ಬೆಂಗಳೂರು: ನಗರದಲ್ಲಿ ಮಳೆಯಿಂದ ಉಂಟಾಗುವ ಅನಾಹುತಗಳ ತಡೆಗೆ ಶಾಶ್ವತ ಪರಿಹಾರ ಕ್ರಮಗಳನ್ನು ಹಂತ ಹಂತವಾಗಿ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ಗೃಹ ಕಚೇರಿ “ಕೃಷ್ಣಾ’ದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೂರ್‍ನಾಲ್ಕು ದಿನ ನಗರದಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆ ಹಿನ್ನೆಲೆಯಲ್ಲಿ ಪಾಲಿಕೆ ಆಯುಕ್ತರೊಂದಿಗೆ ಚರ್ಚಿಸಿ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿತ್ತು. ಅದರಂತೆ ಆಯುಕ್ತರು ಹಾಗೂ ಪಾಲಿಕೆ ಅಧಿಕಾರಿಗಳು ಸೋಮವಾರ ರಾತ್ರಿಯಿಂದ ಮಂಗಳವಾರ ನಸುಕಿನವರೆಗೆ ಕಾರ್ಯ ನಿರ್ವಹಿಸಿ ಮೇಲ್ವಿಚಾರಣೆ ನಡೆಸಿದ್ದಾರೆ ಎಂದು ಹೇಳಿದರು.
ಕೆಲವೆಡೆ ಕಾಲುವೆ, ಚರಂಡಿ ಮೇಲೆ ಹಾಗೂ ಹೊಂದಿಕೊಂಡಂತೆ ಮನೆಗಳನ್ನು ನಿರ್ಮಿಸಿಕೊಂಡಿದ್ದಾರೆ. ಇದು ಸಮ್ಮಿಶ್ರ ಸರ್ಕಾರ ರಚನೆಯಾದ ನಂತರ ನಿರ್ಮಾಣವಾಗಿರುವುದಲ್ಲ. ಹಿಂದಿನಿಂದ ತಪ್ಪುಗಳಾಗಿವೆ. ಹಾಗೆಂದು ಸುಮ್ಮನಿರುವುದಿಲ್ಲ. ಸೆ.28ರಂದು ಅಧಿಕಾರಿಗಳ ಸಭೆ ಕರೆಯಲಾಗಿದ್ದು, ಶಾಶ್ವತ ಪರಿಹಾರ ಕ್ರಮಗಳ ಬಗ್ಗೆ ಚರ್ಚಿಸಲಾಗುವುದು ಎಂದು ತಿಳಿಸಿದರು.
ಕಾಲುವೆ ಒತ್ತುವರಿ ಮಾಡಿಕೊಂಡ ಸಣ್ಣಪುಟ್ಟ ಮನೆಗಳನ್ನು ಕೆಡವಿ ಜನರನ್ನು ಒಕ್ಕಲೆಬ್ಬಿಸಿ ಬೀದಿಪಾಲು ಮಾಡಿ ಎಂದು ಸಮ್ಮಿಶ್ರ ಸರ್ಕಾರ ಆದೇಶಿಸಿಲ್ಲ. ಎಲ್ಲ ಜನರು ಆರಾಮದಾಯಕವಾಗಿ ಕಾರ್ಯ ನಿರ್ವಹಿಸಲು ಅನುಕೂಲವಾಗುವಂತೆ ಮೂಲ ಸೌಕರ್ಯ ಕಲ್ಪಿಸಲು ಸರ್ಕಾರ ಬದ್ಧವಾಗಿದ್ದು, ಅದರಂತೆ ಹಂತ ಹಂತವಾಗಿ ಕ್ರಮ ಕೈಗೊಳ್ಳಲಾಗುವುದು. ಕಾಲುವೆ ಒತ್ತುವರಿ ತೆರವು ಕಾರ್ಯವನ್ನು ನಿರ್ಲಕ್ಷಿಸಿಲ್ಲ. ಸರ್ವೇ ವರದಿ ಪಡೆದು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಬೆಳ್ಳಂದೂರು ಕೆರೆಯಲ್ಲಿ ಮತ್ತೆ ನೊರೆ ಸಮಸ್ಯೆ ಕಾಣಿಸಿಕೊಂಡಿದೆ. ಹಿಂದೆ ನಾನು ಪರಿಶೀಲನೆ ನಡೆಸುವ ಸಂದರ್ಭದಲ್ಲಿ ನನಗೂ ನೊರೆ ಸಮಸ್ಯೆ ಕಾಡಿತ್ತು. ಕೆರೆಯ ಪಕ್ಕದಲ್ಲೇ ಪರ್ಯಾಯ ಕಾಲುವೆ ನಿರ್ಮಿಸಲಾಗಿದ್ದರೂ ನೊರೆ ಕಾಣಿಸಿಕೊಂಡಿದೆ. ಬೆಳ್ಳಂದೂರು ಕೆರೆ ಅಭಿವೃದ್ಧಿಗೆ 50 ಕೋಟಿ ರೂ. ಅನುದಾನ ಕಾಯ್ದಿರಿಸಲಾಗಿದ್ದು, ಶಾಶ್ವತ ಪರಿಹಾರ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರತಿಕ್ರಿಯಿಸಿದರು.