Advertisement

ಕೇಪು ಹಿ.ಪ್ರಾ.ಶಾಲೆಯಲ್ಲಿ ಗಮನ ಸೆಳೆದ ಮೆಟ್ರಿಕ್‌ ಮೇಳ 

06:19 AM Feb 23, 2019 | |

ಕಡಬ : ವಿದ್ಯಾರ್ಥಿಗಳಲ್ಲಿ ವ್ಯಾಪಾರ, ಲೆಕ್ಕಾಚಾರ, ವ್ಯವಹಾರ ಜ್ಞಾನ ವೃದ್ಧಿಸುವ ಮತ್ತು ಲಾಭ-ನಷ್ಟದ ಅನುಭವವನ್ನು ಪಡೆಯುವ ಉದ್ದೇಶದಿಂದ ಕುಟ್ರಾಪ್ಪಾಡಿ ಗ್ರಾಮದ ಕೇಪು ಸರಕಾರಿ ಹಿ.ಪ್ರಾ. ಶಾಲೆಯಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ಮೆಟ್ರಿಕ್‌ ಮೇಳವು ವಿದ್ಯಾರ್ಥಿಗಳ ತರಕಾರಿ ಸಂತೆಯ ಮೂಲಕ ಗಮನ ಸೆಳೆಯಿತು.

Advertisement

ವ್ಯಾಪಾರಿಗಳಾದ ವಿದ್ಯಾರ್ಥಿಗಳು
ಸಂತೆ ಮಾರುಕಟ್ಟೆಯಲ್ಲಿ ತರಕಾರಿ ಮಾರುವ ವ್ಯಾಪಾರಿಗಳಂತೆ ವಠಾರದಲ್ಲಿ ತಾವು ತಂದಿದ್ದ ತರಕಾರಿಗಳನ್ನು ಮುಂದಿಟ್ಟುಕೊಂಡು ಕುಳಿತ ವಿದ್ಯಾರ್ಥಿಗಳು ಬೆಳಗ್ಗೆಯಿಂದ ಮಧ್ಯಾಹ್ನದ ತನಕ ನುರಿತ ವ್ಯಾಪಾರಿಗಳಂತೆ ವ್ಯವಹಾರ ನಡೆಸಿ ತಮ್ಮಲ್ಲಿದ್ದ ವಸ್ತುಗಳನ್ನು ಮಾರಾಟ ಮಾಡಿ ಒಟ್ಟು 10,026 ರೂ. ಗಳಿಸಿದರು. ವ್ಯಾಪಾರಕ್ಕೆ ಕುಳಿತ ಸುಮಾರು 25 ವಿದ್ಯಾರ್ಥಿ, ವಿದ್ಯಾರ್ಥಿನಿಯರು ಮಾತಿನ ಮೋಡಿಯಿಂದ ಗ್ರಾಹಕರನ್ನು ಕರೆ ಕರೆದು ತಂದಿದ್ದ ಎಲ್ಲ ತರಕಾರಿಗಳನ್ನು ಮಧ್ಯಾಹ್ನದೊಳಗೆ ಮಾರಾಟ ಮಾಡಿ ಗಮನ ಸೆಳೆದರು.

ತರಕಾರಿ ಮಾರಾಟ ಮಾಡಿ 1,480 ರೂ. ಗಳಿಸಿದ 7ನೇ ತರಗತಿಯ ಕೀರ್ತನ್‌ (ಪ್ರಥಮ), 780 ರೂ. ಗಳಿಸಿದ 5ನೇ ತರಗತಿಯ ಜೀವನ್‌ (ದ್ವಿತೀಯ), 680 ರೂ. ಗಳಿಸಿದ 3ನೇ ತರಗತಿಯ ಅರವಿಂದ (ತೃತೀಯ) ಬಹುಮಾನ ಪಡೆದರು. 

ತರಹೇವಾರಿ ತಾಜಾ ತರಕಾರಿ
ಬಸಳೆ ಕಟ್ಟು, ಬದನೆ, ಬೆಂಡೆಕಾಯಿ, ನುಗ್ಗೆ, ಕದಳಿ ಬಾಳೆಕಾಯಿ, ನೇಂದ್ರ ಬಾಳೆಕಾಯಿ, ಔಂಡ ಬಾಳೆಕಾಯಿ, ತೆಂಗಿನಕಾಯಿ, ಎಳನೀರು, ಕರಿಬೇವಿನ ಸೊಪ್ಪು, ಸಾಂಬಾರ್‌ ಸೊಪ್ಪು, ಒಂದೆಲಗ, ಕೆಸುವಿನ ಗೆಡ್ಡೆ, ಸುವರ್ಣ ಗೆಡ್ಡೆ, ಅವರೆ ಕಾಯಿ, ಸಿಹಿಗೆಣಸು, ನೆಲ್ಲಿ ಕಾಯಿ, ಅಲಸಂಡೆ, ಸೌತೆ, ಕೆಸುವಿನ ದಂಟು, ಕೆಸುವಿನ ಗೆಡ್ಡೆ, ಮೂಂಡಿ ಗೆಡ್ಡೆ, ಅಂಬಟೆಕಾಯಿ ಹೀಗೆ ತರಹೇವಾರಿ ತರಕಾರಿ, ಹೂವಿನ ಗಿಡ, ತರಕಾರಿ ಗಿಡಗಳನ್ನು ವಿದ್ಯಾರ್ಥಿಗಳು ಮಾರಾಟ ಮಾಡಿದರು.

