Advertisement

ಚೋಟುದ್ದದ ಮೇತ್ರಾಣಿ, ಸಾಧನೆಗಳ ಮಹಾರಾಣಿ!

12:54 AM Jul 18, 2021 | Team Udayavani |

ಹುಟ್ಟಿದ ಮಗುವಿನ ಬೆಳವಣಿಗೆ ಸಹಜವಾಗಿ ಆಗದೇ ಹೋದರೆ ಹೆತ್ತವರು ತತ್ತರಿಸಿ ಹೋಗುತ್ತಾರೆ. ಅಕಸ್ಮಾತ್‌ ಆ ಮಗುವಿನ ತಲೆ ದಪ್ಪಕ್ಕಿದ್ದು, ಉಳಿದ ಅಂಗಗಳು ಸಣ್ಣಕ್ಕಿದ್ದರೆ, ಆ ಕ್ಷಣದಿಂದಲೇ ಮಗುವಿನ ಬಗ್ಗೆ ಯಾವುದೇ ನಿರೀಕ್ಷೆ ಇಟ್ಟುಕೊಳ್ಳುವುದನ್ನೇ ಬಿಟ್ಟು ಬಿಡುತ್ತಾರೆ. ಮಕ್ಕಳೂ ಅಷ್ಟೇ. ತಮಗೆ ಶಾಪದಂತೆ ಜತೆಯಾದ ಕುಬ್ಜತೆಯಿಂದಲೇ ಕೊರಗಿ ಕಂಗಾಲಾಗುತ್ತಾರೆ. ಡಿಪ್ರಶನ್‌ಗೆ ತುತ್ತಾ ಗು   ತ್ತಾರೆ. ಈ ನಂಬಿಕೆಯನ್ನೇ ಸುಳ್ಳು ಮಾಡುವಂಥ ಸಾಧಕಿಯೊಬ್ಬರ ಕಥೆ ಇದು. 4 ಅಡಿ ಮಾತ್ರ ಇರುವ ಈಕೆಯ ಹೆಸರು- ಜುಮಾರ್‌ ಮೇತ್ರಾಣಿ. ಡೈನಿಂಗ್‌ ಟೇಬಲ್‌ನಷ್ಟೇ ಎತ್ತರಕ್ಕಿರುವ ಈಕೆಯ ಸಾಧನೆ ಏಣಿಯಷ್ಟು ದೊಡ್ಡದು! ಒಂದೇ ಮಾತಿನಲ್ಲಿ ಹೇಳುವುದಾದರೆ, ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬ ಮಾತಿಗೆ ಪ್ರತ್ಯಕ್ಷ ಸಾಕ್ಷಿ ಎನ್ನುವಂತೆ ಮೇತ್ರಾಣಿ ಅನ್ನುವ ಮಹಾರಾಣಿ ಇದ್ದಾಳೆ!
* * *
ಪ್ರತಿಯೊಂದು ಕುಟುಂಬದ ಹೆತ್ತವರು ಹೆಮ್ಮೆ ಪಡುವಂಥ ಸಾಧನೆ ಮಾಡಿರುವ ಮೇತ್ರಾಣಿ ತಮ್ಮ ಬದುಕಿಗೆ ಬಂದ ಸಂದರ್ಭವನ್ನು, ಅನಂತರ ಜತೆ ಯಾದ ತಲ್ಲಣ ಗಳನ್ನು ಮೇತ್ರಾಣಿಯ ತಾಯಿ ಶೋಭಾ ಹೇಳಿಕೊಂಡಿರುವುದು ಹೀಗೆ: ಅದು 1979ರ ಮಾತು. ನಾವು ಮುಂಬಯಿಯಲ್ಲಿದ್ದವು. ನನ್ನ ಗಂಡ ದುಬಾೖಯಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ಕುಟುಂಬಕ್ಕೆ ಹೊಸ ಕಂದ ಮ್ಮನ ಸೇರ್ಪಡೆ ಆಗಿದ್ದು ಆಗಲೇ. ನನಗೋ, ತಾಯಿ ಯಾದೆನೆಂಬ ಸಂಭ್ರಮ. ಮಡಿ ಲಲ್ಲಿದ್ದ ಮಗುವನ್ನು ಹಗಲಿರುಳೂ ಮುದ್ದಿಸುವುದೇ ನನ್ನ ಫ‌ುಲ್‌ ಟೈಮ್‌ ಕೆಲಸವಾಗಿತ್ತು. ಅದು ನಕ್ಕರೂ ಚೆಂದ, ಅತ್ತರೂ ಚೆಂದ ಅನಿಸುತ್ತಿತ್ತು. ಮಗಳೇ ನನ್ನ ಜಗತ್ತು ಎಂದು ನಾನು ಮೈಮರೆತಿದ್ದಾಗಲೇ, ಮಗುವನ್ನು ನೋಡಲು ಬಂದಿದ್ದವರು ತಮ್ಮ ತಮ್ಮಲ್ಲಿಯೇ ಏನೋ ಮಾತಾಡಿಕೊಂಡು ಹೋಗಿ ಬಿಡುತ್ತಿದ್ದರು. ಅದೇನೆಂದು ನಾನೂ ಕೇಳಲಿಲ್ಲ, ಅವರೂ ಹೇಳಲಿಲ್ಲ. ಕಡೆಗೊಂದು ದಿನ ಪರಿಚಯದ ಒಬ್ಬರು “ಗುಟ್ಟು’ ಎನ್ನುವಂತೆ ಹೇಳಿದರು: “ನೀವು ಗಮನಿಸಿಲ್ಲವಾ? ನಿಮ್ಮ ಮಗುವಿನ ದೇಹಾಕೃತಿಯಲ್ಲಿ ಏನೋ ವ್ಯತ್ಯಾಸ ಇರುವಂತಿದೆ. ಹೊಟ್ಟೆಗಿಂತ ತಲೆಯೇ ದಪ್ಪಕ್ಕಿದೆ…’

