Advertisement

ಮೆಟ್ರೋ ಇಂಟಿಗ್ರೇಷನ್‌ಗೆ ಬೇಕು ದೂರದೃಷ್ಟಿ

12:49 AM Mar 02, 2020 | Lakshmi GovindaRaj |

ಬೆಂಗಳೂರು ಬೆಳೆದಂತೆ ನಮ್ಮ ಮೆಟ್ರೋ ಜಾಲ ಕೂಡ ಬೆಳೆಯುತ್ತಿದೆ. ಹೆಚ್ಚುತ್ತಿರುವ ಸಂಚಾರದಟ್ಟಣೆ ದೃಷ್ಟಿಯಿಂದ ಇದು ಒಳ್ಳೆಯದು ಕೂಡ. ಆದರೆ, ಈ “ವಿಸ್ತರಣೆ’ ಹಂತಗಳು ಆರಂಭದಲ್ಲೇ ನಿರ್ಧಾರ ಆಗುತ್ತಿಲ್ಲ. ಇದು ದೂರದೃಷ್ಟಿ ಕೊರತೆಯ ಫ‌ಲ. ಪರಿಣಾಮ ಅವುಗಳ ಪರಿಪೂರ್ಣ ಇಂಟಿಗ್ರೇಷನ್‌ ಸಾಧ್ಯವಾ ಗುತ್ತಿಲ್ಲ. ಅಂತಿಮವಾಗಿ ಇದು ಜನರಿಗೆ ಕಿರಿಕಿರಿಯಾಗಿ ಪರಿಣಮಿಸಲಿದೆ. ಇದಕ್ಕೆ ಈಗ ತಲೆಯೆತ್ತುತ್ತಿರುವ ಇಂಟರ್‌ಚೇಂಜ್‌ಗಳು ಕನ್ನಡಿ ಹಿಡಿಯುತ್ತವೆ. ಈ ನಿಟ್ಟಿನಲ್ಲಿ ಒಂದು ಅವಲೋಕನ “ಸುದ್ದಿ ಸುತ್ತಾಟ’ದಲ್ಲಿ…

Advertisement

“ನಮ್ಮ ಮೆಟ್ರೋ’ ಎರಡನೇ ಹಂತದಲ್ಲಿ ಬರುವ ಇಂಟರ್‌ಚೇಂಜ್‌ಗಳು ಮೆಜೆಸ್ಟಿಕ್‌ನ ಕೆಂಪೇಗೌಡ ನಿಲ್ದಾಣದಷ್ಟು ಆರಾಮದಾಯಕವಾಗಿ ಇರುವುದಿಲ್ಲ. ಆ ಅಡತಡೆರಹಿತ ಪ್ರಯಾಣ ವನ್ನು ಇಲ್ಲಿ ಪ್ರಯಾಣಿಕರು ನಿರೀಕ್ಷಿಸಲು ಸಾಧ್ಯವೂ ಇಲ್ಲ!  ಯಾಕೆಂದರೆ, ಮುಂದಿನ ಹಂತಗಳಲ್ಲಿ ಬರುವ ಇಂಟರ್‌ ಚೇಂಜ್‌ಗಳಲ್ಲಿ ಒಂದು ಎತ್ತರಿಸಿದ ಮಾರ್ಗ ವಾಗಿದ್ದರೆ, ಮತ್ತೂಂದು ಮಾರ್ಗ ಸುರಂಗದಲ್ಲಿ ಹಾದು ಹೋಗುತ್ತದೆ.

