Advertisement

ಹೊಸ ವರ್ಷದಲ್ಲಿ  ಮೆಸ್ಕಾಂ ಶಾಕ್‌?

04:31 AM Jan 04, 2019 | Team Udayavani |

ಮಂಗಳೂರು: ಹೊಸ ವರ್ಷದ ಸಡಗರದ ನಡುವೆ ವಿದ್ಯುತ್‌ ಬಳಕೆದಾರರಿಗೆ ಮೆಸ್ಕಾಂ ದರ ಏರಿಕೆಯ ಶಾಕ್‌ ನೀಡಲು ಮುಂದಾಗಿದೆ. ವಿವಿಧ ಸ್ತರಗಳಲ್ಲಿ ಹಾಲಿ ಯೂನಿಟ್‌ ದರದ ಮೇಲೆ ಸರಾಸರಿ 1.38 ರೂ. ಏರಿಕೆ ಮಾಡಲು ಕರ್ನಾಟಕ ವಿದ್ಯು ತ್ಛಕ್ತಿ ಆಯೋಗಕ್ಕೆ ಪ್ರಸ್ತಾವನೆ ಸಲ್ಲಿಸಿದೆ.

Advertisement

ಮೆಸ್ಕಾಂ ಪ್ರಸ್ತಾವನೆಗೆ ಆಕ್ಷೇಪಣೆ ಸಲ್ಲಿಸುವುದಕ್ಕೆ ಬಳಕೆದಾರರಿಗೆ 30 ದಿನಗಳ ಕಾಲಾವಕಾಶ ಇದೆ. ಬಳಿಕ ವಿದುತ್ಛಕ್ತಿ ಆಯೋಗದ ಮುಂದೆ ವಿಚಾರಣೆ ನಡೆದು ದರ ಹೆಚ್ಚಳದ ಬಗ್ಗೆ ಅಂತಿಮ ತೀರ್ಮಾನ ವಾಗಲಿದೆ. ಪ್ರತಿವರ್ಷವೂ ಮೆಸ್ಕಾಂ ಸಹಿತ ರಾಜ್ಯದ ಐದು ಎಸ್ಕಾಂಗಳು ತಮ್ಮ ಖರ್ಚುವೆಚ್ಚಗಳನ್ನು ಗಮನದಲ್ಲಿಟ್ಟು ದರ ಪರಿಷ್ಕರಣೆ ಮಾಡುವುದು ವಾಡಿಕೆ. ಕಳೆದ ವರ್ಷ ಮೆಸ್ಕಾಂ ವ್ಯಾಪ್ತಿಯಲ್ಲಿ ಪ್ರತಿ ಯೂನಿಟ್‌ ಮೇಲೆ ಸರಾಸರಿ 1.23 ರೂ. ಹೆಚ್ಚಳವಾಗಿತ್ತು.

ಮೆಸ್ಕಾಂಗೆ ಆದಾಯ ಕೊರತೆ
ಮೆಸ್ಕಾಂ ಮುಂದಿನ ಮೂರು ವರ್ಷಗಳ ವರೆಗಿನ ಆದಾಯ ಅಗತ್ಯ ಲೆಕ್ಕಹಾಕಿ ಎದುರಾಗುವ ಕೊರತೆಯ ಪಟ್ಟಿಯನ್ನು ಕರ್ನಾಟಕ ವಿದ್ಯುತ್ಛಕ್ತಿ ನಿಯಂತ್ರಣ ಆಯೋಗಕ್ಕೆ ಸಲ್ಲಿಸಿದೆ. ಅದರಂತೆ 2019- 20ರಲ್ಲಿ 4,153.51 ಕೋ.ರೂ. ವಾರ್ಷಿಕ ಆದಾಯ ಅಗತ್ಯ ಇದ್ದು, ಪ್ರಸ್ತುತ ಜಾರಿಯಲ್ಲಿರುವ ದರಗಳ ಪ್ರಕಾರ 3447.12 ಕೋ.ರೂ. ವಾರ್ಷಿಕ ಆದಾಯ ನಿರೀಕ್ಷಿಸಿದರೆ, 706.39 ಕೋ.ರೂ. ಕೊರತೆಯಾಗಲಿದೆ. 

