ಬೆಂಗಳೂರು: ಹೊನ್ನಾವರದಲ್ಲಿ ಇತ್ತೀಚೆಗೆ ನಡೆದ ಪರೇಶ್ ಮೇಸ್ತಾ ಹತ್ಯೆ ಪ್ರಕರಣದ ಕುರಿತು ಎನ್‌ಐಎ ತನಿಖೆ ನಡೆಸಬೇಕು ಮತ್ತು ಮಂಗಳೂರಿನಲ್ಲಿ ಎನ್‌ಐಎ ಕಚೇರಿ ಆರಂಭಿಸಬೇಕು ಎಂದು ಆಗ್ರಹಿಸಿ ರಾಜ್ಯದ ಬಿಜೆಪಿ ಸಂಸದರ ನಿಯೋಗ ಮಂಗಳವಾರ ದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದೆ.
ಪರೇಶ್ ಮೇಸ್ತಾನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದ್ದು, ಆತನ ಮೃತದೇಹವನ್ನು ನೋಡಲು ಭೀತಿ ಪಡುವಂತಿತ್ತು. ಆತನ ಕೈಯ್ಯಲ್ಲಿದ್ದ ಜೈ ರಾಮ್ ಎಂಬ ಸಂದೇಶವನ್ನು ಕೆತ್ತಿ ತೆಗೆದಿದ್ದು, ಬಿಸಿ ಎಣ್ಣೆ ಮೈಮೇಲೆ ಸುರಿಯಲಾಗಿತ್ತು. ಡಿ. 6ರಂದು ಹತ್ಯೆ ನಡೆದಿದ್ದು, ಡಿ. 8ರಂದು ಮೃತದೇಹ ಕೆರೆಯೊಂದರಲ್ಲಿ ಪತ್ತೆಯಾಗಿತ್ತು. ಈ ಹತ್ಯೆಯ ಹಿಂದೆ ಸಮಾಜ ಘಾತಕ ಶಕ್ತಿಗಳ ಕೈವಾಡವಿದೆ ಎಂದು ಗೃಹ ಸಚಿವರಿಗೆ ನೀಡಿರುವ ಮನವಿಯಲ್ಲಿ ತಿಳಿಸಲಾಗಿದೆ.
ಇದಲ್ಲದೆ ಪರೇಶ್ ಮೇಸ್ತಾ ಹತ್ಯೆ ಬಳಿಕ ಒಂದು ಕೋಮಿನ ಸುಮಾರು 150 ಮಂದಿ ಹೊನ್ನಾವರದಿಂದ ಕಾಣೆಯಾಗಿದ್ದಾರೆ ಎಂದು ಹೇಳಲಾಗಿದೆ. ಪ್ರತ್ಯಕ್ಷದರ್ಶಿಗಳ ಪ್ರಕಾರ ಇವರೆಲ್ಲರೂ ಡಿ. 6 ಮತ್ತು 7ರಂದು ರಾತ್ರಿ ಮುಂಬೈ ರೈಲಿನಲ್ಲಿ ಪ್ರಯಾಣ ಬೆಳೆಸಿದ್ದಾರೆ. ಹೀಗಾಗಿ ಈ ಪ್ರಕರಣ ಮತ್ತು ಒಂದು ಕೋಮಿನವರು ನಾಪತ್ತೆಯಾಗಿರುವುದು ಅನುಮಾನ ಸೃಷ್ಟಿಸುತ್ತಿದೆ.
ಆದ್ದರಿಂದ ಪರೇಶ್ ಮೇಸ್ತಾ ಹತ್ಯೆ ಪ್ರಕರಣದ ಕುರಿತು ಎನ್‌ಐಎ ತನಿಖೆ ನಡೆಸಬೇಕು ಎಂದು ಕೋರಿದ್ದಾರೆ. ಇದಲ್ಲದೆ, ಇತ್ತೀಚಿನ ದಿನಗಳಲ್ಲಿ ಕರ್ನಾಟಕದಲ್ಲಿ ಆರ್‌ಎಸ್‌ಎಸ್, ಬಿಜೆಪಿ ಕಾರ್ಯಕರ್ತರು ಸೇರಿದಂತೆ ಹಿಂದೂ ಕಾರ್ಯಕರ್ತರ ಹತ್ಯೆಗಳು ನಡೆಯುತ್ತಿದ್ದು, ಇದರ ಹಿಂದೆ ಪಿಎಫ್ಐ, ಎಸ್‌ಡಿಪಿಐನಂತಹ ಜಿಹಾದಿ ಶಕ್ತಿಗಳ ಕೈವಾಡವಿದೆ ಎನ್ನಲಾಗಿದೆ.
ಇದಕ್ಕೆ ಕಡಿವಾಣ ಹಾಕಲು ಮಂಗಳೂರಿನಲ್ಲಿ ಎನ್‌ಐಎ ಕಚೇರಿ ತೆರೆಯಬೇಕು ಎಂದು ಒತ್ತಾಯಿಸಿದ್ದಾರೆ. ಸಂಸದರಾದ ಶೋಭಾ ಕರಂದ್ಲಾಜೆ, ನಳಿನ್‌ಕುಮಾರ್ ಕಟೀಲ್, ಸುರೇಶ್ ಅಂಗಡಿ, ಜಿ.ಎಂ.ಸಿದ್ದೇಶ್ವರ್, ಭಗವಂತ್ ಖೂಬಾ, ಬಿ.ಶ್ರೀರಾಮುಲು, ಪಿ.ಸಿ.ಮೋಹನ್ ಈ ನಿಯೋಗದಲ್ಲಿದ್ದರು.