Advertisement

ಮೆಟ್ರೋ ಬಂದ್‌ ಎಚ್ಚರಿಕೆ ಘಂಟೆ 

11:28 AM Jul 12, 2017 | |

ಬೆಂಗಳೂರು: ಕ್ಷುಲ್ಲಕ ಕಾರಣಕ್ಕೆ ಈಚೆಗೆ ಮೆಟ್ರೋ ಸಿಬ್ಬಂದಿ ನಡೆಸಿದ ಪ್ರತಿಭಟನೆ ಕೆಎಸ್‌ಐಎಸ್‌ಎಫ್ (ಕರ್ನಾಟಕ ಕೈಗಾರಿಕಾ ಭದ್ರತಾ ಪಡೆ) ಸಿಬ್ಬಂದಿ ವಿರುದ್ಧದ ಆಕ್ರೋಶ ಮಾತ್ರವಲ್ಲ. ಈ ಮೂಲಕ ಸ್ವತಃ ಬಿಎಂಆರ್‌ಸಿ ಆಡಳಿತ ಮಂಡಳಿಗೆ ರವಾನಿಸಿದ ಎಚ್ಚರಿಕೆ ಸಂದೇಶವೂ ಆಗಿದೆಯೇ?  “ಹೌದು’ ಎನ್ನುತ್ತಾರೆ ಪ್ರತಿಭಟನೆ ನೇತೃತ್ವ ವಹಿಸಿದ್ದ ಬಿಎಂಆರ್‌ಸಿ ಸಿಬ್ಬಂದಿ. 

Advertisement

ಕರ್ನಾಟಕ ರಾಜ್ಯ ಕೈಗಾರಿಕಾ ಭದ್ರತಾ ಪಡೆಯ ಕಾನ್‌ಸ್ಟೆàಬಲ್‌ಗ‌ಳ ಹಲ್ಲೆಯನ್ನು ಖಂಡಿಸಿ ಮೆಟ್ರೋ ಸಿಬ್ಬಂದಿ ನಡೆಸಿದ ಪ್ರತಿಭಟನೆ, ಏಳು ತಾಸು ಮೆಟ್ರೋ ರೈಲು ಸೇವೆ ಸ್ಥಗಿತಗೊಳ್ಳಲು ಕಾರಣವಾಯಿತು. ಈ ಪ್ರತಿಭಟನೆ ಹಿಂದೆ ಸಿಬ್ಬಂದಿ ಬಗ್ಗೆ ನಿರ್ಲಕ್ಷ್ಯ ಹಾಗೂ ತಾರತಮ್ಯ ಧೋರಣೆ ಅನುಸರಿಸುತ್ತಿರುವ ಬಿಎಂಆರ್‌ಸಿ ಆಡಳಿತ ಮಂಡಳಿಗೆ ಎಚ್ಚರಿಕೆ ಸಂದೇಶ ರವಾನಿಸುವ ಉದ್ದೇಶವೂ ಇತ್ತು ಎಂದು ಹೇಳಲಾಗಿದೆ.

ಕಳೆದ ಏಳು ವರ್ಷಗಳಿಂದ ಕಾರ್ಯಾಚರಣೆ ಮತ್ತು ನಿರ್ವಹಣಾ ಸಿಬ್ಬಂದಿಗೆ ಅನ್ಯಾಯವಾಗುತ್ತಿದ್ದು, ನೌಕರರಿಗೆ ನೀಡುವ ಭತ್ಯೆ, ಮುಂಬಡ್ತಿ, ವಸತಿ ಗೃಹಗಳ ಹಂಚಿಕೆ ಸೇರಿದಂತೆ ವಿವಿಧ ವಿಚಾರಗಳಲ್ಲಿ ತಾರತಮ್ಯ ಅನುಸರಿಸಲಾಗುತ್ತಿದೆ. ಜತೆಗೆ ಕಾರ್ಯ ಒತ್ತಡವೂ ಇದೆ. ಈ ಅನ್ಯಾಯ ಸರಿಪಡಿಸುವಂತೆ ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನ ಆಗಿಲ್ಲ. ಪ್ರತಿ ಶನಿವಾರ ನಿಗಮದ ಆಡಳಿತ ಮಂಡಳಿಯಿಂದ ಸಿಬ್ಬಂದಿ ಸಭೆ ನಡೆಯುತ್ತದೆ.

