Advertisement

ವಿಧಾನ-ಕದನ 2023: ಮೂರರ ನಡುವೆ ಜಿದ್ದಾಜಿದ್ದಿ ಹಣಾಹಣಿ

11:55 PM Apr 26, 2023 | Team Udayavani |

ಮೈಸೂರು: ಕೆಲವು ಕ್ಷೇತ್ರಗಳಲ್ಲಿ ಕಾಂಗ್ರೆಸ್‌-ಬಿಜೆಪಿ ನೇರ ಹಣಾಹಣಿ. ಇನ್ನು ಕೆಲವು ಕ್ಷೇತ್ರಗಳಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಜಿದ್ದಾಜಿದ್ದಿ ಸಮರ. ಇನ್ನು ಕೆಲವು ಕ್ಷೇತ್ರಗಳಲ್ಲಿ ಕಾಂಗ್ರೆಸ್‌, ಜೆಡಿಎಸ್‌, ಬಿಜೆಪಿ ಮಧ್ಯೆ ತ್ರಿಕೋನ ಸ್ಪರ್ಧೆ.

Advertisement

ಇದು ಮೈಸೂರು ಜಿಲ್ಲೆಯ 11 ವಿಧಾನಸಭಾ ಕ್ಷೇತ್ರಗಳ ಚಿತ್ರಣ. ಮೈಸೂರು ನಗರದ ಮೂರು ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ-ಕಾಂಗ್ರೆಸ್‌ ಮಧ್ಯೆ ಪೈಪೋಟಿ ಇದ್ದರೆ, ಗ್ರಾಮೀಣ ಭಾಗದ 8 ಅಸೆಂಬ್ಲಿ ಕ್ಷೇತ್ರಗಳಲ್ಲಿ ಬಹುತೇಕ ಕಡೆ ಕಾಂಗ್ರೆಸ್‌-ಜೆಡಿಎಸ್‌ ಹಣಾಹಣಿ ಇದೆ. ವರುಣ ಹಾಗೂ ನಂಜನಗೂಡು (ಪರಿಶಿಷ್ಟ ಜಾತಿ ಮೀಸಲು) ಕ್ಷೇತ್ರಗಳಲ್ಲಿ ಬಿಜೆಪಿ-ಕಾಂಗ್ರೆಸ್‌ ಮಧ್ಯೆ ಪೈಪೋಟಿ ಇದೆ.

ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ವಸತಿ ಸಚಿವ ವಿ.ಸೋಮಣ್ಣ, ಮಾಜಿ ಸಚಿವರಾದ ಜಿ.ಟಿ.ದೇವೇಗೌಡ, ತನ್ವೀರ್‌ ಸೇಠ್‌, ಡಾ.ಎಚ್‌.ಸಿ.ಮಹದೇವಪ್ಪ, ಸಾ.ರಾ.ಮಹೇಶ್‌, ಕೆ.ವೆಂಕಟೇಶ್‌, ಸಿ.ಎಚ್‌.ವಿಜಯಶಂಕರ್‌ ಅವರು ಕಣದಲ್ಲಿದ್ದು ಅಖಾಡದಲ್ಲಿ ಗೆಲುವಿಗೆ ಕಸರತ್ತು ಮಾಡುತ್ತಿದ್ದಾರೆ.

ವರುಣ

ಮೈಸೂರು ಜಿಲ್ಲೆಯ ವರುಣ ರಾಜ್ಯದಲ್ಲಿಯೇ ಹೈವೋಲ್ಟೆಜ್‌ ಕ್ಷೇತ್ರ. ಈ ಕ್ಷೇತ್ರದಲ್ಲಿ 2 ಬಾರಿ ಗೆದ್ದಿರುವ ಮಾಜಿ ಸಿಎಂ ಸಿದ್ದರಾಮಯ್ಯ ಈ ಬಾರಿ ಕ್ಷೇತ್ರ ಉಳಿಸಿಕೊಳ್ಳಲು ಹರಸಾಹಸ ಪಡುತ್ತಿದ್ದಾರೆ. ಕಾಂಗ್ರೆಸ್ಸಿನ ಸಿದ್ದರಾಮಯ್ಯ ಹಾಗೂ ವಸತಿ ಸಚಿವ ಬಿಜೆಪಿಯ ವಿ.ಸೋಮಣ್ಣ ಅವರ ಮಧ್ಯೆ ನೇರ ಹಣಾಹಣಿ ನಡೆದಿದೆ. ಜೆಡಿಎಸ್‌ನಿಂದ ಮಾಜಿ ಶಾಸಕ ಡಾ.ಭಾರತಿ ಶಂಕರ್‌ ಕಣದಲ್ಲಿದ್ದಾರೆ. ಡಾ.ಭಾರತಿ ಶಂಕರ್‌ ತಿ.ನರಸೀಪುರ ಮೀಸಲು ಕ್ಷೇತ್ರದಲ್ಲಿ 1999ರಲ್ಲಿ ಬಿಜೆಪಿಯಿಂದ ಗೆದ್ದಿದ್ದರು. ಈ ಬಾರಿ ಅವರಿಗೆ ಬಿಜೆಪಿ ಟಿಕೆಟ್‌ ಸಿಗಲಿಲ್ಲ. ಬಿಜೆಪಿ ತೊರೆದು ಜೆಡಿಎಸ್‌ ಸೇರಿ ವರುಣ ಸಾಮಾನ್ಯ ಕ್ಷೇತ್ರದಲ್ಲಿ ಕಣಕ್ಕಿಳಿದಿದ್ದಾರೆ. ರಾಜ್ಯ ಬಹುಜನ ಸಮಾಜ ಪಕ್ಷದ ಅಧ್ಯಕ್ಷ ಕೃಷ್ಣಮೂರ್ತಿ ಇಲ್ಲಿ ಸ್ಪರ್ಧಿಸಿದ್ದಾರೆ. ಪರಿಶಿಷ್ಟ ಜಾತಿಗೆ ಸೇರಿದ ಡಾ.ಭಾರತಿ ಶಂಕರ್‌ ಹಾಗೂ ಕೃಷ್ಣಮೂರ್ತಿ ಇಬ್ಬರೂ ಸೆಳೆಯುವ ಮತಗಳು ಕಾಂಗ್ರೆಸ್ಸಿನ ಸಿದ್ದರಾಮಯ್ಯ ಅವರಿಗೆ ತೊಡಕಾಗಲಿದೆ ಎಂಬ ಲೆಕ್ಕಾಚಾರವಿದೆ.

