Advertisement

ವಿಧಾನ-ಕದನ 2023: ಪುತ್ತೂರಲ್ಲಿ ಪಕ್ಷೇತರ ಪುತ್ತಿಲ ಸವಾಲು

12:06 AM Apr 30, 2023 | Team Udayavani |

ಪುತ್ತೂರು: ರಾಜ್ಯದ ಹೈವೋಲ್ಟೇಜ್‌ ಕ್ಷೇತ್ರಗಳಲ್ಲಿ ಒಂದಾಗಿರುವ ಪುತ್ತೂರಿನಲ್ಲಿ ಈ ಬಾರಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದ್ದು ಫಲಿತಾಂಶದ ಬಗ್ಗೆ ತೀವ್ರ ಕುತೂಹಲ ಮೂಡಿಸಿದೆ. ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲು ಅವರ ತವರು ಕ್ಷೇತ್ರದಲ್ಲಿ ಬಿಜೆಪಿ, ಕಾಂಗ್ರೆಸ್‌, ಪಕ್ಷೇತರ ಅಭ್ಯರ್ಥಿಯ ನಡುವೆ ನೇರ ಹಣಾಹಣಿ ಇದೆ.

Advertisement

ಬಿಜೆಪಿಗೆ ಪಕ್ಷೇತರ ಸವಾಲು: 2008 ರಲ್ಲಿ ಮಾಜಿ ಶಾಸಕಿ ಶಕುಂತಳಾ ಟಿ. ಶೆಟ್ಟಿ ಅವರು ಬಿಜೆಪಿಯಿಂದ ಬಂಡೆದ್ದು ಸ್ವಾಭಿಮಾನಿ ವೇದಿಕೆಯಿಂದ ಸ್ಪರ್ಧಿಸಿದ್ದ ವೇಳೆ ಉಂಟಾಗಿದ್ದ ತ್ರಿಕೋನ ಸ್ಪರ್ಧೆಯ ವಾತಾವರಣ ಈ ಬಾರಿ ಮರುಕಳಿಸಿದಂತೆ ತೋರುತ್ತಿದೆ. ಬಿಜೆಪಿಯ ಸಂಘಟನಾತ್ಮಕ ನೆಲೆ ಎಂದೇ ಪರಿಗಣಿಸಲ್ಪಟ್ಟಿರುವ ಈ ಕ್ಷೇತ್ರವನ್ನು ಉಳಿಸಿಕೊಳ್ಳಲು ಬಿಜೆಪಿ ಪ್ರಯತ್ನಿಸುತ್ತಿದೆ. ಬಿಜೆಪಿ ಅಭ್ಯರ್ಥಿ ಅಶಾ ತಿಮ್ಮಪ್ಪ ಗೌಡ ಹಾಗೂ ಕಾಂಗ್ರೆಸ್‌ನ ಅಶೋಕ್‌ ಕುಮಾರ್‌ ರೈ ಜತೆಗೆ ಸಂಘ ಪರಿವಾರದ ಹಿನ್ನೆಲೆಯ ಅರುಣ್‌ ಕುಮಾರ್‌ ಪುತ್ತಿಲ ಪಕ್ಷೇತರರಾಗಿ ಕಣದಲ್ಲಿದ್ದಾರೆ. ಪಕ್ಷೇತರ ಹಾಗೂ ಬಿಜೆಪಿ ಬೆಂಬಲಿತರ ಮಧ್ಯೆ ಸಾಮಾಜಿಕ ಮಾಧ್ಯಮಗಳಲ್ಲಿ ವಾಗ್ವಾದ ತಾರಕಕ್ಕೇರಿದೆ. ಸೋಲು-ಗೆಲುವಿನ ಲೆಕ್ಕಾಚಾರಕ್ಕೆ ಉಭಯ ಅಭ್ಯರ್ಥಿಗಳ ಪ್ರಚಾರ ಸಭೆಗಳಲ್ಲಿ ಸೇರುತ್ತಿರುವ ಕಾರ್ಯಕರ್ತರ ಸಂಖ್ಯೆಯನ್ನೂ ಮಾನದಂಡವಾಗಿಸಲಾಗುತ್ತಿದೆ.

