Advertisement
ದೇಶದ ಕೆಲವೇ ನಗರಗಳಲ್ಲಿ ನಡೆಯುತ್ತಿದ್ದ ಮೀಟರ್ ಬಡ್ಡಿ ದಂಧೆಯು ಸದ್ಯ ಕರ್ನಾಟಕದ ಮೂಲೆ ಮೂಲೆಗೂ ವಿಸ್ತರಿಸಿದೆ. ಬರೋಬ್ಬರಿ ಶೇ.30ರಿಂದ 100ರಷ್ಟು ಬಡ್ಡಿಗೆ ಸಾಲ ಕೊಟ್ಟು ಬಡವರನ್ನು ನರಕಕ್ಕೆ ತಳ್ಳುವ ವ್ಯವಸ್ಥಿತ ಜಾಲಕ್ಕೆ ರಾಜಕಾರಣಿಗಳು, ಭೂಗತ ಪಾತಕಿಗಳು, ಫೈನಾನ್ಷಿಯರ್‌ಗಳೇ ಶ್ರೀರಕ್ಷೆಯಾಗಿದ್ದಾರೆ. ಹೀಗಾಗಿ ಸ್ವತ್ತು ಕಳೆದುಕೊಂಡ ಸಾವಿರಾರು ವ್ಯಾಪಾರಿಗಳು ಪೊಲೀಸ್ ಠಾಣೆ ಮೆಟ್ಟಿಲೇರಲು ಹಿಂದೇಟು ಹಾಕುತ್ತಿದ್ದಾರೆ. ಮೀಟರ್ ಬಡ್ಡಿ ದಂಧೆಯ ತೀವ್ರತೆಗೆ ರಾಜ್ಯದಲ್ಲಿ ಸಾವಿನ ಪ್ರಕರಣಗಳೂ ವರದಿಯಾಗುತ್ತಿವೆ.
ಸಣ್ಣ-ಪುಟ್ಟ ತರಕಾರಿ, ಹಣ್ಣು, ತಳ್ಳುವ ಗಾಡಿ ವ್ಯಾಪಾರಿಗಳು, ದಿನಸಿ ಅಂಗಡಿ ಮಾಲೀಕರು, ಬೀದಿ ಬದಿ ವ್ಯಾಪಾರಿಗಳು, ಆಟೋ ಚಾಲಕರು ವ್ಯಾಪಾರ ನಡೆಸಲು ಹಾಗೂ ಕಡಿಮೆ ಜಮೀನು ಹೊಂದಿರುವ ರೈತರು ಬೆಳೆ ಬೆಳೆಯುವ ಉದ್ದೇಶಕ್ಕೆ ಸಾಲಕ್ಕಾಗಿ ಹಾತೊರೆಯುತ್ತಿರುತ್ತಾರೆ. ಇಂತಹವರನ್ನೇ ಟಾರ್ಗೆಟ್ ಮಾಡುವ ಬಡ್ಡಿಕೋರರು ಶೇ.30, 40, 50ರಿಂದ ಶೇ.100ರಷ್ಟು ಬಡ್ಡಿಗೆ ಸಾಲ ಕೊಡುತ್ತಾರೆ. ಸಾಲ ನೀಡುವ ಮುನ್ನ ಸಹಿ ಹಾಕಿದ ಖಾಲಿ ಚೆಕ್, ಜಾಮೀನು ಪತ್ರ, ಪಿತ್ರಾರ್ಜಿತ ಆಸ್ತಿ, ವಾಹನ, ಮನೆಗಳನ್ನು ಬರೆಸಿಕೊಂಡು ಖಾಲಿ ಬಾಂಡ್ ಪೇಪರ್ ಮೇಲೆ ಸಹಿ ಹಾಕಿಸಿಕೊಳ್ಳುತ್ತಾರೆ. ಈ ದಂಧೆಕೋರರ ಕೈಗೆ ಸಿಲುಕಿ ಸಾಲ ಹಿಂತಿರುಗಿಸದೇ ಲಕ್ಷಾಂತರ ಮೌಲ್ಯದ ಮನೆ, ವಾಹನ, ಜಮೀನನ್ನು ಕಳೆದುಕೊಂಡ ನೂರಾರು ಉದಾಹರಣೆಗಳಿವೆ. ಬಗೆ ಬಗೆಯ ಮೀಟರ್ ಬಡ್ಡಿ ವ್ಯವಹಾರ: ಬೆಳಗ್ಗೆ 5 ಗಂಟೆಗೆ ವ್ಯಾಪಾರಿಗಳು 25 ಸಾವಿರ ರೂ. ಸಾಲ ಪಡೆದರೆ, 3 ಸಾವಿರ ರೂ. ಬಡ್ಡಿ ಮುರಿದರೆ 23 ಸಾವಿರವಷ್ಟೇ ವ್ಯಾಪಾರಿಗಳ ಕೈ ಸೇರುತ್ತದೆ. ಮರುದಿನ ಮುಂಜಾನೆಯೊಳಗೆ 25 ಸಾವಿರ ರೂ. ಸಾಲಕ್ಕೆ 1 ಸಾವಿರ ರೂ. ಸೇರಿಸಿ ದಂಧೆಕೋರರಿಗೆ ಕೊಡಬೇಕಾಗುತ್ತದೆ. ಇನ್ನು ಬೆಳಗ್ಗೆ 50 ಸಾವಿರ ರೂ. ಪಡೆದು ಸಂಜೆ ವೇಳೆ ಸಾವಿರ ರೂ. ಬಡ್ಡಿ ಸೇರಿಸಿ ಕೊಡುವ ದಂಧೆಯೂ ಜೋರಾಗಿದೆ. ಮಾಸಿಕವಾಗಿ ಶೇ.50ರಿಂದ ಶೇ.100ರಷ್ಟು, ವಾರ ಲೆಕ್ಕದಲ್ಲಿ ಶೇ.30-50, ದಿನ ಲೆಕ್ಕದಲ್ಲಿ ಶೇ.10-40, ಬಡ್ಡಿಗೆ ಸಾಲ ಕೊಟ್ಟು ಜನರ ಅಸಹಾಯಕ ಪರಿಸ್ಥಿತಿ ಜತೆ ಬಡ್ಡಿಕೋರರು ಚೆಲ್ಲಾಟವಾಡುತ್ತಿದ್ದಾರೆ. ಸಾಲ ಮರಳಿಸದಿದ್ದಲ್ಲಿ ಬಡ್ಡಿ ಬೆಳೆಯುತ್ತಾ ಹೋಗುತ್ತದೆ.