Advertisement

ಈ ಮಾತು ಕೇಳಿ, ಶಾಕ್‌ ಹೊಡೆದವಳಂತೆ ಬೆಚ್ಚಿ ಬಿದ್ದೆ. ಪಕ್ಕದಲ್ಲಿಯೇ ಮಲಗಿದ್ದ ಮಗುವನ್ನೊಮ್ಮೆ ಆಪಾದಮಸ್ತಕ ದಿಟ್ಟಿಸಿದೆ. ಬಂಧುಗಳು ಹೇಳಿದ ಮಾತಿನಲ್ಲಿ ಸತ್ಯವಿತ್ತು. ನಿಜ ಹೇಳಬೇಕೆಂದರೆ, ಅವತ್ತಿನವರೆಗೂ ನಾನು ಮಗುವನ್ನು ಸೂಕ್ಷ¾ವಾಗಿ ಗಮನಿಸಿರಲೇ ಇಲ್ಲ. ಅಮ್ಮನಾದ ಸಂಭ್ರಮದಲ್ಲಿ ಮೈಮರೆತು ಹಾಯಾಗಿ¨ªೆ. ಮಗು ವನ್ನು ನೋಡಲು ಬಂದವರು ತಮ್ಮಷ್ಟಕ್ಕೇ ಮಾತಾಡಿಕೊಳ್ಳುತ್ತಿ ದ್ದುದು ಏಕೆಂದು ಈಗ ಅರ್ಥವಾಯಿತು. ಈಗ ಮಾಡುವು ದೇನು? ಹೇಳಿ ಕೇಳಿ ಹೆಣ್ಣು ಮಗು. ಹೀಗೇ ಉಳಿದರೆ ಅದರ ಭವಿಷ್ಯ ವೇನು? ಮುಂದೊಮ್ಮೆ ತಲೆಯ ಗಾತ್ರ ಮತ್ತಷ್ಟು ದೊಡ್ಡ ದಾಗಿ ಅದರಿಂದ ಮಗುವಿನ ಜೀವಕ್ಕೆ ಅಪಾಯವಾದರೆ ಗತಿ ಯೇನು ಅನ್ನಿಸಿತು. ಎಲ್ಲ ಸಂಗತಿಯನ್ನೂ ವಿವರಿಸಿ ಗಂಡನಿಗೆ ಪತ್ರ ಬರೆದು, ಮಗುವಿನೊಂದಿಗೆ ಹೆಸರಾಂತ ಆಸ್ಪತ್ರೆಗೆ ಹೋದೆ. ಕೂಲಂ ಕಷ ವಾಗಿ ಪರೀಕ್ಷಿಸಿದ ವೈದ್ಯರು-“ಮಗುವಿನ ತಲೆಬುರುಡೆಯೊಳಗೆ ನೀರು ತುಂಬಿಕೊಂಡಿದೆ. ಅದೇ ಕಾರಣಕ್ಕೆ ತಲೆ ಬುರುಡೆ ಊದಿ ಕೊಂಡಿದೆ. ಆಪರೇಷನ್‌ ಮಾಡಿ ಆ ನೀರನ್ನು ಹೊರಗೆ ತೆಗೆದರೆ, ಎಲ್ಲ ಸರಿ ಹೋಗುತ್ತೆ’ ಎಂದರು. ಮಗುವಿನ ಜೀವ ಮುಖ್ಯ ಅನಿಸಿದ್ದರಿಂದ ತತ್‌ಕ್ಷಣವೇ ಆಪರೇಷನ್‌ ಮಾಡಲು ವಿನಂತಿಸಿದೆ.

