Advertisement

ವಿಧಾನ-ಕದನ 2023: ಗೌಡರ ಕುಟುಂಬಕ್ಕೆ ಪ್ರೀತಂಗೌಡ ಸೋಲಿಸುವ ಸವಾಲು ಏಕೆ?

12:39 AM Apr 21, 2023 | Team Udayavani |

ಹಾಸನ: ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರ ಕುಟುಂಬದಲ್ಲಿ ಹಾಸನ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಆಯ್ಕೆಯ ವಿಚಾರದಲ್ಲಿ ದೊಡ್ಡ ಕೋಲಾಹಲವೇ ನಡೆದಿತ್ತು. ಕುಟುಂಬವೇ ಒಡೆದು ಹೋಗುವಷ್ಟರ ಮಟ್ಟಿಗೆ ವಿವಾದ ಸೃಷ್ಟಿಯಾಗಿತ್ತು. ಆದರೆ ಎಚ್‌.ಪಿ. ಸ್ವರೂಪ್‌ ಅವರಿಗೆ ಟಿಕೆಟ್‌ ಘೋಷಣೆ ಆದ ಅನಂತರ ಗೌಡರ ಕುಟುಂಬ ಒಗ್ಗಟ್ಟು ಪ್ರದರ್ಶಿಸಿದೆ. ಹಾಸನ ಕ್ಷೇತ್ರದ ಚುನಾವಣೆಯನ್ನು ಸವಾಲಾಗಿ ಸ್ವೀಕರಿಸಿ ಸ್ವರೂಪ್‌ ಅವರನ್ನು ಗೆಲ್ಲಿಸುವ ಪಣ ತೊಟ್ಟು ಗೌಡರ ಕುಟುಂಬ ಅಖಾಡಕ್ಕಿಳಿದಿದೆ.
ಟಿಕೆಟ್‌ಗಾಗಿ ನಡೆದ ಪೈಪೋಟಿ ತಾರಕ್ಕೇರಿದಾಗ ಇನ್ನು ರೇವಣ್ಣ ಮತ್ತು ಕುಟುಂಬದವರು ಸ್ವರೂಪ್‌ಗೆ ಟಿಕೆಟ್‌ ಕೊಡಲು ಬಿಡುವುದಿಲ್ಲ.

Advertisement

ಕೊಟ್ಟರೂ ಸ್ವರೂಪ್‌ಗೆ ಸಹಕಾರ ನೀಡಲಾರರು ಎಂಬುದು ಜನರ ಭಾವನೆಯಾಗಿತ್ತು. ಆದರೆ ಟಿಕೆಟ್‌ ಪೈಪೋಟಿಯ ಅಂತ್ಯದಲ್ಲಿ ಭವಾನಿ ರೇವಣ್ಣ ಶಸ್ತ್ರತ್ಯಾಗ ಮಾಡಿ ದೇವೇಗೌಡರ ಆರೋಗ್ಯ ಮುಖ್ಯ, ದೊಡ್ಡಮನೆಯ ಕುಟುಂಬದ ಹಿತವೇ ಮುಖ್ಯ ಎಂದು ಹೇಳಿ ಸ್ವರೂಪ್‌ ನನ್ನ ಮಗನಿದ್ದಂತೆ. ಅವರನ್ನು ಗೆಲ್ಲಿಸಿಕೊಂಡು ಬರುವ ಪಣತೊಟ್ಟು ಅಚ್ಚರಿ ಮೂಡಿಸಿದ್ದಾರೆ.

ಗುರುವಾರ ಹಾಸನದಲ್ಲಿ ನಡೆದ ಬೃಹತ್‌ ರ್ಯಾಲಿಯಲ್ಲಿ ದೇವೇಗೌಡರು ಅನಾರೋಗ್ಯವನ್ನೂ ಲೆಕ್ಕಿಸದೆ ಪಾಲ್ಗೊಂಡು ಹಾಸನ ಕ್ಷೇತ್ರದ ಬಿಜೆಪಿ ಶಾಸಕ ಪ್ರೀತಂಗೌಡ ಸೋಲಿಸುವ ಸವಾಲನ್ನು ನಮ್ಮ ಕುಟುಂಬ ಸ್ವೀಕರಿಸಿದೆ ಎಂದು ತಮ್ಮ ಪರಿವಾರದೊಂದಿಗೆ ಘೋಷಣೆ ಮಾಡಿದರು. ದೇವೇಗೌಡರೊಂದಿಗೆ ಎಚ್‌.ಡಿ. ಕುಮಾರಸ್ವಾಮಿ, ಎಚ್‌.ಡಿ. ರೇವಣ್ಣ, ಭವಾನಿ ರೇವಣ್ಣ, ಪ್ರಜ್ವಲ್‌ ರೇವಣ್ಣ, ಡಾ| ಸೂರಜ್‌ ರೇವಣ್ಣ ಅವರೂ ರ್ಯಾಲಿಯಲ್ಲಿ ಪಾಲ್ಗೊಂಡು ಕುಟುಂಬದ ಒಗ್ಗಟ್ಟು ಪ್ರದರ್ಶಿಸಿದ್ದಾರೆ. ಹಾಸನ ವಿಧಾನಸಭಾ ಕ್ಷೇತ್ರವನ್ನು ಗೆಲ್ಲಬೇಕೆಂಬುದು ರಾಜಕೀಯ ಪಕ್ಷವೊಂದರ ಸಾಮಾನ್ಯ ಗುರಿ. ಆದರೆ ಇಲ್ಲಿ ಪ್ರೀತಂಗೌಡ ಅವರನ್ನು ಸೋಲಿಸಲೇಬೇಕು ಎಂಬುದು ಗೌಡರ ಕುಟುಂಬದ ಜಿದ್ದು.
ಪ್ರೀತಂಗೌಡ ಅವರ ಮೇಲೇಕೆ ಗೌಡರ ಕುಟುಂಬಕ್ಕೆ ಇಷ್ಟೊಂದು ಜಿದ್ದು? ಹಾಸನ ಕ್ಷೇತ್ರವನ್ನು ಗೆಲ್ಲಲೇಬೇಕು ಎಂಬ ಹಠವೇಕೆ ಎಂಬುದಕ್ಕೆ ಉತ್ತರ ಕ್ಲಿಷ್ಟವೇನಿಲ್ಲ. ಪ್ರೀತಂಗೌಡ ಅವರು ಗೌಡರ ಕುಟುಂಬದ ಬಗ್ಗೆ ಕಳೆದೆರೆಡು ವರ್ಷಗಳಿಂದ ಹಗುರವಾಗಿ ಮಾತನಾಡುತ್ತಲೇ ಬಂದರು.

