Advertisement

ಚುನಾವಣಾಧಿಕಾರಿಗಳ ತಪಾಸಣೆಗೆ ವ್ಯಾಪಾರಿಗಳು ಸುಸ್ತು !

04:46 PM Apr 26, 2018 | Team Udayavani |

ಹೊಸಪೇಟೆ: ಚುನಾವಣೆ ನೀತಿ ಸಂಹಿತೆ ಪರಿಣಾಮ ತಾಲೂಕಿನ ಚೆಕ್‌ ಪೋಸ್ಟ್ಗಳಲ್ಲಿ ಕಟ್ಟುನಿಟ್ಟಿನ ತಪಸಣೆ ಜಿಲ್ಲೆಯ ಸಣ್ಣ ಮತ್ತು ಮಧ್ಯಮ ವರ್ಗದ ವ್ಯಾಪಾರಿಗಳಿಗೆ ತೀವ್ರ ತಲೆನೋವಾಗಿ ಪರಿಣಮಿಸಿದ್ದು, ಖರೀದಿ ಸೇರಿದಂತೆ ಬಾಕಿ ವಸೂಲಿಗೆ ಕಾರು ಬಿಟ್ಟು ಬಸ್‌ ಮೂಲಕ ಪ್ರಯಾಣಿಸುವುದು ಲೇಸು ಎನ್ನುವಂತಾಗಿದೆ.

Advertisement

ಹಣ ಮತ್ತು ವಸ್ತುಗಳ ಸಹಿತ ತಮ್ಮ ಸ್ವಂತ ವಾಹನದಲ್ಲಿ ಪ್ರಯಾಣಿಸುವ ಮಧ್ಯಮ ವರ್ಗದ ವ್ಯಾಪಾರಿಗಳು, ತಪಾಸಣೆಯ ಕಿರಿಕಿರಿ ಮತ್ತು ಆತಂಕ ಎದುರಿಸುವಂತಾಗಿದೆ. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಚುನಾವಣೆ ಮುಗಿಯುವವರೆ‌ಗೆ ಬಸ್‌ನಲ್ಲಿ ಪ್ರಯಾಣ ಮಾಡುವುದು ಲೇಸ್‌ ಎಂಬ ತೀರ್ಮಾನಕ್ಕೆ ಬಂದಿದ್ದಾರೆ.

ತಾಲೂಕಿನ ಬಹುತೇಕ ವ್ಯಾಪಾರಸ್ಥರು ಸಗಟು ಖರೀದಿಗೆ ಹೊಸಪೇಟೆ ಮಾರುಕಟ್ಟೆಯನ್ನೇ ಅವಲಂಬಿಸಿದ್ದಾರೆ. ನಿಯಮಿತವಾಗಿ ನಗರಕ್ಕೆ ಬರುವ ವ್ಯಾಪಾರಸ್ಥರು ಸ್ವಂತ ಕಾರು ಅಥವಾ ಬಾಡಿಗೆ ಕಾರು ಬಳಸುವುದು ಸಾಮಾನ್ಯ. ಹೀಗೆ ಹೋಗುವಾಗ 50 ಸಾವಿರದಿಂದ 2 ಲಕ್ಷ ರೂ.ವರೆಗೆ ಇಟ್ಟುಕೊಂಡು ಹೋಗುತ್ತಾರೆ. ಜತೆಗೆ ಖರೀದಿಸಿದ ವಸ್ತುಗಳನ್ನು ತಮ್ಮೊಂದಿಗೆ ತರುತ್ತಾರೆ. ಈ ವೇಳೆ ಚೆಕ್‌ ಪೋಸ್ಟ್‌ನಲ್ಲಿ ತೆಗೆದುಕೊಂಡು ಹೊರಟಿರುವ ಹಣದ ದಾಖಲೆ ಕೊಡಬೇಕು. ಪ್ರಯಾಣದ ಮಾಹಿತಿ ನೀಡಬೇಕು. ಖರೀದಿಸಿದ
ವಸ್ತುಗಳ ರಸೀದಿ ಹಾಗೂ ಸೂಕ್ತ ದಾಖಲೆ ನೀಡಬೇಕು. ಎಲ್ಲವೂ ಸರಿ ಎನ್ನಿಸಿದರೆ ಮುಂದಿನ ದಾರಿ ಸುಗಮ. ಇಲ್ಲದಿದ್ದರೆ ಪೊಲೀಸ್‌ ಠಾಣೆವರೆಗೂ ಹೋಗಬೇಕು. ಈ ಕಿರಿಕಿರಿ ತಪ್ಪಿಸಿಕೊಳ್ಳಲು ವ್ಯಾಪಾರಸ್ಥರು ಕಾರು ಬಿಟ್ಟು ಬಸ್‌ ಹತ್ತುವಂತಾಗಿದೆ.

ಎಲ್ಲದಕ್ಕೂ ಲೆಕ್ಕ ಇರಲ್ಲ: ಹೊಸಪೇಟೆ ಮಾರುಕಟ್ಟೆಯಲ್ಲಿ ಈಗಲೂ ಕೆಲ ಸಗಟು ಮಾರಾಟಗಾರರು ನಗದು ಪಡೆದು ವ್ಯವಹಾರ ನಡೆಸುತ್ತಾರೆ. ಕೆಲ ಮಾರಾಟಗಾರರು ಈಗಲೂ ರಸೀದಿ ಕೊಡುವುದಿಲ್ಲ. ಪರಿಸ್ಥಿತಿ ಹೀಗಿರುವಾಗ ಎಲ್ಲದಕ್ಕೂ ಲೆಕ್ಕ ಕೊಡುವುದು ಹೇಗೆ ? ಸಗಟು ಖರೀದಿಗೆ ನಗದು ತೆಗೆದುಕೊಂಡು ಹೊರಟಿದ್ದೇವೆ ಎಂದರೆ ಚೆಕ್‌ಪೋಸ್ಟ್‌ನಲ್ಲಿರುವ ಸಿಬ್ಬಂದಿ ನಂಬುವುದಿಲ್ಲ.

