Advertisement

ಕತ್ತಲಲ್ಲಿದ್ದ ಮನೆಗಳಿಗೆ ಮೆಸ್ಕಾಂನಿಂದ ಬೆಳಕು ;880 ಮನೆಗಳಿಗೆ ಬೆಳಕು, 1,320 ಮನೆಗಳ ಗುರುತು

12:40 PM Feb 24, 2022 | Team Udayavani |

ಪುತ್ತೂರು : ವಿದ್ಯುತ್‌ ಸಂಪರ್ಕ ರಹಿತ ಬಡ ಹಾಗೂ ಮಧ್ಯಮ ವರ್ಗದ ಕುಟುಂಬಗಳಿಗೆ ಉಚಿತವಾಗಿ ವಿದ್ಯುತ್‌ ಸಂಪರ್ಕ ನೀಡುವ ಉದ್ದೇಶದಿಂದ ಸರಕಾರವು ಜಾರಿಗೊಳಿಸಿರುವ ಬೆಳಕು ಯೋಜನೆಯಡಿ ಪುತ್ತೂರು, ಸುಳ್ಯ, ಕಡಬ ತಾಲೂಕುಗಳಲ್ಲಿ ಪ್ರಥಮ ಹಂತದಲ್ಲಿ 880 ಮನೆಗಳಿಗೆ ಮೆಸ್ಕಾಂ ಮೂಲಕ ವಿದ್ಯುತ್‌ ಸಂಪರ್ಕ ನೀಡಿ ಬೆಳಕು ಹರಿಸಲಾಗಿದೆ.

Advertisement

ಕೇಂದ್ರ ಸರಕಾರದ ದೀನ ದಯಾಳ್‌ ಉಪಾಧ್ಯಾಯ ಗ್ರಾಮ ಜ್ಯೋತಿ ಯೋಜನೆ (ಡಿಡಿಯುಜಿಜೆವೈ) ಹಾಗೂ ಸೌಭಾಗ್ಯ ಯೋಜನೆಯು 2020ಕ್ಕೆ ಮುಕ್ತಾಯಗೊಂಡಿರುವ ಹಿನ್ನೆಲೆಯಲ್ಲಿ ರಾಜ್ಯ ಸರಕಾರದ ಇಂಧನ ಇಲಾಖೆಯ ನಿರ್ದೇಶನದಂತೆ ಮೆಸ್ಕಾಂ ವತಿಯಿಂದ ಬೆಳಕು ರಹಿತ ಮನೆ ಸರ್ವೇ ನಡೆಸಿರುವ ಸಂದರ್ಭದಲ್ಲಿ ವಿದ್ಯುತ್‌ ಸಂಪರ್ಕವಿರದೆ ಕತ್ತಲಲ್ಲೇ ಇರುವ ಮನೆಗಳ ಮಾಹಿತಿ ಲಭಿಸಿದೆ. ಈ ಎಲ್ಲ ಮನೆಗಳಿಗೆ ಕಾಲ ಮಿತಿಯಲ್ಲಿ ಬೆಳಕು ನೀಡಲು ಇಂಧನ ಸಚಿವರು ನಿರ್ದೇಶನ ನೀಡಿದ್ದು ಅದರಂತೆ ಅವಧಿ ನಿಗದಿಪಡಿಸಿ ಯೋಜನೆ ಜಾರಿಗೊಂಡಿದೆ.

2,182 ಕುಟುಂಬಗಳಿಗೆ ವಿದ್ಯುತ್‌ ಸಂಪರ್ಕ ಇಲ್ಲ
2 ಹಂತದ ಸರ್ವೇಯಲ್ಲಿ ಪುತ್ತೂರು, ಸುಳ್ಯ, ಕಡಬ ತಾ|ನಲ್ಲಿ 2,182 ಮನೆಗಳನ್ನು ವಿದ್ಯುತ್‌ ಸಂಪರ್ಕ ರಹಿತ ಪಟ್ಟಿಯಲ್ಲಿ ಗುರುತಿಸಲಾಗಿತ್ತು. ಇದರಲ್ಲಿ ಪ್ರಥಮ ಹಂತದಲ್ಲಿ ಗುರುತಿಸಲಾದ ಎಲ್ಲ 882 ಮನೆ ಗಳಿಗೆ ವಿದ್ಯುತ್‌ ಸಂಪರ್ಕ ನೀಡ ಲಾಗಿದೆ. ಎರಡನೆ ಹಂತದಲ್ಲಿ ಗುರು ತಿಸಿರುವ 1,300 ಮನೆಗಳಿಗೆ ವಿದ್ಯುತ್‌ ಸಂಪರ್ಕ ಒದಗಿಸುವ ಕಾರ್ಯ ಪ್ರಗತಿ ಯಲ್ಲಿದೆ.

