Advertisement

ವಿಧಾನ-ಕದನ 2023: ಬೆಣ್ಣೆನಗರಿ ದಾವಣಗೆರೆಯಲ್ಲಿ ಜೋರಾಯಿತು ಚುನಾವಣೆ ಬಿಸಿ

11:01 PM Apr 28, 2023 | Team Udayavani |

ಮಧ್ಯ ಕರ್ನಾಟಕದ ಕೇಂದ್ರ ಬಿಂದು, ರಾಜಕೀಯ ಪಕ್ಷಗಳ ಅದೃಷ್ಟದೂರು ಖ್ಯಾತಿಯ ದಾವಣಗೆರೆ ಜಿಲ್ಲೆಯ ಏಳು ಕ್ಷೇತ್ರಗಳ ರಣಕಣ ಸಿದ್ಧವಾಗಿದೆ. ದಾವಣಗೆರೆ ಉತ್ತರ, ದಕ್ಷಿಣ, ಮಾಯಕೊಂಡ (ಎಸ್‌ಸಿ ಮೀಸಲು), ಹರಿಹರ, ಜಗಳೂರು, ಚನ್ನಗಿರಿ ಮತ್ತು ಜಗಳೂರು (ಎಸ್‌ಟಿ ಮೀಸಲು) ಕ್ಷೇತ್ರಗಳಲ್ಲಿ ಆಡಳಿತಾರೂಢ ಬಿಜೆಪಿ, ಕಾಂಗ್ರೆಸ್‌, ಜೆಡಿಎಸ್‌ ಜತೆಗೆ ಪಕ್ಷೇತರ, ಬಂಡಾಯ ಅಭ್ಯರ್ಥಿಗಳು ಮತ ಸಮರದ ಸೆಣಸಾಟದಲ್ಲಿದ್ದಾರೆ.

Advertisement

 ದಾವಣಗೆರೆ ಉತ್ತರ

ದಾವಣಗೆರೆ ಉತ್ತರದಲ್ಲಿ ಕಾಂಗ್ರೆಸ್‌ನ ಎಸ್‌.ಎಸ್‌. ಮಲ್ಲಿಕಾರ್ಜುನ್‌ ಹಾಗೂ ಶಾಸಕ ಎಸ್‌. ಎ.ರವೀಂದ್ರನಾಥ್‌ ಚುನಾವಣ ನಿವೃತ್ತಿ ಕಾರಣಕ್ಕೆ ಅಖಾಡದಲ್ಲಿರುವ ಬಿಜೆಪಿಯ ಹೊಸಮುಖ ಲೋಕಿಕೆರೆ ನಾಗರಾಜ್‌ ನಡುವೆ ತುರುಸಿನ ಸ್ಪರ್ಧೆ ಏರ್ಪಟ್ಟಿದೆ. ಬಿಜೆಪಿ ತನ್ನ ಭದ್ರಕೋಟೆ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಹೊಸಬರನ್ನು ಕಣಕ್ಕಿಳಿಸಿದೆ. ಮಲ್ಲಿಕಾರ್ಜುನ್‌ ಅವರು 2018ರ ಚುನಾವಣೆಯಲ್ಲಿನ ಆಘಾತಕಾರಿ ಸೋಲಿನ ಬಳಿಕ ಈಗ ಭರ್ಜರಿಯಾಗಿ ಅಖಾಡಕ್ಕಿಳಿದಿದ್ದಾರೆ. ಅವರ ಪರವಾಗಿ ಪತ್ನಿ, ಮಕ್ಕಳಾದಿಯಾಗಿ ಇಡೀ ಕುಟುಂಬವೇ ಪ್ರಚಾರ ನಡೆಸುತ್ತಿದೆ. ಬಿಜೆಪಿಯ ಬಲಿಷ್ಠ ಕಾರ್ಯಕರ್ತರ ಪಡೆ ಮತ್ತೆ ಕಮಲ ಅರಳಿಸುವ ಪ್ರಯತ್ನ ನಡೆಸುತ್ತಿದೆ. ಬಿಜೆಪಿ ಮತ್ತು ಕಾಂಗ್ರೆಸ್‌ನ ಇಬ್ಬರೂ ಅಭ್ಯರ್ಥಿಗಳು ನಿರ್ಣಾಯಕ ಮತದಾರರಾ ಗಿರುವ ಸಾದರ ಲಿಂಗಾಯತ ಸಮುದಾಯಕ್ಕೆ ಸೇರಿರುವುದರಿಂದ ಯಾರು ಹೆಚ್ಚು ಮತ ಗಳಿಸುವರೋ ಅವರಿಗೆ ವಿಜಯಲಕ್ಷ್ಮೀ ಒಲಿ ಯಲಿದೆ. ಜೆಡಿಎಸ್‌ನಿಂದ ಬಾತಿ ಶಂಕರ್‌ ಕಣದಲ್ಲಿದ್ದಾರೆ.