Advertisement

ಸಚಿವ ಸೋಮಣ್ಣ ವರುಣ ಕ್ಷೇತ್ರದಲ್ಲಿ ಬಿರುಸಿನ ಪ್ರಚಾರ ನಡೆಸಿದ್ದಾರೆ. ಸೋಮಣ್ಣ ಬೆಂಗಳೂರಿನವರು. ತಾವು ವರುಣ ಕ್ಷೇತ್ರದವರು. ಮನೆ ಮಗ. ಇದು ಹೊರಗಿನವರು ಹಾಗೂ ಮನೆ ಮಗನ ನಡುವಿನ ಸ್ಪರ್ಧೆ ಎಂದು ಸಿದ್ದರಾಮಯ್ಯ ಪ್ರಚಾರ ಮಾಡಿದ್ದಾರೆ. ವರುಣದಲ್ಲಿ ಗೆದ್ದರೆ ಬೆಂಗಳೂರಿನ ಗೋವಿಂದರಾಜ ನಗರ ಕ್ಷೇತ್ರದ ರೀತಿ ಅಭಿವೃದ್ಧಿಪಡಿಸುವೆ. ವರುಣ ತಾಲೂಕು ಕೇಂದ್ರವನ್ನಾಗಿ ಘೋಷಿಸುತ್ತೇವೆ ಎಂದು ಸೋಮಣ್ಣ ಭರವಸೆ ನೀಡಿದ್ದಾರೆ. ಚುನಾವಣಾ ಕಾವು ಬಿಸಿಲಿಗಿಂತಲೂ ಜೋರಾಗಿದೆ. ವರುಣ ಕ್ಷೇತ್ರದಲ್ಲಿ ವೀರಶೈವ-ಲಿಂಗಾಯತರು, ಕುರುಬರು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರು, ಒಕ್ಕಲಿಗರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.

———————————————-

ತಿ.ನರಸೀಪುರ (ಪರಿಶಿಷ್ಟ ಜಾತಿ ಮೀಸಲು)

ಮಾಜಿ ಸಚಿವ ಕಾಂಗ್ರೆಸ್ಸಿನ ಡಾ.ಎಚ್‌.ಸಿ.ಮಹದೇವಪ್ಪ, ಜೆಡಿಎಸ್‌ ಶಾಸಕ ಎಂ.ಅಶ್ವಿ‌ನ್‌ಕುಮಾರ್‌, ಬಿಜೆಪಿಯ ಡಾ.ಎಂ.ರೇವಣ್ಣ ಅವರ ಮಧ್ಯೆ ತ್ರಿಕೋನ ಸ್ಪರ್ಧೆಯಿದ್ದು ತಿ.ನರಸೀಪುರ (ಪರಿಶಿಷ್ಟ ಜಾತಿ ಮೀಸಲು) ಕ್ಷೇತ್ರ.

ಡಾ.ಮಹದೇವಪ್ಪ ಈ ಕ್ಷೇತ್ರವನ್ನು 5 ಬಾರಿ ಪ್ರತಿನಿಧಿಸಿದ್ದಾರೆ. ಕಳೆದ ಬಾರಿ ಪರಾಭವಗೊಂಡಿದ್ದಾರೆ. ಈ ಬಾರಿ ಗೆಲುವಿಗೆ ಶ್ರಮಿಸುತ್ತಿದ್ದಾರೆ. ಶಾಸಕ, ಸಚಿವರಾಗಿದ್ದಾಗ ಕ್ಷೇತ್ರದಲ್ಲಿ ತಾವು ಕೈಗೊಂಡ ಅಭಿವೃದ್ಧಿ ಮುಂದಿಟ್ಟುಕೊಂಡು ಮತ ಬೇಟೆ ನಡೆಸಿದ್ದಾರೆ. ಅಶ್ವಿ‌ನ್‌ಕುಮಾರ್‌ 2ನೇ ಬಾರಿ ಅವಕಾಶ ನೀಡುವಂತೆ ಮನವಿ ಮಾಡುತ್ತಿದ್ದಾರೆ. ಸರ್ಕಾರಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದ ಡಾ.ರೇವಣ್ಣ ಸರ್ಕಾರಿ ಹುದ್ದೆಗೆ ರಾಜೀನಾಮೆ ನೀಡಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಬಿಜೆಪಿ ಇಲ್ಲಿ ಪಡೆಯುವ ಮತಗಳು ಕಾಂಗ್ರೆಸ್‌ ಅಥವಾ ಜೆಡಿಎಸ್‌ ಯಾರಿಗೆ ಹಿನ್ನಡೆ ಎಂಬ ಚರ್ಚೆ ನಡೆದಿದೆ. ಈ ಕ್ಷೇತ್ರದಲ್ಲಿ 1999ರಲ್ಲಿ ಬಿಜೆಪಿ ಗೆದ್ದ ಇತಿಹಾಸವೂ ಇದೆ. ಆಗ ಬಿಜೆಪಿಯಿಂದ ಗೆದ್ದಿದ್ದ ಡಾ.ಭಾರತಿ ಶಂಕರ್‌ ಇಲ್ಲಿ ಈ ಬಾರಿ ಬಿಜೆಪಿ ಟಿಕೆಟ್‌ ಸಿಗದೇ ಆ ಪಕ್ಷ ತ್ಯಜಿಸಿ ಜೆಡಿಎಸ್‌ ಸೇರಿ ಪಕ್ಕದ ವರುಣ ಕ್ಷೇತ್ರದಲ್ಲಿ ಅಭ್ಯರ್ಥಿಯಾಗಿದ್ದಾರೆ. ಕ್ಷೇತ್ರದಲ್ಲಿ ಪರಿಶಿಷ್ಟ ಜಾತಿ, ಒಕ್ಕಲಿಗರು, ನಾಯಕರು, ಕುರುಬ ಸಮಾಜದವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.

