Advertisement

ಕಾರ್ಬನ್‌ ತಗ್ಗಿಸಲು ಮೆಟ್ರೋ ಸಹಕಾರಿ

12:08 PM Aug 18, 2020 | Suhan S |

ಬೆಂಗಳೂರು: 641 ಮರಗಳು ಒಂದು ವರ್ಷಕ್ಕೆ 14 ಟನ್‌ನಷ್ಟು ಕಾರ್ಬನ್‌ ಡೈ ಆಕ್ಸೈಡ್‌ ಅನ್ನು ಹಿಡಿದಿಟ್ಟುಕೊಳ್ಳಬಲ್ಲದು. ಆದರೆ, ನಮ್ಮ ಮೆಟ್ರೋ ವರ್ಷಕ್ಕೆ 22,518 ಟನ್‌ನಷ್ಟು ಕಾರ್ಬನ್‌ ತಗ್ಗಿಸಬಲ್ಲದು!

Advertisement

– 21.25 ಕಿ.ಮೀ. ಉದ್ದದ ಗೊಟ್ಟಿಗೆರೆ-ನಾಗವಾರ (ರೀಚ್‌-6) ನಡುವೆ ಮೆಟ್ರೋ ನಿರ್ಮಾಣಕ್ಕಾಗಿ 641 ಮರಗಳ ತೆರವಿಗೆ ತೀವ್ರ ವಿರೋಧ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್‌), ಪರಿಸರವಾದಿಗಳ ಮುಂದೆ ಇಂತಹದ್ದೊಂದು ವಾದ ಮುಂದಿಟ್ಟಿದೆ.

ಎಕಾಮ್‌ ಇಂಡಿಯಾ ಪ್ರೈವೇಟ್‌ ಲಿಮಿಟೆಡ್‌ ಎಂಬ ಸಂಸ್ಥೆ ನೇತೃತ್ವದಲ್ಲಿ ತಜ್ಞರ ತಂಡದಿಂದ ವೈಜ್ಞಾನಿಕ ಅಧ್ಯಯನ ನಡೆಸಿ, ರೀಚ್‌-6 ಮೆಟ್ರೋ ನಿರ್ಮಾಣದಿಂದ ಪರಿಸರಾತ್ಮಕ ಲಾಭಗಳು ಕುರಿತ ವರದಿ ಸಿದ್ಧಪಡಿಸಲಾಗಿದೆ. ಇದರಲ್ಲಿ ಮರಗಳ ತೆರವು ಹಾಗೂ ಮೆಟ್ರೋ ನಿರ್ಮಾಣ ಇವೆರಡರಿಂದ ಆಗಬಹುದಾದ ಲಾಭ-ನಷ್ಟಗಳ ಹೋಲಿಕೆ ಮಾಡಲಾಗಿದೆ. ಇದರಂತೆ ಮರಗಳನ್ನು ಕಡಿಯುವುದರಿಂದ ಹಾನಿ ಆಗುವುದು ನಿಜ. ಆದರೆ, ಈ ಯೋಜನೆಯಿಂದ ಪರಿಸರಕ್ಕೆ ಆಗುವ ಲಾಭ ಹಲವು ಪಟ್ಟು ಹೆಚ್ಚಿದೆ ಎಂದು ಉಲ್ಲೇಖೀಸಲಾಗಿದೆ.

