Advertisement

ವಿಧಾನ-ಕದನ 2023: ಮೂರೂ ಪಕ್ಷದಲ್ಲಿ ಮುಂದುವರಿದ ಜಿಗಿದಾಟ

10:37 PM Apr 21, 2023 | Team Udayavani |

ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಕೆ ಅವಧಿ ಮುಕ್ತಾಯವಾದರೂ ಬಿಜೆಪಿ, ಜೆಡಿಎಸ್‌ ಹಾಗೂ ಕಾಂಗ್ರೆಸ್‌ ಪಕ್ಷಗಳ ಟಿಕೆಟ್‌ ವಂಚಿತರು, ಆಕಾಂಕ್ಷಿತರ “ಪಕ್ಷಾಂತರ ಪ್ರಕ್ರಿಯೆ” ಮುಂದುವರಿದಿದೆ. ಶುಕ್ರವಾರವೂ ಮೂರೂ ಪಕ್ಷಗಳ ಪ್ರಮುಖ ನಾಯಕರು ತಮ್ಮ ಬೆಂಬಲಿಗರ ಸಮ್ಮುಖದಲ್ಲಿ “ಪಕ್ಷ ಬದಲಾವಣೆ” ಮಾಡುವ ಮೂಲಕ ಚುನಾವಣೆಯ ಕಣ ರಂಗೇರಿಸಿದ್ದಾರೆ.

Advertisement

ಬಿಜೆಪಿ ತೊರೆದು ಕೈ ಹಿಡಿದ ನಾಯಕರು
ಬೆಂಗಳೂರು: ತುಮಕೂರು ಜಿಲ್ಲೆ ಕೊರಟಗೆರೆಯ ಬಿಜೆಪಿ ಮುಖಂಡ ಹಾಗೂ ಮಾಜಿ ಶಾಸಕ ಗಂಗ ಹನುಮಯ್ಯ ಸೇರಿದಂತೆ ಹಲವು ಪ್ರಮುಖ ನಾಯಕರು ಶುಕ್ರವಾರ ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಯಾದರು.

ಕೆಪಿಸಿಸಿ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಮಾಜಿ ಶಾಸಕ ಗಂಗ ಹನುಮಯ್ಯ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಕಮಲಾ ಗಂಗ ಹನುಮಯ್ಯ, ಬೆಂಗಳೂರಿನ ಮಾಜಿ ಮೇಯರ್‌ ಶಾಂತಕುಮಾರಿ, ಪಾಲಿಕೆ ಮಾಜಿ ಸದಸ್ಯ ಬಿ.ಆರ್‌.ನಂಜುಂಡಪ್ಪ ಬಿಜೆಪಿ ತೊರೆದು ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಯಾದರು. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌, ಮಾಜಿ ಡಿಸಿಎಂ ಡಾ. ಜಿ. ಪರಮೇಶ್ವರ್‌, ಸಂಸದ ಡಿ.ಕೆ.ಸುರೇಶ್‌, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್‌, ರಾಜ್ಯಸಭೆ ಸದಸ್ಯ ಡಾ.ಎಲ್‌.ಹನುಮಂತಯ್ಯ, ಮೇಲ್ಮನೆ ಸದಸ್ಯ ದಿನೇಶ್‌ ಗೂಳಿಗೌಡ, ಮಾಜಿ ಸದಸ್ಯ ಐವಾನ್‌ ಡಿಸೋಜ, ಆರ್‌. ಆರ್‌. ನಗರ ಅಭ್ಯರ್ಥಿ ಕುಸುಮ ಎಚ್‌, ಮನೋಹರ್‌ ಮತ್ತಿತರರು ಉಪಸ್ಥಿತರಿದ್ದರು.

ಕಾಂಗ್ರೆಸ್‌ ಪರಿಹಾರ: ಕಳೆದ 20 ವರ್ಷಗಳಿಂದ ಬಿಜೆಪಿಯಲ್ಲಿ ಕೆಲಸ ಮಾಡಿದ್ದ ಮಾಜಿ ಶಾಸಕ ಗಂಗಹನುಮಯ್ಯ ಮರಳಿ ಮನೆಗೆ ಬಂದಿದ್ದಾರೆ. ಇದು ಸಂತಸದ ಸಂಗತಿ. ನಾವು ಅಧಿಕಾರಕ್ಕೆ ಬರುತ್ತೇವೆಂದು ನಮ್ಮ ನಾಯಕರು ಹೇಳುತ್ತಿದ್ದಾರೆ. ಅದನ್ನೇ ನಾನು ಹೇಳುತ್ತಿದ್ದೇನೆ. ಪೆಟ್ರೋಲ್‌, ಡೀಸೆಲ್‌ ಸೇರಿ ಬೆಲೆ ಏರಿಕೆ ಬಗ್ಗೆ ಜನ ಬೇಸತ್ತಿದ್ದಾರೆ. ಇದರ ಪರಿಣಾಮ ಜನ ಸಾಮಾನ್ಯರ ಜೀವನ ಕಷ್ಟವಾಗಿದೆ. ಇದೆಲ್ಲದಕ್ಕೂ ಕಾಂಗ್ರೆಸ್‌ ಸರ್ಕಾರವೇ ಪರಿಹಾರ ಎಂದು ಡಾ.ಜಿ.ಪರಮೇಶ್ವರ್‌ ಪ್ರತಿಪಾದಿಸಿದರು.