—————————————

ನಂಜನಗೂಡು (ಪರಿಶಿಷ್ಟ ಜಾತಿ ಮೀಸಲು)

ನಂಜನಗೂಡು (ಪರಿಶಿಷ್ಟ ಜಾತಿ ಮೀಸಲು) ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ-ಕಾಂಗ್ರೆಸ್‌ ಮಧ್ಯೆ ನೇರ ಸ್ಪರ್ಧೆ ಇದೆ. ನಂಜನಗೂಡಿನ ಹಾಲಿ ಶಾಸಕ ಬಿಜೆಪಿಯ ಬಿ.ಹರ್ಷವರ್ಧನ್‌ 2ನೇ ಬಾರಿಗೆ ವಿಧಾನಸಭೆ ಪ್ರವೇಶಿಸಲು ಪ್ರಯತ್ನ ನಡೆಸಿದ್ದಾರೆ. ನಂಜನಗೂಡಿನಲ್ಲಿ ಮೊದಲ ಬಾರಿಗೆ ಕಮಲ ಅರಳಿದ್ದು 2018ರ ಚುನಾವಣೆಯಲ್ಲಿ. ಕ್ಷೇತ್ರದಲ್ಲಿ ಅನೇಕ ಅಭಿವೃದ್ಧಿ ಮೂಲಕ ಗಮನ ಸೆಳೆದಿರುವ ಹರ್ಷವರ್ಧನ್‌, ತಮ್ಮ  ಈ ಕಾರ್ಯವನ್ನು ಮುಂದಿಟ್ಟುಕೊಂಡು ಮತ ಯಾಚಿಸುತ್ತಿದ್ದಾರೆ.

ಕಾಂಗ್ರೆಸ್‌ ಅಭ್ಯರ್ಥಿ 28 ವರ್ಷದ ಯುವಕ ದರ್ಶನ್‌ ಧ್ರುವನಾರಾಯಣ ರಾಜಕಾರಣಕ್ಕೆ ಹೊಸಬರು. ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿದ್ದ ಮಾಜಿ ಸಂಸದ ಆರ್‌.ಧ್ರುವನಾರಾಯಣ ಅವರ ಪುತ್ರ. ಧ್ರುವನಾರಾಯಣ ಅವರಿಗೆ ಇಲ್ಲಿ ಟಿಕೆಟ್‌ ಬಹುತೇಕ ಖಚಿತವಾಗಿತ್ತು. ಟಿಕೆಟ್‌ ಘೋಷಣೆ ಮುನ್ನವೇ ಧ್ರುವನಾರಾಯಣ ನಿಧನರಾದರು. ಕೆಲವು ದಿನಗಳ ನಂತರ ಧ್ರುವನಾರಾಯಣ ಅವರ ಪತ್ನಿಯೂ ಕೊನೆಯುಸಿರೆಳೆದರು. ಕಾಂಗ್ರೆಸ್‌ನ ಧ್ರುವನಾರಾಯಣ ಅವರ ಪುತ್ರ ವಕೀಲರಾದ ದರ್ಶನ್‌ ಅವರನ್ನು ಕಣಕ್ಕೆ ಇಳಿಸಿದೆ. ಕ್ಷೇತ್ರದಲ್ಲಿ ದರ್ಶನ್‌ ಪರ ಅನುಕಂಪ ಇದೆ. ಜೆಡಿಎಸ್‌ ಇಲ್ಲಿ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸದೇ ದರ್ಶನ್‌ರಿಗೆ ಬೆಂಬಲ ಘೋಷಿಸಿ  ಪ್ರಚಾರ ನಡೆಸಿದೆ. ಕ್ಷೇತ್ರದಲ್ಲಿ ವೀರಶೈವ-ಲಿಂಗಾಯತರು, ದಲಿತರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.

—————————————

ಹೆಗ್ಗಡದೇವನಕೋಟೆ (ಪರಿಶಿಷ್ಟ ಪಂಗಡ ಮೀಸಲು)

ಕರ್ನಾಟಕ-ಕೇರಳ ಗಡಿಭಾಗದ ಎಚ್‌.ಡಿ.ಕೋಟೆ ಕ್ಷೇತ್ರದಲ್ಲಿ ಮೊದಲಿನಿಂದಲೂ ಕಾಂಗ್ರೆಸ್‌, ಜನತಾ ಪರಿವಾರದ್ದೇ ಪಾರುಪತ್ಯ. ಕಮಲ ಒಮ್ಮೆಯೂ ಇಲ್ಲಿ ಅರಳಿಲ್ಲ. ಕಳೆದ ಬಾರಿ ಕಾಂಗ್ರೆಸ್‌ನಿಂದ ಗೆದ್ದ ಅನಿಲ್‌ ಚಿಕ್ಕಮಾದು 2ನೇ ಬಾರಿಗೆ ವಿಧಾನಸಭೆ ಪ್ರವೇಶಿಸಲು ಕಸರತ್ತು ನಡೆಸಿದ್ದಾರೆ. ಕಾಂಗ್ರೆಸ್‌, ಜೆಡಿಎಸ್‌, ಬಿಜೆಪಿ ಮಧ್ಯೆ ತ್ರಿಕೋನ ಸ್ಪರ್ಧೆಯ ಕ್ಷೇತ್ರವಿದು. ಜೆಡಿಎಸ್‌ ಅಭ್ಯರ್ಥಿಯಾಗಿ ಮಾಜಿ ಶಾಸಕ ಬೀಚನಹಳ್ಳಿ ಚಿಕ್ಕಣ್ಣ ಅವರ ಪುತ್ರ ಜಯಪ್ರಕಾಶ್‌ ಕಣಕ್ಕೆ ಧುಮುಕಿದ್ದಾರೆ. ಜೆಡಿಎಸ್‌ ಟಿಕೆಟ್‌ ವಂಚಿತ ಕೃಷ್ಣನಾಯಕ ಬಿಜೆಪಿ ಹುರಿಯಾಳಾಗಿದ್ದಾರೆ. ದಲಿತರು, ನಾಯಕರು, ಒಕ್ಕಲಿಗರು, ವೀರಶೈವ-ಲಿಂಗಾಯತರು, ಆದಿವಾಸಿಗಳು ಹೆಚ್ಚಿನ ಸಂಖ್ಯೆಯಲ್ಲಿ ನೆಲೆಸಿರುವ ಕ್ಷೇತ್ರವಿದು.