ಸೌಲಭ್ಯ ಪಡೆಯುವುದು ಹೇಗೆ?
ಬೆಳಕು ಯೋಜನೆಯಡಿ ವಿದ್ಯುತ್‌ ಸಂಪರ್ಕ ರಹಿತ ಬಡ ಕುಟುಂಬಗಳಿಗೆ ಸರಕಾರದಿಂದಲೇ ಉಚಿತ ವಿದ್ಯುತ್‌ ಸೌಲಭ್ಯ ಪಡೆಯಲು ಅವಕಾಶ ನೀಡಲಾಗಿದೆ. ಸಮೀಪದ ಮೆಸ್ಕಾಂ ಕಚೇರಿ ಹಾಗೂ ಗ್ರಾ.ಪಂ.ಗೆ ತೆರಳಿ ಮಾಹಿತಿ ಪಡೆದು ಅರ್ಜಿ ಸಲ್ಲಿಸಬಹುದು. ಬೆಳಕು ಯೋಜನೆಗೆ ಸರಕಾರ 142.44 ಕೋ. ರೂ. ಅನುದಾನ ಕಾಯ್ದಿರಿಸಿದೆ.

ಎನ್‌ಒಸಿಗೆ ವಿನಾಯಿತಿ
ಗ್ರಾಮೀಣ ಪ್ರದೇಶದಲ್ಲಿ ವಿದ್ಯುತ್‌ ಸಂಪರ್ಕ ಕಲ್ಪಿಸುವುದಕ್ಕೆ ಈ ಹಿಂದೆ ಸ್ಥಳೀಯ ಆಡಳಿತದಿಂದ ನಿರಾಕ್ಷೇಪಣ ಪತ್ರ ಪಡೆಯುವುದು ಕಡ್ಡಾಯವಾಗಿತ್ತು. ಇದಕ್ಕೆ ವಿನಾಯಿತಿ ನೀಡಿದ ಪರಿಣಾಮ ಮನೆ ಕಟ್ಟಿಕೊಂಡವರಿಗೆಲ್ಲ ಸಂಪರ್ಕ ನೀಡಲು ಸೂಚನೆ ನೀಡಲಾಯಿತು. ಪಡಿತರ ಚೀಟಿ, ಆಧಾರ್‌ ಕಾರ್ಡ್‌, ಮತದಾರರ ಪ್ರಮಾಣ ಪತ್ರ, ಗ್ರಾ. ಪಂ. ಒದಗಿಸುವ ಇನ್ನಿತರ ದಾಖಲೆ ಸಲ್ಲಿಸಿ ವಿದ್ಯುತ್‌ ಸಂಪರ್ಕ ಪಡೆಯುವುದಕ್ಕೆ ಅವಕಾಶ ನೀಡಲಾಗಿತ್ತು. ಇದರಿಂದ ವಿದ್ಯುತ್‌ ಸಂಪರ್ಕ ಕಲ್ಪಿಸುವ ಪ್ರಥಮ ಹಂತದ ಗುರಿ ಕಾಲಮಿತಿಯಲ್ಲೇ ಮುಕ್ತಾಯಗೊಂಡಿದೆ.