ಎಚ್‌.ಡಿ. ರೇವಣ್ಣ, ಭವಾನಿ ರೇವಣ್ಣ ಅವರ ಬಗ್ಗೆ ವೈಯಕ್ತಿಕ ಟೀಕೆಗಳನ್ನೂ ಮಾಡಿ ಅವಹೇಳನ ಮಾಡಿದರು. ರೇವಣ್ಣ ಕುಟುಂಬದವರು ನನ್ನೆದುರು ಸ್ಪರ್ಧೆಗೆ ಬರಲಿ, 50 ಸಾವಿರ ಮತಗಳಿಂದ ಸೋಲಿಸುವೆ ಎಂದು ಪಂಥಾಹ್ವಾನವನ್ನೂ ನೀಡಿ ದರ್ಪ ಪ್ರದರ್ಶಿಸಿದರು. ಇದು ಪ್ರೀತಂಗೌಡ ಸೋಲಿಸಲು ಗೌಡರ ಕುಟುಂಬ ಜಿದ್ದಿಗೆ ಬೀಳಲು ಕಾರಣ.
ಎಚ್‌.ಡಿ. ರೇವಣ್ಣ ಹಾಸನ ಜಿಲ್ಲೆಯಲ್ಲಿ ಅಭಿವೃದ್ಧಿಯ ಹರಿಕಾರ ಎಂದೇ ಕರೆಸಿಕೊಂಡವರು. ಸಮ್ಮಿಶ್ರ ಸರಕಾರದಲ್ಲಿ ರೇವಣ್ಣ ಮಂಜೂರು ಮಾಡಿಸಿದ್ದ ಅಭಿವೃದ್ಧಿ ಯೋಜನೆಗಳನ್ನೆಲ್ಲ ಪ್ರೀತಂಗೌಡ ರದ್ದುಪಡಿಸಿದರು. ದೇವೇಗೌಡರ ಕನಸಿನ ವಿಮಾನ ನಿಲ್ದಾಣ, ಐಐಟಿಗಾಗಿ ಕಾಯ್ದಿರಿಸಿದ್ದ ಭೂಮಿಯನ್ನು ವಸತಿ ಬಡಾವಣೆಗಳಿಗೆ ಪರಿವರ್ತಿಸುವುದಕ್ಕೂ ಕೈ ಹಾಕಿದರು ಇದು ಗೌಡರ ಕುಟುಂಬ ಕೆರಳಲು ಮತ್ತೂಂದು ಕಾರಣ.

ಬಹುಮುಖ್ಯವಾಗಿ ಹಾಸನ ವಿಧಾನಸಭಾ ಕ್ಷೇತ್ರ ಜಿಲ್ಲಾ ಕೇಂದ್ರ. ಈ ಕ್ಷೇತ್ರ ಗೆಲ್ಲದಿದ್ದರೆ ಜೆಡಿಎಸ್‌ ಅಸ್ತಿತ್ವಕ್ಕೆ ಧಕ್ಕೆ, ಮಹತ್ವಾಕಾಂಕ್ಷಿ ಪ್ರೀತಂಗೌಡರನ್ನು ಈಗ ಸೋಲಿಸದಿದ್ದರೆ ದಶಕಗಳ ಕಾಲ ಅವಮಾನ ಅನುಭವಿಸುತ್ತಲೇ ಇರಬೇಕಾಗುತ್ತದೆ ಎಂದು ಭಾವಿಸಿರುವ ಗೌಡರ ಕುಟುಂಬ ಪ್ರೀತಂಗೌಡ ಸೋಲಿಸುವ ಸವಾಲು ಸ್ವೀಕರಿಸಿ ಚುನಾವಣ ರಣರಂಗಕ್ಕೆ ಇಳಿದಿರುವುದು ಹಾಸನ ಕ್ಷೇತ್ರಕ್ಕೆ ಹೈವೋಲ್ಟೆಜ್‌ ರಂಗು ಬಂದಿದೆ.

Advertisement

~ ಎನ್‌. ನಂಜುಂಡೇಗೌಡ

Advertisement

Udayavani is now on Telegram. Click here to join our channel and stay updated with the latest news.

Next