——————————————-

ಪಿರಿಯಾಪಟ್ಟಣ

ಜೆಡಿಎಸ್‌, ಕಾಂಗ್ರೆಸ್‌, ಬಿಜೆಪಿ ಮಧ್ಯೆ ತ್ರಿಕೋನ ಸ್ಪರ್ಧೆ ಇರುವ ಕ್ಷೇತ್ರ ಪಿರಿಯಾಪಟ್ಟಣ. ಇಲ್ಲಿನ ಶಾಸಕ ಜೆಡಿಎಸ್‌ನ ಕೆ.ಮಹದೇವ್‌ 2 ಬಾರಿಗೆ ವಿಧಾನಸಭೆ ಪ್ರವೇಶಿಸಲು ಪೈಪೋಟಿ ನಡೆಸಿದ್ದಾರೆ. ಕಾಂಗ್ರೆಸ್‌ನಿಂದ ಮಾಜಿ ಸಚಿವ ಕೆ.ವೆಂಕಟೇಶ್‌, ಬಿಜೆಪಿಯಿಂದ ಮಾಜಿ ಸಚಿವ ಸಿ.ಎಚ್‌.ವಿಜಯಶಂಕರ್‌ ಸ್ಪರ್ಧಿಗಳು. ಮಹದೇವ್‌ ಹಾಗೂ ವೆಂಕಟೇಶ್‌ ಸಾಂಪ್ರದಾಯಕ ಎದುರಾಳಿಗಳು. ಮಹದೇವ್‌ ತಾವು ಕೈಗೊಂಡ ಅಭಿವೃದ್ಧಿ ಮುಂದಿಟ್ಟುಕೊಂಡು ಮತ ಕೇಳುತ್ತಿದ್ದಾರೆ. ಮಹದೇವ್‌ ಕ್ಷೇತ್ರದ ಜನರ ಜತೆ ನಿಕಟ ಸಂಪರ್ಕ ಹೊಂದಿದ್ದಾರೆ.  ವೆಂಕಟೇಶ್‌ ಈ ಹಿಂದೆ ಶಾಸಕ, ಸಚಿವರಾಗಿ ತಮ್ಮ ಅಧಿಕಾರ ಅವಧಿಯಲ್ಲಿ ನಡೆದ ಅಭಿವೃದ್ಧಿ ಪ್ರಸ್ತಾಪಿಸುತ್ತಿದ್ದಾರೆ. ಬಿಜೆಪಿ ತನ್ನ ಸಾಂಪ್ರದಾಯಕ ಮತಗಳಲ್ಲದೇ ಇನ್ನು ಯಾವ ಪಕ್ಷದ ಮತಕ್ಕೆ ಕೈ ಹಾಕಲಿದೆ ಎಂಬುದು ಕುತೂಹಲಕಾರಿ. ಇಲ್ಲಿ 1999ರಲ್ಲಿ ಬಿಜೆಪಿ ಜಯ ಸಾಧಿಸಿದ ಇತಿಹಾಸವಿದೆ.  ಮಹದೇವ್‌ ಹಾಗೂ ವೆಂಕಟೇಶ್‌ ಒಕ್ಕಲಿಗ ಸಮಾಜದವರು. ಬಿಜೆಪಿಯ ವಿಜಯಶಂಕರ್‌ ಕುರುಬ ಸಮಾಜಕ್ಕೆ ಸೇರಿದ್ದಾರೆ. ಕ್ಷೇತ್ರದಲ್ಲಿ ಒಕ್ಕಲಿಗರು, ಕುರುಬರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.

————————————

ಹುಣಸೂರು

ಕಳೆದ ಬಾರಿ ಗೆದ್ದು ಉಪ ಚುನಾವಣೆಯಲ್ಲಿ ಸೋಲು ಕಂಡ ಜೆಡಿಎಸ್‌ಗೆ ಈ ಕ್ಷೇತ್ರವನ್ನು ಮತ್ತೆ ವಶಪಡಿಸಿಕೊಳ್ಳಬೇಕೆಂಬ ತವಕ. ರಾಜ್ಯ ಅಪೆಕ್ಸ್‌ ಬ್ಯಾಂಕಿನ ಉಪಾಧ್ಯಕ್ಷ ಜಿ.ಡಿ.ಹರೀಶಗೌಡ ಇಲ್ಲಿ ಜೆಡಿಎಸ್‌ ಅಭ್ಯರ್ಥಿ. ಹರೀಶಗೌಡ ಅವರು  ಶಾಸಕ ಜಿ.ಟಿ.ದೇವೇಗೌಡರ  ಪುತ್ರ. ಶಾಸಕ, ಕಾಂಗ್ರೆಸ್ಸಿನ ಎಚ್‌.ಪಿ.ಮಂಜುನಾಥ್‌ ಅವರಿಗೆ ಹರೀಶ್‌ ಗೌಡ ಪ್ರಬಲ ಸ್ಪರ್ಧೆ ನೀಡಿದ್ದಾರೆ.  ಕೈ ಪಾಳಯ ಕ್ಷೇತ್ರವನ್ನು ಉಳಿಸಿಕೊಳ್ಳಲು ಶತಪ್ರಯತ್ನ ನಡೆಸಿದೆ.