ಅನಂತರದಲ್ಲಿ ಆಗಿದ್ದೇ ಬೇರೆ. “ನೆತ್ತಿ ಸೀಳಿ ನೋಡಿದೆವು. ಆದರೆ ಅಲ್ಲಿ ನೀರು ಇರಲಿಲ್ಲ’- ಎನ್ನುತ್ತಾ ವೈದ್ಯರು ಎದ್ದು ಹೋಗಿಯೇ ಬಿಟ್ಟರು. ಆಗ ನನಗಾದ ನಿರಾಸೆ ಅಷ್ಟಿಷ್ಟಲ್ಲ. ಆ ವೈದ್ಯರ ಜತೆಗೆ ಜಗಳ ಮಾಡಿದೆ. ಅದುವರೆಗೆ ಅವರು ನೀಡಿದ್ದ ಚಿಕಿತ್ಸೆ, ತಯಾರಿಸಿದ್ದ ರೆಕಾರ್ಡ್‌ಗಳನ್ನು ಪಡೆದುಕೊಂಡು ಮತ್ತೂಬ್ಬ ವೈದ್ಯರ ಬಳಿ ಹೋಗಿ ನಡೆದುದನ್ನೆಲ್ಲ ವಿವರವಾಗಿ ಹೇಳಿದೆ.

ಮಗುವನ್ನು ಪರೀಕ್ಷಿಸಿದ ಅವರು, ಈ ಮೊದಲು ಆಪರೇಷನ್‌ ಮಾಡಿದಾಗ ಆಗಿದ್ದ ಕುಳಿ ಯನ್ನು ಮುಚ್ಚಲು ಮತ್ತೂಂದು ಆಪರೇಷನ್‌ ಮಾಡಿದರು. ಅನಂತರ ನನ್ನನ್ನು ಚೇಂಬರ್‌ನಲ್ಲಿ ಕೂರಿಸಿಕೊಂಡು ಹೇಳಿದರು: ನೋಡೀ, ನಿಮ್ಮ ಮಗುವಿಗೆ ಇರುವುದು ಅಕೋಂಡ್ರೋಪ್ಲಾಸಿಯಾ ಎಂಬ ಸಮಸ್ಯೆ. ಇದು 40,000ದಲ್ಲಿ ಒಂದು ಮಗುವಿಗೆ ಕಾಣಿಸಿ ಕೊಳ್ಳುತ್ತೆ. ಈ ಸಮಸ್ಯೆ ಇರುವ ಮಗುವಿಗೆ ತಲೆಯ ಗಾತ್ರ ದಪ್ಪ ಇರುತ್ತೆ. ಮಕ್ಕಳು ಉದ್ದಕ್ಕೆ ಬೆಳೆಯುವುದಿಲ್ಲ. ಅಷ್ಟು ಬಿಟ್ಟರೆ ಬೇರೆ ಯಾವ ಸಮಸ್ಯೆ ಕೂಡ ಇರಲ್ಲ. ಮುಖ್ಯವಾಗಿ, ಈ ಸಮಸ್ಯೆ ಇದ್ದರೂ ಮಕ್ಕಳು ತುಂಬಾ ಚುರು ಕಾಗಿರ್ತಾರೆ. ಬುದ್ಧಿವಂತರಾಗಿ ರ್ತಾರೆ. ಹಾಗಾ ಗಿ ಮಗುವಿನ ಭವಿಷ್ಯದ ಬಗ್ಗೆ ಯೋಚನೆ ಮಾಡ ಬೇಡಿ. ಇದೇ ಸಮಸ್ಯೆಯನ್ನು ಮುಂದಿಟ್ಕೊಂಡು ಯಾವ ಆಸ್ಪತ್ರೆಗೂ ಹೋಗ ಬೇಡಿ. ಬದುಕನ್ನು, ಈ ಮಗುವನ್ನು, ಅದು ಇರು ವಂತೆಯೇ ಸ್ವೀಕರಿಸಿ… ಅನಂತರದಲ್ಲಿ ನಾನು ಮಗಳ ಬಗ್ಗೆ ಚಿಂತಿಸುವ ಸಂದರ್ಭವೇ ಬರಲಿಲ್ಲ.