ವರದಿ ಪ್ರಕಾರ ಒಂದು ಮರ ವರ್ಷಕ್ಕೆ 21.8 ಕೆ.ಜಿ. ಕಾರ್ಬನ್‌ ಹೀರಿಕೊಳ್ಳುತ್ತದೆ. ಒಟ್ಟಾರೆ ತೆರವಾಗಲಿರುವ 641 ಮರಗಳಿಂದ ವರ್ಷಕ್ಕೆ 14 ಟನ್‌ನಷ್ಟು ಕಾರ್ಬನ್‌ ಡೈಆಕ್ಸೆ„ಡ್‌ ತಗ್ಗಿಸಬಹುದು. ಆದರೆ, ಇದಕ್ಕೆ ಪ್ರತಿಯಾಗಿ ತಲೆಯೆತ್ತಲಿರುವ ಮೆಟ್ರೋದಿಂದ ಮೊದಲ ವರ್ಷದಲ್ಲೇ 22,518 ಟನ್‌ ಕಾರ್ಬನ್‌ ತಗ್ಗಿಸಬಹುದಾಗಿದ್ದು, 2041ರ ಹೊತ್ತಿಗೆ ಇದರ ಪ್ರಮಾಣ 54,358 ಟನ್‌ ಆಗಲಿದೆ ಎಂದು ಅಂದಾಜಿಸಲಾಗಿದೆ. ಮೆಟ್ರೋ ಬರುವುದರಿಂದ ಇದೆಲ್ಲದರ ಮೇಲಾಗುವ ಪರಿಣಾಮ ಮತ್ತು ಪಲ್ಲಟಗಳನ್ನು ಲೆಕ್ಕಹಾಕಿ, ಸುಮಾರು ಹತ್ತು ಪುಟಗಳ ವರದಿಯನ್ನು ಸಿದ್ಧಪಡಿಸಲಾಗಿದೆ.

ಗೊಟ್ಟಿಗೆರೆ-ನಾಗವಾರ ಮಾರ್ಗದಲ್ಲಿ 2016ರ ಅಧ್ಯಯನದ ಪ್ರಕಾರ ನಿತ್ಯ ಪೀಕ್‌ ಅವರ್‌ (ಬೆಳಗ್ಗೆ 9ರಿಂದ 10)ನಲ್ಲಿ 12 ಸಾವಿರ ಜನ ಸಂಚರಿಸುತ್ತಿದ್ದು, ಒಂದು ದಿನದಲ್ಲಿ 2.63 ಲಕ್ಷ ಜನ ಪ್ರಯಾಣಿಸುತ್ತಾರೆ. ವಾಹನಗಳ ಸಂಚಾರ ದಿನಕ್ಕೆ 24.37 ಲಕ್ಷ ಕಿ.ಮೀ. ಇದೆ. 2021ಕ್ಕೆ ಪೀಕ್‌ ಅವರ್‌ನಲ್ಲಿ ಓಡಾಡುವವರ ಸಂಖ್ಯೆ 16,381 ಆಗಲಿದ್ದು, ಇಡೀ ದಿನದಲ್ಲಿ ಈಮಾರ್ಗದಲ್ಲಿ ಓಡಾಡುವವರ ಸಂಖ್ಯೆ 4.03 ಲಕ್ಷ ತಲುಪಲಿದೆ. ಆಗ, ವಾಹನಗಳ ಸಂಚಾರ ಪ್ರತಿ ದಿನ 38.20 ಕಿ.ಮೀ. ಆಗಲಿದೆ. ಇದೆಲ್ಲದರ ಪರಿಣಾಮ ಜನ ಹೆಚ್ಚು ಹೊತ್ತು ರಸ್ತೆಗಳಲ್ಲಿ ಕಳೆಯಬೇಕಾಗುತ್ತದೆ. ಸಮಯ ವ್ಯಯದ ಜತೆಗೆ ಅವರ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ.