ಶಾಸಕ ಮಂಜುನಾಥ್‌ ಆರ್ಯವೈಶ್ಯ ಸಮಾಜದವರು. ಒಕ್ಕಲಿಗ ಸಮಾಜದ ಹರೀಶ್‌ ಗೌಡ  ಸಹಕಾರ ರಂಗದಲ್ಲಿದ್ದಾರೆ. ಜೆಡಿಎಸ್‌ನ ದೇವರಹಳ್ಳಿ ಸೋಮಶೇಖರ್‌ ಈ ಹಿಂದೆ ಜೆಡಿಎಸ್‌ನಲ್ಲಿದ್ದರು. ಇತ್ತೀಚೆಗೆ ಬಿಜೆಪಿ ಸೇರಿ ಅಭ್ಯರ್ಥಿಯಾಗಿದ್ದಾರೆ. ಬಿಜೆಪಿ 1999ರಲ್ಲಿ ಒಮ್ಮೆ ಗೆದ್ದ ಕ್ಷೇತ್ರವಿದು. ಕಳೆದ ಉಪ ಚುನಾವಣೆಯಲ್ಲಿ ಕೈ ವಶವಾಗಿರುವ ಕ್ಷೇತ್ರವನ್ನು ಮರಳಿ  ಪಡೆಯಲು ತೆನೆ ಪಕ್ಷ ಜಿದ್ದಾಜಿದ್ದಿ ಹೋರಾಟ ನಡೆಸಿದೆ. ಕ್ಷೇತ್ರದಲ್ಲಿ ಒಕ್ಕಲಿಗರು, ಕುರುಬರು, ದಲಿತರು, ನಾಯಕರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.

——————————————

ಕೃಷ್ಣರಾಜನಗರ

ಜನತಾ ಪರಿವಾರ-ಕಾಂಗ್ರೆಸ್‌ ಸಾಂಪ್ರದಾಯಕ ಎದುರಾಳಿಗಳಾಗಿರುವ ಮೈಸೂರು ಜಿಲ್ಲೆಯ ಈ ಕ್ಷೇತ್ರದಲ್ಲಿ ಈ ಬಾರಿಯೂ ಇದು ಪುನರಾವರ್ತನೆಯಾಗಿದೆ. ಶಾಸಕ ಜೆಡಿಎಸ್‌ನ ಸಾ.ರಾ.ಮಹೇಶ್‌ 4ನೇ ಬಾರಿ ಕ್ಷೇತ್ರ ಪ್ರತಿನಿಧಿಸಲು ಹರಸಾಹಸ ಪಡುತ್ತಿದ್ದಾರೆ. ಕಳೆದ ಬಾರಿ ಕಡಿಮೆ ಮತಗಳ ಅಂತರದಿಂದ ಗೆಲುವು ಸಾಧಿಸಿದ ಮಹೇಶ್‌ರಿಗೆ ಈ ಸಲ ಅವರ ಸಾಂಪ್ರದಾಯಕ ಎದುರಾಳಿ ಕಾಂಗ್ರೆಸ್ಸಿನ ಡಿ.ರವಿಶಂಕರ್‌ ಪ್ರಬಲ ಪೈಪೋಟಿ ಒಡ್ಡಿದ್ದಾರೆ. ಬಿಜೆಪಿಯಿಂದ ಹೊಸಹಳ್ಳಿ ವೆಂಕಟೇಶ್‌ ಸ್ಪರ್ಧಿಯಾಗಿದ್ದಾರೆ. ಬಿಜೆಪಿಗೆ ಇಲ್ಲಿ ನೆಲೆ ಇಲ್ಲ. ಸಾ.ರಾ.ಮಹೇಶ್‌-ರವಿಶಂಕರ್‌ ಮಧ್ಯೆ ಇಲ್ಲಿ ಬಿಗ್‌ ಫೈಟ್‌ ನಡೆಯುತ್ತಿದೆ. ಮಹೇಶ್‌ ಒಕ್ಕಲಿಗ ಸಮಾಜದವರು. ರವಿಶಂಕರ್‌ ಕುರುಬ ಸಮಾಜದವರು. ಜಾತಿ ರಾಜಕಾರಣ ಪ್ರಮುಖ ಅಸ್ತ್ರವಾಗಿದೆ. ಕ್ಷೇತ್ರದಲ್ಲಿ ಒಕ್ಕಲಿಗರು, ಕುರುಬರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಯಾರೇ ಗೆದ್ದರೂ ಕಡಿಮೆ ಮತಗಳ ಅಂತರದ ಗೆಲುವು ಆಗಬಹುದು.