ಈವರೆಗೂ ಅಮ್ಮನ ಮಾತು ಕೇಳಿದ್ದಾಯಿತು. ತನ್ನ ಬದುಕಿನ ಬಗ್ಗೆ, ಬಾಲ್ಯದ ಬಗ್ಗೆ, ದೈಹಿಕ ನ್ಯೂನತೆಯ ಬಗ್ಗೆ ಮೇತ್ರಾಣಿಯ ಮಾತು ಏನಿದೆಯೋ ಎಂದುಕೊಂಡೇ ಎದುರು ನಿಂತಾಗ ಮೇತ್ರಾ ಣಿ ಹೇಳಿದಳು:’ ನನ್ನ ಪ್ರಾಥಮಿಕ ಮತ್ತು ಪದವಿ ಶಿಕ್ಷಣ ನಡೆ ದದ್ದು ಕ್ರಮವಾಗಿ ದುಬಾೖ ಮತ್ತು ಭೋಪಾಲ್‌ನಲ್ಲಿ. ಮನೆ ಯೊಳಗಿದ್ದಾಗ, ನಾನು ವಿಪರೀತ ಕುಳ್ಳಿ ಎನ್ನುವುದಾಗಲಿ, ತನ್ನ ತಲೆ ತುಂಬಾ ದಪ್ಪಕ್ಕಿದೆ ಎನ್ನುವುದಾಗಲಿ ಚರ್ಚೆಯ ವಿಷಯ ಅನ್ನಿಸು ತ್ತಲೇ ಇರಲಿಲ್ಲ. ಕಾರಣ, ಅಪ್ಪ-ಅಮ್ಮ ಮತ್ತು ತಮ್ಮ, ಇದನ್ನೊಂದು ಸಮಸ್ಯೆ ಎಂದು ಭಾವಿಸಿರಲಿಲ್ಲ. ಆದರೆ ಮನೆಯಿಂದ ಹೊರಗೆ ಬಂದರೆ ಸಾಕು, ಜನ ನನ್ನನ್ನು ಎವೆಯಿಕ್ಕದೆ ನೋಡುತ್ತಿದ್ದರು. ಸಹ ಪಾಠಿ ಗಳು ನನ್ನಿಂದ ಅಂತರ ಕಾಯ್ದುಕೊಳ್ಳುತ್ತಿದ್ದರು. ಕುಟುಂಬದ ಕಾರ್ಯಕ್ರಮಗಳಾದಾಗ, ನನ್ನ ಹೆತ್ತವರು ತಾವಾಗಿಯೇ ಉಳಿದ ಮಕ್ಕಳ ಬಳಿ ಹೋಗಿ- ಮೇತ್ರಾಣಿಯ ಜತೆ ನಾಲ್ಕು ಮಾತಾಡಿ ಎಂದು ಮನವಿ ಮಾಡಿಕೊಳ್ಳುತ್ತಿದ್ದರು. ಆದರೆ ಯಾರೊಬ್ಬರೂ ನನ್ನತ್ತ ತಿರುಗಿಯೂ ನೋಡುತ್ತಿರಲಿಲ್ಲ. ಅಂಥ ಸಂದರ್ಭಗಳಲ್ಲಿ ನನ್ನ ಬದುಕಿನ ಬಗ್ಗೆ, ಹುಟ್ಟಿನ ಬಗ್ಗೆ ಜುಗುಪ್ಸೆಯಾಗುತ್ತಿತ್ತು. ಮನೆಗೆ ಬಂದಾಕ್ಷಣ, ನನ್ನ ಈ ಸ್ಥಿತಿಗೆ ನೀವೇ ಕಾರಣ ಎಂದು ಹೆತ್ತವರನ್ನು ನಿಂದಿಸಿ ಸಮಾಧಾನ ಮಾಡಿಕೊಳ್ಳುತ್ತಿದ್ದೆ.