ಮಾಜಿ ಶಾಸಕ ಪ್ರಸನ್ನಕುಮಾರ್‌ ಜೆಡಿಎಸ್‌ ಸೇರ್ಪಡೆ
ಬೆಂಗಳೂರು: ಶಿವಮೊಗ್ಗದ ಕಾಂಗ್ರೆಸ್‌ ಟಿಕೆಟ್‌ ವಂಚಿತ ಮಾಜಿ ಶಾಸಕ ಪ್ರಸನ್ನಕುಮಾರ್‌ ಜೆಡಿಎಸ್‌ ಸೇರ್ಪಡೆಗೊಂಡಿದ್ದಾರೆ. ಶುಕ್ರವಾರ ಜೆಡಿಎಸ್‌ ಕಚೇರಿಯಲ್ಲಿ ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಸಮ್ಮುಖದಲ್ಲಿ ಜೆಡಿಎಸ್‌ ಸೇರ್ಪಡೆಯಾದರು. ಅವರಿಗೆ ಜೆಡಿಎಸ್‌ ಬಾವುಟ ನೀಡಿ ಸ್ವಾಗತ ಕೋರಲಾಯಿತು.

Advertisement

ನಂತರ ಜೆಡಿಎಸ್‌ ಅಭ್ಯರ್ಥಿ ಆಯನೂರು ಮಂಜುನಾಥ್‌, ಪ್ರಸನ್ನಕುಮಾರ್‌ ಹಾಗೂ ಜೆಡಿಎಸ್‌ ಜಿಲ್ಲಾಧ್ಯಕ್ಷ ಶ್ರೀಕಾಂತ್‌ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರ ನಿವಾಸಕ್ಕೆ ತೆರಳಿ ಸಮಾಲೋಚನೆ ನಡೆಸಿದರು. ಶಿವಮೊಗ್ಗ ಕ್ಷೇತ್ರ ಅಷ್ಟೇ ಅಲ್ಲದೆ ಜಿಲ್ಲೆಯಲ್ಲಿ ಜೆಡಿಎಸ್‌ ಗೆಲುವಿಗೆ ರೂಪಿಸಬೇಕಾದ ಕಾರ್ಯತಂತ್ರಗಳ ಬಗ್ಗೆ ನಾಯಕರು ದೇವೇಗೌಡ ಹಾಗೂ ಕುಮಾರಸ್ವಾಮಿಯವರ ಜತೆ ಸಮಾಲೋಚನೆ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಎಚ್‌.ಡಿ.ಕುಮಾರಸ್ವಾಮಿ, ಶಿವಮೊಗ್ಗ ಜಿಲ್ಲೆಯಲ್ಲಿ ಆಯನೂರು ಮಂಜುನಾಥ್‌, ಪ್ರಸನ್ನಕುಮಾರ್‌ ಪಕ್ಷಕ್ಕೆ ಬಂದಿದ್ದು ಆಯನೂರು ಪರ ಪ್ರಸನ್ನಕುಮಾರ್‌ ಕೆಲಸ ಮಾಡಲಿದ್ದಾರೆ ಎಂದು ಹೇಳಿದರು.

ಬಿಜೆಪಿಗೆ ಬಂದ ಮಾಜಿ ಶಾಸಕ ಬಾಲರಾಜ್‌
ಬೆಂಗಳೂರು: ರಾಜ್ಯ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ, ಮಾಜಿ ಶಾಸಕ ಎಸ್‌.ಬಾಲರಾಜು ತಮ್ಮ ಬೆಂಬಲಿಗರ ಜತೆಗೆ ಬಿಜೆಪಿ ಸೇರ್ಪಡೆಯಾಗಿದ್ದಾರೆ. ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌, ಮಾಜಿ ಸಿಎಂ ಬಿ.ಎಸ್‌. ಯಡಿಯೂರಪ್ಪ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಸಮ್ಮುಖದಲ್ಲಿ ಅವರು ಬಿಜೆಪಿ ಸೇರ್ಪಡೆಗೊಂಡರು.

ಈ ಸಂದರ್ಭದಲ್ಲಿ ಮಾತನಾಡಿದ ಬಿ.ಎಸ್‌.ಯಡಿಯೂರಪ್ಪ, ಬಾಲರಾಜು ಸೇರ್ಪಡೆಯಿಂದ ಚಾಮರಾಜನಗರದಲ್ಲಿ ಬಿಜೆಪಿಗೆ ಬಲ ಬಂದಿದೆ. 1999ರಲ್ಲಿ ಕೊಳ್ಳೇಗಾಲ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ಬಾಲರಾಜು ಕೇವಲ ನಾಲ್ಕು ಸಾವಿರ ಮತಗಳ ಅಂತರದಿಂದ ಪರಾಭವಗೊಂಡಿದ್ದರು. 2004ರಲ್ಲಿ ಪಕ್ಷೇತರರಾಗಿ ಗೆಲುವು ಕಂಡಿದ್ದರು ಎಂದರು.
ಬಾಲರಾಜು ಮಾತನಾಡಿ ಬಿಜೆಪಿಯಿಂದ ಈ ಹಿಂದೆ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿ ಕಡಿಮೆ ಅಂತರದಿಂದ ಪರಾಭಗೊಂಡಿದ್ದ ನನಗೆ ಇದೀಗ ಮತ್ತೆ ಪಕ್ಷಕ್ಕೆ ಕೆಲಸ ಮಾಡಲು ಹೆಮ್ಮೆ ಎನಿಸುತ್ತಿದೆ. ಪಕ್ಷಕ್ಕಾಗಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next