ಅಕಸ್ಮಾತ್‌ ಎರಡೂ ಎತ್ತರಿಸಿದ ಮಾರ್ಗ ಗಳಿದ್ದರೂ ಒಂದ ಕ್ಕೊಂದು ಕೂಡುವುದಿಲ್ಲ. ಹಾಗಾಗಿ, ಪ್ರಯಾ ಣಿಕರು ಈ ಸ್ಥಳಗಳಲ್ಲಿ ಮಾರ್ಗ ಬದಲಾವಣೆ ಮಾಡುವಾಗ ನೂರಾರು ಮೀಟರ್‌ ನಡೆದು ರೈಲು ಏರುವುದು ಸವಾಲಾಗಿದೆ. ಅದರಲ್ಲೂ ಮುಖ್ಯವಾಗಿ ಎಲೆಕ್ಟ್ರಾನಿಕ್‌ ಸಿಟಿಯಿಂದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳುವವರಿಗೆ ಇದು ಭವಿಷ್ಯದಲ್ಲಿ ದೊಡ್ಡ ತಲೆನೋವಾಗಲಿದೆ.

ಈ ಹಿನ್ನೆಲೆಯಲ್ಲಿ ಎರಡನೇ ಹಂತದಲ್ಲಿ ಬರುವ ಇಂಟರ್‌ಚೇಂಜ್‌ಗಳಲ್ಲಿ ಮೆಜೆಸ್ಟಿಕ್‌ನಷ್ಟು ಪರಿಪೂರ್ಣತೆಯನ್ನು ಕಾಣುವುದು ಅನು ಮಾನ. ಈ ಸಮಸ್ಯೆ ಮೂಲ ಹುಡುಕುತ್ತಾ ಹೋದರೆ, ಅದು “ನಮ್ಮ ಮೆಟ್ರೋ’ ಯೋಜನೆಯಲ್ಲಿನ ದೂರದೃಷ್ಟಿಯ ಕೊರತೆಗೆ ಬಂದು ನಿಲ್ಲುತ್ತದೆ.

ಒಂದು ವೇಳೆ ಮುಂಚಿತವಾಗಿಯೇ ಈ ವಿವಿಧ ಹಂತಗಳ ರೂಪುರೇಷೆ ಸಿದ್ಧಪಡಿಸಿದ್ದರೆ, ಅದಕ್ಕೆ ಅನುಗುಣವಾಗಿ ನಿರ್ಮಾಣಗೊಳ್ಳುತ್ತಿದ್ದವು. ಆದರೆ, ಅಂದು ಅಂತಹ ದೂರದೃಷ್ಟಿ ಇಲ್ಲದಿರುವುದು ಇಂದು ನಿಲ್ದಾಣಗಳ ಇಂಟಿಗ್ರೇಷನ್‌ (ಏಕೀಕರಣಗೊಳಿಸುವುದು) ಕೊರತೆಯಲ್ಲಿ ಪರಿಣಮಿಸುತ್ತಿದೆ ಎಂದು ತಜ್ಞರು ವಿಶ್ಲೇಷಿಸುತ್ತಾರೆ.

Advertisement

ಹಾಗಂತ, ಇದಕ್ಕೆ ನೇರವಾಗಿ ದೂರದೃಷ್ಟಿಯೊಂದನ್ನೇ ಹೊಣೆ ಮಾಡುವುದೂ ಸರಿ ಅಲ್ಲ. ಪ್ರಭಾವಿಗಳ ಒತ್ತಡದಿಂದ ಆಗಾಗ್ಗೆ ಮಾರ್ಪಾಡು ಆಗುವ ವಿನ್ಯಾಸಗಳು, ಭೂಸ್ವಾಧೀನ ಸೇರಿದಂತೆ ನಾನಾ ಕಾರಣಗಳಿಗಾಗಿ ಸ್ಥಳೀಯರ ಪ್ರತಿರೋಧ, ಪರಿಸರ ಪ್ರೇಮಿಗಳ ಆಕ್ಷೇಪ, ಬಿಎಂಆರ್‌ಸಿಎಲ್‌ನ ಆಮೆಗತಿ ಧೋರಣೆ, ಆರ್ಥಿಕ ಸಂಪನ್ಮೂಲದ ಸವಾಲು ಸೇರಿದಂತೆ ಹತ್ತಾರು ಅಂಶಗಳೂ ಕೊಡುಗೆ ನೀಡಿವೆ.

