Advertisement
ಅವಳ ಬಣ್ಣ ಕೊಂಚ ಕಪ್ಪು, ಆದರೇನು ನನಗೆ ಒಪ್ಪು ಕಪ್ಪಗಿದ್ದರೇನು ಮೈಯಿ ಪ್ರೇಮ ಕರಿಯದೇ? ಒಪ್ಪೆ ಮನವು ಕಪ್ಪ ಮೀರಿ ಒಲವು ಹರಿಯದೇ? ಬಳ್ಳಾರಿ ರಾಘವ ಬರೆದ, ಕಾಳಿಂಗ ರಾಯರ ಕಂಠದಲ್ಲಿ ಮೊಳಗಿದ, ಈ ಸಾಲುಗಳು ಎಷ್ಟೊಂದು ಅರ್ಥಗರ್ಭಿತ! ಮುಖದ ಬಣ್ಣವನ್ನು ಬಿಳಿಯಾಗಿಸುವ ಉದ್ಯಮವು ವರ್ಷದಿಂದ ವರ್ಷಕ್ಕೆ ಬೆಳೆಯುತ್ತಿರುವ ಈ ಕಾಲದಲ್ಲಿ, ಈ ಸಾಲುಗಳನ್ನು ಅದೆಷ್ಟು ಬಾರಿ ಮೆಲುಕು ಹಾಕಿದರೂ ಸಾಲದು.
Related Articles
ಅಷ್ಟಕ್ಕೂ ಈ ಜಾಹೀರಾತುಗಳ ರೂಪದರ್ಶಿಗಳು ಸಹಜವಾದ ಗೌರವರ್ಣವನ್ನೂ, ತಮ್ಮದೇ ಸೌಂದರ್ಯವನ್ನೂ ಹೊಂದಿದವರಾಗಿರುತ್ತಾರೆಯೇ ಹೊರತು ಆ ಉತ್ಪನ್ನಗಳಿಂದ ಅವನ್ನು ಪಡೆದವರೇನೂ ಆಗಿರುವುದಿಲ್ಲ.
Advertisement
ಚರ್ಮದ ರಹಸ್ಯ ಗೊತ್ತೇ?ಬಿಳಿಯಾಗಿಸುವ ಕ್ರೀಂಗಳನ್ನು ಉತ್ತೇಜಿಸುವ ಜಾಹೀರಾತುಗಳನ್ನು ನಾವು, ಚರ್ಮ ತಜ್ಞರು, ಯಾವತ್ತೂ ವಿರೋಧಿಸುತ್ತಲೇ ಬಂದಿದ್ದೇವೆ. ನಮ್ಮ ಮೈ ಬಣ್ಣವು ಅನುವಂಶೀಯವಾಗಿ, ನಮ್ಮ ವಂಶವಾಹಿಗಳಲ್ಲೇ ಅಚ್ಚಾಗಿರುತ್ತದೆ. ಚರ್ಮದ ಬಣ್ಣದ ಗಾಢತೆಯು ಚರ್ಮದಲ್ಲಿರುವ ಮೆಲನಿನ್ ಎಂಬ ಸಂಯುಕ್ತದ ಪ್ರಮಾಣಕ್ಕೆ ಅನುಗುಣವಾಗಿರುತ್ತದೆ. ಈ ಮೆಲನಿನ್ ಸಂಯುಕ್ತವು ಸೂರ್ಯರಶ್ಮಿಯಲ್ಲಿರುವ ಅತಿ ನೇರಳೆ (ಅಲ್ಟ್ರಾ ವಯಲೆಟ್) ಕಿರಣಗಳನ್ನು ಹೀರಿ, ಅದರ ದುಷ್ಪರಿಣಾಮಗಳಿಂದ ನಮ್ಮ ಚರ್ಮವನ್ನು ರಕ್ಷಿಸುತ್ತದೆ. ಇದೇ ಕಾರಣಕ್ಕೆ ಭಾರತದಂಥ ಉಷ್ಣವಲಯದ ವಾಸಿಗಳ ಚರ್ಮದಲ್ಲಿ ಮೆಲನಿನ್ ಹೆಚ್ಚಿದ್ದು, ಚರ್ಮದ ಬಣ್ಣವು ಗಾಢವಾಗಿರುತ್ತದೆ. ಚರ್ಮದಲ್ಲಿರುವ ಮೆಲನಿನ್ ಪ್ರಮಾಣ ಮತ್ತು ಅತಿ ನೇರಳೆ ಕಿರಣಗಳಿಗೆ ಚರ್ಮವು ಸ್ಪಂದಿಸುವ ಬಗೆಯನ್ನಾಧರಿಸಿ ಚರ್ಮವನ್ನು ಆರು ವಿಧಗಳಾಗಿ ವಿಂಗಡಿಸಲಾಗುತ್ತದೆ. ಪಾಶ್ಚಿಮಾತ್ಯರ ಚರ್ಮವು ಹೆಚ್ಚು ಬಿಳುಪಾದ 1-3ನೇ ವಿಧದ್ದಾಗಿದ್ದರೆ, ಉಷ್ಣವಲಯದಲ್ಲಿ ವಾಸಿಸುತ್ತಿರುವ ಭಾರತೀಯರ ಚರ್ಮವು ಕಡಿಮೆ ಬಿಳುಪಿರುವ 4-6ನೇ ವಿಧದ್ದಾಗಿದೆ. ಸೂರ್ಯನ ಕಿರಣಗಳಿಗೆ ಒಡ್ಡಲ್ಪಟ್ಟಾಗ ಮೆಲನಿನ್ ಕಡಿಮೆಯಿರುವ ಬಿಳಿ ಬಣ್ಣದ ಚರ್ಮವು ಕಡು ಬಣ್ಣವುಳ್ಳವರಿಗಿಂತ ಹೆಚ್ಚು ಬೇಗನೆ ಹಾನಿಗೆ ಈಡಾಗುತ್ತದೆ, ಸುಕ್ಕಾಗುತ್ತದೆ, ಮುಪ್ಪಾಗುತ್ತದೆ. ಕಡುಬಣ್ಣವುಳ್ಳವರು ಪ್ರಕೃತಿ ಸಹಜ ವಾಗಿಯೇ ತಮ್ಮ ಚರ್ಮವನ್ನು ರಕ್ಷಿಸಿಕೊಳ್ಳಬಲ್ಲ ಅದೃಷ್ಟವಂತರಾಗಿರುತ್ತಾರೆ! ಬಿಳುಪಾಗಿಸುತ್ತವೆಂದರೆ…
ಫೇರ್‌ನೆಸ್ ಕ್ರೀಮ್‌ಗಳಲ್ಲಿ 20-40 ಬಗೆಯ ಸಂಯುಕ್ತಗಳಿರುತ್ತವೆ; ಅವುಗಳಲ್ಲಿ ಕೆಲವು ಪರಿಣಾಮಕಾರಿ ಹಾಗೂ ಸುರಕ್ಷಿತವೆಂದು ವೈಜ್ಞಾನಿಕವಾಗಿ ಶ್ರುತ ಪಟ್ಟಿದ್ದರೆ, ಮತ್ತೆ ಕೆಲವು ಚರ್ಮಕ್ಕೇ ಹಾನಿಕಾರಕ. ಯಾವುದೇ ಕ್ರೀಂನಿಂದ ಚರ್ಮವು ಅತಿಯಾಗಿ ಬಿಳುಪಾಗುತ್ತಿದ್ದರೆ, ಅದು ಒಳ್ಳೆಯದಲ್ಲ. ಅವುಗಳಲ್ಲಿ ಹೈಡ್ರೋಕ್ವಿನೋನ್, ಸ್ಟೀರಾಯ್ಡ್ ಗಳಂಥ ಶಕ್ತಿಶಾಲಿ ಸಂಯುಕ್ತಗಳಿರುವ ಸಾಧ್ಯತೆಗಳಿರುತ್ತವೆ. ಆದ್ದರಿಂದಲೇ ಬಿಳುಪಾಗಿಸುವ ಕ್ರೀಂಗಳಲ್ಲಿ ಬಳಸಲಾಗುವ ಎಲ್ಲಾ ಸಂಯುಕ್ತಗಳ ಬಗ್ಗೆ ಏನನ್ನೂ ಅಡಗಿಸಿಡದೆ, ಪೂರ್ಣವಾದ ಮಾಹಿತಿಯನ್ನು ಮುದ್ರಿಸಬೇಕೆಂದು ಚರ್ಮ ತಜ್ಞರು ಆಗ್ರಹಿಸುತ್ತಲೇ ಇದ್ದಾರೆ. ಕ್ರೀಂಗಳಲ್ಲಿನ ಸುಗಂಧದ್ರವ್ಯಗಳು, ಅಲ್ಪ ಪ್ರಮಾಣದಲ್ಲಿ ಬೆರೆಸಿರಬಹುದಾದ ಸನ್ ಸ್ಕ್ರೀನ್‌ಗಳು ಚರ್ಮವನ್ನು ಇನ್ನಷ್ಟು ಕಪ್ಪಾಗಿಸಬಹುದು. ಈ ಕ್ರೀಂಗಳಲ್ಲಿ ಬೆಳಕಿನಿಂದ ಉತ್ತೇಜಿಸಲ್ಪಡಬಲ್ಲ ಸಂಯುಕ್ತಗಳಿದ್ದರೆ ಅವು ಸಂವೇದನಾಶೀಲ ಚರ್ಮವುಳ್ಳವರಲ್ಲಿ ಹಾನಿಯುಂಟು ಮಾಡಬಹುದು. ನೈಸರ್ಗಿಕ ಉಪಚಾರವೇ ಉತ್ತಮ