ತ್ರಿಕೋನ ಸ್ಪರ್ಧೆ: 2013ರ ಗೆಲುವಿನ ಪುನರಾವರ್ತನೆಯ ನಿರೀಕ್ಷೆಯಲ್ಲಿ ಕಾಂಗ್ರೆಸ್‌ ತಳಮಟ್ಟದಲ್ಲಿ ಪ್ರಚಾರ ನಡೆಸುತ್ತಿದೆ. ಈಗಿನ ವಾತಾವರಣ ಗಮನಿಸಿದರೆ ಬಿಜೆಪಿ, ಕಾಂಗ್ರೆಸ್‌, ಪಕ್ಷೇತರ ಅಭ್ಯರ್ಥಿಗಳ ಮಧ್ಯೆ ಪ್ರಬಲ ಸ್ಪರ್ಧೆ ಏರ್ಪಡಲಿದೆ. ಇಲ್ಲಿ ಪಕ್ಷೇತರ ಅಭ್ಯರ್ಥಿಯು ಬಿಜೆಪಿಯ ಸಾಂಪ್ರದಾಯಿಕ ಮತಗಳಲ್ಲಿ ಶೇ.85ಕ್ಕಿಂತ ಅಧಿಕ ಮತ ಪಡೆದಲ್ಲಿ ಫ‌ಲಿತಾಂಶ ಬೇರೆ ಆಗಬಹುದು. ಬಿಜೆಪಿ ತನ್ನ ಮತಬ್ಯಾಂಕ್‌ ಉಳಿಸಿಕೊಳ್ಳುವಲ್ಲಿ ಸಫಲವಾದರೆ ಪಕ್ಷೇತರ ಅಭ್ಯರ್ಥಿಗೆ ಹಿನ್ನಡೆಯಾಗುವ ಸಂಭವವಿದೆ. ಇಬ್ಬರ ನಡುವೆ ಮತ ಹಂಚಿ ಹೋದರೆ ಅದರ ಕಾಂಗ್ರೆಸ್‌ಗೂ ಲಾಭವಾಗಬಹುದು. ಕಾಂಗ್ರೆಸ್‌ನಿಂದ ಆಕಾಂಕ್ಷಿಯಾಗಿದ್ದ ದಿವ್ಯಾಪ್ರಭಾ ಚಿಲ್ತಡ್ಕ ಅವರು ಟಿಕೆಟ್‌ ಸಿಗದ ಕಾರಣ ಜೆಡಿಎಸ್‌ ಸೇರಿ ಪುತ್ತೂರು ಕ್ಷೇತ್ರದ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ. ಎಸ್‌ಡಿಪಿಐಯು ಪ್ರವೀಣ್‌ ನೆಟ್ಟಾರು ಹತ್ಯೆ ಆರೋಪದಲ್ಲಿ ಬಂಧನದಲ್ಲಿರುವ ಶಾಫಿ ಬೆಳ್ಳಾರೆ ಅವರನ್ನು ಕಣಕ್ಕಿಳಿಸಿದೆ. ಈ ಪಕ್ಷಗಳು ಪಡೆಯುವ ಮತಗಳು ಫ‌ಲಿತಾಂಶದ ಮೇಲೆ ಪರಿಣಾಮ ಬೀರಲೂ ಬಹುದು.