ಇನ್ನೂ ಹಣದ ದಾಖಲೆ ಕೊಟ್ಟು ವಸ್ತುಗಳನ್ನು ಖರೀದಿಸಿ ತಂದರೆ ಮತ್ತೆ ಅದೇ ಚೆಕ್‌ಪೋಸ್ಟ್‌ನಲ್ಲಿ ಈ ವಸ್ತುಗಳನ್ನು ಯಾರಿಗೆ ಕೊಡಲು ಹೊರಟಿದ್ದಿರಿ? ರಸೀದಿ ಇದೆಯಾ ಎನ್ನುವ ಪ್ರಶ್ನೆ ಎದುರಾಗುತ್ತದೆ. ಹೀಗಾಗಿ ಈ ಸಹವಾಸವೇ ಬೇಡ ಎಂದು ಬಸ್‌ ನಲ್ಲಿ ಹೋಗಿ, ಖರೀದಿ ವಸ್ತುಗಳನ್ನು ಟ್ರಾನ್ಸ್‌ಪೋರ್ಟ್‌ ಕಂಪನಿಗೆ ಒಪ್ಪಿಸಿ ಬಸ್‌ನತ್ತ ಮುಖ ಮಾಡಲಾಗುತ್ತಿದೆ ಎನ್ನುತ್ತಾರೆ ವ್ಯಾಪಾರಿಗಳು.

Advertisement

ಬಾಕಿ ವಸೂಲಿಯೂ ಇಲ್ಲ: ತಾಲೂಕಿನ ಗ್ರಾಮೀಣ ಭಾಗದ ವ್ಯಾಪಾರಿಗಳು ನಗರದ ಸಗಟು ಮಾರಾಟಗಾರರಿಂದ ವಸ್ತುಗಳನ್ನು ಪಡೆದು ನಂತರ ಹಣ ಪಾವತಿಸುವುದು ಸಾಮಾನ್ಯ. ನಿರ್ದಿಷ್ಟ ದಿನಾಂಕದಂದು ಸಗಟು ವ್ಯಾಪಾರಿಗಳು ಖುದ್ದಾಗಿ ಆಗಮಿಸಿ ಬಾಕಿ ಹಣ ಪಡೆದು ವಾಪಸ್ಸಾಗುವುದು ರೂಢಿ. ಇದಕ್ಕಾಗಿ ಬಹುತೇಕ ಸಗಟು ವ್ಯಾಪಾರಿಗಳು ತಮ್ಮ ಸ್ವಂತ ಅಥವಾ ಬಾಡಿಗೆ ಕಾರುಗಳನ್ನು ಆಶ್ರಯಿಸಿದ್ದಾ ರೆ. ಸದ್ಯ ಚೆಕ್‌ಪೋಸ್ಟ್‌ ಭಯದಿಂದ ಸಗಟು ವ್ಯಾಪಾರಿಗಳು ಗ್ರಾಮೀಣ ಭಾಗದತ್ತ ಸುಳಿಯುವುದು ಕಡಿಮೆಯಾಗಿದೆ. ಬ್ಯಾಂಕ್‌ಗೆ ಹೋಗಿ ಹಣ ಪಾವತಿಸುವಂತೆ ವಿನಂತಿಸಿಕೊಳ್ಳುತ್ತಿರುವುದು ಸಾಮಾನ್ಯವಾಗಿದೆ.

ನಾವು ಸಣ್ಣ ಮತ್ತು ಮಧ್ಯಮ ವರ್ಗದ ವ್ಯಾಪಾರಿಗಳು. 1 ರಿಂದ 2 ಲಕ್ಷದೋಳಗೆ ವ್ಯವಹಾರ ಮಾಡುತ್ತಿದ್ದೇವೆ. ಪ್ರತಿದಿನ
ವ್ಯವಹಾರದ ವಹಿವಾಟಿಗೆ ಹೊಸಪೇಟೆಗೆ ಬರಬೇಕಾಗುತ್ತದೆ. ಸಗಟು ಖರೀದಿಸಿ ಊರಿಗೆ ಕೊಂಡಯ್ಯಬೇಕು. ದಾರಿ ಮಧ್ಯೆ ಚೆಕ್‌ ಪೋಸ್ಟ್‌ಗಳಲ್ಲಿ ಕಟ್ಟುನಿಟ್ಟಿನ ತಪಾಸಣೆ ನಡೆಯುತ್ತಿದೆ. ಇಲ್ಲಸಲ್ಲದ ಕಾನೂನು ನಮ್ಮ ಮೇಲೆ ಪ್ರಯೋಗಿಸುತ್ತಿದ್ದಾರೆ. ಇದರಿಂದಾಗಿ ವ್ಯವಹಾರ ಮಾಡಲು ಆಗುತ್ತಿಲ್ಲ.
ಸುನಿಲ್‌ಕುಮಾರ್‌,
ವ್ಯಾಪಾರಿ ಕಂಪ್ಲಿ

Advertisement

Udayavani is now on Telegram. Click here to join our channel and stay updated with the latest news.

Next