ಚರ್ಮದ ಬಣ್ಣಕ್ಕಿಂತಲೂ ಅದರ ಆರೋಗ್ಯ ಹಾಗೂ ನೈಸರ್ಗಿಕ ಕಾಂತಿಗಳನ್ನು ಕಾಪಾಡಿಕೊಳ್ಳುವುದು ಅತಿ ಮುಖ್ಯ. ವಾತಾವರಣದ ಜೊತೆಗೆ ಜೀವನ ಶೈಲಿ ಹಾಗೂ ನೈರ್ಮಲ್ಯ ಪಾಲನೆಯ ವಿಧಾನಗಳು ಚರ್ಮದ ಬಣ್ಣದ ಮೇಲೆ ಅಪಾರ ಪ್ರಭಾವ ಬೀರುತ್ತವೆ. ಪರಿಸರ ಮಾಲಿನ್ಯ, ಶೀಘ್ರ ತಿನಿಸುಗಳು, ಒತ್ತಡಭರಿತ ಜೀವನ, ನಿದ್ರೆಯ ಕೊರತೆ- ಎಲ್ಲವೂ ಚರ್ಮದ ಬಣ್ಣ, ಕಾಂತಿಗಳ ಮೇಲೆ ದುಷ್ಪರಿಣಾಮ ಬೀರುತ್ತವೆ. ಸಮತೋಲಿತ ಆಹಾರವನ್ನು ಸರಿಯಾದ ಪ್ರಮಾಣದಲ್ಲಿ ಸರಿಯಾದ ಸಮಯದಲ್ಲಿ ಸೇವಿಸುವುದು, ನಿರಂತರವಾದ ದೈಹಿಕ ವ್ಯಾಯಾಮ ಹಾಗೂ ರಾತ್ರಿಯಲ್ಲಿ 7-8 ಗಂಟೆಗಳ ನಿದ್ದೆಗಳಿಂದಲೇ ಅದನ್ನು ಸಾಧಿಸಲು ಸಾಧ್ಯವಿದೆ. ಇಡಿಯಾದ ಧಾನ್ಯಗಳು, ವಿವಿಧ ಬಣ್ಣಗಳ ತರಕಾರಿಗಳು, ಬೀಜಗಳು, ಅಗಸಿ, ಮೊಟ್ಟೆ ಹಾಗೂ ಮೀನುಗಳು ಚರ್ಮದ ಆರೋಗ್ಯಕ್ಕೆ ಪೂರಕವಾದ ಆಹಾರಗಳಾಗಿವೆ. ಜೊತೆಗೆ, ದಿನಕ್ಕೆ 2-3 ಲೀಟರ್ ನೀರನ್ನು ಕುಡಿಯುವುದರಿಂದ ಚರ್ಮದ ಕಾಂತಿ ಹೆಚ್ಚುತ್ತದೆ. ಕೋಟಿ ಕೋಟಿ ದುಡಿವ ಕ್ರೀಮು
ಗೌರವರ್ಣದ ಮುಖವನ್ನು ಹೊಂದಿರಬೇಕೆನ್ನುವ ಜನರ ಹುಚ್ಚು ಆಸೆಯನ್ನು ಬಳಸಿಕೊಂಡೇ ಈ ಉತ್ಪನ್ನಗಳು ಹೇರಳವಾಗಿ ಸಂಪಾದಿಸಿಕೊಳ್ಳುತ್ತಿವೆ. ಭಾರತದಲ್ಲಿಂದು ಫೇರ್‌ನೆಸ್ ಕ್ರೀಂಗಳ ವಾರ್ಷಿಕ ವಹಿವಾಟು ಸುಮಾರು 2000 ಕೋಟಿ ರೂ.! 2023ರ ವೇಳೆಗೆ ಇದು 5000 ಕೋಟಿ ರೂ. ದಾಟಿದರೂ ಆಶ್ಚರ್ಯವಿಲ್ಲ ಎನ್ನುತ್ತದೆ ಒಂದು ಲೆಕ್ಕಾಚಾರ. — ಡಾ. ಬಾಲಸರಸ್ವತಿ, ಮಂಗಳೂರು