———————————————

ಚಾಮುಂಡೇಶ್ವರಿ

ಮೈಸೂರು ನಗರದ ಸುತ್ತಲೂ ಚಾಚಿಕೊಂಡಿರುವ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಈ ಬಾರಿ ಮೇಲ್ನೋಟಕ್ಕೆ ತ್ರಿಕೋನ ಸ್ಪರ್ಧೆ ನಡೆದಿದ್ದರೂ ಅಂತರ್ಯದಲ್ಲಿ ಜೆಡಿಎಸ್‌-ಕಾಂಗ್ರೆಸ್‌ ಮಧ್ಯೆ ನೇರ  ಸಮರ ಇದೆ. ಕಳೆದ ಬಾರಿ ಅಂದಿನ ಸಿಎಂ ಸಿದ್ದರಾಮಯ್ಯ ಅವರ ಸ್ಪರ್ಧೆಯಿಂದ ದೇಶದ ಗಮನ ಸೆಳೆದಿತ್ತು. ಈ ಬಾರಿ ಸಿದ್ದರಾಮಯ್ಯ ಇಲ್ಲಿ ಸ್ಪರ್ಧಿಸಲು ಆಸಕ್ತಿ ತೋರಲಿಲ್ಲ. ಕಳೆದ ಬಾರಿ ಸಿದ್ದರಾಮಯ್ಯ ಅವರನ್ನು ಸುಮಾರು 36 ಸಾವಿರ ಮತಗಳ ಅಂತರದಿಂದ ಸೋಲಿಸಿದ ಶಾಸಕ ಜಿ.ಟಿ.ದೇವೇಗೌಡ ಅವರು ಈ ಬಾರಿಯೂ ಜೆಡಿಎಸ್‌ ಅಭ್ಯರ್ಥಿ. ಜಿ.ಟಿ.ದೇವೇಗೌಡರ ಆಪ್ತರಾಗಿದ್ದ ಮೈಸೂರು ಡೇರಿ ಮಾಜಿ ಅಧ್ಯಕ್ಷ ಮಾವಿನಹಳ್ಳಿ ಸಿದ್ದೇಗೌಡ ಜೆಡಿಎಸ್‌ ತೊರೆದು ಕಾಂಗ್ರೆಸ್‌ ಹುರಿಯಾಳಾಗಿದ್ದಾರೆ. ಕಾಂಗ್ರೆಸ್‌ ತ್ಯಜಿಸಿ ಬಂದ ಕವೀಶ್‌ಗೌಡ ಇಲ್ಲಿ ಬಿಜೆಪಿ ಉಮೇದುವಾರ. ಅಭ್ಯರ್ಥಿ ಕವೀಶ್‌ ಗೌಡ ಅವರ ತಂದೆ ವಾಸು ಪಕ್ಕದ ಚಾಮರಾಜ ಕ್ಷೇತ್ರದ  ಮಾಜಿ ಶಾಸಕರು. ಜೆಡಿಎಸ್‌, ಕಾಂಗ್ರೆಸ್‌, ಬಿಜೆಪಿ ಮೂರು ಪಕ್ಷಗಳ ಅಭ್ಯರ್ಥಿಗಳು ಒಕ್ಕಲಿಗ ಸಮಾಜದವರು. ಈ ಕ್ಷೇತ್ರವನ್ನು ಸತತ 2  ಬಾರಿ ಪ್ರತಿನಿಧಿಸಿರುವ ಜಿ.ಟಿ.ದೇವೇಗೌಡ ಕ್ಷೇತ್ರದಲ್ಲಿ ತಾವು ಕೈಗೊಂಡಿರುವ ಅಭಿವೃದ್ಧಿ ಮುಂದಿಟ್ಟುಕೊಂಡು ಮತಯಾಚಿಸುತ್ತಿದ್ದಾರೆ. ಅಭ್ಯರ್ಥಿಗಳ ವೈಯಕ್ತಿಕ ವರ್ಚಸ್ಸು ಇಲ್ಲಿ  ಮುಖ್ಯವಾಗಿದೆ. ಒಕ್ಕಲಿಗರು, ಕುರುಬರು, ನಾಯಕರು, ವೀರಶೈವ-ಲಿಂಗಾಯತರು, ದಲಿತರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.

—————————————————-

ಕೃಷ್ಣರಾಜ

ಬಿಜೆಪಿ ಹಾಲಿ ಶಾಸಕರಿಗೆ ಟಿಕೆಟ್‌ ನಿರಾಕರಿಸಿ ಹೊಸಬರಿಗೆ ಅವಕಾಶ ನೀಡಿದ ಕ್ಷೇತ್ರಗಳಲ್ಲಿ ಮೈಸೂರು ನಗರದ ಕೃಷ್ಣರಾಜ ಕ್ಷೇತ್ರವೂ ಒಂದು. ಈ ಕ್ಷೇತ್ರದಲ್ಲಿ 6 ಬಾರಿ ಸ್ಪರ್ಧಿಸಿ 4 ಬಾರಿ ಗೆದ್ದಿರುವ ಶಾಸಕ ಎಸ್‌.ಎ.ರಾಮದಾಸ್‌ರಿಗೆ ಈ ಬಾರಿ ಟಿಕೆಟ್‌ ತಪ್ಪಿದೆ. ಮೈಸೂರು ನಗರ ಬಿಜೆಪಿ ಅಧ್ಯಕ್ಷ, ಬ್ರಾಹ್ಮಣ ಸಮಾಜದ ಟಿ.ಎಸ್‌.ಶ್ರೀವತ್ಸ ಇಲ್ಲಿ ಬಿಜೆಪಿ ಅಭ್ಯರ್ಥಿ. ಕ್ಷೇತ್ರದಲ್ಲಿ ಬಿಜೆಪಿ ಸಂಘಟನೆ ಬಲವಾಗಿದೆ. ಬಿಜೆಪಿಗೆ ಸಾಂಪ್ರದಾಯಕ ಮತದಾರರಿದ್ದಾರೆ. ಕಾಂಗ್ರೆಸ್‌ನಿಂದ ಮಾಜಿ ಶಾಸಕ ಕುರುಬ ಸಮಾಜದ ಎಂ.ಕೆ.ಸೋಮಶೇಖರ್‌, ಜೆಡಿಎಸ್‌ನಿಂದ ವೀರಶೈವ-ಲಿಂಗಾಯತ ಸಮಾಜದ  ಕೆ.ವಿ.ಮಲ್ಲೇಶ್‌ ಕಣದಲ್ಲಿದ್ದಾರೆ. ಕ್ಷೇತ್ರದಲ್ಲಿ ಬ್ರಾಹ್ಮಣರು, ವೀರಶೈವ-ಲಿಂಗಾಯತರು, ಕುರುಬರು, ದಲಿತರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.