ಇದರಿಂದ ಯೋಜನಾ ವೆಚ್ಚ ಹೆಚ್ಚಳದಂತಹ ಸಮಸ್ಯೆ ಆಗದಿರಬಹುದು. ಆದರೆ, ವೇಗವಾಗಿ ಬೆಳೆಯುತ್ತಿರುವ ಬೆಂಗಳೂರಿನ ಭವಿಷ್ಯದ ದೃಷ್ಟಿಯಿಂದ ಇದನ್ನು ವಿಶ್ಲೇಷಿಸಿದಾಗ, ಸಮೂಹ ಸಾರಿಗೆಗೆ ಸಣ್ಣ ಹಿನ್ನಡೆ ಎಂದು ವಿಶ್ಲೇಷಿಸಬೇಕಾಗುತ್ತದೆ. ಈಗಲೇ ಜನ ಮೆಜೆಸ್ಟಿಕ್‌ನಲ್ಲಿ ಮಾರ್ಗ ಬದಲಾವಣೆ ಮಾಡುವುದನ್ನೇ ಕಿರಿಕಿರಿ ಎಂಬಂತೆ ನೋಡುತ್ತಾರೆ. ಹೀಗಿರುವಾಗ, ನೂರಾರು ಮೀಟರ್‌ ಅಂತರದ ಮಾರ್ಗ ಬದಲಾವಣೆ ಕತೆ ಏನು ಎಂದೂ ನಗರದ ಸಮೂಹ ಸಾರಿಗೆ ತಜ್ಞರು ಅಭಿಪ್ರಾಯಪಡುತ್ತಾರೆ.

ಹತ್ತಿಳಿಯುವ ಸರ್ಕಸ್‌: “ನಮ್ಮ ಮೆಟ್ರೋ’ 2, 2ಎ, 3 ಹಂತಗಳಲ್ಲಿ ಒಂದಿಲ್ಲೊಂದು ರೀತಿಯಲ್ಲಿ ಆರ್‌.ವಿ. ರಸ್ತೆ, ಜಯದೇವ ಫ್ಲೈಓವರ್‌, ಸೆಂಟ್ರಲ್‌ ಸಿಲ್ಕ್ಬೋರ್ಡ್‌ ಜಂಕ್ಷನ್‌, ಎಂ.ಜಿ. ರಸ್ತೆ, ನಾಗವಾರ ಸೇರಿದಂತೆ ಐದು ಕಡೆ ಮೆಟ್ರೋ ಮಾರ್ಗಗಳು ಸಂಧಿಸಲಿವೆ. ಜಯದೇವ ಹೃದ್ರೋಗ ಆಸ್ಪತ್ರೆ ಬಳಿಯ ಇಂಟರ್‌ಚೇಂಜ್‌ ಹೊರತುಪಡಿಸಿದರೆ, ಪ್ರಯಾಣಿಕರಿಗೆ ಉಳಿದೆಡೆ ಹತ್ತಿಳಿಯುವ ಸರ್ಕಸ್‌ ಅನಿವಾರ್ಯ ಆಗಲಿದೆ.

