Advertisement

ಶುದ್ಧ ನೀರಿಗೆ ಮೀಟರ್‌ ಜೋಡಣೆ: ಖಂಡನೆ

09:10 PM Oct 05, 2019 | Lakshmi GovindaRaju |

ಕೊಳ್ಳೇಗಾಲ: ನಗರಸಭೆಯಿಂದ 24*7 ಶುದ್ಧ ಕುಡಿಯುವ ನೀರಿನ ಯೋಜನೆಗೆ ಮೀಟರ್‌ ಜೋಡಣೆಯನ್ನು ಖಂಡಿಸಿ, ಶಾಸಕ ಎನ್‌.ಮಹೇಶ್‌ ವಿರುದ್ಧ ಪ್ರಗತಿಪರ ಸಂಘಟನೆಯ ಒಕ್ಕೂಟದಿಂದ ಶನಿವಾರ ಪ್ರತಿಭಟನೆ ನಡೆಯಿತು.

Advertisement

ಪಟ್ಟಣದ ಬಸ್‌ ನಿಲ್ದಾಣದ ಬಳಿಯ ಗಣೇಶನ ದೇವಾಲಯದಲ್ಲಿ ಪ್ರಗತಿಪರ ಸಂಘಟನೆ ಮುಖಂಡರು, ಸೇರಿ ಪ್ರಮುಖ ರಸ್ತೆಗಳ ಮೂಲಕ ತೆರಳಿ ಶಾಸಕ ಎನ್‌.ಮಹೇಶ್‌ ಮತ್ತು ನಗರಸಭೆಯ ಜನಪ್ರತಿನಿಧಿಗಳಿಗೆ ಹಾಗೂ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗುತ್ತಾ, ಉಪ ವಿಭಾಗ ಕಚೇರಿಯ ಆವರಣದಲ್ಲಿ ಸೇರಿದರು.

ಪ್ರತಿಭಟನಾಕಾರರು ದೇವಸ್ಥಾನದ ಬಳಿಯಿಂದ ಹೊರಡುತ್ತಿದ್ದಂತೆ ಪಟ್ಟಣದ ಡಾ. ರಾಜ್‌ಕುಮಾರ್‌ ರಸ್ತೆಯಲ್ಲಿರುವ ಮಸೀದಿ ವೃತ್ತದಲ್ಲಿ ಮಾನವ ಸರಪಳಿ ರಚನೆ ಮಾಡಿ, ಕುಡಿಯುವ ನೀರು ಯೋಜನೆಗೆ ಮೀಟರ್‌ ಅಳವಡಿಕೆಯನ್ನು ಖಂಡಿಸಿ ತೀವ್ರ ವಿರೋಧ ವ್ಯಕ್ತಪಡಿಸಿದರು.

ನೀರನ್ನು ಉಚಿತವಾಗಿ ನೀಡಿ: ಈ ವೇಳೆ ಬೆಂಗಳೂರಿನ ಸಮಾಜ ಸೇವಕಿ ನಂದಿನಿ ಮಾತನಾಡಿ, ನೀರು, ಗಾಳಿ ಪ್ರಕೃತಿಯಿಂದ ಬಂದಿದೆ. ಆದರೆ, ನೀರು ಸರಬರಾಜಿನ ಹೆಸರಿನಲ್ಲಿ ಮೀಟರ ಅಳವಡಿಕೆ ಮಾಡಿ ಬಡವರನ್ನು ಶೋಷಣೆ ಮಾಡುತ್ತಿರುವುದು ಖಂಡನೀಯ. ಪ್ರಕೃತಿಯಿಂದ ಸಿಗುವ ನೀರನ್ನು ಸಾಮಾನ್ಯರಿಗೆ ಉಚಿತವಾಗಿ ನೀಡಲು ಶಾಸಕರು ಮತ್ತು ಜನಪ್ರತಿನಿಧಿಗಳು ಮುಂದಾಗಬೇಕು ಎಂದು ಒತ್ತಾಯಿಸಿದರು.