Advertisement

16 ವರ್ಷ ತುಂಬುವವರೆಗೂ ದೇಹದ ಬೆಳವಣಿಗೆ ಆಗ್ತಾ ಇರುತ್ತೆ ಎಂದು ಅವರಿವರು ಮಾತಾಡುವುದನ್ನು ಕೇಳಿದ್ದೆ. ಹಾಗಾಗಿ, ನನ್ನ ಎತ್ತರ ಐದು ಅಡಿಗೆ ತಲುಪಿದರೆ ಸಾಕು ಎಂದು ಹಂಬಲಿಸಿದೆ. ಆದರೆ ನನ್ನ ದೇಹದ ಬೆಳವಣಿಗೆ ನಾಲ್ಕು ಅಡಿಗೇ ನಿಂತು ಹೋಯಿ ತು. ಉಳಿದ ಮಕ್ಕಳೆಲ್ಲ ಸ್ವೀಟ್‌ ಸಿಕÕ…ಟೀನ್‌ನ ಹಮ್ಮಿನಲ್ಲಿ ಪ್ರೀತಿ ಪ್ರೇಮದ ಕನಸು ಕಾಣುತ್ತಿದ್ದರೆ, ಕುರ್ಚಿಯ ಕಾಲಿನಷ್ಟೇ ಎತ್ತರ ಇದ್ದೇ ನಲ್ಲ ಎಂಬ ಚಿಂತೆಯಲ್ಲಿ ನಾನು ಕಣ್ಣೀರಾಗುತ್ತಿ¨ªೆ. ಅದನ್ನು ಗಮನಿಸಿದ ಅಮ್ಮ ಹೇಳಿದಳು:’ ಅಳುತ್ತ ಕೂತರೆ ಸಮಸ್ಯೆ ಪರಿಹಾರ ವಾಗಲ್ಲ. ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬ ಮಾತೇ ಇದೆ. ಹಾಗೆ ಬದುಕಲು ನೀನೇಕೆ ಪ್ರಯತ್ನ ಮಾಡಬಾರದು?”

ಈ ಮಾತುಗಳು ನನ್ನೊಳಗೆ ಗಟ್ಟಿಯಾಗಿ ನಿಂತು ಬಿಟ್ಟವು. ಆಕಾರ ಚಿಕ್ಕದು, ಸಾಧನೆ ದೊಡ್ಡದು ಎನ್ನುವಂತೆ ಬಾಳಬೇಕು ಎಂದು ಅವತ್ತೇ ನಿರ್ಧರಿಸಿದೆ. ಸುತ್ತಲಿನ ಜನ, ಅವರ ವಕ್ರನೋಟ, ಚುಚ್ಚು ಮಾತುಗಳನ್ನು ನಿರ್ಲಕ್ಷಿಸಲು ಕಲಿತೆ. ಶ್ರದ್ಧೆಯಿಂದ ಓದಿ ಡಿಸ್ಟಿಂಕ್ಷನ್‌ ನಲ್ಲಿ ಬಿ.ಕಾಂ ಮುಗಿಸಿದೆ. ನಮ್ಮ ಜನರ ಮಧ್ಯೆ ಇದ್ದು ನರಳುವ ಬದಲು ವಿದೇಶಕ್ಕೆ ಹೋಗಿ ಮತ್ತಷ್ಟು ಓದುವುದು ಒಳ್ಳೆಯದು ಅನ್ನಿಸಿದಾಗ, ಲಂಡನ್‌ಗೆ ಹೋಗಿ ಎಂಬಿಎ ಮಾಡಿದೆ. ಓದು ಮುಗಿ ಯುತ್ತಿದ್ದಂತೆಯೇ ಅಲ್ಲಿಯೇ ಕೆಲಸವೂ ಸಿಕ್ಕಿತು.