ಬಿಜೆಪಿ ಅಭ್ಯರ್ಥಿ ಶ್ರೀವತ್ಸ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್‌.ಸಂತೋಷ್‌ ಅವರ ಆಪ್ತರು. ಕಾಂಗ್ರೆಸ್ಸಿನ ಸೋಮಶೇಖರ್‌ ಮಾಜಿ ಸಿಎಂ ಸಿದ್ದರಾಮಯ್ಯ ಅವರ ನಿಕಟವರ್ತಿ.  ಶ್ರೀವತ್ಸ ಮೊದಲ ಬಾರಿಗೆ ವಿಧಾನಸಭಾ ಚುನಾವಣೆಯ ಅಖಾಡದಲ್ಲಿದ್ದಾರೆ. ಶ್ರೀವತ್ಸ ಬಿಜೆಪಿಯಲ್ಲಿ ಪರಿಚಿತರಾಗಿದ್ದರೂ ಮತದಾರರಲ್ಲಿ ಹೆಚ್ಚು ಪರಿಚಿತರಲ್ಲ. ಶಾಸಕ ರಾಮದಾಸ್‌ ಅವರು ಪಕ್ಷದ ಆದೇಶಕ್ಕೆ ತಲೆಬಾಗಿದ್ದು  ಶ್ರೀವತ್ಸ ಪರ ಚುನಾವಣಾ ಪ್ರಚಾರ ನಡೆಸುತ್ತಿದ್ದಾರೆ. ಜೆಡಿಎಸ್‌ ಇಲ್ಲಿ ದುರ್ಬಲವಾಗಿದೆ. ಆದರೆ, ಜೆಡಿಎಸ್‌ ಅಭ್ಯರ್ಥಿ, ಮೈಸೂರು ಮಹಾನಗರ ಪಾಲಿಕೆ ಮಾಜಿ ಸದಸ್ಯ ಮಲ್ಲೇಶ್‌ ಅವರ ಬಗ್ಗೆ ಮತದಾರರಲ್ಲಿ ಒಳ್ಳೆಯ ಅಭಿಪ್ರಾಯವಿದೆ. ಬಿಜೆಪಿಗೆ ಸಾಂಪ್ರದಾಯಕ ಮತಗಳಿದ್ದರೂ ರಾಮದಾಸ್‌ ಅವರ ವೈಯಕ್ತಿಕ ವರ್ಚಸ್ಸಿನಿಂದ ಪಡೆಯುತ್ತಿದ್ದ ಮತಗಳು ಬಿಜೆಪಿಗೆ ವರ್ಗವಾದರೆ ಬಿಜೆಪಿ ಗೆಲುವಿನ ದಾರಿ ಸುಲಭವಾಗಲಿದೆ. ಇಲ್ಲಿ ಕೈ-ಕಮಲದ ನಡುವೆ ಫೈಟ್‌. ವ್ಯಕ್ತಿಗಿಂತ ಇಲ್ಲಿ ಪಕ್ಷಗಳೇ ಮುಖ್ಯ.

————————————————

ಚಾಮರಾಜ

ಕಾಂಗ್ರೆಸ್‌ ಹಾಗೂ ಬಿಜೆಪಿ ಮಧ್ಯೆ ಜಿದ್ದಾಜಿದ್ದಿ ಪೈಪೋಟಿ ಇರುವ ಕ್ಷೇತ್ರ ಮೈಸೂರು ನಗರದ ಚಾಮರಾಜ. ಬಿಜೆಪಿಯ ಶಾಸಕ ಎಲ್‌.ನಾಗೇಂದ್ರ ಎರಡನೇ ಬಾರಿಗೆ ಕ್ಷೇತ್ರ ಪ್ರತಿನಿಧಿಸಲು ಕಸರತ್ತು ನಡೆಸಿದ್ದಾರೆ. ಕಾಂಗ್ರೆಸ್ಸಿನ ಹರೀಶ್‌ ಗೌಡ ಪ್ರಬಲ ಪೈಪೋಟಿ ಒಡ್ಡಿದ್ದಾರೆ. ಹರೀಶ್‌ ಗೌಡ ಕಳೆದ ಬಾರಿ ಜೆಡಿಎಸ್‌ ಟಿಕೆಟ್‌ ಸಿಗದೇ ಪಕ್ಷೇತರರಾಗಿ ಸ್ಪರ್ಧಿಸಿ ಸುಮಾರು 21 ಸಾವಿರ ಮತ ಪಡೆದಿದ್ದರು. ನಂತರ ಕಾಂಗ್ರೆಸ್‌ ಸೇರಿದ್ದರು. ನಾಗೇಂದ್ರ ಕ್ಷೇತ್ರದಲ್ಲಿ ಕೈಗೊಂಡ ಅಭಿವೃದ್ಧಿ ಮುಂದಿಟ್ಟುಕೊಂಡು ಮತ ಕೇಳುತ್ತಿದ್ದಾರೆ. ಬಿಜೆಪಿ ಸಂಘಟನೆ ಇಲ್ಲಿ ಬಲವಾಗಿದೆ. ಜೆಡಿಎಸ್‌ನಿಂದ ಎಚ್‌.ಕೆ.ರಮೇಶ್‌ ಮೊದಲ ಬಾರಿಗೆ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ. ರಮೇಶ್‌ ಅವರ ತಂದೆ ಎಚ್‌.ಕೆಂಪೇಗೌಡ ಅವರು 1983ರಲ್ಲಿ ಈ ಕ್ಷೇತ್ರವನ್ನು ಅಂದಿನ ಜನತಾಪಕ್ಷದಿಂದ ಪ್ರತಿನಿಧಿಸಿದ್ದರು. ಕಾಂಗ್ರೆಸ್‌ನಿಂದ ಕಳೆದ ಬಾರಿ ಸ್ಪರ್ಧಿಸಿ ಪರಾಭವಗೊಂಡ ಮಾಜಿ ಶಾಸಕ ವಾಸು ಅವರಿಗೆ ಈ ಬಾರಿ ಟಿಕೆಟ್‌ ನಿರಾಕರಿಸಲಾಗಿದೆ. ತಮಗೆ ಟಿಕೆಟ್‌ ತಪ್ಪಲು ಮಾಜಿ ಸಿಎಂ ಸಿದ್ದರಾಮಯ್ಯ ಕಾರಣ ಎಂದು ವಾಸು ನೇರವಾಗಿ ಆರೋಪಿಸಿದ್ದಾರೆ. ವಾಸು ಕಾಂಗ್ರೆಸ್‌ನಲ್ಲೇ ಮುಂದುವರಿದಿದ್ದಾರೆ. ವಾಸು ಪುತ್ರ ಕವೀಶ್‌ ಗೌಡ ಬಿಜೆಪಿ ಸೇರಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ.