ಸಂತೆಗೆ ಚಾಲನೆ
ವಿಜಯ ಬ್ಯಾಂಕ್‌ ಪ್ರವರ್ತಿತ ವಿಜಯ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸದಾಶಿವ ಆಚಾರ್‌ ತರಕಾರಿ ಸಂತೆಗೆ ಚಾಲನೆ ನೀಡಿದರು. ಕುಟ್ರಾಪ್ಪಾಡಿ ಗ್ರಾ.ಪಂ. ಅಧ್ಯಕ್ಷೆ ವಿದ್ಯಾ ಕಿರಣ್‌ ಗೋಗಟೆ ಮೆಟ್ರಿಕ್‌ ಮೇಳವನ್ನು ಉದ್ಘಾಟಿಸಿದರು. ಗ್ರಾ.ಪಂ. ಸದಸ್ಯರಾದ ಶಿವಪ್ರಸಾದ್‌ ರೈ ಮೈಲೇರಿ, ಜಾನಕಿ, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಗುಡ್ಡಪ್ಪ ಗೌಡ ಪೊನ್ನೆತ್ತಿಮಾರ್‌, ವಂ| ಪಿ.ಕೆ. ಅಬ್ರಹಾಂ, ಕೃಷಿಕ ಗಿರಿಧರ ರೈ ಪಿಜಕಳ, ವಿದ್ಯಾರ್ಥಿ ನಾಯಕ ಹರ್ಷಿತ್‌ ಎಚ್‌. ಉಪಸ್ಥಿತರಿದ್ದರು.

Advertisement

ಮುಖ್ಯಶಿಕ್ಷಕ ಹರಿಪ್ರಸಾದ್‌ ಉಪಾಧ್ಯಾಯ ಸ್ವಾಗತಿಸಿ, ಶಿಕ್ಷಕಿ ಮಿನಿ ವರ್ಗೀಸ್‌ ವಂದಿಸಿದರು. ದಾಮೋದರ ಕೆ. ನಿರೂಪಿಸಿದರು. ಶಿಕ್ಷಕ ವೃಂದದ ಭುವನೇಶ್ವರಿ ಡಿ., ಗೀತಾಕುಮಾರಿ, ಆಶಾ ಪಿ.ಕೆ. ಸಹಕರಿಸಿದರು. ವಿದ್ಯಾರ್ಥಿಗಳ ಪೋಷಕರು, ಹಳೆ ವಿದ್ಯಾರ್ಥಿ ಸಂಘದ ಸದಸ್ಯರು, ಶಾಲಾಭಿವೃದ್ಧಿ ಸಮಿತಿಯವರು ಹಾಗೂ ಊರವರು ಮಕ್ಕಳಿಂದ ತರಕಾರಿ ಖರೀದಿಸಿ ಪ್ರೋತ್ಸಾಹಿಸಿದರು.

ಜೀವನಕ್ಕೆ ಅನುಕೂಲ
ಮಕ್ಕಳಿಗೆ ಈ ರೀತಿಯ ಪಠ್ಯಪೂರಕ ಚಟುವಟಿಕೆಗಳೂ ಅಗತ್ಯ. ಪಟ್ಟಣ ಪ್ರದೇಶದ ವಿದ್ಯಾರ್ಥಿಗಳಿಗೆ ಕೃಷಿಯ ಕುರಿತು ಮಾಹಿತಿ ಇಲ್ಲ. ತಾವು ಉಣ್ಣುವ ಅನ್ನಕ್ಕೆ ಬಳಸುವ ಅಕ್ಕಿ ಹೇಗೆ ತಯಾರಾಗುತ್ತದೆ ಎನ್ನುವ ಪ್ರಾಥಮಿಕ ಜ್ಞಾನವೂ ಮಕ್ಕಳಿಗಿಲ್ಲ ಎನ್ನುವುದು ವಿಷಾದದ ಸಂಗತಿ. ವಿದ್ಯಾರ್ಥಿಗಳು ಲೆಕ್ಕಾಚಾರ, ವ್ಯವಹಾರ ಜ್ಞಾನ ವೃದ್ಧಿಸುವ ಮತ್ತು ಲಾಭ ನಷ್ಟದ ಅನುಭವವನುಕಂಡುಕೊಳ್ಳಲು ಸಾಧ್ಯವಾಗಿದೆ. ಈ ರೀತಿಯ ಕಲಿಕೆ ಮುಂದಿನ ಜೀವನಕ್ಕೆ ಅನುಕೂಲವಾಗಲಿದೆ.
– ಸದಾಶಿವ ಆಚಾರ್‌ ಸಿಇಒ, ವಿಜಯ
ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನ 

ಹೊಸ ಅನುಭವ
ನಮಗೆ ಇದೊಂದು ಅಪೂರ್ವ ಅನುಭವ. ಗ್ರಾಹಕರೊಂದಿಗೆ ಚೌಕಾಶಿ ಮಾಡಿ ನಮ್ಮ ವಸ್ತುಗಳನ್ನು ಅವರಿಗೆ ಮಾರಾಟ ಮಾಡಿದಾಗ ಸಿಗುವ ಆನಂದವೇ ಬೇರೆ. ನಾವು ಪೇಟೆಯಲ್ಲಿ ವಸ್ತುಗಳನ್ನು ಖರೀದಿ ಮಾಡುವಾಗ ಯಾವ ರೀತಿಯಲ್ಲಿ ವ್ಯವಹರಿಸಬೇಕು ಎನ್ನುವ ಪಾಠವೂ ನಮಗೆ ಈ ತರಕಾರಿ ಸಂತೆಯಿಂದ ಸಿಕ್ಕಿದೆ.
– ಕೀರ್ತನ್‌, ವಿದ್ಯಾರ್ಥಿ 

Advertisement

Udayavani is now on Telegram. Click here to join our channel and stay updated with the latest news.

Next