 ದಾವಣಗೆರೆ ದಕ್ಷಿಣ

6ನೇ ಬಾರಿ ವಿಧಾನಸಭೆ ಪ್ರವೇಶಿಸುವ ಮೂಲಕ ದಾಖಲೆ ಬರೆಯುವ ವಿಶ್ವಾಸದಲ್ಲಿರುವ 92 ವರ್ಷದ ಹಿರಿಯ ಕಾಂಗ್ರೆಸ್‌ ಮುಖಂಡ, ದಾವಣಗೆರೆ ದಕ್ಷಿಣ ಕ್ಷೇತ್ರದ ಹಾಲಿ ಶಾಸಕ ಶಾಮನೂರು ಶಿವಶಂಕರಪ್ಪ ವಿರುದ್ಧ ಬಿಜೆಪಿಯಿಂದ ಮಾಜಿ ಮೇಯರ್‌ ಬಿ.ಜಿ. ಅಜಯ್‌ಕುಮಾರ್‌ ಸ್ಪರ್ಧಿಸುತ್ತಿದ್ದಾರೆ. 63 ಸಾವಿರದಷ್ಟಿರುವ ಮುಸ್ಲಿಂ ಮತ ದಾರರೇ ನಿರ್ಣಾಯಕ. ಕಾಂಗ್ರೆಸ್‌ನ ಅಭೇದ್ಯ ಮತ ಕೋಟೆ ಛಿದ್ರಗೊಳಿಸಿ ಮೊಟ್ಟ ಮೊದಲ ಬಾರಿಗೆ ಕಮಲ ಅರಳಿಸುವ ರಣೋತ್ಸಾಹದಲ್ಲಿ ಬಿಜೆಪಿ ಮುನ್ನಡೆ ಯುತ್ತಿದೆ. ಜೆಡಿಎಸ್‌ನ ಜೆ. ಅಮಾನುಲ್ಲಾ ಖಾನ್‌, ಎಸ್‌ಡಿಪಿಐನ ಇಸ್ಮಾಯಿಲ್‌ ಜಬೀವುಲ್ಲಾ ಒಳ ಗೊಂಡಂತೆ 8 ಮಂದಿ ಮುಸ್ಲಿಂ ಸಮುದಾಯದ ಮತಗಳ ಮೇಲೆ ಕಣ್ಣಿಟ್ಟಿದ್ದಾರೆ. ಯಾರು ಕ್ಷೇತ್ರದಲ್ಲಿ ನಿರ್ಣಾಯಕ ಮತದಾರರಾಗಿರುವ ಮುಸ್ಲಿಂ ಸಮುದಾಯದ ಮತಗಳ ಹೆಚ್ಚು ಪಡೆಯುತ್ತಾರೋ ಅವರ ಗೆಲುವು ಸುಲಭ.