ಆ ಸಭೆಯಲ್ಲಿ ಕೂಡ ಅಸಮಾಧಾನ ತೋಡಿಕೊಳ್ಳಲು ಅವಕಾಶ ಇರಲಿಲ್ಲ ಎಂದು ಪ್ರತಿಭಟನೆಯ ನೇತೃತ್ವ ವಹಿಸಿದ್ದ ಸಿಬ್ಬಂದಿಯೊಬ್ಬರು ಆರೋಪಿಸಿದ್ದಾರೆ. ಈ ಅನ್ಯಾಯದ ವಿರುದ್ಧ ಆಕ್ರೋಶ ಹೊರಹಾಕಲು ಸೂಕ್ತ ಸಂದರ್ಭಗಳು ಸಿಕ್ಕಿರಲಿಲ್ಲ. ಇದೆಲ್ಲದಕ್ಕೂ ಕೆಎಸ್‌ಐಎಸ್‌ಎಫ್ ಸಿಬ್ಬಂದಿ ನಡುವೆ ನಡೆದ ಘಟನೆ “ಆಕ್ರೋಶದ ಕಿಡಿ’ ಆಯಿತು ಎಂದು ಅವರು ಹೇಳುತ್ತಾರೆ. 

ಕಾರ್ಯಾಚರಣೆ ಮತ್ತು ನಿರ್ವಹಣಾ ವಿಭಾಗದ ಉದ್ಯೋಗಿಗಳ ಕಡೆಗಣನೆ ಹಾಗೂ ಯೋಜನಾ ವಿಭಾಗದ ಉದ್ಯೋಗಿಗಳಿಗೆ ಮಾತ್ರ ಮನ್ನಣೆ. ಕೇವಲ ಸಂಬಳ ಮತ್ತು ವೈದ್ಯಕೀಯ ವೆಚ್ಚ ಮರುಪಾವತಿ ಹೊರತುಪಡಿಸಿದರೆ, ಇನ್ನಾವುದೇ ಭತ್ಯೆಗಳನ್ನು ನೀಡುತ್ತಿಲ್ಲ. ಆದರೆ, ಯೋಜನಾ (ಪ್ರಾಜೆಕ್ಟ್) ವಿಭಾಗದವರು ಎಲ್ಲ ರೀತಿಯ ಭತ್ಯೆ ಪಡೆಯುತ್ತಿದ್ದಾರೆ. 

Advertisement

ಕೊಚ್ಚಿಗಿಂತ ಕಡಿಮೆ ಸೌಲಭ್ಯ
ಆರಂಭದಲ್ಲಿ ಬಿಎಂಆರ್‌ಸಿ ಎಲ್ಲ ಯೋಜನೆ ಮತ್ತು ನೇಮಕಾತಿಯ ರೂಪುರೇಷೆ ಹಾಗೂ ಇತರೆ ವಿಷಯಗಳಲ್ಲಿ ದೆಹಲಿ ಮೆಟ್ರೋ ರೈಲು ನಿಗಮ (ಡಿಎಂಆರ್‌ಸಿ) ಅನುಸರಿಸಲಾಗುತ್ತಿದೆ. ಆದರೆ, ಸಂಬಳ, ಭತ್ಯೆ ಮತ್ತು ಮುಂಬಡ್ತಿ ಯೋಜನೆ ವಿಚಾರದಲ್ಲಿ ಯಾವುದೇ ಮಾನದಂಡವಿಲ್ಲದೆ, ತಮಗೆ ಮನಬಂದಂತೆ ಮಾಡಿ, ನೌಕರರಿಗೆ ಅನ್ಯಾಯ ಮಾಡಲಾಗುತ್ತಿದೆ.

ಈಚೆಗೆ ಆರಂಭವಾದ ಕೊಚ್ಚಿ ಮೆಟ್ರೋದಲ್ಲಿ ಸಿಬ್ಬಂದಿಗೆ ಎಲ್ಲ ಪ್ರಕಾರದ ಭತ್ಯೆ ನೀಡಲಾಗುತ್ತಿದೆ. ತಮಗೆ ಕೊಡುತ್ತಿಲ್ಲ ಎಂಬ ಆಕ್ರೋಶ ಮನೆಮಾಡಿತ್ತು. ಇದೆಲ್ಲ ಆರೋಪಗಳ ಹಿನ್ನೆಲೆಯಲ್ಲಿ ಈ ಹಿಂದೆ 40ಕ್ಕೂ ಹೆಚ್ಚು ಸಿಬ್ಬಂದಿ ಏಕಕಾಲದಲ್ಲಿ ರಾಜೀನಾಮೆ ನೀಡಿದ್ದರು. ಈಗಲೂ ಇನ್ನೂ ಹಲವರು ಹೋಗಲು ಸಿದ್ಧತೆ ನಡೆಸಿದ್ದಾರೆ ಎಂದೂ ಅವರು ತಿಳಿಸಿದ್ದಾರೆ. 

