Advertisement

ಎಸ್ಮಾ ಜಾರಿ ಭೀತಿ?ಪ್ರತಿಭಟನೆ ಹಿಂಪಡೆದ ಸಿಬಂದಿ ; ಮೆಟ್ರೋ ಪುನರಾರಂಭ

08:45 AM Jul 07, 2017 | Team Udayavani |

ಬೆಂಗಳೂರು : ಮೆಟ್ರೋ ಸಿಬಂದಿಯ ಮೇಲೆ ಭದ್ರತಾ ಪಡೆ ಸಿಬಂದಿ ಹಲ್ಲೆ ನಡೆಸಿದ್ದನ್ನು ಖಂಡಿಸಿ ಮೆಟ್ರೋ ಸಿಬಂದಿಗಳು ಶುಕ್ರವಾರ ಬೆಳಗ್ಗೆಯಿಂದ ನಡೆಸುತ್ತಿದ್ದ ಪ್ರತಿಭಟನೆಯನ್ನು ಹಿಂಪಡೆದಿದ್ದು,11 ಗಂಟೆಯಿಂದ ಸಂಚಾರ ಪುನರಾರಂಭಗೊಂಡಿದೆ.   

Advertisement

ಬೆಳಗ್ಗೆ ನಗರದಲ್ಲಿ ಮೆಟ್ರೋ ಸಂಚಾರ ಸಂಪೂರ್ಣ ಸ್ತಬ್ಧಗೊಂಡಿತ್ತು. ಇದರಿಂದಾಗಿ ನಿತ್ಯ ಮೆಟ್ರೋ ಅವಲಂಬಿಸುತ್ತಿದ್ದ ಸಾವಿರಾರು ಪ್ರಯಾಣಿಕರು ಪರದಾಡುವಂತಾಗಿತ್ತು.

ಸಿಬಂದಿಗಳ ಪ್ರತಿಭಟನೆ ಹತ್ತಿಕ್ಕಲು ಸರ್ಕಾರ ಎಸ್ಮಾ ಜಾರಿ ಮಾಡಲು ಮುಂದಾಗಿತ್ತು ಎನ್ನಲಾಗಿದ್ದು, ಈ ಹಿನ್ನಲೆಯಲ್ಲಿ  ಅನಿರ್ಧಿಷ್ಟಾವಧಿ ಪ್ರತಿಭಟನೆ ಯನ್ನು ಹಿಂಪಡೆಯಲು ನಿರ್ಧರಿಸಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. 

ಘಟನೆ ಎನು ? 

ನಗರದ ಸರ್‌ ಎಂ.ವಿಶ್ವೇಶ್ವರಯ್ಯ ಸೆಂಟ್ರಲ್‌ ಕಾಲೇಜು ಮೆಟ್ರೋ ನಿಲ್ದಾಣ ದಲ್ಲಿ ಕ್ಷುಲಕ್ಕ ವಿಚಾರಕ್ಕೆ
ಗುರುವಾರ ಮೆಟ್ರೋ ಸಿಬ್ಬಂದಿ ಹಾಗೂ ರಾಜ್ಯ ಕೈಗಾರಿಕಾ ಭದ್ರತಾ ಪಡೆ ಸಿಬ್ಬಂದಿ ನಡುವೆ ಮಾರಾಮಾರಿ ನಡೆದಿದೆ. ಈ ಸಂಬಂಧ ಇಬ್ಬರು ಮೆಟ್ರೋ ಸಿಬ್ಬಂದಿಯನ್ನು ಹಲಸೂರು ಗೇಟ್‌ ಪೊಲೀಸರು ಬಂಧಿಸಿದ್ದಾರೆ. ರಾಕೇಶ್‌ ಮತ್ತು ಹರೀಶ್‌ ಬಂಧಿತರು. ಆನಂದ್‌ ಗುಡ್ಡದ್‌ ಹಲ್ಲೆಗೊಳಗಾದ ಭದ್ರತಾ ಸಿಬ್ಬಂದಿ.