Advertisement

ಹರಿಹರ

ಕಾಂಗ್ರೆಸ್‌, ಜೆಡಿಎಸ್‌ ಮತ್ತು ಬಿಜೆಪಿ ನಡುವೆ ತ್ರಿಕೋನ ಸ್ಪರ್ಧೆ ಕಂಡು ಬರುತ್ತಿದೆ. ಇಬ್ಬರು ಮಾಜಿ ಶಾಸಕರ ಎದುರು ಕಾಂಗ್ರೆಸ್‌ನ ನಂದಿಗಾವಿ ಶ್ರೀನಿವಾಸ್‌ ಸ್ಪರ್ಧಿಸಿದ್ದಾರೆ. ಬಿಜೆಪಿಯ ಬಿ.ಪಿ.ಹರೀಶ್‌ ಹಾಗೂ ಜೆಡಿಎಸ್‌ನ ಎಚ್‌.ಎಸ್‌.ಶಿವಶಂಕರ್‌ ಈಗಾಗಲೇ ಶಾಸಕರಾಗಿ ಕೆಲಸ ಮಾಡಿದ್ದು ಕ್ಷೇತ್ರದ ಜನರ ನಾಡಿಮಿಡಿತ ಬಲ್ಲವರಾಗಿದ್ದಾರೆ. ಮತ್ತೆ ಶಾಸಕರಾಗುವ ನಿಟ್ಟಿನಲ್ಲಿ ಭರ್ಜರಿ ಪ್ರಯತ್ನ ಮಾಡುತ್ತಿದ್ದಾರೆ. ಹರಿಹರದಲ್ಲಿ ಕುರುಬ, ಸಾದರ, ಪಂಚಮಸಾಲಿ ಲಿಂಗಾಯತ ಸಮಾಜ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಕಾಂಗ್ರೆಸ್‌ನ ನಂದಿಗಾವಿ ಶ್ರೀನಿವಾಸ್‌ ಕುರುಬ ಸಮುದಾಯಕ್ಕೆ ಸೇರಿದವರಾಗಿದ್ದು, ಬಿ.ಪಿ.ಹರೀಶ್‌ ಸಾದರ ಲಿಂಗಾಯತ, ಎಚ್‌.ಎಸ್‌.ಶಿವಶಂಕರ್‌ ಪಂಚ ಮಸಾಲಿ ಲಿಂಗಾಯತ ಸಮುದಾಯದವರು. ಇಬ್ಬರೂ ಸೋತಿರು ವುದರಿಂದ ಇಬ್ಬರ ಬಗ್ಗೆಯೂ ಅನುಕಂಪವಿದೆ. ಹೊಸಮುಖ ನಂದಿ ಗಾವಿ ಶ್ರೀನಿವಾಸ್‌ ಅವರಿಗೆ ಕ್ಷೇತ್ರವನ್ನು ಕೈ ವಶದಲ್ಲೇ ಉಳಿಸಿಕೊಳ್ಳುವ ಸವಾಲಿದೆ. ಹಾಲಿ ಶಾಸಕ ಎಸ್‌. ರಾಮಪ್ಪ ಮುನಿಸು, ಆಕಾಂಕ್ಷಿ ಎಂ. ನಾಗೇಂದ್ರಪ್ಪ ಅಸಮಾಧಾನದ ನಡುವೆಯೂ ಕಾಂಗ್ರೆಸ್‌ನ ಹೊಸ ಅಭ್ಯರ್ಥಿ ಪ್ರಯತ್ನ ಸಫಲವಾಗುವುದೇ ಎಂಬುದು ಮಿಲಿಯನ್‌ ಡಾಲರ್‌ ಪ್ರಶ್ನೆ.

ಹೊನ್ನಾಳಿ

ಹೊನ್ನಾಳಿ ಕ್ಷೇತ್ರದಲ್ಲಿ ಬಿಜೆಪಿಯ ಎಂ.ಪಿ. ರೇಣುಕಾಚಾರ್ಯ ಹಾಗೂ ಕಾಂಗ್ರೆಸ್‌ನ ಮಾಜಿ ಶಾಸಕ ಡಿ.ಜಿ. ಶಾಂತನಗೌಡ ನಡುವೆ ಪೈಪೋಟಿ ನಡೆದಿದೆ. ಜೆಡಿಎಸ್‌ನ ಬಿ.ಜಿ. ಶಿವಮೂರ್ತಿ ಕೊನೆ ಕ್ಷಣದಲ್ಲಿ ಸ್ಪರ್ಧೆಯಿಂದ ಹಿಂದೆ ಸರಿದಿದ್ದಾರೆ. ಸಾಂಪ್ರದಾಯಿಕ ಎದುರಾಳಿಗಳಾದ ರೇಣುಕಾಚಾರ್ಯ ಮತ್ತು ಶಾಂತನ ಗೌಡರ ನಡುವಿನ ಪೈಪೋಟಿಗೆ ದಶಕಗಳ ಇತಿಹಾಸವಿದೆ. 2013ರಲ್ಲಿ ಒಮ್ಮೆ ಮಾತ್ರ ಕೆಜೆಪಿಯಿಂದ ಸ್ಪರ್ಧಿಸಿ ಸೋತಿರುವ ರೇಣುಕಾಚಾರ್ಯ ಈಗ 4ನೇ ಬಾರಿ ಹೊನ್ನಾಳಿ ಕ್ಷೇತ್ರವನ್ನು ಪ್ರತಿನಿಧಿಸುವ ಉಮೇದಿನಲ್ಲಿದ್ದಾರೆ. ಸಾದರ ಲಿಂಗಾಯತ ಸಮಾಜ ನಿರ್ಣಾಯಕ ಸ್ಥಾನದಲ್ಲಿದ್ದರೂ ಕಡಿಮೆ ಸಂಖ್ಯೆಯಲ್ಲಿರುವ ವೀರಶೈವ ಜಂಗಮ ಸಮುದಾಯದ ರೇಣುಕಾಚಾರ್ಯ ಗೆಲುವು ಸಾಧಿಸುತ್ತಿರುವುದು ವಿಶೇಷ.