Related Articles
Advertisement
ದಂಧೆಗೆ ಕಡಿವಾಣವಿಲ್ಲ ಏಕೆ?ಭೂಗತ ಪಾತಕಿಗಳು, ರೌಡಿಗಳು, ಫೈನ್ಯಾನ್ಸ್ ಸಂಸ್ಥೆಗಳು ಹೆಚ್ಚಿನ ಬಡ್ಡಿ ದರ ನಿಗದಿಪಡಿಸುತ್ತಿದ್ದಾರೆ. ಬಡ್ಡಿ ವಸೂಲು ಮಾಡಲೆಂದೇ ಸಹಚರರನ್ನು ಇಟ್ಟುಕೊಂಡಿದ್ದಾರೆ. ರಾಜಕಾರಣಿಗಳು, ಪೊಲೀಸರೂ ಆಮಿಷಕ್ಕೊಳಗಾಗಿ ದಂಧೆಕೋರರಿಗೆ ಮಾಹಿತಿ ಕೊಡುವ ಏಜೆಂಟ್‌ಗಳಾಗಿದ್ದಾರೆ. ಪ್ರತಿನಿತ್ಯ ವ್ಯಾಪಾರಿಗಳ ಮನೆ ಮುಂದೆ ಜಮಾಯಿಸುವ ಸಾಲ ವಸೂಲಿಗಾರರು ಬಡ್ಡಿ ಸಮೇತ ಹಣ ಕೊಡದಿದ್ದರೆ ಅಡವಿಟ್ಟ ವಸ್ತು ದೋಚುತ್ತಾರೆ. ಕರ್ನಾಟಕ ಮನಿ ಲ್ಯಾಂಡರಿಂಗ್ ಕಾಯ್ದೆ ಪ್ರಕಾರ ಒತ್ತಾಯಪೂರ್ವಕ ಸಾಲ, ಬಡ್ಡಿ ವಸೂಲಿಗೆ 1 ವರ್ಷ ಶಿಕ್ಷೆ, 50 ಸಾವಿರ ರೂ. ದಂಡವಿದೆ. ರಾಜ್ಯದೆಲ್ಲೆಡೆ ಮೀಟರ್ ಬಡ್ಡಿ ಡೀಲ್:
ಪ್ರಮುಖವಾಗಿ ಬೆಂಗಳೂರು, ಮೈಸೂರು, ಹಾಸನ, ದಾವಣಗೆರೆ, ಮಂಗಳೂರು, ಬೆಳಗಾವಿ, ಹಾವೇರಿ, ಧಾರವಾಡ, ಕಲಬುರಗಿ, ಚಿತ್ರದುರ್ಗ, ರಾಯಚೂರು, ಬಾಗಲಕೋಟೆ, ಬೆಳಗಾವಿ, ಬೀದರ್, ವಿಜಯಪುರ, ಗದಗದ ಮಾರುಕಟ್ಟೆಗಳು, ಎಪಿಎಂಸಿಗಳೇ ದಂಧೆಕೋರರ ಹಾಟ್‌ಸ್ಪಾಟ್. ರಾಜ್ಯ ರಾಜಧಾನಿಯ ಕೆ.ಆರ್. ಮಾರುಕಟ್ಟೆ, ಶಾಂತಿನಗರ, ಮೆಜೆಸ್ಟಿಕ್, ಮಡಿವಾಳ, ಮಲ್ಲೇಶ್ವರ, ಕಮರ್ಷಿಯಲ್ ಸ್ಟ್ರೀಟ್, ಶಿವಾಜಿನಗರ ಮಾರುಕಟ್ಟೆಗಳಲ್ಲಿ ಸಂಜೆ ವೇಳೆ ಮೀಟರ್ ಬಡ್ಡಿ ಕರಾಳ ಮುಖ ಕಾಣಬಹುದು. ಮೀಟರ್ ದಂಧೆ ಪ್ರಕರಣಗಳ ಬಗ್ಗೆ ದೂರು ನೀಡಿದರೆ ಪೊಲೀಸರು ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಿದ್ದಾರೆ. ಈ ಬಗ್ಗೆ ಸದ್ಯಕ್ಕೆ ದೂರುಗಳು ಬಂದಿಲ್ಲ.
– ಬಿ.ದಯಾನಂದ್, ಆಯುಕ್ತ, ಬೆಂಗಳೂರು ನಗರ -ಅವಿನಾಶ್ ಮೂಡಂಬಿಕಾನ