2020-21ರಲ್ಲಿ 3753.02 ಕೋ. ರೂ. ಅಗತ್ಯ ಆದಾಯದ ಪೈಕಿ ಈಗಿನ ದರದ ಪ್ರಕಾರ 3,541.43 ಕೋ.ರೂ. ನಿರೀಕ್ಷಿಸಿದರೆ, 211 ಕೋ.ರೂ. ಕೊರತೆ ಎದುರಾಗಲಿದೆ. 2021-22ರಲ್ಲಿ 3973.74 ಕೋ.ರೂ. ವಾರ್ಷಿಕ ಅಗತ್ಯದಲ್ಲಿ 3639.49 ಕೋ.ರೂ. ನಿರೀಕ್ಷಿಸಿದರೆ 334.25 ಕೋ.ರೂ. ಆದಾಯ ಕೊರತೆ ಎದುರಾಗಲಿದೆ ಎಂಬುದು ಮೆಸ್ಕಾಂ ವಾದ.


ದರ ಏರಿಕೆಗೆ ಮೆಸ್ಕಾಂ ಕಾರಣಗಳು

2018ರ ಎ.1ರಿಂದ ಜಾರಿಯಲ್ಲಿರುವ ವಿದ್ಯುತ್‌ ದರದಿಂದ ಮೆಸ್ಕಾಂ ತನ್ನ ಆದಾಯ ಅಗತ್ಯಗಳನ್ನು ಪೂರೈಸಲು ಸಾಧ್ಯವಾಗುತ್ತಿಲ್ಲ. ಖರೀದಿಸಿದ ವಿದ್ಯುತ್‌ಗೆ ಸಂಬಂಧಿಸಿದ ವೆಚ್ಚಗಳನ್ನು ಪಾವತಿಸದ ಹೊರತು ಏರುತ್ತಿರುವ ಬೇಡಿಕೆ ಪೂರೈಸಲು ಅಸಾಧ್ಯ. 2019-20ನೇ ಸಾಲಿಗೆ ವಿದ್ಯುತ್‌ ಖರೀದಿ ದರವನ್ನು ಪ್ರತಿ ಯುನಿಟಿಗೆ 4.09 ರೂ. (ಕಳೆದ ವರ್ಷ ಈ ದರ 3.37 ರೂ.) ಎಂದು ಅಂದಾಜಿಸಲಾಗಿರುವುದರಿಂದ ಖರೀದಿ ದರ ಈ ಬಾರಿ ಏರಲಿದೆ. ವಿತರಣ ಜಾಲ ಬಲಪಡಿಸಲು ಹಾಗೂ ಅನಿಶ್ಚಿತ ಸಂಭವಗಳನ್ನು ನಿರ್ವಹಿಸುವುದಕ್ಕೆ ಹೆಚ್ಚಿನ ಆದಾಯದ ನಿರೀಕ್ಷೆಯಿದೆ. ವಿಶೇಷವಾಗಿ ಅಗತ್ಯ ಆದಾಯ ಹಾಗೂ ನಿರೀಕ್ಷಿತ ಆದಾಯದ ಮಧ್ಯೆ ಇರುವ ಕೊರತೆ ನೀಗಿಸಲು ದರ ಪರಿಷ್ಕರಣೆ ಅನಿವಾರ್ಯ ಎಂಬುದು ಮೆಸ್ಕಾಂ ವಾದ. 

Advertisement

ಮುಂದಿನ ತಿಂಗಳು ಸಭೆ
ಪ್ರತೀ ಯುನಿಟ್‌ಗೆ ಸರಾಸರಿ 1.38 ರೂ. ಏರಿಕೆ ಮಾಡುವಂತೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಮುಂದಿನ ತಿಂಗಳು ಆಯೋಗವು ಮಂಗಳೂರಿನಲ್ಲಿ ಸಾರ್ವಜನಿಕ ಅಹವಾಲು ಸಭೆಯನ್ನು ನಡೆಸಲಿದೆ. ಬಳಿಕ ದರ ಏರಿಕೆ ಬಗ್ಗೆ ಅಂತಿಮ ನಿರ್ಧಾರವಾಗಲಿದೆ.
 ಸ್ನೇಹಲ್‌ ಆರ್‌. ವ್ಯವಸ್ಥಾಪಕ ನಿರ್ದೇಶಕರು, ಮೆಸ್ಕಾಂ

ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next