ಮಾಯಕೊಂಡ

ಎಸ್‌ಸಿ ಮೀಸಲು ಕ್ಷೇತ್ರ ಮಾಯಕೊಂಡದಲ್ಲಿ ಬಿಜೆಪಿಗೆ ಇದ್ದ ಬಂಡಾ ಯದ ಬಿಸಿ ತಣ್ಣಗಾಗಿದೆ. ಎಂ.ಬಸವರಾಜ ನಾಯಕ್‌ಗೆ ಟಿಕೆಟ್‌ ನೀಡಿದ್ದನ್ನು ವಿರೋಧಿಸಿ ಬಂಡಾಯವೆದ್ದಿದ್ದ ಆರ್‌.ಎಲ್‌.ಶಿವಪ್ರಕಾಶ್‌,    ಜಿ.ಎಸ್‌.ಶ್ಯಾಂ ತಣ್ಣಗಾಗಿದ್ದಾರೆ. ಕಾಂಗ್ರೆಸ್‌ನಿಂದ ಕೆ.ಎಸ್‌.

ಬಸವಂತಪ್ಪ, ಜೆಡಿಎಸ್‌ನಿಂದ ಆನಂದಪ್ಪ ಎಚ್‌. ಕಣದಲ್ಲಿದ್ದಾರೆ. ಕಳೆದ ಚುನಾವಣೆಯಲ್ಲಿ ಸೋತಿದ್ದರೂ ಕಾಂಗ್ರೆಸ್‌ನ ಬಸವಂತಪ್ಪ ಕ್ಷೇತ್ರದ ಸುತ್ತಾಟ ನಿಲ್ಲಿಸಿರಲಿಲ್ಲ. ಕಾಂಗ್ರೆಸ್‌ ಟಿಕೆಟ್‌ ದೊರೆಯದೆ ಜೆಡಿಎಸ್‌ನಿಂದ ಸ್ಪರ್ಧಿಸಿರುವ ಎಚ್‌. ಆನಂದಪ್ಪ ತಮ್ಮದೇ ಮತ ಬ್ಯಾಂಕ್‌ ಹೊಂದಿದ್ದಾರೆ. ಪಕ್ಷೇ ತರ ಅಭ್ಯರ್ಥಿ ಡಾ| ಸವಿತಾ ಬಾಯಿ ಮಲ್ಲೇಶ ನಾಯ್ಕ ಮಹಿಳಾ ಮತದಾರರ ಮೇಲೆ ಕಣ್ಣಿಟ್ಟಿದ್ದಾರೆ. ಸಾದರ ಲಿಂಗಾಯತರು, ಬಂಜಾರರು, ಪರಿಶಿಷ್ಟ ಜಾತಿ ಮತ ದಾರರು ಸರಿಸಮಾನವಾದ ಸಂಖ್ಯಾಬಲ ಹೊಂದಿದ್ದಾರೆ. ಆದರೂ ನಿರ್ಣಾಯಕ ಸ್ಥಾನದಲ್ಲಿರುವ ಸಾದರ ಲಿಂಗಾಯತ ಸಮುದಾಯದ ಮತಗಳನ್ನು ಪಡೆದವರು ಗೆಲ್ಲಬಹುದು.

ಚನ್ನಗಿರಿ

ಕಾಂಗ್ರೆಸ್‌ನಿಂದ ಕಿಸಾನ್‌ ಸೆಲ್‌ ಜಿಲ್ಲಾಧ್ಯಕ್ಷ ಬಸವರಾಜ್‌ ವಿ. ಶಿವಗಂಗಾ ಮೊದಲ ಬಾರಿಗೆ ಚುನಾವಣೆ ಎದುರಿಸುತ್ತಿದ್ದಾರೆ. 2013ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಸೋತಿದ್ದ ತುಮ್ಕೋಸ್‌ ಮಾಜಿ ಅಧ್ಯಕ್ಷ ಎಚ್‌.ಎಸ್‌. ಶಿವಕುಮಾರ್‌ ಮತ್ತೂಮ್ಮೆ ಅದೃಷ್ಟದ ಪರೀಕ್ಷೆಗೆ ಇಳಿದಿದ್ದಾರೆ. ಕಾಂಗ್ರೆಸ್‌ ಟಿಕೆಟ್‌ ಸಿಗದೆ ರಾಜ್ಯ ಕಬ್ಬು ಬೆಳೆಗಾರರ ಸಂಘದ ಉಪಾಧ್ಯಕ್ಷ ತೇಜಸ್ವಿ ಪಟೇಲ್‌ ಈಗ ಜೆಡಿಎಸ್‌ ಹುರಿಯಾಳು. ಲಂಚದ ಆರೋಪ ಹಿನ್ನೆಲೆಯಲ್ಲಿ ಟಿಕೆಟ್‌ ಸಿಗದ ಕಾರಣ ಶಾಸಕ ಮಾಡಾಳ್‌ ವಿರೂಪಾಕ್ಷಪ್ಪ ಅವರ ಪುತ್ರ ಮಾಡಾಳ್‌ ಮಲ್ಲಿಕಾರ್ಜುನ್‌ ಪಕ್ಷೇತರ ಅಭ್ಯರ್ಥಿಯಾಗಿದ್ದು, ಬಿಜೆಪಿಗೆ ಸವಾಲೊಡ್ಡಿದ್ದಾರೆ. ಬಿಜೆಪಿ,ಕಾಂಗ್ರೆಸ್‌ ಅಭ್ಯರ್ಥಿಗಳಿ ಬ್ಬರು ಸಾದರ ಲಿಂಗಾಯತ ಸಮಾಜದವರೇ ಆಗಿದ್ದಾರೆ.