ಬಿಜೆಪಿಯೇತರ ಅಭ್ಯರ್ಥಿಗಳಿಗೆ ಬಿಜೆಪಿ ನಂಟು!: ಕಾಂಗ್ರೆಸ್‌ ಅಭ್ಯರ್ಥಿ ಅಶೋಕ್‌ ಕುಮಾರ್‌ ರೈ ಕೆಲವು ತಿಂಗಳ ಹಿಂದೆ ಬಿಜೆಪಿ ತೊರೆದರು. ಪಕ್ಷೇತರ ಅಭ್ಯರ್ಥಿ ಅರುಣ್‌ ಕುಮಾರ್‌ ಪುತ್ತಿಲ ಅವರು ಬಿಜೆಪಿ ಹಾಗೂ ಸಂಘಪರಿವಾರದವರು. ಅಚ್ಚರಿ ಅಂದರೆ ಕಣದಲ್ಲಿರುವ 8 ಅಭ್ಯರ್ಥಿಗಳಿಗೆ ಇದು ಮೊದಲ ಚುನಾವಣೆ. ಎಸ್‌ಡಿಪಿಐ ಅಭ್ಯರ್ಥಿ ಕಳೆದ ಬಾರಿಯ ವಿಧಾನಪರಿಷತ್‌ ಚುನಾವಣೆಯಲ್ಲಿ ಸ್ಪರ್ಧಿಸಿ ಪರಾಜಿತರಾಗಿದ್ದರು.

ಮತ ವಿಭಜನೆಯ ಲೆಕ್ಕ

Advertisement

ಪ್ರಚಾರದ ವೇಳೆ ಪಕ್ಷಗಳು ಮತ ಚಲಾವಣೆಯಿಂದ ಆಗುವ ಲಾಭ ನಷ್ಟಗಳ ಬಗ್ಗೆ ಮತದಾರರಿಗೆ ವಿವರಿಸುತ್ತಿದೆ. ಪಕ್ಷೇತರ ಅಭ್ಯರ್ಥಿಗೆ ಮತ ಹಾಕಿದರೆ ಅದರಿಂದ ಕಾಂಗ್ರೆಸ್‌ಗೆ ಲಾಭ ಎಂದು ಬಿಜೆಪಿ ಪ್ರಚಾರ ಮಾಡುತ್ತಿದೆ. ಆದರೆ ಅರುಣ್‌ ಪುತ್ತಿಲ ಬೆಂಬಲಿಗರು ಬಿಜೆಪಿಗೆ ಮತ ಹಾಕಿದರೆ ಕಾಂಗ್ರೆಸ್‌ಗೆ ಲಾಭ ಎನ್ನತೊಡಗಿದ್ದಾರೆ. ಏಕೆಂದರೆ ಇಲ್ಲಿ ಗೆಲ್ಲುವ ಅಭ್ಯರ್ಥಿ ಪುತ್ತಿಲ ಅವರಾಗಿದ್ದು ಬಿಜೆಪಿ ಅಲ್ಲ ಎಂದು ಮನವರಿಕೆ ಮಾಡತೊಡಗಿದ್ದಾರೆ. ಇತ್ತ ಎಸ್‌ಡಿಪಿಐ ಕೂಡ ಮುಸ್ಲಿಂ ಮತಗಳಿಗೆ ಕಣ್ಣು ಹಾಕಿದ್ದು ಕಾಂಗ್ರೆಸ್‌ನ ಮತದ ಬುಟ್ಟಿಗೆ ಕೈ ಹಾಕಬಹುದು. ಜೆಡಿಎಸ್‌ ಕಣದಲ್ಲಿದ್ದರೂ ಅಭ್ಯರ್ಥಿ ತನ್ನ ವೈಯಕ್ತಿಕ ವರ್ಚಸ್ಸಿನಿಂದ ಒಂದಷ್ಟು ಮತ ಪಡೆಯಬಹುದು. ಆದರೆ ಅದು ಫ‌ಲಿತಾಂಶದ ಮೇಲೆ ಬೀರಬಹುದಾದ ಪರಿಣಾಮದ ಬಗ್ಗೆ ಇನ್ನೂ ಸ್ಪಷ್ಟತೆ ಮೂಡಿಲ್ಲ.

~ ಕಿರಣ್‌ ಪ್ರಸಾದ್‌ ಕುಂಡಡ್ಕ

Advertisement

Udayavani is now on Telegram. Click here to join our channel and stay updated with the latest news.

Next