ಇದರ ಜತೆಗೆ ವರ್ಷದಿಂದ ಕೆಎಸ್‌ಐಎಸ್‌ಎಫ್ ಸಿಬ್ಬಂದಿ ಮತ್ತು ಬಿಎಂಆರ್‌ಸಿ ಸಿಬ್ಬಂದಿ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಿದೆ. ಈ ಬಗ್ಗೆ ನಿಗಮದ ಮೇಲಧಿಕಾರಿಗಳಿಗೂ ಹಲವು ಬಾರಿ ಮನವಿ ಸಲ್ಲಿಸಲಾಗಿದೆ. ಈ ಕುರಿತು ಯಾವುದೇ ಕ್ರಮ ಕೈಗೊಂಡಿಲ್ಲ. ಈ ಮಧ್ಯೆ ಗಲಾಟೆಯಾದ ದಿನ ಕರ್ತವ್ಯನಿರತ ಸಿಬ್ಬಂದಿಯನ್ನು ಬಂಧಿಸಿದ್ದು, ಹಲವರ ವಿರುದ್ಧ ಎಫ್ಐಆರ್‌ ದಾಖಲಿಸಿದರೂ ಸಿಬ್ಬಂದಿ ಬೆಂಬಲಕ್ಕೆ ತಕ್ಷಣಕ್ಕೆ ನಿಲ್ಲಲಿಲ್ಲ. ಇದೆಲ್ಲವೂ ಆಕ್ರೋಶಕ್ಕೆ ಕಾರಣವಾಯಿತು ಎಂದು ಹಲವು ಪ್ರತಿಭಟನಾಕಾರರು ಆರೋಪಿಸುತ್ತಾರೆ. 

ಜುಲೈ 6 ಮತ್ತು 7ರಂದು ಏನಾಯ್ತು ಎಂಬುದು ಎಲ್ಲರಿಗೂ ಗೊತ್ತಿದೆ. ಅಂದಿನದ್ದು ಕೆಎಸ್‌ಐಎಸ್‌ಎಫ್ ಮತ್ತು ಬಿಎಂಆರ್‌ಸಿ ಸಿಬ್ಬಂದಿ ನಡುವೆ ನಡೆದ ಜಗಳ ಅಷ್ಟೇ. ಇನ್ನು ಬಿಎಂಆರ್‌ಸಿ ಸಿಬ್ಬಂದಿ ವೇತನ, ಮುಂಬಡ್ತಿ, ಭತ್ಯೆ ಸೇರಿದಂತೆ ಹಲವು ವಿಚಾರಗಳು ತುಂಬಾ ಸಂಕೀರ್ಣ ಮತ್ತು ಸೂಕ್ಷ್ಮವಾದವು. ಇವೆಲ್ಲಾ ಆಡಳಿತ ಮಂಡಳಿ ಸಭೆಯಲ್ಲಿ ಚರ್ಚಿಸಿ ತೀರ್ಮಾನ ಆಗುತ್ತವೆ. ದೂರವಾಣಿ ಮೂಲಕ ಹೀಗೆ ತಕ್ಷಣಕ್ಕೆ ಪ್ರತಿಕ್ರಿಯಿಸಲು ಬರುವುದಿಲ್ಲ. 
-ಪ್ರದೀಪ್‌ಸಿಂಗ್‌ ಖರೋಲಾ, ವ್ಯವಸ್ಥಾಪಕ ನಿರ್ದೇಶಕರು, ಬಿಎಂಆರ್‌ಸಿ.  

ಬೂದಿಮುಚ್ಚಿದ ಕೆಂಡ
ಕೆಎಸ್‌ಐಎಸ್‌ಎಫ್ ಮತ್ತು ಬಿಎಂಆರ್‌ಸಿ ನಡುವಿನ ನಾಲ್ಕು ದಿನಗಳ ಹಿಂದೆ ನಡೆದ ಗಲಾಟೆ ಈಗಲೂ ಬೂದಿಮುಚ್ಚಿದ ಕೆಂಡದಂತೇ ಇದೆ. ಪ್ರತಿಕಾರದ ಘಟನೆಗಳು ನಡೆಯಬಹುದಾದ ಸಾಧ್ಯತೆಗಳಿರುವ ಹಿನ್ನೆಲೆಯಲ್ಲಿ ಬಿಎಂಆರ್‌ಸಿ ಪ್ರಧಾನ ವ್ಯವಸ್ಥಾಪಕ (ಕಾರ್ಯಾಚರಣೆ)ರಿಗೆ ಮೆಟ್ರೋ ಸಿಬ್ಬಂದಿ ಮೌಖೀಕವಾಗಿ ದೂರು ನೀಡಿದ್ದಾರೆ ಎಂದು ಸಂಸ್ಥೆಯ ಮೂಲಗಳು ತಿಳಸಿವೆ.

* ವಿಜಯಕುಮಾರ್‌ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next