ನವದೆಹಲಿ: ಭಾರತೀಯ ಕ್ರಿಕೆಟ್ ತಂಡದ ಮಾಜೀ ಕಪ್ತಾನ ಮತ್ತು ಬಂಗಾಲ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷ ಸೌರವ್ ಗಂಗೂಲಿ ಅವರು ಭಾರತೀಯ ಜನತಾ ಪಕ್ಷಕ್ಕೆ ಸೇರುತ್ತಾರಂತೆ ಹಾಗೂ 2021ರ ಪಶ್ಚಿಮ ಬಂಗಾಲ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಸೌರವ್ ಅವರು ಬಿಜೆಪಿಯಿಂದ ಸ್ಪರ್ಧಿಸುತ್ತಾರಂತೆ ಎಂಬೆಲ್ಲಾ ಸುದ್ದಿಗಳು ಇದೀಗ ರಾಜಕೀಯ ಪಡಸಾಲೆಯಲ್ಲಿ ಜೋರಾಗಿಯೇ ಕೇಳಿಬರಲಾರಂಭಿಸಿದೆ.
ಇದಕ್ಕೆ ಮುಖ್ಯ ಕಾರಣವಾಗಿದ್ದು ಬಿಸಿಸಿಐ ಅಧ್ಯಕ್ಷ ಸ್ಥಾನದ ಚುನಾವಣೆಯ ವಿಚಾರ. ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ ಇದೀಗ ಸೌರವ್ ಗಂಗೂಲಿ ಅವರೊಬ್ಬರೇ ನಾಮಪತ್ರ ಸಲ್ಲಿಸಿದ್ದು ಅವರ ಆಯ್ಕೆ ಬಹುತೇಕ ಖಚಿತವಾಗಿದೆ. ಆದರೆ ಸೌರವ್ ಅವರ ಅವಿರೋಧ ಆಯ್ಕೆಯ ಹಿಂದೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಕೈವಾಡ ಇದೆ ಎನ್ನುವುದು ಇದೀಗ ಗುಪ್ತವಾಗೇನೂ ಉಳಿದಿಲ್ಲ.
ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ ಉಮೇದುವಾರಿಕೆಯನ್ನು ಸಲ್ಲಿಸುವ ಹಿಂದಿನ ದಿನ ಸೌರವ್ ಗಂಗೂಲಿ ಅವರು ಅಮಿತ್ ಶಾ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿರುವುದು ಇದೀಗ ರಾಜಕೀಯ ವಲಯದಲ್ಲಿ ಬಹಳಷ್ಟು ಕುತೂಹಲಕ್ಕೆ ಕಾರಣವಾಗಿದೆ.
ಆದರೆ ಈ ಎಲ್ಲಾ ಸುದ್ದಿಗಳನ್ನು ಸ್ವತಃ ಸೌರವ್ ಗಂಗೂಲಿ ಅವರೇ ತಳ್ಳಿ ಹಾಕಿದ್ದಾರೆ. ಮತ್ತು ಅಮಿತ್ ಶಾ ಅವರನ್ನು ತಾನು ಭೇಟಿಯಾಗಿರುವುದರ ಹಿಂದೆ ಯಾವುದೇ ರಾಜಕೀಯ ಉದ್ದೇಶಗಳಿಲ್ಲ ಎಂಬುದನ್ನೂ ಸಹ ಸೌರವ್ ಅವರು ಸ್ಪಷ್ಟವಾಗಿ ಹೇಳಿದ್ದಾರೆ.