Advertisement

ಮೆಟ್ರೋದಲ್ಲಿ ಮೇಲ್ವಿಚಾರಕನಾಗಿರುವ ರಾಕೇಶ್‌ ಗುರು ವಾರ ಬೆಳಗ್ಗೆ 6 ಗಂಟೆಗೆ ವಿಶ್ವೇಶ್ವರಯ್ಯ ಸೆಂಟ್ರಲ್‌ ಕಾಲೇಜು ನಿಲ್ದಾಣಕ್ಕೆ ಕರ್ತವ್ಯಕ್ಕೆ ಬಂದಿದ್ದ. ಇದೇ ವೇಳೆ ಭದ್ರತಾ ಸಿಬ್ಬಂದಿ ಆನಂದ್‌ ಗುಡ್ಡದ್‌ ಎಂಬುವರು ಬ್ಯಾಗ್‌ಅನ್ನು ಲೋಹ ಶೋಧಕ ಯಂತ್ರ ಮತ್ತು ಸ್ಕ್ಯಾನಿಂಗ್‌ಗೆ ಒಳಪಡಿಸುವಂತೆ ಸೂಚಿಸಿದ್ದಾರೆ. ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ ರಾಕೇಶ್‌, “ನಾನು ಮೆಟ್ರೋ ಸಿಬ್ಬಂದಿ ನನ್ನ ತಪಾಸಣೆ ಅಗತ್ಯವಿಲ್ಲ,’ ಎಂದು ಜೋರು ಧ್ವನಿಯಲ್ಲಿ ಮಾತನಾಡಿದ್ದಾನೆ. ಆಗ ಅಲ್ಲೇ ಇದ್ದ ಮತ್ತೂರ್ವ ಭದ್ರತಾ ಪೇದೆ ಲಕ್ಷ್ಮಣ್‌ ಕೂಡ ಅದಕ್ಕೆ ಸಹಮತ ವ್ಯಕ್ತಪಡಿಸಿದ್ದಾರೆ. ಇದರಿಂದ ಕೋಪಗೊಂಡ ರಾಕೇಶ್‌ ಸಿಬ್ಬಂದಿ ಮೇಲೆ ಹಲ್ಲೆಗೆ ಯತ್ನಿಸಿದ. ಕೂಡಲೇ ಅಲ್ಲಿದ್ದ ಪ್ರಯಾಣಿಕರು ಸಮಾಧಾನಪಡಿಸಿದರು.

ನಂತರ 10 ಗಂಟೆ ಸುಮಾರಿಗೆ ಸಹೋದ್ಯೋಗಿ ಹರೀಶ್‌ ಹಾಗೂ ಒಂದಷ್ಟು ಜನರ ತಂಡದೊಂದಿಗೆ ಆನಂದ್‌ ಬಳಿಎ ಬಂದ ರಾಕೇಶ್‌ ಹಲ್ಲೆ ಮಾಡಿದ್ದಾನೆ. ಇದನ್ನು ತಡೆಯಲು ಬಂದ ಲಕ್ಷ್ಮಣ್‌ ಮೇಲೂ ಸಹ ಹಲ್ಲೆ ನಡೆಸಿದ್ದಲ್ಲದೆ ಮಹಿಳಾ ಸಿಬ್ಬಂದಿ ಭಾರತಿ ಎಂಬವರನ್ನು ಎಳೆದಾಡಿದ. ಈ ಹಿನ್ನೆಲೆಯಲ್ಲಿ ರಾಕೇಶ್‌ ಮತ್ತು ಹರೀಶ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಕರಣದಲ್ಲಿ ಇನ್ನಷ್ಟು ಮಂದಿ ಭಾಗಿಯಾಗಿರುವ ಸಾಧ್ಯತೆಗಳಿವೆ ಎಂದು ಪೊಲೀಸರು ತಿಳಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next