿ ದೀರ್ಘ‌ವಾಗಿ ವೆಲ್ಡಿಂಗ್‌ ಮಾಡಿದ ಹಳಿ ನಿರ್ಮಿಸಲಾಗಿದೆ. ಅಂದರೆ ಎರಡು ಹಳಿಗಳ ನಡುವೆ ವೆಲ್ಡಿಂಗ್‌ ಮಾಡಲಾಗಿರುತ್ತದೆ.
– ಅದೇ ರೀತಿ, ಟ್ರ್ಯಾಕ್‌ ಕೊನೆಗೊಳ್ಳುವ ಜಾಗವೂ ವೀಕ್‌ಪಾಯಿಂಟ್‌ ಆಗಿದೆ. ಕೊನೆಯ ನಿಲ್ದಾಣ ತಲುಪಿದ ನಂತರ ಹಳಿ ಮುಂದುವರಿದಿರುತ್ತದೆ. ರೈಲು ಮುಂದೆ ಸಾಗಿ, ಮಾರ್ಗ ಬದಲಾವಣೆ ಮಾಡಿಕೊಂಡು ಮತ್ತೂಂದು ಹಳಿಗೆ ಹೊರಳುತ್ತದೆ. ಆ ಜಾಗದಲ್ಲಿ ಆಯಿಲಿಂಗ್‌, ನಟ್‌-ಬೋಲ್ಟ್ ಟೈಟ್‌ ಮಾಡುವುದು ನಿಯಮಿತವಾಗಿ ನಡೆಯುತ್ತದೆ. 

ರಾತ್ರಿ ಏನೇನಾಗುತ್ತೆ?
– ಮೆಟ್ರೋ ರೈಲುಗಳ ನಿರ್ವಹಣೆ ಪಕ್ಕಾ ಬಸ್‌ಗಳ ನಿರ್ವಹಣೆ ಮಾದರಿಯಲ್ಲೇ 3 ಹಂತಗಳಲ್ಲಿ ನಡೆಯುತ್ತದೆ. ಆದರೆ, ಅತ್ಯಂತ ವ್ಯವಸ್ಥಿತವಾಗಿ ಕಂಪ್ಯೂರೈಸ್ಡ್ ಆಗಿರುತ್ತದೆ.
– ಪ್ರತಿ ದಿನ ಮತ್ತು ವಾರಕ್ಕೊಮ್ಮೆ ಹಾಗೂ ಇಂತಿಷ್ಟು ಕಿ.ಮೀ.ಗೊಮ್ಮೆ ಎಂಬಂತೆ ನಿರ್ವಹಣೆ ಕೈಗೆತ್ತಿಕೊಳ್ಳಲಾಗುತ್ತದೆ. ಕಾರ್ಯಾಚರಣೆ ಪೂರ್ಣಗೊಳಿಸಿದ ನಂತರ ಮೆಟ್ರೋ ರೈಲುಗಳು ಎಂದಿನಂತೆ ಡಿಪೋಗಳಲ್ಲಿರುವ ಸ್ಟೇಬಲಿಂಗ್‌ ಲೈನ್‌ನಲ್ಲಿ ಬಂದು ನಿಲ್ಲುತ್ತವೆ. ಅಲ್ಲಿ ಆಪರೇಟರ್‌ಗಳು ಯಾವುದೇ ಲೋಪಗಳಿದ್ದರೆ ನಿರ್ವಹಣಾ ವಿಭಾಗಕ್ಕೆ ವರದಿ ಮಾಡುತ್ತಾರೆ. ನಿರ್ವಹಣಾ ಸಿಬ್ಬಂದಿ ಆ ಲೋಪವನ್ನು ಸರಿಪಡಿಸುತ್ತಾರೆ.

– ಆಮೇಲೆ ದ್ವಾರಗಳು ಮುಚ್ಚುವುದು- ತೆರೆಯುವುದು, ವೈಪರ್‌, ಹೆಡ್‌ಲೈಟ್‌ಗಳು, ಬ್ರೇಕ್‌ ಮತ್ತಿತರ ಅಂಶಗಳನ್ನು ಗಮನಿಸಲಾಗುತ್ತದೆ. ಪ್ರತಿ ರೈಲಿನ ನಿರ್ವಹಣೆಗೆ 2-3 ಜನರನ್ನು ನಿಯೋಜಿಸಲಾಗಿರುತ್ತದೆ. ಇದರಲ್ಲಿ ಕೂಡ ಬೇರೆ ಬೇರೆ ವಿಭಾಗಗಳಿರುತ್ತವೆ.
– ಪ್ರತಿ ನಿತ್ಯ ಬೆಳಗ್ಗೆ ಮೊದಲ ಟ್ರಿಪ್‌ ಯಾವ ರೈಲು ಹೋಗಬೇಕು ಎನ್ನುವುದು ಮೊದಲೇ ನಿರ್ಧಾರ ಆಗಿರುತ್ತದೆ. ಹಾಗಾಗಿ, ಅದನ್ನು ಆದ್ಯತೆಯ ಮೇರೆಗೆ ನಿರ್ವಹಣೆ ಮಾಡಲಾಗುತ್ತದೆ. ಮಧ್ಯರಾತ್ರಿ 12ರಿಂದ 4.30ರ ಒಳಗೆ ಈ ಎಲ್ಲ ಪ್ರಕ್ರಿಯೆ ಮುಗಿಯಲೇಬೇಕು. 