‘ಅಮಿತ್ ಶಾ ಅವರನ್ನು ನಾನು ಮೊದಲ ಸಲ ಭೇಟಿಯಾಗುತ್ತಿರುವುದು, ಆದರೆ ಈ ನಮ್ಮ ಭೇಟಿಯ ಸಂದರ್ಭದಲ್ಲಿ ನಾನು ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವುದಕ್ಕೆ ಸಂಬಂಧಿಸಿದಂತೆ ಒಂದೇ ಒಂದು ಪ್ರಶ್ನೆಯನ್ನು ಅವರಲ್ಲಿ ಕೇಳಲಿಲ್ಲ ಮತ್ತು ಯಾವುದೇ ರಾಜಕೀಯ ವಿಚಾರಗಳ ಕೊಡುಕೊಳ್ಳುವಿಕೆ ಮಾತುಕತೆಯೂ ನಮ್ಮ ನಡುವೆ ನಡೆದಿಲ್ಲ’ ಎಂದು ಸೌರವ್ ಗಂಗೂಲಿ ಅವರು ಸ್ಪಷ್ಟವಾಗಿ ಹೇಳಿದ್ದಾರೆ. ‘ನಾನು ಈ ಹಿಂದೆ ಮಮತಾ ಬ್ಯಾನರ್ಜಿ ಅವರನ್ನು ಭೇಟಿಯಾಗಿದ್ದ ಸಂದರ್ಭದಲ್ಲಿಯೂ ಸಹ ಇದೇ ರೀತಿಯ ಸುದ್ದಿಗಳು ಹಬ್ಬಿದ್ದವು’ ಎಂಬುದನ್ನು ಭಾರತ ಕ್ರಿಕೆಟ್ ತಂಡದ ಮಾಜೀ ಕಪ್ತಾನ ನೆನಪಿಸಿಕೊಂಡಿದ್ದಾರೆ.
ಸೌರವ್ ಅವರು ತಮ್ಮನ್ನು ಭೇಟಿಯಾದ ವಿಚಾರದಲ್ಲಿ ಯಾವುದೇ ರಾಜಕೀಯ ಹಿನ್ನಲೆ ಇರಲಿಲ್ಲ ಎಂಬುದನ್ನು ಗೃಹ ಸಚಿವ ಅಮಿತ್ ಶಾ ಅವರೂ ಸಹ ಸಂದರ್ಶನ ಒಂದರಲ್ಲಿ ಸ್ಪಷ್ಟಪಡಿಸಿದ್ದಾರೆ. ‘ನನಗೆ ಕ್ರಿಕೆಟ್ ಜೊತೆ ದೀರ್ಘಕಾಲದ ನಂಟಿದೆ ಆದರೆ ಬಿಸಿಸಿಐನಲ್ಲಿ ಅದರದ್ದೇ ಆದ ಚುನಾವಣಾ ಪ್ರಕ್ರಿಯೆ ಇದೆ. ಮತ್ತು ಸೌರವ್ ನನ್ನನ್ನು ಭೇಟಿಯಾಗಬಾರದೆಂದೇನೂ ಇಲ್ಲವಲ್ಲ’ ಎಂದು ಖಾಸಗಿ ವೆಬ್ ಸೈಟ್ ಒಂದಕ್ಕೆ ನೀಡಿದ ಸಂದರ್ಶನ ಒಂದರಲ್ಲಿ ಶಾ ಹೇಳಿಕೊಂಡಿದ್ದಾರೆ.
ಒಟ್ಟಿನಲ್ಲಿ, ಬಿಸಿಸಿಐನಲ್ಲಿ ಕಳೆದ ಕೆಲವು ದಿನಗಳಿಂದ ನಡೆಯುತ್ತಿರುವ ಬೆಳವಣಿಗೆಗಳು ಮಾತ್ರ ದೇಶದ ಕ್ರಿಕೆಟ್ ಪ್ರೇಮಿಗಳಲ್ಲಿ ಮಾತ್ರವಲ್ಲದೇ ರಾಜಕೀಯ ವಲಯದಲ್ಲೂ ಕುತೂಹಲಕ್ಕೆ ಕಾರಣವಾಗಿರುವುದು ಮಾತ್ರ ಸುಳ್ಳಲ್ಲ.