ಜಗಳೂರು: ತಾಲೂಕಿನ ನಿರುದ್ಯೋಗ ಮಹಿಳೆಯರಿಗೆ ಉದ್ಯೋಗ ಕಲ್ಪಿಸಲು ಮಿನಿ ಜವಳಿ ಪಾರ್ಕ್ ನಿರ್ಮಾಣಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಎಚ್.ಪಿ.ರಾಜೇಶ್ ತಿಳಿಸಿದರು.
ಪಟ್ಟಣದ ಓಂಕಾರೇಶ್ವರ ಬಡಾವಣೆಯಲ್ಲಿ ಕೈಮಗ್ಗ ಮತ್ತು ಜವಳಿ ಇಲಾಖೆ ಮತ್ತು ಜಿಲ್ಲಾ ಪಂಚಾಯಿತಿ, ಸಂದೇಶ ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆ, ಕರಿಯಮ್ಮ ಗ್ರಾಮೀಣಾಭಿವೃದ್ಧಿ ಸಂಸ್ಥೆ ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ 2016- 2017ನೇ ಸಾಲಿನ ಯಾಂತ್ರಿಕೃತ ಹೊಲಿಗೆ ತರಬೇತಿ ಶಿಬಿರಾರ್ಥಿಗಳಿಗೆ ಶಿಷ್ಯವೇತನದ ಚೆಕ್ ವಿತರಿಸಿ ಅವರು ಮಾತನಾಡಿದರು.
ಈಗಾಗಲೇ ನಿವೇಶನ ಗುರುತಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಗುರುತಿಸಿದ ನಂತರ ಸುಸಜ್ಜಿತ ಗಾರ್ಮೆಂಟ್ಸ್ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದೆಂದು ಭರವಸೆ ನೀಡಿದರು. ನೂತನ ಜವಳಿ ನೀತಿಯಿಂದ ಗ್ರಾಮೀಣಭಾಗದ ಸ್ವಯಂ ಉದ್ಯೋಗ ಕೌಶಲ್ಯಭಿವೃದ್ಧಿ ತರಬೇತಿ ಹೊಂದಿದ ಮಹಿಳೆಯರಿಗೆ
ಬ್ಯಾಂಕ್ ಸಹಾಯದಿಂದ ಸಾಲ ಸಹಾಯಧನ ದೊರಕುತ್ತಿದ್ದು ಸಾಮಾನ್ಯ ವರ್ಗದವರಿಗೆ ಶೇ.20ರಷ್ಟು ಎಸ್‌ಸಿ, ಎಸ್‌ಟಿ ವರ್ಗದ ಮಹಿಳೆಯರಿಗೆ ಶೇ.40ರಷ್ಟು ರಿಯಾಯಿತಿ ದರದಲ್ಲಿ ಸಹಾಯಧನವನ್ನು ನೀಡಲಾಗುವುದು ಎಂದರು. ವಿವಿಧ ಗ್ರಾಮೀಣಾಭಿವೃದ್ಧಿ ಸಂಸ್ಥೆಗಳಿಂದ ತರಬೇತಿ ಪಡೆದ 108 ಮಹಿಳಾ ಶಿಬಿರಾರ್ಥಿಗಳಿಗೆ ಮೊದಲನೇ ಅವಧಿಯ ಶಿಷ್ಯವೇತನ 1500 ರೂ.ಗಳ ಚೆಕ್‌ಮೂಲಕ ವಿತರಣೆ ಮಾಡಲಾಗುವುದು.
ತರಬೇತಿ ಪಡೆದ ಮಹಿಳೆಯರು ನಗರ ಪ್ರದೇಶದ ಗಾರ್ಮೆಂಟ್ Õಗಳಲ್ಲಿ ಉದ್ಯೋಗವನ್ನು ಕಲ್ಪಿಸಿಕೊಡಲಾಗುವುದು ಎಂದರು. ಜಿಪಂ ಸದಸ್ಯರಾದ ಎಸ್. ಕೆ.ಮಂಜುನಾಥ್, ಶಾಂತಕುಮಾರಿ, ಉಮಾ ವೆಂಕಟೇಶ್ ಜವಳಿ ಇಲಾಖೆ ಸಹಾಯಕ ನಿರ್ದೇಶಕ ಶ್ರೀನಿವಾಸ್, ಸಿಡಿಪಿಓ ಭಾರತಿ ಬಣಕಾರ್, ಎನ್‌ಜಿಒ ಕಾರ್ಯದರ್ಶಿಗಳಾದ ರುದ್ರಮುನಿ, ಗಿರಿಯಪ್ಪ ಇತರರಿದ್ದರು.