ಅಷ್ಟೇ ಅಲ್ಲ, ಇದೇ ದೂರದೃಷ್ಟಿ ಕೊರತೆಯಿಂದ ನೂರು ವರ್ಷ ಬಾಳುವ ಆರ್‌.ವಿ. ರಸ್ತೆ ಮೆಟ್ರೋ ನಿಲ್ದಾಣವನ್ನು ಕೇವಲ ಆರೇಳು ವರ್ಷಕ್ಕೆ ಭಾಗಶಃ ಒಡೆದು, ಮತ್ತೂಂದು ಮೆಟ್ರೋ ಮಾರ್ಗದ ನಿಲ್ದಾಣವನ್ನು ಸೇರಿಸಬೇಕಾಯಿತು. ಜತೆಗೆ ಅಲ್ಪಾವಧಿಯ ಮಾರೇಹಳ್ಳಿ ಸೇತುವೆಯನ್ನೂ ನೆಲಸಮಗೊಳಿಸಬೇಕಾಯಿತು. ಅದೇ ರೀತಿ, ಹೊರವರ್ತುಲ ರಸ್ತೆಯಲ್ಲಿ ಮೆಟ್ರೋ ಮಾರ್ಗ ನಂತರದಲ್ಲಿ ಸೇರ್ಪಡೆ ಯಾಗಿದೆ. ಆದರೆ, ಇದರಿಂದ ಒಂದೇ ಕಡೆ ಎರಡು ಪ್ರತ್ಯೇಕ ನಿಲ್ದಾಣಗಳು ಬರುತ್ತಿವೆ.

ಮನಸ್ಸು ಮಾಡಿದ್ದರೆ, ಇದನ್ನು ತಪ್ಪಿಸಬಹುದಿತ್ತು. ಉದಾಹರಣೆಗೆ ಇಲ್ಲಿ ಯಾವೊಬ್ಬ ಪ್ರಯಾಣಿಕ ಎಲೆಕ್ಟ್ರಾನಿಕ್‌ ಸಿಟಿಯಿಂದ ವಿಮಾನ ನಿಲ್ದಾಣ ಮಾರ್ಗಕ್ಕೆ ಮೆಟ್ರೋ ಏರಿದರೆ, ಆತ ಸಿಲ್ಕ್ ಬೋರ್ಡ್‌ ಜಂಕ್ಷನ್‌ನಲ್ಲಿ ಇಳಿದು, 300 ಮೀಟರ್‌ ದೂರ ಕ್ರಮಿಸಿ ಹೊರವರ್ತುಲ ಮಾರ್ಗದ ಮೆಟ್ರೋ ರೈಲು ಹಿಡಿಯಬೇಕು. ಅಷ್ಟೇ ಅಲ್ಲ, ಅಲ್ಲಿಂದ ಮತ್ತೆ ನಾಗವಾರದಲ್ಲಿ 80 ಮೀಟರ್‌ ದೂರದ ಮತ್ತೂಂದು ರೈಲು ಏರಬೇಕಾಗುತ್ತದೆ. ಇದು ತುರ್ತಾಗಿ ಹೋಗುವವರಿಗೆ ಕಿರಿಕಿರಿಯಾಗುವ ಸಾಧ್ಯತೆ ಇದೆ.

ಸ್ಕೈವಾಕ್‌, ಟ್ರಾವೆಲೇಟರ್‌ ನಿರ್ಮಾಣ: ಇಲ್ಲಿ 2ಎ ಯೋಜನೆ ನಂತರದಲ್ಲಿ ಸೇರ್ಪಡೆಯಾಗಿದ್ದರಿಂದ ಇಂಟಿಗ್ರೇಷನ್‌ ಆಗಿಲ್ಲ. ಆದ್ದರಿಂದ ಪ್ರಯಾಣಿಕರ ಅನುಕೂಲಕ್ಕಾಗಿ ಎರಡು ನಿಲ್ದಾಣಗಳ ನಡುವೆ ಟ್ರಾವೆಲೇಟರ್‌ ಹಾಗೂ ಸ್ಕೈವಾಕ್‌ ಎರಡನ್ನೂ ನಿರ್ಮಿಸಲು ಉದ್ದೇಶಿಸಲಾಗಿದೆ. ಇದರಿಂದ ಮಾರ್ಗ ಬದಲಾವಣೆ ಸುಲಭವಾಗಲಿದೆ. ಜತೆಗೆ ಸಮಯವೂ ಉಳಿತಾಯ ಆಗಲಿದೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್‌)ದ ವ್ಯವಸ್ಥಾಪಕ ನಿರ್ದೇಶಕ ಅಜಯ್‌ ಸೇಠ್ ಸ್ಪಷ್ಟಪಡಿಸಿದರು.