24*7 ನೀರು ಬೇಕಿಲ್ಲ: ಸಾರ್ವಜನಿಕರು ಕುಡಿಯುವ ನೀರನ್ನು 24*7 ಬಳಕೆ ಮಾಡುವುದಿಲ್ಲ. ಅವರಿಗೆ ಕುಡಿಯಲು ಎರಡರಿಂದ ಮೂರು ಗಂಟೆ ನೀರು ಪೂರೈಸಿದರೆ ಸಾಕು. ಈ ರೀತಿಯ ಯೋಜನೆಗಳನ್ನು ಜಾರಿಗೆ ತಂದು ಬಡವರನ್ನು ಶೋಷಣೆ ಮಾಡುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

Advertisement

ಕಳೆದ 2013ರಲ್ಲಿ ಈ ಯೋಜನೆ ಜಾರಿಗೆ ಬರದಂತೆ ಈಗಿನ ಶಾಸಕ ಎನ್‌.ಮಹೇಶ್‌ ಅವರು ಯೋಜನೆಯನ್ನು ವಿರೋಧಿಸಿ ಪ್ರತಿಭಟನೆ ನಡೆಸಿದ್ದರು. ಆದರೆ, ಶಾಸಕರಾದ ಬಳಿಕ ಇದೇ ಯೋಜನೆಯನ್ನು ಅನುಷ್ಠಾನಕ್ಕೆ ತಂದು ಕಾಮಗಾರಿಗೆ ಚಾಲನೆ ನೀಡಿರುವುದು ಖಂಡನೀಯ. ಈ ಯೋಜನೆಯ ಮೂಲಕ ಉಚಿತವಾಗಿ ವಿತರಣೆ ಮಾಡಬೇಕೆ ಹೊರತು, ಮೀಟರ ಜೋಡಣೆ ಮಾಡಿದರೆ ಉಗ್ರ ಪ್ರತಿಭಟನೆ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಈ ವೇಳೆ ಪ್ರತಿಭಟನಾಕಾರರುಉಪ ವಿಭಾಗಾಧಿಕಾರಿ ನಿಖೀತ ಎಂ.ಚಿನ್ನಸ್ವಾಮಿ ಅವರಿಗೆ ಮನವಿ ಸಲ್ಲಿಸಿದರು. ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಘಟಕದ ಅಧ್ಯಕ್ಷ ಗೌಡೇಗೌಡ, ಸಾಹಿತಿ ದೊಡ್ಡಲಿಂಗೇಗೌಡ ಮಾತನಾಡಿದರು.

ಪ್ರತಿಭಟನೆಯಲ್ಲಿ ಮೈಸೂರಿನ ಸಾಹಿತಿ ನಂಜರಾಜೇ ಅರಸ್‌, ಜೆಡಿಎಸ್‌ ಮುಖಂಡ ಮುಳ್ಳೂರು ಶಿವಮಲ್ಲು, ತಾಲೂಕು ನಾಗರಿಕ ಹಿತರಕ್ಷಣಾ ಹೋರಾಟ ಸಮಿತಿ ಅಧ್ಯಕ್ಷ ನಟರಾಜ ಮಾಳಿಗೆ, ಜಯ ಕರ್ನಾಟಕ ಸಂಘದ ಅಧ್ಯಕ್ಷ ಪ್ರಭುಸ್ವಾಮಿ, ರೈತ ಸಂಘ ಹಸಿರು ಸೇನೆಯ ಜಿಲ್ಲಾ ಕಾರ್ಯಾಧ್ಯಕ್ಷ ಶೈಲೇಂದ್ರ, ನೀರಿಗಾಗಿ ಹಕ್ಕಿಗಾಗಿ ಆಂದೋಲನದ ಸಂಚಾಲಕರಾದ ನೀಲಯ್ಯ, ಶಿವಮ್ಮ, ಬೆಂಜಮಿನ್‌, ಸಣ್ಣಮ್ಮ, ಶಾರದ, ಮಹದೇವಮ್ಮ, ಫಾಯೂಕ್‌, ಗೌರಮ್ಮ, ಬಸವರಾಜು, ದಶರಥ್‌, ಕೆಂಪಣ್ಣ, ಮರಿಸಿದ್ದಯ್ಯ, ಚಿಕ್ಕಣ್ಣ, ಡಿಎಸ್‌ಎಸ್‌ ಜಿಲ್ಲಾ ಸಂಚಾಲಕ ನಿಂಗರಾಜು, ಪಾಪಣ್ಣ, ಶಿವರಾಜು ಹಾಗೂ ಮಹಿಳೆಯರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next