ಇವರದ್ದೆಲ್ಲ ರಾತ್ರಿಯೇ ವೃತ್ತಿ ಜೀವನ! 
ಮೆಟ್ರೋ ನಿರ್ವಹಣೆಯಲ್ಲಿ ಟ್ರ್ಯಾಕ್ಷನ್‌, ರೋಲಿಂಗ್‌ ಸ್ಟಾಕ್‌, ಸಿಗ್ನಲಿಂಗ್‌, ಸಿವಿಲ್‌ ಸೇರಿದಂತೆ ಹತ್ತಾರು ವಿಭಾಗಗಳಿವೆ. ಈ ವಿಭಾಗಗಳ ನೌಕರರ ವೃತ್ತಿಜೀವನ ಸಂಪೂರ್ಣ ರಾತ್ರಿಯೇ! ಪಾಳಿ ಇದ್ದರೂ ಸಿಬ್ಬಂದಿ ಸಂಖ್ಯೆ ಅಷ್ಟಕ್ಕಷ್ಟೇ. ಸುರಕ್ಷತೆಯ ಹೊಣೆ ಹಾಗೂ ಅಲ್ಪಾವಧಿಯಲ್ಲೇ ಕೆಲಸ ಪೂರ್ಣಗೊಳಿಸುವ ಒತ್ತಡವೂ ಇವರ ಮೇಲಿರುತ್ತದೆ. ಹಾಗಾಗಿ, ಈ ವಿಭಾಗದಲ್ಲಿ ನೌಕರರು ತುಂಬಾ ದಿನಗಳು ನಿಲ್ಲುವುದಿಲ್ಲ. ರಾಜೀನಾಮೆ ಕೊಟ್ಟು ಹೋಗುತ್ತಿರುತ್ತಾರೆ ಎಂದು ಅಧಿಕಾರಿಗಳು ಹೇಳುತ್ತಾರೆ. 

ದಿನಾ ಬೆಳಗ್ಗೆ 5 ಕ್ಕೆ ಟೆಸ್ಟಿಂಗ್‌ ಟ್ರೈನ್‌ ಓಡುತ್ತೆ!
ನಿತ್ಯ ಬೆ ಳಗ್ಗೆ 5 ಗಂಟೆಗೆ ಬೈಯಪ್ಪನಹಳ್ಳಿ, ಮೈಸೂರು ರಸ್ತೆ, ನಾಗಸಂದ್ರ, ಯಲಚೇನಹಳ್ಳಿಯಿಂದ ಏಕಕಾಲದಲ್ಲಿ ಪೈಲಟ್‌ ರೈಲುಗಳು ಹೊರಡುತ್ತವೆ. ಈ ರೈಲುಗಳ ವೇಗಮಿತಿ ಗಂಟೆಗೆ ಕೇವಲ 10ರಿಂದ 15 ಕಿ.ಮೀ. ಇರುತ್ತದೆ! ಈ ರೈಲುಗಳಲ್ಲಿ ವಿವಿಧ ವಿಭಾಗಗಳ 8ರಿಂದ 10 ಮುಖ್ಯಸ್ಥರು ಇರುತ್ತಾರೆ. ಮಾರ್ಗದುದ್ದಕ್ಕೂ ಬರುವ ನಿಲ್ದಾಣಗಳು, ಸಿಗ್ನಲಿಂಗ್‌, ಹಳಿ, ವಿದ್ಯುತ್‌ ಪೂರೈಕೆ ಬಗ್ಗೆ ಈ ಅಧಿಕಾರಿಗಳು ಪರಿಶೀಲನೆ ಮಾಡುತ್ತಾರೆ. ಎಲ್ಲವೂ ಸರಿಯಾಗಿದೆ ಎಂದು ಖಾತ್ರಿಪಡಿಸಿಕೊಂಡ ನಂತರವೇ ವಾಣಿಜ್ಯ ಸಂಚಾರಕ್ಕೆ ಅಂದರೆ, ಸಾರ್ವಜನಿಕ ಸೇವೆಗೆ ಗ್ರೀನ್‌ ಸಿಗ್ನಲ್‌ ದೊರೆಯುತ್ತದೆ.   

3- ಪ್ರತಿ ರೈಲಿನ ನಿರ್ವಹಣೆಗೆ ರಾತ್ರಿ ಇಷ್ಟು ಮಂದಿ ಕೆಲಸ ಮಾಡ್ತಾ ರೆ!
12- ರಾತ್ರಿ ಇಷ್ಟು ಗಂಟೆಗೆ ಹಳಿಯಲ್ಲಿ ಕರೆಂಟ್‌ ಆಫ್ ಆಗುತ್ತೆ!
24- ಬೈಯಪ್ಪನಹಳ್ಳಿ ಡಿಪೋದಲ್ಲಿ ತಂಗು ವ ಮೆಟ್ರೋ ರೈಲುಗಳು
26- ಪೀಣ್ಯ ಡಿಪೋದಲ್ಲಿ ತಂಗು ವ ಮೆಟ್ರೋ ರೈಲುಗಳು
42-   ರಾತ್ರಿ ಇಷ್ಟು ಕಿ.ಮೀ. ಅನ್ನು ಕಾಲ್ನಡಿಗೆಯಲ್ಲೇ ಸಾಗಿ ಟೆಸ್ಟ್‌ ಮಾಡ್ತಾ ರೆ!

– ವಿಜಯಕುಮಾರ್‌ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next