Advertisement

ಇದನ್ನೂ ಓದಿ : ಬೋಗಾಯನ ಕೆರೆ: ಅಭಿವೃದ್ಧಿ ಕಾಮಗಾರಿ ಆರಂಭ , ಐತಿಹಾಸಿಕ ಕೆರೆಗೆ ಸಿಗಲಿದೆ ಕಾಯಕಲ್ಪ

ಉಚಿತ ಸೌಲಭ್ಯ
ಮೆಸ್ಕಾಂ ವತಿಯಿಂದ ಬೆಳಕು ರಹಿತ ಮನೆಗಳ ಫಲಾನುಭವಿಯ ಪರಿಶೀಲನೆ ನಡೆಸಿ ಅಂದಾಜು ವೆಚ್ಚ ತಯಾರಿಸಿ ಸಂಬಂಧಪಟ್ಟ ವಿಭಾಗದ ಕಚೇರಿಗೆ ಕಳುಹಿಸಿ ವಿಭಾಗ ಕಚೇರಿಯಿಂದ ಕಾಮಗಾರಿಯ ಕಾರ್ಯಾದೇಶ ನೀಡಲಾಗುತ್ತದೆ. ಈಗಾಗಲೇ ಮನೆಗಳಲ್ಲಿ ವೈರಿಂಗ್‌ ಮಾಡಿಸಿಕೊಂಡು ಸಂಪರ್ಕಕ್ಕೆ ಕಾಯುತ್ತಿರುವವರಿಗೆ ಪ್ರಥಮ ಆದ್ಯತೆ ನೀಡಿ ಆ ಕೆಲಸ ಪೂರ್ಣಗೊಳಿಸಲಾಗುತ್ತದೆ. ಅರ್ಹ ಫಲಾನುಭವಿಗಳಿಗೆ ಉಚಿತವಾಗಿ ವಿದ್ಯುತ್‌ ಸಂಪರ್ಕ ಕಲ್ಪಿಸಿ ಮೀಟರ್‌ ಅಳವಡಿಸಲಾಗುತ್ತದೆ. ಸಂಪರ್ಕಕ್ಕೆ ಅಗತ್ಯವಿರುವ ಎಲ್ಲ ಪರಿಕರಗಳು ಹಾಗೂ ಅಗತ್ಯ ಕಾಮಗಾರಿ ವೆಚ್ಚವನ್ನು ಮೆಸ್ಕಾಂ ಭರಿಸುತ್ತದೆ. ಫಲಾನುಭವಿಯು ತಿಂಗಳು ತಿಂಗಳು ವಿದ್ಯುತ್‌ ಬಳಕೆಯ ಶುಲ್ಕವನ್ನು ಪಾವತಿಸಬೇಕು.

ಉಚಿತ ಸಂಪರ್ಕ
ಪುತ್ತೂರು ವಿಭಾಗ ವ್ಯಾಪ್ತಿಯ 3 ತಾಲೂಕಿನಲ್ಲಿ 2,182 ಮನೆಗಳನ್ನು ವಿದ್ಯುತ್‌ ಸಂಪರ್ಕ ರಹಿತ ಪಟ್ಟಿಯಲ್ಲಿ ಗುರುತಿಸಲಾಗಿತ್ತು. ಪ್ರಥಮ ಹಂತದಲ್ಲಿ ಗುರುತಿಸಲಾದ ಎಲ್ಲ 882 ಮನೆಗಳಿಗೆ ವಿದ್ಯುತ್‌ ಸಂಪರ್ಕ ನೀಡಲಾಗಿದೆ. ಎರಡನೆ ಹಂತದಲ್ಲಿ 1,300 ಮನೆ ಗುರುತಿಸಿ ಕಾಮಗಾರಿ ನಡೆಸಲಾಗುವುದು. ಫಲಾನುಭವಿಗೆ ಉಚಿತವಾಗಿ ವಿದ್ಯುತ್‌ ಸಂಪರ್ಕ ನೀಡಲಾಗುತ್ತದೆ.
-ನರಸಿಂಹ, ಕಾರ್ಯ ನಿರ್ವಾಹಕ ಎಂಜಿನಿಯರ್‌ ಮೆಸ್ಕಾಂ ಪುತ್ತೂರು ವಿಭಾಗ

– ಕಿರಣ್‌ ಪ್ರಸಾದ್‌ ಕುಂಡಡ್ಕ

Advertisement

Udayavani is now on Telegram. Click here to join our channel and stay updated with the latest news.

Next