ಎಲ್ಲವನ್ನೂ ಮೆಜೆಸ್ಟಿಕ್‌ನಂತೆಯೇ ನಿರ್ಮಾಣವಾಗಬೇಕು ಎಂದು ನಿರೀಕ್ಷಿಸುವುದು ಸರಿ ಅಲ್ಲ. ಕೆಂಪೇಗೌಡ ನಿಲ್ದಾಣದಲ್ಲಿ ಎರಡೂ ಸುರಂಗ ಮಾರ್ಗದಲ್ಲೇ ಸಂಧಿಸುತ್ತಿವೆ. ಉಳಿದೆಡೆ ಪರಿಸ್ಥಿತಿ ಹಾಗಿಲ್ಲ. ಆರ್‌.ವಿ. ರಸ್ತೆಯಲ್ಲಿ ಮರಗಳ ತೆರವಿಗೆ ದೊಡ್ಡ ವಿರೋಧ ವ್ಯಕ್ತವಾಯಿತು. ಹಾಗಾಗಿ, ಸಾಧ್ಯವಾದಷ್ಟು ಕಡಿಮೆ ಜಾಗದಲ್ಲೇ ನಿರ್ಮಿಸಬೇಕಾಯಿತು. ಈಗ ಅನಿವಾರ್ಯವಾಗಿ ಒಂದರ ಮೇಲೊಂದು ನಿಲ್ದಾಣಗಳನ್ನು ನಿರ್ಮಿಸಬೇಕಾಗಿದೆ. ಉಳಿದೆಡೆ ಅಷ್ಟೇನೂ ಸಮಸ್ಯೆ ಇಲ್ಲ ಎಂದೂ ಅವರು ಹೇಳಿದರು.

ಪ್ರತಿ ಹೆಜ್ಜೆ ಅಂತಿಮ ಹೆಜ್ಜೆ!: ಮೆಟ್ರೋದಂತಹ ಯೋಜನೆಗಳನ್ನು ರೂಪಿಸುವಾಗ ನಮಗೆ ಎಷ್ಟು ಬೇಕಾಗುತ್ತದೆ ಹಾಗೂ ಅದರಲ್ಲಿ ಈಗ ಎಷ್ಟು ಅವಶ್ಯಕತೆ ಇದೆ ಎಂಬುದನ್ನು ನಿರ್ಧರಿಸಿ, ಅದಕ್ಕೆ ಅನುಗುಣವಾಗಿ ಕೈಗೆತ್ತಿಕೊಳ್ಳಬೇಕಾಗುತ್ತದೆ. ಆದರೆ, ವಿಚಿತ್ರವೆಂದರೆ ನಾವು ಕೇವಲ ಅವಶ್ಯಕತೆ ಹಿಂದೆ ಬಿದ್ದಿದ್ದೇವೆ ಎಂದು ನಗರ ಯೋಜನಾ ತಜ್ಞ ಅಶ್ವಿ‌ನ್‌ ಮಹೇಶ್‌ ತಿಳಿಸುತ್ತಾರೆ. ಮುಂದಿನ 40 ವರ್ಷಗಳಿಗೆ ಎಷ್ಟು ಬೇಕಾಗುತ್ತದೆ ಎಂಬುದಕ್ಕೆ ಯೋಜನೆ ಸಿದ್ಧಪಡಿಸಬೇಕು. ಆ ಪೈಕಿ ಮೊದಲ ಹತ್ತು ವರ್ಷಗಳಲ್ಲಿ ಎಷ್ಟು ನಿರ್ಮಿಸಬೇಕು ಎಂಬುದನ್ನು ನಿರ್ಧರಿಸಿ ಮುಂದುವರಿಯಬೇಕು.