ಬಂಡಾಯ

ಅಭ್ಯರ್ಥಿ ಮಾಡಾಳ್‌ ಮಲ್ಲಿಕಾರ್ಜುನ್‌ ಅದೇ ಸಮುದಾಯದ ವರು. ಜೆಡಿಎಸ್‌ನ ತೇಜಸ್ವಿ ಪಟೇಲ್‌ ಪಂಚಮಸಾಲಿ ಸಮಾಜ ದವರು. ಮಾಜಿ ಶಾಸಕ ವಡ್ನಾಳ್‌ ರಾಜಣ್ಣ ಮತ್ತು ಸಹೋದರರ ಪಾತ್ರ ಮುಖ್ಯವಾಗಿದೆ. ಮತಗಳ ವಿಭಜನೆಯೇ ಇಲ್ಲಿ ಫೋಟೋ ಫಿನಿಶ್‌ಫಲಿತಾಂಶಕ್ಕೆ ಕಾರಣವಾಗುವ ಎಲ್ಲ ಸಾಧ್ಯತೆ ಕಂಡು ಬರುತ್ತಿದೆ.

ಜಗಳೂರು

ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿರುವ ಜಗಳೂರು ಕ್ಷೇತ್ರದಲ್ಲಿ ಬಿಜೆಪಿಯ ಹಾಲಿ ಶಾಸಕ ಎಸ್‌.ವಿ. ರಾಮಚಂದ್ರ ಮತ್ತೆ ಸ್ಪರ್ಧಿಸಿದ್ದಾರೆ. ಸಾಂಪ್ರದಾಯಿಕ ಎದುರಾಳಿ, ಕಾಂಗ್ರೆಸ್‌ನ ಮಾಜಿ ಶಾಸಕ ಎಚ್‌. ಪಿ.ರಾಜೇಶ್‌ ಈಗ ಪಕ್ಷೇತರ ಅಭ್ಯರ್ಥಿ. ಕಳೆದ ಚುನಾವಣೆಯಲ್ಲಿ ಜೆಡಿಎಸ್‌ ಅಭ್ಯರ್ಥಿಯಾಗಿದ್ದ ಡಿ.ದೇವೇಂದ್ರಪ್ಪ ಕಾಂಗ್ರೆಸ್‌ನಿಂದ ಕಣ ದಲ್ಲಿದ್ದಾರೆ. ಪರಿಶಿಷ್ಟ ಪಂಗಡ ಮತ್ತು ಸಾದರ ಲಿಂಗಾಯತ ಸಮುದಾ ಯದವರು ನಿರ್ಣಾಯಕರು. ಮೂವರ ನಡುವಿನ ಜಿದ್ದಾಜಿದ್ದಿ ಪೈಪೋಟಿಯಲ್ಲಿ ಗೆಲುವು ಯಾರಿಗೆ ಎಂಬುದು ಭಾರೀ ಕೌತುಕ ಮೂಡಿಸಿದೆ.  ಮಾಜಿ ಶಾಸಕ ಎಚ್‌.ಪಿ. ರಾಜೇಶ್‌ ಕಸಿಯುವ ಮತಗಳು ಫಲಿತಾಂಶ ನಿರ್ಧರಿಸಲಿವೆ.

~ ರಾ.ರವಿಬಾಬು

Advertisement

Udayavani is now on Telegram. Click here to join our channel and stay updated with the latest news.

Next