ಕೆಲಸ ಮಾಡು ತ್ತಲೇ ನಾಲ್ಕು ಸರ್ಟಿಫಿಕೆಟ್‌ ಕೋರ್ಸ್‌ಗಳನ್ನೂ ಮಾಡಿದೆ. ವ್ಯಕ್ತಿತ್ವ ವಿಕಸನ ಕುರಿತು ತರಬೇತಿ ಪಡೆದೆ. ಈ ಹೊತ್ತಿಗೆ, ಸಮಸ್ಯೆಗಳನ್ನು ಎದುರಿ ಸುವುದು ಹೇಗೆ? ಸವಾಲುಗಳನ್ನು ಮೆಟ್ಟಿ ನಿಲ್ಲುವುದು ಹೇಗೆ? ಡಿಪ್ರಶನ್‌ನಿಂದ ಪಾರಾಗುವುದು ಹೇಗೆ? ಎಂಬಂಥ ಪ್ರಶ್ನೆ ಗಳಿಗೆ ಉತ್ತರ ಸಿಕ್ಕಿತ್ತು. ನಾನೂ ಕೌನ್ಸಿಲಿಂಗ್‌ ಮಾಡಬೇಕು, ವ್ಯಕ್ತಿತ್ವ ವಿಕಸನ ಗುರುವಾಗಿ ಸಲಹೆ ಕೊಡಬೇಕು ಅನ್ನಿಸಿದಾಗ, ಕನ್ನಡಿಯ ಮುಂದೆ ನಿಂತು ಅಭ್ಯಾಸ ಮಾಡಿದೆ. ಮೈಂಡ್‌ ವಕÕ…ì ಕೌನ್ಸೆಲಿಂಗ್‌ ಎಂಬ ಆಪ್ತ ಸಲಹಾ ಕೇಂದ್ರ ಆರಂಭಿಸಿದೆ. ಅನಂತರದಲ್ಲಿ ಗೆಲುವು ಹೆಜ್ಜೆ ಹೆಜ್ಜೆಗೂ ನನ್ನ ಕೈ ಹಿಡಿಯುತ್ತಾ ಹೋಯಿತು…