ಇದು ಆಗುತ್ತಿಲ್ಲ. ಹಾಗಾಗಿ, ಇಡುತ್ತಿರುವ ಪ್ರತಿ ಹೆಜ್ಜೆಯೂ ಅಂತಿಮ ಹೆಜ್ಜೆ ಅನಿಸುತ್ತಿದೆ. ಆಗ ಮತ್ತೂಂದು ಹೆಜ್ಜೆ (ವಿಸ್ತರಣೆ) ಇಡಲು ಮುಂದಾಗುತ್ತೇವೆ. ಬರುವ ದಿನಗಳಲ್ಲಿ ಹಾಗೂ ಕೈಗೆತ್ತಿಕೊಳ್ಳಲಿರುವ ಯೋಜನೆಗಳಲ್ಲಾದರೂ ನಾವು ಈ ನಿಟ್ಟಿನಲ್ಲಿ ಯೋಚನೆ ಮಾಡಬೇಕಾಗುತ್ತದೆ. ಜತೆಗೆ ಇಂಟರ್‌ಚೇಂಜ್‌ಗಳ ನಡುವೆ ಪ್ರಯಾಣಿಕರ ಅನುಕೂಲಕ್ಕಾಗಿ ಟ್ರಾವೆಲೇಟರ್‌ ಅಥವಾ ಎಸ್ಕೆಲೇಟರ್‌ಗಳನ್ನು ನಿರ್ಮಿಸಬೇಕು ಎಂದೂ ಅವರು ಒತ್ತಾಯಿಸುತ್ತಾರೆ.

ಎಲ್ಲೆಲ್ಲಿ ಏನು ಸಮಸ್ಯೆ?
ಎಂ.ಜಿ. ರಸ್ತೆ ಇಂಟರ್‌ಚೇಂಜ್‌: ಬೈಯಪ್ಪನಹಳ್ಳಿಯಿಂದ ಮೈಸೂರು ರಸ್ತೆ ನಡುವೆ ಮೆಟ್ರೋ ಮಾರ್ಗ ಇದೆ. ಈಗ ಡೈರಿ ವೃತ್ತ-ನಾಗವಾರ ಮಧ್ಯೆ ಸುರಂಗ ಮಾರ್ಗ ತಲೆಯೆತ್ತಲಿದೆ. ಇವೆರಡೂ ಮಾರ್ಗಗಳು ಎಂ.ಜಿ. ರಸ್ತೆಯಲ್ಲಿ ಸಂಧಿಸುತ್ತಿವೆ. ಎರಡೂ ನಿಲ್ದಾಣಗಳ ನಡುವೆ ಕನಿಷ್ಠ 80-100 ಮೀ. ಅಂತರ ಇರಲಿದೆ. ಸುರಂಗ ನಿಲ್ದಾಣ ಮಾಣೆಕ್‌ ಷಾ ಪರೇಡ್‌ ಮೈದಾನ ಆವರಣದಲ್ಲಿ ಬರುತ್ತಿದೆ.

ಸೆಂಟ್ರಲ್‌ ಸಿಲ್ಕ್ಬೋರ್ಡ್‌ ನಿಲ್ದಾಣ: ಒಂದೆಡೆ ಆರ್‌.ವಿ. ರಸ್ತೆ-ಎಲೆಕ್ಟ್ರಾನಿಕ್‌ ಸಿಟಿ-ಬೊಮ್ಮಸಂದ್ರ ಮಾರ್ಗ ಹಾಗೂ ಮತ್ತೂಂದೆಡೆ ಹೊರವರ್ತುಲ ರಸ್ತೆ ಮಾರ್ಗ. ಇವೆರಡೂ ಮಾರ್ಗದಲ್ಲಿ ಸಿಲ್ಕ್ಬೋರ್ಡ್‌ ನಿಲ್ದಾಣದ ಪ್ರಸ್ತಾಪ ಇದೆ. ಆದರೆ, ಇವೆರಡರ ನಡುವೆ ಸೇತುವೆಯೊಂದು ಬಂದಿದ್ದು, ನಡುವಿನ ಅಂತರ 300 ಮೀ. ಇದೆ. ಆದ್ದರಿಂದ ಆ ಸೇತುವೆ ಮೇಲೆ ಟ್ರಾವೆಲೇಟರ್‌ ಮತ್ತು ಸ್ಕೈವಾಕ್‌ ನಿರ್ಮಿಸಲು ನಿರ್ಧರಿಸಲಾಗಿದೆ.

