ಉಡುಪಿ: ಗುರು-ಶನಿ ಗ್ರಹಗಳ ಸಮಾಗಮ 2020ರ ಅಂತ್ಯದಲ್ಲಿ ಗೋಚರಿಸಿತು. ಈ ಸಮಾಗಮದ ಕೆಲವು ದಿನಗಳ ಮೊದಲು ಜೆಮಿನಿಡ್ ಉಲ್ಕಾ ವೃಷ್ಟಿ ಸಂಭವಿಸಿತ್ತು. ಉಲ್ಕೆಗಳ ಬಣ್ಣ, ಚಲನೆ ನೋಡಿ ಖುಷಿ ಪಟ್ಟವರಿಗೆ ಹಾಗೂ ಉಲ್ಕೆಗಳನ್ನು ನೋಡಲು ಸಿಗದವರಿಗೆ 2021ರಲ್ಲಿ ಮತ್ತೂಂದು ಅವಕಾಶ ತಂದಿದೆ.
ಕ್ವಾಡ್ರಾನ್ಟಿಡ್ ಉಲ್ಕಾ ವೃಷ್ಟಿಯು ಡಿ. 28ರಿಂದ ಜ. 12ರ ಅವಧಿಯಲ್ಲಿ ಗೋಚರಿಸುತ್ತದೆ. ವರ್ಷದಲ್ಲಿ ಅತೀ ಹೆಚ್ಚು ಉಲ್ಕೆಗಳು ಸಂಭವಿಸುವ 3 ಉಲ್ಕಾ ವೃಷ್ಟಿಗಳಲ್ಲಿ ಇದೂ ಒಂದಾಗಿದೆ. ಇದು ಕಳೆದರೆ ಆಗಸ್ಟ್ ತಿಂಗಳಿನ ಪರ್ಸಿಡ್ ಉಲ್ಕಾವೃಷಿಯಲ್ಲಿ ಮತ್ತೂಮ್ಮೆ ಇಂಥಹ ಅವಕಾಶ ಸಿಗಲಿದೆ.
ಜ. 3ರ ಮುಂಜಾನೆ 3 ಗಂಟೆಗೆ ಪೂರ್ವದಿಕ್ಕಿನಲ್ಲಿ ಸ್ವಾತಿ (ಅರ್ಕಟರಸ್) ನಕ್ಷತ್ರವು ಗೋಚರಿಸುತ್ತಿದಂತೆ ಸಹದೇವ (ಬೊಒಟಿಸ್) ನಕ್ಷತ್ರಪುಂಜದಿಂದ ಉಲ್ಕೆಗಳನ್ನು ನೋಡಬಹುದು. ಈಶಾನ್ಯದಲ್ಲಿ ಗಾಳಿಪಟದಂತೆ ಕಾಣುವ ಸಪ್ತರ್ಷಿ ಮಂಡಲದ ಬಾಲದ ಕೆಳಗೆ ಸ್ವಾತಿ ನಕ್ಷತ್ರದ ಉತ್ತರದ ಕಡೆಯಿಂದ ಉಲ್ಕೆಗಳು ಉದ್ಭವವಾಗುವಂತೆ ಕಾಣುತ್ತದೆ. ಗಂಟೆಗೆ ಸುಮಾರು 100ರಷ್ಟು, ಉಲ್ಕೆಗಳ ಚಲನೆಯನ್ನು ನೋಡಬಹುದು ಎಂದು ಪೂರ್ಣಪ್ರಜ್ಞ ಕಾಲೇಜಿನ ನಿವೃತ್ತ ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ| ಎ.ಪಿ. ಭಟ್ ತಿಳಿಸಿದ್ದಾರೆ.