ಹಾಗೆಂದು ಕುಬjತೆಯ ಕಾರಣಕ್ಕೆ ಎಲ್ಲವೂ ಒಳ್ಳೆಯದೇ ಆಗಿದೆ ಎಂದು ಅರ್ಥವಲ್ಲ. “ನಾರ್ಮಲ…’ ಅನ್ನಿಸುವ ಐದು ಅಡಿಯಷ್ಟು ಎತ್ತರ ವಾದರೂ ಇರಬೇಕಿತ್ತು ಅನ್ನುವ ಭಾವ ಬಿಟ್ಟೂ ಬಿಡದೆ ಕಾಡುತ್ತದೆ. ನನ್ನದೇ ವಯಸ್ಸಿನ ಇತರ ಹೆಣ್ಣುಮಕ್ಕಳನ್ನು ನೋಡಿದಾಗ, ಅವರಂತೆ ನಾನಿಲ್ಲ ಅನ್ನಿಸಿ ಅಳು ಬರುತ್ತದೆ. ಕುಳ್ಳಿ ಅನ್ನುವ ಒಂದೇ ಕಾರಣಕ್ಕೇ ನನಗೊಬ್ಬ ಬಾಳಸಂಗಾತಿ ಇನ್ನೂ ಸಿಕ್ಕಿಲ್ಲ ಅನ್ನಿಸಿ ಬೇಜಾರಾಗುತ್ತದೆ. ಜನ ನನ್ನನ್ನು ಹೇಗೆಲ್ಲ ಹಂಗಿಸಿದರಲ್ಲ ಎಂಬುದು ನೆನಪಾದಾಗ ಸಂಕಟವಾಗುತ್ತದೆ. ಹಾಗೆಯೇ, ಎಷ್ಟೇ ರಶ್‌ ಇದ್ದರೂ ನುಸುಳಿ ಹೋಗುವಂಥ ಸಾಮರ್ಥ್ಯ ನನಗಿದೆ ಅನ್ನಿಸಿದಾಗ ಖುಷಿಯೂ ಆಗುತ್ತದೆ. ಯಾವುದೇ ಕಾರ್ಯಕ್ರಮಕ್ಕೆ ಐಶ್ವರ್ಯಾ ರೈ ಹೋದರೆ ಜನ ಏನು ಮಾಡ್ತಾರೆ ಹೇಳಿ? ಅವಳನ್ನೇ ರೆಪ್ಪೆ ಮಿಟುಕಿಸದೆ ನೋಡ್ತಾರೆ. ಅದೇ ಥರ ನನ್ನನ್ನೂ ನೋಡ್ತಾರೆ. ಹಾಗಾಗಿ, ನಾನೂ ಒಂದು ರೀತಿಯಲ್ಲಿ ಐಶ್ವರ್ಯಾ ರೈ ಥರಾನೇ ಸೆಲೆಬ್ರಿಟಿ ಅಂದುಕೊಂಡು ಆರಾಮಾಗಿ ಬದುಕ್ತಾ ಇದ್ದೇನೆ’ ಎನ್ನುತ್ತಾರೆ ಮೇತ್ರಾಣಿ.
* * *
ಸ್ಟಾರ್ಟ್‌ ಅಪ್‌ ಸಲಹೆಗಾರ್ತಿ, ಆಪ್ತ ಸಮಾಲೋಚಕಿ, ವ್ಯಕ್ತಿತ್ವ ವಿಕಸನ ಗುರು, ಸ್ಕಿಲ್‌ ಟ್ರೈನರ್‌, ಆಡಿಟಿಂಗ್‌ ಅಡ್ವೆ„ಸರ್‌, ಅಂಕಣಕಾರ್ತಿ… ಇವೆಲ್ಲ ಮೇತ್ರಾಣಿಯವರು ನಿಭಾಯಿಸುವ ಪಾತ್ರಗಳು. ಮಗಳ ಈ ಬೆಳವಣಿಗೆ- ಸಾಧನೆಯನ್ನು ಕಂಡು ಭಾವುಕರಾಗುವ ಆಕೆಯ ತಂದೆ ನೀಲೇಶ್‌ ಹೇಳುತ್ತಾರೆ: ನನ್ನ ಮಗಳು ಅಪರಂಜಿ. ವಿದೇಶದಲ್ಲಿ ಓದಿರುವುದಷ್ಟೇ ಆಕೆಯ ಹೆಗ್ಗಳಿಕೆಯಲ್ಲ, ಸ್ಕಾಲರ್‌ಶಿಪ್‌ನ ಮೂಲಕವೇ ಆಕೆ ತನ್ನ ಶಿಕ್ಷಣ ಪೂರೈಸಿ¨ªಾಳೆ. ಲಂಡನ್‌, ಅಮೆರಿಕ, ಫ್ರಾ®Õ…, ಸ್ವೀಡನ್‌, ಕಜಕಿಸ್ಥಾನ್‌ಗೂ ಹೋಗಿ ಬಂದಿ¨ªಾಳೆ. ವೀಸಾ, ಪಾಸ್‌ಪೋರ್ಟ್‌ ಪಡೆಯಲು ಕೂಡ ಆಕೆ ನಮ್ಮ ನೆರವು ಕೇಳಿಲ್ಲ. ಅಷ್ಟರಮಟ್ಟಿಗಿನ ಸ್ವಾವಲಂಬಿ ಬದುಕು ಅವಳದು. “ನಾರ್ಮಲ…’ ಆಗಿರುವ ಎಷ್ಟೋ ಮಕ್ಕಳು ಮಾಡದಂಥ ಸಾಧನೆಯನ್ನು ನನ್ನ ಮಗಳು ಮಾಡಿ¨ªಾಳೆ. ಮೇತ್ರಾಣಿಯ ತಂದೆ ಎಂದು ಹೇಳಿಕೊಳ್ಳಲು ನನಗೆ ಹೆಮ್ಮೆ…
ಮೇತ್ರಾಣಿಯ ಸಾಧನೆ ಉಳಿದವರಿಗೆ ಪ್ರೇರಣೆಯಾಗಲಿ ಎನ್ನಿಸುವುದು ಇಂಥ ಮಾತುಗಳನ್ನು ಕೇಳಿದಾಗಲೇ…
(ನೀಲಂ ಕುಮಾರ್‌ ಅವರ Invincible ಪುಸ್ತಕದಲ್ಲಿನ ಬರಹದ ಭಾವಾನುವಾದ)

– ಎ.ಆರ್‌.ಮಣಿಕಾಂತ್‌

Advertisement

Udayavani is now on Telegram. Click here to join our channel and stay updated with the latest news.

Next