ನಾಗವಾರ ನಿಲ್ದಾಣ: ಗೊಟ್ಟಿಗೆರೆ-ನಾಗವಾರ ನಡುವೆ ಮೆಟ್ರೋ ಮಾರ್ಗ ನಿರ್ಮಾಣಗೊಳ್ಳುತ್ತಿದೆ. ಅಲ್ಲಿಗೆ ಕೆ.ಆರ್‌. ಪುರ- ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಡುವಿನ ಎತ್ತರಿಸಿದ ಮಾರ್ಗ ಬಂದು ಸೇರಲಿದೆ. ಎರಡೂ ನಿಲ್ದಾಣಗಳ ನಡುವೆ 60ರಿಂದ 70 ಮೀ. ಅಂತರ ಇರಲಿದೆ.

ಆರ್‌.ವಿ. ರಸ್ತೆ: ಇಲ್ಲಿ ಅಂತರದ ಸಮಸ್ಯೆ ಇಲ್ಲದಿರಬಹುದು. ಆದರೆ, ಹೊಸದಾಗಿ ನಿರ್ಮಿಸಿದ ನಿಲ್ದಾಣವನ್ನು ಭಾಗಶಃ ಒಡೆದು, ಮರುವಿನ್ಯಾಸಗೊಳಿಸಲಾಗಿದೆ. ಇದು ಯೋಜನೆಯ ದೂರದೃಷ್ಟಿ ಕೊರತೆಗೆ ಕನ್ನಡಿ ಹಿಡಿಯುತ್ತದೆ.

ಜಯದೇವ: ಉದ್ದೇಶಿತ ನಿಲ್ದಾಣದಲ್ಲಿ ಡೈರಿವೃತ್ತ-ನಾಗವಾರ ಸುರಂಗ ಮಾರ್ಗ ಹಾಗೂ ಆರ್‌.ವಿ. ರಸ್ತೆ-ಬೊಮ್ಮಸಂದ್ರ ಮಾರ್ಗ ಸಂಧಿಸಲಿದ್ದು, ಒಂದೇ ಕಡೆ ಇಂಟರ್‌ಚೇಂಜ್‌ ಬರಲಿದೆ. ಇಲ್ಲಿ ಅತ್ಯಂತ ಕಡಿಮೆ ಅಂತರ ಇರುವುದರಿಂದ ಪ್ರಯಾಣಿಕರಿಗೆ ಸಮಸ್ಯೆ ಆಗದು.

ಕಾರಣಗಳೇನು?
-ಪ್ರಭಾವಿಗಳ ಒತ್ತಡದಿಂದ ಆಗಾಗ್ಗೆ ವಿನ್ಯಾಸಗಳ ಮಾರ್ಪಾಡು
-ಸರ್ಕಾರಗಳ ಆದ್ಯತೆಗಳು
-ಭೂಸ್ವಾಧೀನ ಮತ್ತಿತರ ಕಾರಣಗಳಿಗೆ ಸ್ಥಳೀಯರ ಪ್ರತಿರೋಧ
-ಮರಗಳ ತೆರವಿಗೆ ಪರಿಸರ ಪ್ರೇಮಿಗಳ ಆಕ್ಷೇಪ
-ಬಿಎಂಆರ್‌ಸಿಎಲ್‌ನ ಆಮೆಗತಿ ಧೋರಣೆ
-ಸಂಪನ್ಮೂಲದ ಸವಾಲು ಇತ್ಯಾದಿ

* ವಿಜಯಕುಮಾರ್‌ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next