Advertisement

ಒಂದು ವೇಳೆ ಈ ಮಾರ್ಗದಲ್ಲಿ ಮೆಟ್ರೋ ಬಂದರೆ, ಆ ಪ್ರಯಾಣಿಕರೆಲ್ಲರೂ ಸಮೂಹ ಸಾರಿಗೆ ಮೆಟ್ರೋಗೆ ಶಿಫ್ಟ್ ಆಗಬಹುದು ಎಂದು ನಿರೀಕ್ಷಿಸಲಾಗಿದೆ. ಅನುಷ್ಠಾನಗೊಂಡ ಆರಂಭದಲ್ಲೇ ದ್ವಿಚಕ್ರ ವಾಹನ ಸೇರಿದಂತೆ ವಿವಿಧ ಪ್ರಕಾರದ ವಾಹನಗಳಲ್ಲಿ ಸಂಚರಿಸುವ ಸುಮಾರು 2.63 ಲಕ್ಷ ಪ್ರಯಾಣಿಕರು ಮೆಟ್ರೋದತ್ತ ಮುಖಮಾಡುವ ಸಾಧ್ಯತೆ ಇದೆ. 2041ರ ಹೊತ್ತಿಗೆ ಈ ಸಂಖ್ಯೆ 6.19 ಲಕ್ಷ ಆಗುವ ನಿರೀಕ್ಷೆ ಇದೆ. ಇನ್ನು ಅನುಷ್ಠಾನಗೊಂಡ ಮೊದಲ ವರ್ಷದಲ್ಲೇ 77,159 ವಾಹನಗಳು ರಸ್ತೆಗಿಳಿಯುವುದು ತಗ್ಗಿಸಬಹುದು. ಇದರಿಂದ ದಿನಕ್ಕೆ 7.14 ಲಕ್ಷ ಕಿ.ಮೀ. ವಾಹನಗಳ ಸಂಚಾರ ಕಡಿಮೆ ಆಗಲಿದೆ. 2041ರ ವೇಳೆಗೆ ಈ ಮಾರ್ಗದಲ್ಲಿ 1.81 ಲಕ್ಷ ವಾಹನಗಳು ರಸ್ತೆಗಿಳಿಯುವುದು ತಪ್ಪಲಿದ್ದು, 17.25 ಲಕ್ಷ ಕಿ.ಮೀ. ಕಡಿಮೆ ಆಗಲಿದೆ ಎಂದು ವರದಿಯಲ್ಲಿ ತಜ್ಞರು ಉಲ್ಲೇಖೀಸಿದ್ದಾರೆ.ಇದರಿಂದ ಸಹಜವಾಗಿ ವಾಯು ಮಾಲಿನ್ಯ ಕಡಿಮೆ ಆಗಲಿದೆ. ಮೊದಲ ವರ್ಷವೇ ಈ ಮಾರ್ಗದಲ್ಲಿ 439 ಟನ್‌ ಕಾರ್ಬನ್‌, 15.3 ಟನ್ಉಸಿರಾಡಲ್ಪಡುವಾಗ ದೇಹವನ್ನು ಸೇರುವ ಧೂಳಿನ ಕಣಗಳು (ಪಿಎಂ), 22,531 ಟನ್‌ ಕಾರ್ಬನ್‌ ಡೈಆಕ್ಸೆ„ಡ್‌ ಸೇರಿದಂತೆ ವಿವಿಧ ಮಾಲಿನ್ಯಕಾರಕ ಅಂಶಗಳು ತಗ್ಗಲಿವೆ ಎಂದು ಹೇಳಲಾಗಿದೆ.

42 ಕಿ.ಮೀ. ಉದ್ದದ ಮೊದಲ ಹಂತದಲ್ಲಿ ಜನ ಖಾಸಗಿ ವಾಹನಗಳಿಂದ ಮೆಟ್ರೋಗೆ ಶಿಫ್ಟ್ ಆಗಿದ್ದು ಕಣ್ಮುಂದಿದೆ. ಇದರಿಂದ ಉದ್ದೇಶಿತ ಮಾರ್ಗಗಳಲ್ಲಿ ಸಂಚಾರದಟ್ಟಣೆ ಹಾಗೂ ವಾಯುಮಾಲಿನ್ಯ ಸಾಕಷ್ಟು ಕಡಿಮೆ ಆಗಿರುವುದನ್ನೂ ಕಾಣಬಹುದು ಎಂದೂ ವರದಿಯಲ್ಲಿ ಉಲ್ಲೇಖೀಸಲಾಗಿದೆ.

 

ವಿಜಯಕುಮಾರ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next