ಚಾಮರಾಜ ಕ್ಷೇತ್ರದ ಅಭ್ಯರ್ಥಿಗಳಾದ ಬಿಜೆಪಿಯ ನಾಗೇಂದ್ರ, ಕಾಂಗ್ರೆಸ್ಸಿನ ಹರೀಶ್‌ಗೌಡ, ಜೆಡಿಎಸ್‌ನ ರಮೇಶ್‌ ಮೂವರೂ ಒಕ್ಕಲಿಗ ಸಮಾಜದವರು. ಒಕ್ಕಲಿಗರು, ಬ್ರಾಹ್ಮಣರು, ಕುರುಬ ಸಮಾಜದವರು ಹೆಚ್ಚಿನ ಸಂಖ್ಯೆಯಲ್ಲಿರುವ ಕ್ಷೇತ್ರ ಇದು. ಬಿಜೆಪಿ-ಕಾಂಗ್ರೆಸ್‌ ಮಧ್ಯೆ ನೇರ ಸ್ಪರ್ಧೆ ನಿಶ್ಚಳವಾಗಿದೆ.

———————————————–

ನರಸಿಂಹರಾಜ

ಮುಸ್ಲಿಂ ಮತದಾರರು ಅಧಿಕ ಸಂಖ್ಯೆಯಲ್ಲಿರುವ ಮೈಸೂರು ನಗರದ ನರಸಿಂಹರಾಜ ಕ್ಷೇತ್ರ ಅನೇಕ ವರ್ಷ ಅಜೀಜ್‌ ಸೇs… ಅವರ ಕುಟುಂಬಕ್ಕೆ ಮಣೆ ಹಾಕಿದೆ. ಈ ಕ್ಷೇತ್ರದಲ್ಲಿ 1994ರಲ್ಲಿ ಮಾತ್ರ ಬಿಜೆಪಿಯ ಇ.ಮಾರುತಿರಾವ್‌ ಪವಾರ್‌ ಜಯ ಸಾಧಿಸಿದ್ದು ಬಿಟ್ಟರೆ ಬಿಜೆಪಿ ಮತ್ತೆ ವಿಜಯದ ನಗೆ ಬೀರಿಲ್ಲ. ಈ ಬಾರಿಯೂ ಕಾಂಗ್ರೆಸ್‌, ಬಿಜೆಪಿ ನಡುವೆಯೇ ನೇರ ಸ್ಪರ್ಧೆ ಇದೆ. ಕ್ಷೇತ್ರದ ಶಾಸಕ ಕಾಂಗ್ರೆಸ್ಸಿನ ತನ್ವೀರ್‌ ಸೇs… ಸತತ 5 ಬಾರಿ ಗೆದ್ದಿದ್ದಾರೆ. ಈ ಹಿಂದೆ ಸಚಿವರೂ ಆಗಿದ್ದರು. 6ನೇ ಬಾರಿಗೆ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಅನಾರೋಗ್ಯ ಕಾರಣ ನೀಡಿ ಈ ಬಾರಿ ಟಿಕೆಟ್‌ ಬೇಡ ಎಂದು ವರಿಷ್ಠರಿಗೆ ತಿಳಿಸಿದ್ದ  ತನ್ವೀರ್‌ ಸೇs… ಅವರನ್ನೇ ಹೈಕಮಾಂಡ್‌ ಕಣಕ್ಕೆ ಇಳಿಸಿದೆ. ಕಾಂಗ್ರೆಸ್‌ನಲ್ಲಿದ್ದ ಬಂಡಾಯ ಶಮನಗೊಂಡಿದೆ. ಬಿಜೆಪಿಯಿಂದ ಕಳೆದ ಬಾರಿ ಅಖಾಡದಲ್ಲಿದ್ದ ಮಾಜಿ ಮೇಯರ್‌ ಒಕ್ಕಲಿಗ ಸಮಾಜದ ಸಂದೇಶ ಸ್ವಾಮಿ ಸ್ಪರ್ಧಿಸಿದ್ದಾರೆ. ಜೆಡಿಎಸ್‌ ಉಮೇದುವಾರ ಅಬ್ದುಲ್‌ ಖಾದರ್‌, ಈ ಕ್ಷೇತ್ರದಲ್ಲಿ ಜೆಡಿಎಸ್‌ಗೆ ನೆಲೆ ಇಲ್ಲ. ಇಲ್ಲಿ ಎಸ್‌ಡಿಪಿಐ ಬೇರುಮಟ್ಟದಲ್ಲಿ ಬೆಳೆಯುತ್ತಿದೆ. ಎಸ್‌ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್‌ ಮಜೀದ್‌ ಕಣದಲ್ಲಿದ್ದಾರೆ. ಎಸ್‌ಡಿಪಿಐ ಸೆಳೆಯುವ ಮತಗಳ ಮೇಲೆ ಕಾಂಗ್ರೆಸ್‌ ಗೆಲುವು ಅವಲಂಬನೆಯಾಗಿದೆ.

—————————-

 ಮೈಸೂರು ಜಿಲ್ಲೆಯ ಪಕ್ಷಗಳ ಈಗಿನ ಬಲಾಬಲ

ಜೆಡಿಎಸ್‌ 4

ಕಾಂಗ್ರೆಸ್‌ 4

ಬಿಜೆಪಿ 3

~ ಕೂಡ್ಲಿ ಗುರುರಾಜ

Advertisement

Udayavani is now on Telegram. Click here to join our channel and stay updated with the latest news.

Next